ಹಲ್ಲೆಗೆ ಯತ್ನ ; ಸಚಿವರ ಬಳಿ ಘಟನೆ ವಿವರ ಬಿಚ್ಚಿಟ್ಟ ತಹಸೀಲ್ದಾರ್!!

ಹುಳಿಯಾರು:

      ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಪುಂಡರ ಗುಂಪೊಂದು ಕರ್ತವ್ಯ ನಿರತ ತಹಸೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಸ್ವತಃ ತಹಸೀಲ್ದಾರರೇ ಸಚಿವರ ಗಮನಕ್ಕೆ ತಂದ ಪ್ರಸಂಗ ಮಂಗಳವಾರ ಕೆಂಕೆರೆಯಲ್ಲಿ ನಡೆದ ಕೋವಿಡ್ ಟಾಸ್‍ಫೋರ್ಸ್ ಸಭೆಯಲ್ಲಿ ನಡೆದಿದೆ.

ಶಾಲಾ ಆವರಣದಲ್ಲಿ ಕರೆಯಲಾಗಿದ್ದ ಕೋವಿಡ್ ಟಾಸ್‍ಫೋರ್ಸ್ ಸಭೆಗೆ ಬಂದ ಸಚಿವ ಮಾಧುಸ್ವಾಮಿ ಅವರು ಈ ಶಾಲಾ ಆವರಣದಲ್ಲಿ ಇಸ್ಪೀಟ್ ಆಡೋ ಮಾಹಿತಿ ಇದ್ದು ಕ್ರಮ ಕೈಗೊಳ್ಳುವಂತೆ ಪಿಎಸ್‍ಐ ರಮೇಶ್ ಅವರಿಗೆ ಸೂಚಿಸಿದರು. ಆಗ ತಕ್ಷಣ ಪ್ರತಿಕ್ರಿಯಿಸಿದ ತಹಸೀಲ್ದಾರ್ ತೇಜಸ್ವಿನಿ ಅವರು ಲಾಕ್‍ಡೌನ್ ಚೆಕ್‍ಪೋಸ್ಟ್ ವೀಕ್ಷಣೆಗೆ ಇಓ ಅವರೊಂದಿಗೆ ತೆರಳುತ್ತಿರುವಾಗ ಶಾಲಾ ಆವರಣದಲ್ಲಿ ಗುಂಪಿರುವುದನ್ನು ಗಮನಿಸಿ ಬಂದಾಗ ಶಾಲಾ ಆವರಣದಲ್ಲಿ 10 ಮಂದಿ ಮದ್ಯಪಾನ ಮಾಡಿ ಇಸ್ಪೀಟ್ ಆಡುತ್ತಿದ್ದರು. “ಲಾಕ್‍ಡೌನ್ ಇದ್ದು ಮನೆಗೆ ಹೋಗಿ ಎಂದು ಸೂಚನೆ ನೀಡಿದರೆ ಕೇಳದೆ ಬಾಯಿಗೆ ಬಂದಂತೆ ಮಾತನಾಡಿದರಲ್ಲದೆ ತಮ್ಮ ಮೇಲೆ ಪ್ಲಾಸ್ಟಿಕ್ ಬಾಟಲ್ ಎಸೆದು ಓಡಿಹೋದರು” ಎಂದು ಘಟನೆ ವಿವರ ಬಿಚ್ಚಿಟ್ಟರು.

ಈ ಘಟನೆಯ ಬಗ್ಗೆ ತಾಪಂ ಇಓ ಹಾಗೂ ನಾನು ಸೇರಿ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ತಕ್ಷಣ ಸಚಿವರು ಪೊಲೀಸರಿಗೆ “ತಾಲೂಕು ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆಗೆ ಯತ್ನ ಮಾಡಿರುವವರನ್ನು ಸುಮ್ಮನೆ ಬಿಟ್ಟಿದ್ದಿರಲ್ರಿ. ಯಾರಿಗೋ ಹೆದರಿಕೊಂಡು ಆಡಳಿತ ಮಾಡೋದೇನ್ರಿ. ತಕ್ಷಣ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಖಡಕ್ ಸೂಚನೆ ನೀಡಿದರು. ನಂತರ ಇಓ, ತಾಲೂಕು ವೈದ್ಯಾಧಿಕಾರಿಗಳೂ ಸಹ “ಇಲ್ಲಿನ ಕೆಲವು ಗ್ರಾಮಸ್ಥರು ಸಮಯದ ಪರಿವಿಲ್ಲದೆ ಕುಡಿದು ರಾತ್ರಿ ಹನ್ನೊಂದು, ಹನ್ನೆರಡು ಗಂಟೆಗೆ ಕರೆ ಮಾಡಿ ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ” ಸಾರ್ ಎಂದು ಆರೋಪಿಸಿದರು.

ಅಲ್ಲದೆ “ಹೋಂ ಐಸೋಲೇಷನ್‍ನಲ್ಲಿ ಇರುವವರು ಮನೆಯಿಂದ ಹೊರಗೆ ಬಂದು ಎಲ್ಲೆಂದರಲ್ಲಿ ತಿರುಗಾಡುತ್ತಿರುತ್ತಾರೆ. ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದ ಕೆಂಕೆರೆಯ ಕೆಲವರು ಊಟ ಸರಿಯಿಲ್ಲ, ತಹಸೀಲ್ದಾರ್ ನಮ್ಮೆದುರಿಗೆ ಬಂದು ಈ ಆಹಾರ ತಿನ್ಬೇಕು. ಕೋವಿಡ್‍ಗೆ ಚಿಕಿತ್ಸೆ ಕೊಡೋದು ಇದಲ್ಲ ಈ ಚಿಕಿತ್ಸೆ ಕೊಡಿ ಎಂದು ಅಲ್ಲಿನ ಸಿಬ್ಬಂದಿಗಳ ಮೇಲೆ ಗಲಾಟೆ ಸಹ ಮಾಡಿದ್ದಾರೆ. ಕೇರ್ ಸೆಂಟರ್‍ನಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿಯಿದ್ದು ಅವರ್ಯಾರಿಗೂ ಇಲ್ಲದ ಅವ್ಯವಸ್ಥೆ ಇವರಿಗೆ ಮಾತ್ರ ಇದೆ ಸಾರ್” ಎಂದು ದೂರಿನ ಮೇಲೆ ದೂರನ್ನು ಹೇಳಿದರು. ಇದಕ್ಕೆ ಸಚಿವರು ಫೋನ್ ಮಾಡಿದವರ ರೆಕಾರ್ಡ್ ಮಾಡಿಕೊಂಡು ಕಂಪ್ಲೇಟ್ ಕೊಡಿ ಎಂದರಲ್ಲದೆ ಪುಂಡಾಟಿಕೆ ಮಟ್ಟ ಹಾಕುವಂತೆಯೂ, ಕೋವಿಡ್ ಬಂದಿರುವ ವ್ಯಕ್ತಿ ತಿರುಗಾಡುವ ವಿಡಿಯೋ ಮಾಡಿ ಜೈಲ್ ವಾರ್ಡ್‍ಗೆ ಕಳುಹಿಸಿ ಎಂದು ಪೊಲೀಸರಿಗೆ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link