ತುಮಕೂರು :
ಪ್ರಜಾಪ್ರಗತಿ-ಪ್ರಗತಿ ವಾಹಿನಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗಿನ ನೇರಫೋನ್ ಇನ್ ಕಾರ್ಯಕ್ರಮ ಬಡ ಮಧ್ಯಮವರ್ಗದವರಿಗೆ ಎದುರಾಗಿರುವ ಲಾಕ್‍ಡೌನ್ ಸಂಕಷ್ಟದ ಅನಾವರಣಕ್ಕೆ ವೇದಿಕೆಯಾಯಿತು. ಕೋವಿಡ್ ಚಿಕಿತ್ಸೆ-ಲಸಿಕೆ ಕೊರತೆಗಳು, ಸರಕಾರ ಘೋಷಿಸಿದ ಪರಿಹಾರ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳು, ಪತ್ರಿಕೆ ವರದಿ ಮಾಡಿದ್ದ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ, ಜೂಜಾಟ, ನಿಯಮ ಉಲ್ಲಂಘನೆ, ನಿಷ್ಕ್ರಿಯ ಟಾಸ್ಕ್‍ಫೋರ್ಸ್‍ಗೆ ಸಂಬಂಧಿಸಿದ ದೂರುಗಳು, ಇಎಂಐ, ಸಂಘಗಳ ಸಾಲದ ಕಂತು ಪಾವತಿಗೆ ಹಣಕಾಸು ಸಂಸ್ಥೆಗಳಿಂದ ಎದುರಾಗಿರುವ ಒತ್ತಡ ಮತ್ತಿತರ ಸಮಸ್ಯೆಗಳನ್ನು ಸಚಿವರ ಬಳಿ ಜನತೆ ಮುಕ್ತವಾಗಿ ಹೇಳಿಕೊಂಡರು.
ಬೆಳಿಗ್ಗೆ 11.30ರಿಂದ 12.30ರವರೆಗೂ ಒಂದು ತಾಸು ನಿರಂತರವಾಗಿ ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ಜಿಲ್ಲೆಗಳಿಂದಲೂ ಬಂದ 30ಕ್ಕೂ ಅಧಿಕ ಸಾರ್ವಜನಿಕರ ಕರೆಗಳಿಗೆ ಸಾವಧಾನದಿಂದಲೇ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಲೇ ಸರಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಹೊರತಾದ ಇತರೆ ದುಡಿಯುವ ವರ್ಗಗಳ ಪರಿಹಾರ ಬೇಡಿಕೆಗಳು, ಸಾಲಕಂತು ಮರುಪಾವತಿ ಮುಂದೂಡಿಕೆ ಮತ್ತಿತರ ಪ್ರಮುಖ ಸಂಗತಿಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಪಡಿತರ ವಿತರಣೆಯಲ್ಲಿ ಥಂಬ್ ಇಂಪ್ರೆಶನ್ ಪಡೆಯುವಲ್ಲಿ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಫೋನ್ ಇನ್ ಮುಗಿದ ಕೂಡಲೇ ಕ್ರಮ ವಹಿಸುವುದಾಗಿ ಸಚಿವರು ಹೇಳಿದ್ದು, ಕಾರ್ಯಕ್ರಮದ ಪರಿಣಾಮಕ್ಕೆ ಸಾಕ್ಷಿಯಾಯಿತು. ಪಾವಗಡ ರಾಮಕೃಷ್ಣಾಶ್ರಮದ ಸ್ವಾಮಿ ಜಪಾನಂದಜೀ ಅವರು ಸಹ ಕರೆ ಮಾಡಿ ಅಲೆಮಾರಿ ಸಮುದಾಯಗಳು ಲಸಿಕೆಯಿಂದ ವಂಚಿತರಾಗದಂತೆ ಸಂಚಾರಿ ಲಸಿಕಾ ಅಭಿಯಾನವನ್ನು ಆಯೋಜಿಸುವಂತೆ ಸಲಹೆ ನೀಡಿದ್ದು, ವಿಶೇಷವಾಗಿ ಗಮನ ಸೆಳೆಯಿತು. ಬೆಂಗಳೂರು-ಚಿಕ್ಕಮಗಳೂರಿನಿಂದಲೂ ಕರೆ ಮಾಡಿದ್ದ ಜನತೆ ಪ್ರಜಾಪ್ರಗತಿ-ಪ್ರಗತಿ ವಾಹಿನಿ ರಾಜ್ಯದ ಸಚಿವರು-ಜನರ ನಡುವೆ ಸಂಪರ್ಕ ಸೇತುವೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಫೋನ್ ಇನ್‍ನಲ್ಲಿ ವ್ಯಕ್ತವಾದ ಸಮಸ್ಯೆಗಳು:
ಹೆಬ್ಬೆಟ್ಟು ಪಡೆಯದೇ ಪಡಿತರ ನೀಡಲು ಒತ್ತಾಯ:
ಗುಬ್ಬಿ, ಶಿರಾ ಮತ್ತಿತರ ಕಡೆಯಿಂದ ಕರೆ ಮಾಡಿದ್ದ ಹಲವು ಸಾರ್ವಜನಿಕರು, ಜನಪ್ರತಿನಿಧಿಗಳು ಫಲಾನುಭವಿಗಳ ಹೆಬ್ಬೆಟ್ಟು ಪಡೆದು ಪಡಿತರ ವಿತರಣೆ ಮಾಡಬೇಕೆಂದು ವಿಧಿಸಿರುವ ನಿಯಮದಿಂದ ಬಡವರು ಸಂಕಷ್ಟಕ್ಕೊಳಗಾಗಿದ್ದಾರೆ. ಅನೇಕರ ಆಧಾರ್ ಕಾರ್ಡ್ ಸಹ ಲಿಂಕ್ ಆಗದೆ ಹೆಬ್ಬೆಟ್ಟು ಪಡೆಯಲಾಗುತ್ತಿಲ್ಲ. ಸದ್ಯ ಲಾಕ್‍ಡೌನ್‍ನಲ್ಲಿ ದುಡಿಮೆಯೂ ಇಲ್ಲದೆ ಸರಕಾರ ಕೊಡುವ ಪಡಿತರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವವರಿಗೆ ಪಡಿತರ ಇಲ್ಲವಾದರೆ ಏನು ಮಾಡಬೇಕು? ಹೊರಜಿಲ್ಲೆಯ ರೇಷನ್ ಕಾರ್ಡ್‍ಗಳಿಗೂ ಪಡಿತರ ಕೊಡಬೇಕೆಂಬ ನಿಯಮವಿದ್ದರೂ ಇಲ್ಲಿ ಕೊಡುತ್ತಿಲ್ಲ. ನೀವೇ ಸಭೆ ಮಾಡಿ ಆದೇಶಿಸಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಗುಬ್ಬಿ ಪಟ್ಟಣ ಪಂಚಾಯಿಯಿ ಮಾಜಿ ಸದಸ್ಯ ಬಿ.ಆರ್.ಶಿವಕುಮಾರ್, ಬಸವರಾಜು ಮತ್ತಿತರರು ಕರೆ ಮಾಡಿ ಸಚಿವರ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ಸಚಿವರು ಹಾಲಿ ಬಿಪಿಎಲ್, ಎಪಿಎಲ್ ಪಡಿತರದಾರರು, ಹೊಸದಾಗಿ ನೋಂದಾವಣಿ ಮಾಡಿಸಿದವರೆಲ್ಲರಿಗೂ ಪಡಿತರ ನೀಡಬೇಕೆಂದು ಸರಕಾರ ಆದೇಶಿಸಿದ್ದು, ಹೆಬ್ಬೆಟ್ಟು ಪಡೆದು ಪಡಿತರ ನೀಡುವ ಪದ್ದತಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಆದರೆ ಆಧಾರ್ ಲಿಂಕ್ ಅನ್ನು ಮಾಡಿಸುವ ಅಗತ್ಯವಿದೆ. ಸದ್ಯಕ್ಕೆ ಲಾಕ್‍ಡೌನ್ ಇರುವ ಕಾರಣಕ್ಕೆ ರಿಜಿಸ್ಟರ್‍ನಲ್ಲಿ ನಮೂದಿಸಿ ಪಡಿತರ ವಿತರಿಸಲು ಇಂದೇ ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿವೆ. ಯಾರಿಗೂ ಆಹಾರ ಸಿಗದೆ ಪರಿತಪಿಸಬಾರದೆಂದು ಸರಕಾರದ ಉದ್ದೇಶವಾಗಿದೆ. ಆನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇಎಂಐ, ಸಾಲಕಂತು ಮರುಪಾವತಿ ಮುಂದೂಡಿಕೆಗೆ ಸಂಪುಟದಲ್ಲಿ ಚರ್ಚೆ:
ತುಮಕೂರಿನ ಪ್ರತಿಭಾ, ಮಧು, ಹುಳಿಯಾರಿನ ವ್ಯಕ್ತಿಯೊಬ್ಬರು ಕರೆ ಮಾಡಿ ಖಾಸಗಿ ಹಣಕಾಸು ಫೈನಾನ್ಸ್ ಸಂಸ್ಥೆಗಳು ಸ್ವಸಹಾಯ ಸಂಘಗಳಿಂದ ಪಡೆದ ಸಾಲದ ಕಂತುಗಳನ್ನು ಮರುಪಾವತಿ ಮಾಡುವಂತೆ ಹೆಚ್ಚು ಒತ್ತಡ ಮಾಡಲಾಗುತ್ತಿದೆ. ದುಡಿಮೆಯೇ ಇಲ್ಲದ ಸದ್ಯದ ಸಂದರ್ಭದಲ್ಲಿ ಮನೆ ಬಾಡಿಗೆಯನ್ನೇ ಕಟ್ಟಲು ಆಗುತ್ತಿಲ್ಲ. ಇನ್ನೂ ಸಾಲದ ಕಂತನ್ನು ಪಾವತಿಸುವುದು ಹೇಗೆ? ದಯಮಾಡಿ ಈ ಕಿರುಕುಳ ತಪ್ಪಿಸಿ ಕಳೆದ ಬಾರಿಯಂತೆ ಇಎಂಐ, ಸಾಲದ ಕಂತು ಮರುಪಾವತಿ ಮುಂದೂಡಿಕೆ ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಸಚಿವÀರು ಈ ಬಗ್ಗೆ ಗುರುವಾರದ ಸಂಪುಟದ ಸಭೆಯಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಸೋಲಾರ್‍ಪಾರ್ಕ್ ಬಳಿ ಕೋವಿಡ್ ಕೇರ್‍ಸೆಂಟರ್ ತೆರೆಯಿರಿ: ಪಾವಗಡದ ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ನಾಗಭೂಷಣ್‍ರೆಡ್ಡಿ ಕರೆ ಮಾಡಿ ತಾಲೂಕಿನ ಸೋಲಾರ್ ಪಾರ್ಕ್‍ನಲ್ಲಿ ಸಾವಿರಾರು ಕಾರ್ಮಿಕರು, ರೈತರಿದ್ದು ಇವರ ಆರೋಗ್ಯದ ದೃಷ್ಟಿಯಿಂದ ಸೋಲಾರ್ ಪಾರ್ಕ್ ಬಳಿಯೇ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ ಮನವಿ ಮಾಡಿದರು. ಸಚಿವರು ಪ್ರತಿಕ್ರಿಯಿಸಿ ಈಗಾಗಲೇ ವೈ.ಎನ್.ಹೊಸಕೋಟೆಯಲ್ಲಿ ಆಕ್ಸಿಜನ್ ಬೆಡ್ ಸಹಿತ ಕೋವಿಡ್ ಚಿಕಿತ್ಸೆ ನೀಡುತ್ತಿದ್ದು, ತಿರುಮಣಿಯಲ್ಲೂ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದೆಂದರು.
ಮಿಡಿಗೇಶಿ ರಂಗನಾಥ್, ಅನಿಲ್‍ಕುಮಾರ್ ಮತ್ತಿತರರು ಕರೆ ಮಾಡಿ ಲಾಕ್‍ಡೌನ್ ವಿನಾಯಿತಿ ಅವಧಿಯಲ್ಲಿ ನಮ್ಮ ಭಾಗದಲ್ಲಿ ರಾಜರೋಷವಾಗಿ ಟೀ ಕಾಫಿ ಅಂಗಡಿ ತೆರೆದು ಸ್ಥಳದಲ್ಲೇ ಜನರ ಗುಂಪಿಗೆ ವಿತರಿಸಲಾಗುತ್ತಿದೆ. ತೋಟಗಳಲ್ಲಿ ಗುಂಪಾಗಿ ಸೇರಿ ಜೂಜಾಟ ಮಾಡುತ್ತಿದ್ದು, ಯುವಜನರು ನಿಯಮ ಪಾಲನೆ ಮಾಡುತ್ತಿಲ್ಲ. ಇದರಿಂದ ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಕೋರಿದರು. ಸಚಿವರು ಪ್ರತಿಕ್ರಿಯಿಸಿ ಪಾರ್ಸಲ್ ಹೊರತಾಗಿ ಸ್ಥಳದಲ್ಲೇ ತಿಂಡಿ, ಊಟ, ಕಾಫಿ ಯಾರು ಹೋಟೆಲ್‍ಗಳಲ್ಲಿ ವಿತರಿಸುವಂತಿಲ್ಲ. ಟೀಕಾಫಿ ಅಂಗಡಿ ತೆರೆಯಲು ಅನುಮತಿಯೇ ಇಲ್ಲ ಎಂದರು.
ಸೋಂಕು ನಿಯಂತ್ರಣಕ್ಕೆ ಹೋದ ತಹಸೀಲ್ದಾರ್ ಮೇಲೆಯೆ ಹಲ್ಲೆಮಾಡಿದರೆ ಹೇಗೆ?:
ಕೊಡ್ಲಾಗರದ ರೂಪ ಎಂಬುವರು ಕರೆ ಮಾಡಿ ತಮ್ಮೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದು ನಿಯಂತ್ರಣಕ್ಕೆ ಕೋರಿದರು. ಸಚಿವರು ಪ್ರತಿಕ್ರಿಯಿಸಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗದೆ ಸೋಂಕಿತರು ಬೀದಿಗೆ ಬರುತ್ತಿರುವುದು ಗಮನಕ್ಕೆ ಬಂದಿದ್ದು, ಕೊರೊನಾ ಕರ್ತವ್ಯದಲ್ಲಿದ್ದ ಮಹಿಳಾ ತಹಸೀಲ್ದಾರ್ ಮೇಲೆಯೇ ಕೆಂಕೆರೆಯಲ್ಲಿ ಹಲ್ಲೆ ಮಾಡುತ್ತಾರೆ. ಕೆಲಸ ಮಾಡುವ ಅಧಿಕಾರಿಗಳ ಮೇಲೆಯೇ ಮುಖಂಡರು ಎರಗುತ್ತಾರೆಂದರೆ ಏನರ್ಥ?. ಇದು ಒಳ್ಳೆಯ ಬೆಳವಣಿಗೆಯಲ್ಲ. ಸೋಂಕಿತರು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ನಾನ್ ಕೋವಿಡ್ ಚಿಕಿತ್ಸೆ ಸಿಗುತ್ತಿಲ್ಲ :
ಉಪ್ಪಾರಹಳ್ಳಿ ಮಂಜು ಎಂಬುವರು ಕರೆ ಮಾಡಿ ನಾನ್ ಕೋವಿಡ್ ಚಿಕಿತ್ಸೆಗಳು ತುಮಕೂರಿನ ಆಸ್ಪತ್ರೆಗಳಲ್ಲಿ ಸಿಗದಂತಾಗಿದೆ. ನಮ್ಮ ಸಂಬಂಧಿಯ ವೈಟ್ ಪೆಟ್ಲೇಟ್ಸ್ ಕೌಂಟ್ ಕಡಿಮೆಯಾದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲು ಹೋದರೆ ಯಾರು ದಾಖಲಿಸಿಕೊಳ್ಳುತ್ತಿಲ್ಲವೆಂದರು. ಪ್ರತಿಕ್ರಿಯಿಸಿದ ಸಚಿವರು ವೈಟ್‍ಪೆಟ್ಲೇಟ್ಸ್ ಹೆಚ್ಚಳಕ್ಕೆ ಜಿಲ್ಲೆಗಿಂತಲೂ ಬೆಂಗಳೂರೇ ಹೆಚ್ಚು ಸೂಕ್ತ. ಎಂಎಸ್.ರಾಮಯ್ಯ ಹಳೇ ಆಸ್ಪತ್ರೆಗೆ ಕರೆದೊಯ್ಯಿರಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ ಎಂದು ಸಲಹೆ ನೀಡಿದರು. ಆಸ್ಪತ್ರೆಗಳು ನಾನ್ ಕೋವಿಡ್ ಚಿಕಿತ್ಸೆ ನಿರಾಕರಿಸುವಂತಿಲ್ಲ ಈ ಬಗ್ಗೆ ಸೂಚಿಸಲಾಗುವುದು ಎಂದರು.
ಮನೆಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ:
ತುಮಕೂರು ತಾಲೂಕು ಯತ್ತೇನಹಳ್ಳಿಯಲ್ಲಿ ಮನೆ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಜೂಜಾಟಗಳು ಹೆಚ್ಚಿವೆ. ಆರೋಗ್ಯ ಕಾರ್ಯಕರ್ತರೇ ಶಾಮೀಲಾಗಿರುವ ಬಗ್ಗೆ ಸಚಿವರ ಗಮನಕ್ಕೆ ತಂದರು. ಈ ಕುರಿತು ಬೇಸರ ವ್ಯಕ್ತಪಡಿಸಿದ ಸಚಿವರು ಈ ಸಂಬಂಧ ದಾಳಿ ನಡೆಸಿದ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟು ವಂಚಿಸಲಾಗುತ್ತಿದೆ. ಮದ್ಯ ಮಾರಾಟಗಾರರೇ ಮನೆಮನೆಗಳಿಗೆ ಚಿಲ್ಲರೆ ಮಾರಾಟಕ್ಕೆ ನೀಡುತ್ತಿರುವ ದೂರುಗಳು ಬಂದಿದ್ದು, ಇಂತಿಷ್ಟು ಮದ್ಯವನ್ನು ಮನೆಯಲ್ಲಿ ಬಳಕೆಗೆ ಇರಿಸಿಕೊಳ್ಳಬಹುದೆಂಬ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಅಬ್ಕಾರಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು. ತಾಪಂ ಮಾಜಿ ಸದಸ್ಯ ಕುಮಾರ್ ಎಂಬುವರು ಪಾಸಿಟಿವ್ ಬಂದ ವ್ಯಕ್ತಿಗಳು ಮನೆಯಲ್ಲಿರದೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ ಎಂದು ದೂರಿದರು.
ಕೇರ್‍ಸೆಂಟರ್‍ಗೆ ಹೋದವರ ಪ್ರಾಣ ಉಳಿದಿದೆ:
ಸಚಿವರು ಪ್ರತಿಕ್ರಿಯಿಸಿ ಮೇ 17ರ ನಂತರ ಪಾಸಿಟಿವ್ ಬಂದ ಎಲ್ಲರೂ ಕಡ್ಡಾಯ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಬೇಕು. ಸೋಂಕಿನ ಆರಂಭದಲ್ಲೇ ಅಲ್ಲಿ ಆರೈಕೆ ಪಡೆದವರು ಐಸಿಯುಗೆ ಹೋಗುವ ಸ್ಥಿತಿಯಿಂದ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು. ಬೆಂಗಳೂರಿನ ಶಿವು ಎಂಬುವರು ಕರೆ ಮಾಡಿ ಪವರ್‍ಗ್ರಿಡ್ ಪರಿಹಾರ ವಿಳಂಬದ ಬಗ್ಗೆ ಸಮಸ್ಯೆ ಹೇಳಿಕೊಂಡರೆ, ಚಿಕ್ಕಮಗಳೂರಿನ ಗಿರೀಶ್ ಎನ್ನುವರು ಕರೆ ಮಾಡಿ ಏರ್‍ಪೋರ್ಟ್, ರೈಲುನಿಲ್ದಾಣದಿಂದ ಪ್ರಯಾಣಿಕರನ್ನು ಕರೆತರುವಟ್ಯಾಕ್ಸಿಗಳಿಗೆ ಅನುಮತಿಯಿದ್ದರೂ ಪೊಲೀಸರು ಬಿಡುತ್ತಿಲ್ಲ. ನಮ್ಮ ಸಮಸ್ಯೆ ಯಾರ ಬಳಿ ಹೇಳಬೇಕು ಅಸಮಾಧಾನ ತೋಡಿಕೊಂಡರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವರು ತಿಳಿಸಿದರು.
ಪ್ಯಾಕೇಜ್ ಪರಿಹಾರಕ್ಕೆ ಮನವಿ:
ಕಳೆದೊಂದು ವರ್ಷದಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಛಾಯಾಗ್ರಾಹಕರುಗಳಿಗೆ ಆರ್ಥಿಕ ಪರಿಹಾರ ಕೊಡಿಸುವಂತೆ ಹಿರಿಯ ಛಾಯಾಗ್ರಾಹಕ ನಾಗರಾಜು ಮನವಿ ಮಾಡಿದರೆ ಚಿತ್ರ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್ ಕೊಡಿಸುವಂತೆ ವಿದ್ಯಾನಗರದ ನಾಗೇಶ್ ಮನವಿ ಮಾಡಿದರು. ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಪಡೆಯುವಲ್ಲಿ ಇಲಾಖೆಯಲ್ಲಿ ಲಂಚ ಕೇಳಲಾಗುತ್ತಿದೆ ಎಂಬ ದೂರಿನ ಕರೆಗೆ ಎಸಿಗೆ ಅರ್ಜಿ ನೀಡುವಂತೆ ಸೂಚಿವರು ತಿಳಿಸಿದರು. ಲಾರಿ ಬಸ್ ಕ್ಲೀನರ್‍ಗಳಿಗೆ ಪರಿಹಾರ ಕೊಡಿಸಬೇಕೆಂದು, ತುಮಕೂರಿನ ಬಟವಾಡಿಯ ಮಹಿಳೆಯೊಬ್ಬರು ಹೃದ್ರೋಗಿ ಪತಿಯ ನೆರವು ನೀಡುವಂತೆ ಮನವಿ ಮಾಡಿದರು. ಸಚಿವರು ಆರ್ಥಿಕ ಪರಿಹಾರಗಳ ಬಗ್ಗೆ ಸಿಎಂ ಜತೆ ಚರ್ಚಿಸುವುದಾಗಿ ಪುನರುಚ್ಚರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ಸ್, ಆಕ್ಸಿಜನ್ ಬೆಡ್ ಅವಶ್ಯಕವಿರುವವರಿಗೆ ಸಿಗುತ್ತಿಲ್ಲ
ಜಿಲ್ಲಾಸ್ಪತ್ರೆಯಲ್ಲಿ ಅವಶ್ಯಕವಿರುವವರಿಗೆ ಐಸಿಯು ವೆಂಟಿಲೇಟರ್ಸ್ ಸಿಗುತ್ತಿಲ್ಲ. ಕಾದಿರುವವರನ್ನು ಹೊರತುಪಡಿಸಿ ತಮಗೆ ಬೇಕಾದವರಿಗೆ ಬುಕ್ಕಿಂಗ್ ಮಾಡಲಾಗುತ್ತಿದೆ. ತಾವೂ ಕೆಲಸದಿಂದ ಸಸ್ಪೆಂಡ್ ಮಾಡಿದ್ದ ವ್ಯಕ್ತಿ ಮತ್ತೆ ಬಂದು ಕೂತಿದ್ದಾನೆ ಎಂದು ಮಹಿಳೆಯೊಬ್ಬರು ಕರೆ ಮಾಡಿದ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಐಸಿಯು ವೆಂಟಿಲೇಟರ್ಸ್ ಕೊರತೆ ಇರುವುದನ್ನು ಒಪ್ಪುತ್ತೇನೆ. ಅವಶ್ಯಕವಿರುವವರಿಗೆ ಮೊದಲು ಆದ್ಯತೆ ಮೇರೆಗೆ ಐಸಿಯು, ಆಕ್ಸಿಜನ್ ಬೆಡ್ ನೀಡಬೇಕು. ಕೋವಿಡ್ ವಾರ್‍ರೂಂ ಮೂಲಕವೇ ಬೆಡ್ ಅಲಾಟ್ ಮೆಂಟ್ ಮಾಡಲಾಗುತ್ತಿದೆ. ತಪ್ಪಿತಸ್ಥ ವ್ಯಕ್ತಿ ಮತ್ತೆ ಬಂದಿದ್ದರೆ ಮತ್ತೆ ಕ್ರಮ ಜರುಗಿಸುವುದಾಗಿ ಹೇಳಿದರು.
ಲಸಿಕೆ ಲಭ್ಯವಾದ ಕೂಡಲೇ ಯುವಜನರಿಗೆ ವ್ಯಾಕ್ಸಿನೇಷನ್
ತುಮಕೂರಿನ ಕ್ಯಾತ್ಸಂದ್ರದ ಮಹಿಳೆಯೊಬ್ಬರು ಕರೆ ಮಾಡಿ 18 ರಿಂದ 14 ವರ್ಷದೊಳಗಿನವರಿಗೆ ಯಾವಾಗ ಲಸಿಕೆ ಕೊಡ್ತಿರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಿ ಬನ್ನಿ ಎಂದರೂ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂಜರಿದರು. ಸ್ಟಿರಾಯಿಡ್ ನೀರು ಹಾಕಲಾಗುತ್ತದೆ ಎಂದೆಲ್ಲ ಅಪಪ್ರಚಾರ ಮಾಡಲಾಯಿತು. ಈಗ ಲಸಿಕೆ ಕೊಡಿ , ಲಸಿಕೆ ಹಾಕಿಸಿ ಎಂದು ಹಾತೊರೆಯುತ್ತಿದ್ದಾರೆ. ಯುವಜನರಿಗೆ ಲಸಿಕೆ ಹಾಕಲು ರಾಜ್ಯಸರಕಾರವೇ 400 ಕೋಟಿ ಹಣ ಮೀಸಲಿಟ್ಟು ಲಸಿಕೆಗೆ ಆರ್ಡರ್ ಮಾಡಿದರೂ ಉತ್ಪಾದನೆ ನಿರೀಕ್ಷತಾ ಪ್ರಮಾಣದಲ್ಲಿ ಆಗದಿರುವುದು ಲಸಿಕೆ ಕೊರತೆ ಉಂಟಾಗಿದೆ. ಲಭ್ಯತೆಗನುಗುಣವಾಗಿ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಯುವಜನರಿಗೂ ಲಸಿಕೆ ಪ್ರಮಾಣಕ್ಕಾನುಗುಣವಾಗಿ ಹಾಕಲಾಗುವುದು. ಎರಡು ಡೋಜ್ ಲಸಿಕೆ ಪಡೆದವರ್ಯಾರು ಐಸಿಯು ಹಂತ ತಲುಪಿಲ್ಲವೆಂಬುದನ್ನು ತಜ್ಞರೇ ದೃಢೀಕರಿಸಿದ್ದು ಲಸಿಕೆಯ ಮಹತ್ವಕ್ಕೆ ಸಾಕ್ಷಿಎನಿಸಿದೆ ಎಂದು ಮಾಧುಸ್ವಾಮಿ ಅವರು ತಿಳಿಸಿದರು.
ಸಂಚಾರಿ ಲಸಿಕಾ ಕೇಂದ್ರ ಸ್ಥಾಪಿಸುವಂತೆ ಸಲಹೆ
ಅಲೆಮಾರಿಗಳು ಹಕ್ಕಿಪಿಕ್ಕಿ ಜನಾಂಗದವರಿಗೆ ಆಹಾರಕಿಟ್ ವಿತರಿಸಿರುವ ಸೇವೆಯಲ್ಲಿ ನಿರತರಾಗಿರುವ ಸ್ವಾಮಿ ಜಪಾನಂದಜೀ ಮಿಡಿಗೇಶಿ ಭಾಗದ ಹಳ್ಳಿಯಿಂದಲೇ ಕರೆ ಮಾಡಿ ಅಲೆಮಾರಿ ಜನಾಂಗ ಊರೂರು ಅಲೆಯುತ್ತಾ ಸೋಂಕು ವಿಸ್ತರಣೆಗೆ ಕಾರಣವಾಗಬಾರದು. ಇವರು ಒಂದೆಡೆ ನೆಲೆ ನಿಲ್ಲುವವರಲ್ಲವಾದ್ದರಿಂದ ಸಂಚಾರಿ ಲಸಿಕಾ ವ್ಯಾನ್ ಮೂಲಕ ಊರರಲ್ಲಿ ವ್ಯಾಕ್ಸಿನ್ ಹಾಕಿಸಲು ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ಕೆ ನಮ್ಮ ಆಶ್ರಮ ಸೇರಿದಂತೆ ಸಂಘ ಸಂಸ್ಥೆಗಳು ಕೈ ಜೋಡಿಸಲು ಸಿದ್ಧವಿದೆ ಎಂದರು. ಸ್ವಾಮೀಜಿ ಅವರ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಲಸಿಕೆ ಲಭ್ಯವಾದ ಕೂಡಲೇ ಯಾರನ್ನು ಬಿಡುವುದಿಲ್ಲ. ಎಲ್ಲರಿಗೂ ಲಸಿಕೆ ಹಾಕಿಸುವುದಾಗಿ ಸಚಿವರು ತಿಳಿಸಿದರು.
ನಿರೂಪಣೆ: ಸಾ.ಚಿ.ರಾಜ್‍ಕುಮಾರ್, ಎಸ್.ಹರೀಶ್ ಆಚಾರ್ಯ
ಕೋವಿಡ್ ನಿಯಂತ್ರಿಸಲು ಜನತೆಯ ಸಹಕಾರ ಮುಖ್ಯ : ಸಚಿವ ಮಾಧುಸ್ವಾಮಿ
ಜಿಲ್ಲೆಯಲ್ಲಿ ಕೈಗೊಂಡ ಪರಿಣಾಮಕಾರಿ ಕೋವಿಡ್ ನಿಯಂತ್ರಣ ಕ್ರಮಗಳಿಂದ ಸೋಂಕಿನ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಹಾಲಿ ಶೇ31ರಷ್ಟಕ್ಕೆ ತಗ್ಗಿರುವ ಪಾಸಿಟಿವಿಟಿ ಪ್ರಮಾಣವನ್ನು ಶೇ 15ಕ್ಕೆ ಇಳಿಸಲು ತಾಲೂಕುವಾರು ಸರಣಿ ಸಭೆಗಳು, ನೋಡಲ್ ಅಧಿಕಾರಿಗಳನೇಮಕ, ಗ್ರಾಮ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ರಚನೆ, ದಿನವೊಂದಕ್ಕೆ 6000 ಟೆಸ್ಟ್, ಪ್ರತಿ ಪಿಎಚ್‍ಸಿಗಳಲ್ಲೂ 100 ಮಂದಿಗೆ ಪ್ರತ್ಯೇಕ ಸ್ಥಳದಲ್ಲಿ ವ್ಯಾಕ್ಸಿನ್, ಜಿಲ್ಲಾ ತಾಲೂಕು ಆಸ್ಪತ್ರೆಗಳ ಜೊತೆಗೆ 17 ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ, ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ 703 ಗ್ರಾಮಗಳಲ್ಲಿ ಸೋಂಕುರಹಿತವಾಗಿದ್ದು, 501 ಗ್ರಾಮಗಳಲ್ಲಿ ಒಬ್ಬರು ಮಾತ್ರ ಸೋಂಕಿತರಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳಿಂದ ದೊರೆತಿರುವ ಸಹಕಾರದ ಜೊತೆಗೆ ಸಾರ್ವಜನಿಕರು ಸೋಂಕಿನ ಬಗ್ಗೆ ಜಾಗ್ರತರಾಗಿ ಸಹಕರಿಸಿದರೆ ಜಿಲ್ಲೆಯ ಸೋಂಕಿನ ಪ್ರಮಾಣವನ್ನು ಶೀಘ್ರ ತಗ್ಗಿಸಬಹುದು. ಸದ್ಯ ಆಕ್ಸಿಜನ್ ಬೆಡ್‍ಗಳ ಕೊರತೆ ಕಂಡುಬರುತ್ತಿಲ್ಲ. ಆಕ್ಸಿಜನ್ ಪೂರೈಕೆಯಲ್ಲೂ ಜಿಲ್ಲೆ ಸ್ವಾವಲಂಬನೆ ಸಾಧಿಸುತ್ತಿದ್ದು, ದಾನಿಗಳು, ಸರಕಾರದ ನೆರವು ದೊರೆತಿದೆ. ಕೋವಿಡ್ ಎರಡನೇ ಅಲೆಯ ನಿಯಂತ್ರಣದ ಜೊತೆಗೂ ಮೂರನೇ ಅಲೆ ಎದುರಾದರೂ ಜಿಲ್ಲೆ ಸಜ್ಜಾಗುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಅನಗತ್ಯ ಭಯಬಿಟ್ಟು, ನಿಯಮ ಪಾಲಿಸಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಿ. ಬೆಗ ಗುಣಮುಖರಾಗಿ ಕೋವಿಡ್ ಮಾರಣಾಂತಿಕ ಖಾಯಿಲೆಯಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು. ಜನರೊಂದಿಗೆ ಸಂವಾದಿಸಲು ಉತ್ತಮ ವೇದಿಕೆ ಕಲ್ಪಿಸಿದ ಸಂಪಾದಕರಾದ ಎಸ್.ನಾಗಣ್ಣ ಹಾಗೂ ಪತ್ರಿಕೆ, ಟಿವಿ ಬಳಗದವರನ್ನು ಇದೇ ವೇಳೆ ಸಚಿವರು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ