ತುಮಕೂರು : ಜಿಪಂನಲ್ಲೇ ಉಳಿದ ಸಚಿವರು, ಮಠದ ಕೇರ್ ಸೆಂಟರ್ ಸಿಎಂ, ಡಿಸಿಎಂ ವೀಕ್ಷಣೆ!

 
ತುಮಕೂರು :

     ಸರಕಾರದಲ್ಲಿ ನಾಯಕತ್ವ ಬದಲಾವಣೆಯ ರಾಜಕೀಯ ಹಂಗಾಮ ನಡೆಯುತ್ತಿರುವ ಹೊತ್ತಿನಲ್ಲಿ ರಾಜಧಾನಿ ಹೊರತಾದ ಮೊದಲ ಹೊರ ಜಿಲ್ಲೆ ಪ್ರಗತಿ ಪರಿಶೀಲನೆಗೆಂದು ತುಮಕೂರು ಜಿಲ್ಲೆಯನ್ನು ಆಯ್ಕೆಮಾಡಿಕೊಂಡು ಶುಕ್ರವಾರ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರು ಜಿಪಂನಲ್ಲಿ ಕೋವಿಡ್ ಪ್ರಗತಿ ಪರಿಶೀಲನೆ ಬಳಿಕ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮಾಧ್ಯಮದವರಿಗೆ ಅಗತ್ಯ ಮಾಹಿತಿಗಳನ್ನು ನೀಡುವಂತೆ ಹೇಳಿ ಸಿದ್ಧಗಂಗಾ ಮಠದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರನ್ನು ಮಾತ್ರ ಕರೆದೊಯ್ದದ್ದು, ಅಲ್ಲಿಂದ ಮಠಕ್ಕೆ ಸಿಎಂ- ಡಿಸಿಎಂ ಇಬ್ಬರೇ ತೆರಳಿದ್ದು ಪ್ರಸಕ್ತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ಪೂರಕವಾಗಿ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

       ಶುಕ್ರವಾರದ ಸಿಎಂ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ಜಿಪಂ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಠದ ಕೋವಿಡ್ ಕೇರ್ ಸೆಂಟರ್ ಅನ್ನು ಮುಖ್ಯಮಂತ್ರಿಗಳು ಪರಿಶೀಲಿಸುವರು ಎಂದು ಮೊದಲೇ ನಿಗದಿಗೊಳಿಸಲಾಗಿತ್ತು. ಅದರಂತೆ ಜಿಪಂ ಪ್ರಗತಿ ಪರಿಶೀಲನಾ ಸಭೆ ಬಳಿಕ ಸಿಎಂ ಮಠದ ಕೋವಿಡ್ ಕೇರ್ ಸೆಂಟರ್‍ಗೆ ಡಿಸಿಎಂ ಅಶ್ವತ್ಥನಾರಾಯಣ, ಅವರೊಂದಿಗೆ ತೆರಳಿದರು. ಆದರೆ ಸಿಎಂ ಜಿಪಂನಿಂದ ನಿರ್ಗಮಿಸುವ ಸಂದರ್ಭದಲ್ಲಿ ಮಠದ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ಕೊಡುವರೋ ಇಲ್ಲವೋ ಎಂಬ ಬಗ್ಗೆ ಅಧಿಕಾರಿಗಳು ಗೊಂದಲಕಾರಿ ಉತ್ತರ ನೀಡುತ್ತಿದ್ದರು. ಕೆಲವರು ತೆರಳಿದ್ದಾರೆ. ಕೆಲವರು ಹೋಗೋಲ್ಲ ಎಂದು ಹೇಳಿಕೆ ನೀಡಿದರು. ಇದುಪ್ರಸಕ್ತ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಠದ ಕೇರ್ ಸೆಂಟರ್‍ಗೆ ತೆರಳಿದ ಸಿಎಂ ಅವರನ್ನು ಮಾಧ್ಯಮಗಳು ಹಿಂಬಾಲಿಸಿದಂತೆ ಮಾಡುವ ತಂತ್ರವೇ ಎಂಬ ಚರ್ಚೆಗೆ ಆಸ್ಪದವೊದಗಿಸಿತು.

ಸಚಿವರು, ಶಾಸಕರಿಂದ ಮಾಧ್ಯಮಗೋಷ್ಠಿ:

       ಮಠದ ಕೋವಿಡ್ ಸೆಂಟರ್‍ಅನ್ನು ಸಿಎಂ ಡಿಸಿಎಂ ಪರಿಶೀಲನೆ ವೇಳೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಕೃಷ್ಣಪ್ಪ, ಜಿಲ್ಲಾಉಸ್ತುವಾರಿ ಕಾರ್ಯದರ್ಶಿ, ಡಿಸಿ, ಎಸ್ಪಿ, ಸಿಇಒ ಮತ್ತಿತರ ಅಧಿಕಾರಿಗಳಿದ್ದರು ಬಿಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರು, ಇತರಬಿಜೆಪಿ ಶಾಸಕರ್ಯಾರು ಜೊತೆಗೂಡಲಿಲ್ಲ. ಅಲ್ಲಿಂದ ಮಠಕ್ಕೆ ಸಿಎಂ, ಡಿಸಿಎಂ ಇಬ್ಬರೇ ತೆರಳಿ, ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರೆನ್ನಲಾಗಿದೆ. ಜಿಪಂನಲ್ಲೇ ಉಳಿದ ಜಿಲ್ಲಾಉಸ್ತುವಾರಿ ಸಚಿವರು, ಶಾಸಕರಾದ ಬಿ.ಸಿ.ನಾಗೇಶ್, ಸಿಎಂ.ರಾಜೇಶ್‍ಗೌಡ, ಮಸಾಲೆ ಜಯರಾಂ,ಎಂಎಲ್ಸಿಗಳಾದ ಚಿದಾನಂದ್ ಎಂ ಗೌಡ, ವೈ.ಎ.ನಾರಾಯಣಸ್ವಾಮಿ ಅವರುಗಳು ಮಾಧ್ಯಮ ಗೋಷ್ಠಿ ನಡೆಸಿದರು.

ಜಿಲ್ಲೆಯ ಪರವಾದ ಬೇಡಿಕೆಗಳಿಗೆ ಸಿಎಂ ಸಹಮತ

       ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಪರವಾಗಿ ಸಿಎಂ ಮುಂದೆ ಇಟ್ಟ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿ ಜಿಲ್ಲಾ ಆಸ್ಪತ್ರೆಗೆ ತಾಯಿ ಮಕ್ಕಳು ಹೆರಿಗೆ ಆಸ್ಪತ್ರೆ ಬೇಕು. ಈಗಾಗಲೇ ಜಿಲ್ಲೆಗೆ ನೂರು ಹಾಸಿಗೆಯ ಆಸ್ಪತ್ರೆ ಮಂಜೂರಾತಿ ಆಗಿದೆ. ಆದರೆ ಇಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಹೆರಿಗೆಗಳಾಗುತ್ತಿವೆ. ಹಾಗಾಗಿ 200 ಹಾಸಿಗೆಗಳ ಆಸ್ಪತ್ರೆ ಬೇಕು. ಅಂತೆಯೇ ಜಿಲ್ಲೆಯಲ್ಲಿ ಎರಡು ಕಡೆ ಸಿ.ಟಿ.ಸ್ಕ್ಯಾನ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೇಳಿದಾಗ ಅದಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ಕೋವಿಡ್ ಅಲೆ ನಿರ್ವಹಣೆಗೆ ಅವಶ್ಯಕತೆ ಇರುವ ಶಿಶು ವೈದ್ಯರು ಮತ್ತು ಸಿಬ್ಬಂದಿ ಅವಶ್ಯಕತೆ ಇದೆ ಎಂಬುದರ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ. ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಮನ ಹರಿಸಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿವರಿಸಿದರು.

       ಜಿಲ್ಲೆಯಲ್ಲಿ ದಾನಿಗಳಿಂದ ಬಂದಿರುವ ಸುಮಾರು 600 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 30 ಸಾಂದ್ರಕಗಳನ್ನು ನೀಡಲಾಗುತ್ತಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುತ್ತಿದೆ. ತುಮಕೂರು ಜಿಲ್ಲೆ ದೊಡ್ಡ ಜಿಲ್ಲೆಯಾಗಿ ಬೆಳೆಯುತ್ತಿದ್ದು, ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಒತ್ತಾಯ ಮಾಡಲಾಗಿದೆ. ಅದೇ ರೀತಿಯಾಗಿ ಜಿಲ್ಲೆಯಲ್ಲಿ 30 ಲಕ್ಷ ಜನ ಸಂಖ್ಯೆ ಇರುವುದರಿಂದ ಅವಶ್ಯಕ ಇರುವ ಲಸಿಕೆಯನ್ನು ಒದಗಿಸಲು ಸಿಎಂ ಸಮ್ಮತಿ ನೀಡಿದ್ದಾರೆ ಎಂದು ವಿವರಿಸಿದರು.

       ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕ್ರಮ:

      ಇನ್ನೆರಡು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಲಿವೆ. ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರಿನಲ್ಲಿ ಸರ್ಕಾರದ ವತಿಯಿಂದ ಘಟಕ ನಿರ್ಮಾಣ ಪ್ರಾರಂಭಿಸಲಾಗಿದ್ದು,ಹೈಡಾಲ್ ಬರ್ಗ್ ಸಿಮೆಂಟ್ ಕಾರ್ಖಾನೆಯು ತುರುವೇಕೆರೆ, ರೋಟರಿಯವರು ಗುಬ್ಬಿ ಯಲ್ಲಿ, ಬಿಇಎಲ್ ಸಂಸ್ಥೆಯು ಕುಣಿಗಲ್ ತಾಲೂಕಿನಲ್ಲಿ, ವಿಪ್ರೋದವರು ಕೊರಟಗೆರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ನೆರವು ನೀಡುತ್ತಿದ್ದಾರೆ. ಪಾವಗಡದಲ್ಲಿ ಆಮ್ಲಜನಕವನ್ನು ಈಗಾಗಲೇ ಉತ್ಪಾದನೆ ಮಾಡಲಾಗುತ್ತಿದೆ. ಜೂನ್, ಜುಲೈನೊಳಗೆ ಎಲ್ಲಾ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.

ಸೋಂಕಿನ ಪ್ರಮಾಣ ಶೇ.10ಕ್ಕೆ ಇಳಿದರೆ ಲಾಕ್‍ಡೌನ್ ಸಡಿಲದ ತೀರ್ಮಾನ

       ಜೂನ್ 7ರ ನಂತರ ಲಾಕ್ ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಕೊರೋನಾ ಪಾಸಿಟಿವಿಟಿಯಲ್ಲಿ ಜಿಲ್ಲೆ ಕಿತ್ತಲೆ ವಲಯದಲ್ಲಿದೆ. ಹಸಿರು(ಗ್ರೀನ್) ವಲಯಕ್ಕೆ ಬಂದು ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.10ರೊಳಗೆ ಇಳಿದರೆ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಳಿಸುವ ನಿರ್ಣಯ ಜಿಲ್ಲಾಡಳಿತ ಕೈಗೊಳ್ಳಲಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಈಗಿರುವ ಪರಿಸ್ಥಿತಿಯೇ ಮುಂದುವರಿಯಲಿದೆ ಎಂದರು.

ಹೋಂ ಕ್ವಾರಂಟೈನ್ ಅವಕಾಶ ಕೊಟ್ಟಿದ್ದರಿಂದ ಮರಣ ಹೆಚ್ಚಳ

    ಹೋಂ ಕ್ವಾರಂಟೈನ್ ಗೆ ಅವಕಾಶ ಮಾಡಿಕೊಟ್ಟಿದ್ದ ಪರಿಣಾಮ ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಯಿತು ಎಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ಮನೆಯಲ್ಲಿಯೇ ಸೋಂಕಿತರು ಉಳಿದು ಆಮ್ಲಜನಕ ಅವಶ್ಯಕತೆ ತೀವ್ರವಾದ ನಂತರ ಆಸ್ಪತ್ರೆಗೆ ಬಂದು ಚಿಕಿತ್ಸೆ ಫಲಿಸದೆ ಸಾವುಗಳು ಸಂಭವಿಸಿವೆ. ಕೋವಿಡ್ ಕೇರ್ ಸೆಂಟರ್ ನಲ್ಲಿದ್ದು ಸೋಂಕಿನ ತೀವ್ರತೆ ಹೆಚ್ಚಾಗಿ ವೆಂಟಿಲೇಟರ್, ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆದ ಕೆಲವು ಸೋಂಕಿತರು ಪಾರಾಗಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರುವವರು ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೆಂದು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಿದ್ದರಾಮಯ್ಯ, ಪಟೇಲ, ಗೌಡರ ಅವಧಿಯಲ್ಲೂ ನಾಯಕತ್ವ ಬದಲಾವಣೆ ಕೂಗಿತ್ತು 

      ಬಿಎಸ್‍ವೈ ನಾಯಕತ್ವವನ್ನು ನಾನು ಪ್ರಶ್ನಿಸೋಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ. ನಾನು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲೂ ಇಲ್ಲ. ಸದ್ಯ ಚರ್ಚಿತವಾಗುತ್ತಿರುವ ನಾಯಕತ್ವ ಬದಲಾವಣೆ ಸಂಗತಿ ಯಡಿಯೂರಪ್ಪ ಅವರ ಅವಧಿಯಲ್ಲಿ ಮಾತ್ರವೇ ಆಗುತ್ತಿದ್ದೇಯೇ. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಜೆ.ಎಚ್.ಪಾಟೀಲ್, ದೇವೇಗೌಡರ ಕಾಲದಲ್ಲೂ ಇತ್ತು. ರಾಜಕಾರಣದಲ್ಲಿ ಇದು ಸಹಜ. ಕೆಲವು ಅಸಮಾಧನಗಳನ್ನು ಭಿನ್ನಮತ ಎನ್ನಲಾಗುತ್ತದೆಯೇ? 75 ವರ್ಷ ಮೇಲ್ಪಟ್ಟವರು ರಾಜಕೀಯ ಅಧಿಕಾರದಿಂದ ದೂರ ಉಳಿಯಬೇಕೆಂಬ ನಿಯಮ ಮುಖ್ಯಮಂತ್ರಿಗಳಿಗೆ ಅನ್ವಯಿಸೋಲ್ಲ. ಕೆಲ ಸಂಸದರಿಗೂ ವಿನಾಯಿತಿ ನೀಡಲಾಗಿದೆ. ತುಮಕೂರಿನ ಸಂಸದರು ಅದರಲ್ಲಿ ಸೇರುತ್ತಾರೆ. ಕಾನ್ಟಿಟ್ಯೂಟ್ ಅಸೆಂಬ್ಲಿ ನಡಾವಳಿಯಲ್ಲಿ ಹಿರಿಯರ ಅನುಭವವನ್ನು ಆಡಳಿತ- ನ್ಯಾಯಾಂಗದಲ್ಲಿ ಬಳಸಬೇಕು ಎಂದಿದೆ ಎನ್ನುವ ಮೂಲಕ ಸಚಿವ ಜೆಸಿಎಂ ವಯಸ್ಸು ಯಡಿಯೂರಪ್ಪ ಅವರನ್ನು ಇಳಿಸಲು ಮಾನದಂಡವಲ್ಲ ಎಂದು ಪರೋಕ್ಷ ವಕಾಲತ್ತು ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link