ತುಮಕೂರು :

ಕೋವಿಡ್ ನಿಯಂತ್ರಣಕ್ಕೆ ಎಲ್ಲರನ್ನೂ ವ್ಯಾಕ್ಸಿನೇಷನ್ಗೆ ಒಳಪಡಿಸುವುದೊಂದೇ ಪರಿಹಾರವೆಂದು ಸರಕಾರ ನೇಮಿಸಿದ ತಜ್ಞರೇ ಹೇಳಿದ್ದರೂ, ವ್ಯಾಕ್ಸಿನೇಷನ್ ಹಾಕಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿವೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಹಾಕಿಸಬೇಕು. ಇಲ್ಲವೇ ಸಿಎಂ ಬಿಎಸ್ವೈ ರಾಜೀನಾಮೆ ನೀಡಬೇಕು. ಈ ಕೆಲಸ ಮಾಡದೆ ಬಿಜೆಪಿಗೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯುವ ನೈತಿಕತೆ ಇಲ್ಲ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ಜಿಲ್ಲೆಯ ಕೈ ನಾಯಕರೊಂದಿಗೆ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ ಲಸಿಕಾ ಉತ್ಪಾದನೆಯಲ್ಲಿ ಭಾರತ ವಿಶ್ವದ ನಂ.1 ರಾಷ್ಟ್ರ ಎನಿಸಿದರೂ ದೇಶದ 139 ಕೋಟಿ ಜನರಲ್ಲಿ ಎರಡು ಡೋಜ್ ಲಸಿಕೆ ಪಡೆದವರ ಸಂಖ್ಯೆ ಕೇವಲ 4.33ಕೋಟಿಯಷ್ಟಿದೆ. ಮಿಕ್ಕ 135 ಕೋಟಿ ಜನರಿಗೆ ಇವರು ಲಸಿಕೆ ನೀಡಲು ಎಷ್ಟು ವರ್ಷಗಳು ಬೇಕು. ಉತ್ಪಾದಿಸಿದ ಲಸಿಕೆಯನ್ನು ಬೇರೆ ದೇಶಗಳಿಗೆ ನೀಡಿ ಈಗ ಕಾಂಗ್ರೆಸ್ನವರು ಅಪ ಪ್ರಚಾರ ಮಾಡಿದರೂ ಎಂದು ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆಂದರು.
40 ವರ್ಷದಲ್ಲೇ ಅತೀದೊಡ್ಡ ಆರ್ಥಿಕ ಕುಸಿತ:
ಪ್ರಧಾನಿ ನರೇಂದ್ರ ಮೋದಿ ಅವರ 7 ವರ್ಷಗಳ ಸಾಧನೆ ಶೂನ್ಯವಾಗಿದೆ. ದೇಶದ ಆರ್ಥಿಕತೆ ಉತ್ತಮ ಪಡಿಸುವಲ್ಲಿ, ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲಹೊಂದಿದ್ದಾರೆ. ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದ ಜನ ಹೊಸ ಚಿಂತನೆ, ಹೊಸ ಯೋಜನೆಗಳ ನಿರೀಕ್ಷೆಯಲ್ಲಿದ್ದರು. ಆದರೆ ಒಂದೇ ವರ್ಷದಲ್ಲಿ ಜನರ ನಿರೀಕ್ಷೆ ಹುಸಿಯಾಗಿದ್ದು, 2014ರಲ್ಲಿ ಜಿಡಿಪಿ ಶೇ. 8.1 ರಷ್ಟಿದ್ದ ಜಿಡಿಪಿವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದ್ದು, ಪ್ರಸಕ್ತ ಮೈನಸ್ 7.5ಕ್ಕೆ ಕುಸಿದಿದ್ದು, ಕಳೆದ ನಾಲ್ಕು ದಶಕದಲ್ಲೇ ಅತ್ಯಂತ ದೊಡ್ಡ ಕುಸಿತ ಇದಾಗಿದೆ. ಅಭಿವೃದ್ಧಿ, ದೇಶದ ಆರ್ಥಿಕ ವ್ಯವಸ್ಥೆ ಹಳಿ ತಪ್ಪುವಂತಾಗಿದೆ ಎಂದರು.
ನಿರುದ್ಯೋಗ ಹೆಚ್ಚಳ: ಇನ್ನೂ ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. 7 ವರ್ಷದಲ್ಲಿ 14 ಕೋಟಿ ಯುವಕರಿಗೆ ಉದ್ಯೋಗ ಕೊಡಬೇಕಿತ್ತು. ಉದ್ಯೋಗ ಕೊಡುವುದರಿಲ್ಲಿ. ಇದ್ದ ಉದ್ಯೋಗವೇ ಕಡಿತಗೊಂಡಿದೆ. ಇನ್ನೂ ದೇಶದ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ.20ರಷ್ಟಿದ್ದು, ಆ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಕರಾಳ ಮೂರು ಕಾಯ್ದೆಗಳನ್ನು ಕಳೆದ ವರ್ಷ ಸೆಪ್ಟೆರಂಬರ್ನಲ್ಲಿ ಜಾರಿಗೆ ತಂದಿತು. ರೈತರ ಪ್ರಬಲ ವಿರೋಧದ ನಡುವೆಯೂ ಕಾರ್ಪೋರೇಟ್ ವಲಯಕ್ಕೆ ಅನುಕೂಲ ಕಲ್ಪಿಸಲು ಕಾಯ್ದೆ ಜಾರಿಗೊಳಿಸಲಾಗಿದೆ.
ಪೆಟ್ರೋಲ್-ಡೀಸೆಲ್ ಮೇಲೆ ಇಷ್ಟೊಂದು ಕಸ್ಟಮ್ ಡ್ಯೂಟಿ ಯಾಕೆ?:

ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲೆ ಪ್ರತೀ ಲೀಟರ್ಗೆ 9.21 ರೂ. ಎಕ್ಸೈಸ್ ಡ್ಯೂಟಿ ತೆರಿಗೆಯನ್ನು ಕೇಂದ್ರ ಹಾಕುತ್ತಿತ್ತು. ಇದೀಗ ಅದನ್ನು 31.83ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾತೈಲದ ಡಾಲರ್ ಬೆಲೆ ಇಳಿದಿದ್ದರೂ ಪೆಟ್ರೋಲ್ ಡೀಸಲ್ ದರ ಕಡಿಮೆಯಾಗಿಲ್ಲ. ಇಷ್ಟೆಲ್ಲ ವೈಫಲ್ಯಗಳನ್ನು ಇಟ್ಟುಕೊಂಡು, ಜನರ ಮುಂದೆ 7 ವರ್ಷದ ಸಾಧನೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸುತ್ತಿರುವ ಕ್ರಮ ಹಾಸ್ಯಾಸ್ಪದವೆನಿಸಿದೆ ಎಂದು ಲೇವಡಿ ಮಾಡಿದರು.
ತಿಪಟೂರು ಮಾಜಿ ಶಾಸಕ ಷಡಕ್ಷರಿ ಬಿಜೆಪಿ ಶಾಸಕರಿಂದ ವ್ಯಾಕ್ಸಿನ್ ದುರ್ಬಳಕೆ, ಚಿಕಿತ್ಸಾ ವೈಫಲ್ಯಗಳ ಬಗ್ಗೆ ತನಿಖೆಯಾಗಬೇಕೆಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಸ್. ಷಫಿಅಹಮದ್, ಆರ್.ನಾರಾಯಣ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಯುವಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆಮಠ್, ಆಟೊರಾಜು, ಜಿಪಂ ಸದಸ್ಯ ವೆಂಕಟೇಶ್, ಮೆಹಬೂಬ್ಪಾಷಾ, ವಕ್ತಾರೆ ಸುಜಾತ ಮತ್ತಿತರರು ಉಪಸ್ಥಿತರಿದ್ದರು.
1620 ವೆಂಟಿಲೇಟರ್ಸ್ ಏನಾದವು?:
ಆಕ್ಸಿಜನ್, ವೆಂಟಿಲೇಟರ್ಗೆ ಹಾಹಾಕಾರ ಪಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಬೇರೆ ರಾಜ್ಯಗಳಿಗೆ ಕೊಡದಿರುವಷ್ಟು ದೊಡ್ಡ ಸಂಖ್ಯೆಯಲ್ಲಿ 2025 ವೆಂಟಿಲೇಟರ್ಸ್ಗಳನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ. ಇದರಲ್ಲಿ 405 ವೆಂಟಿಲೇಟರ್ಗಳನ್ನು ಮಾತ್ರ ಬಳಕೆ ಮಾಡಿದ್ದು, ಉಳಿದ 1620 ವೆಂಟಿಲೇಟರ್ಸ್ಗಳು ಬಳಕೆಯಾಗದೆ ಉಳಿದವು. ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿದ್ದರೆ ಸಾವಿರಾರು ಜನರ ಪ್ರಾಣ ಉಳಿಯುತ್ತಿತ್ತು. ಅಮಾಯಕರ ಪ್ರಾಣ ಹಾನಿಗೆ ಸರಕಾರವೇ ಕಾರಣವಾಗಿದೆ ಎಂದು ಪರಮೇಶ್ವರ್ ದೂರಿದರು.
ಸಾವಿನ ಸುಳ್ಳು ಲೆಕ್ಕ, ಸಿಎಂ ಮಹಾನ್ ಸುಳ್ಳುಗಾರ: ಟಿಬಿಜೆ

ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಜೂ.1ರವರೆಗೆ 911 ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಸುಳ್ಳು ಮಾಹಿತಿ ನೀಡುತ್ತಿದೆ. ಸಿರಾವನ್ನೇ ಗಮನಿಸುವುದಾದರೆ ಈವರೆಗೆ 61 ಮಂದಿ ಸಾವನ್ನಪ್ಪಿದ್ದಾರೆಂದು ಅಂಕಿ-ಅಂಶ ಹೇಳುತ್ತಾರೆ. ಆದರೆ ಸಿರಾ ಆಸ್ಪತ್ರೆಯಿಂದಲೇ 154 ಮಂದಿ ಶವಗಳು ಹೊರಹೋಗಿವೆ. ಕೋವಿಡ್ ಮತ್ತು ನಾನ್ ಕೋವಿಡ್ ಎಂದು ವರ್ಗೀಕರಿಸಿ ಸಾವಿನ ಅಂಕಿ ಅಂಶ ಮುಚ್ಚಿ ಹಾಕುವ ಯತ್ನನಡೆಯುತ್ತಿದೆ. ಈ ಸುಳ್ಳು ಅಂಕಿ-ಅಂಶವನ್ನೇ ತುಮಕೂರು ಜಿಲ್ಲೆಯ ಸಭೆಗೆ ಬಂದು ಸಿಎಂ ಪುನರುಚ್ಚರಿಸುವ ಮೂಲಕ ಮಹಾನ್ ಸುಳ್ಳುಗಾರರೆನಿಸಿದ್ದಾರೆ, ಕೋವಿಡ್ ನಿರ್ವಹಣೆ, ಆಕ್ಸಿಜನ್ ಒದಗಿಸುವಲ್ಲಿ ವೈಫಲ್ಯದ ಬಗ್ಗೆ ಸುಪ್ರೀಂಕೋರ್ಟ್, ಹೈ ಕೋರ್ಟ್ಗಳೇ ಸ್ವಯಂ ಪ್ರೇರಿತವಾಗಿ ಸರಕಾರಕ್ಕೆ ಛೀಮಾರಿ ಹಾಕುತ್ತಿರುವುದಕ್ಕಿಂದ ದೊಡ್ಡ ಅವಮಾನ ಬೇಕೆ? ಜನರ ಪ್ರಾಣ ಉಳಿಸಬೇಕಾದ ಸರಕಾರ ಸತ್ತವರ
ಅಸ್ಥಿ ವಿಸರ್ಜನೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.
ಪಿಎಂ ಕೇರ್ಸ್ ಹೆಸರಲ್ಲಿ ಹಗಲು ದರೋಡೆ: ರಾಜಣ್ಣ
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ನೋಟ್ ಬ್ಯಾನ್ ವೇಳೆ 500, 1000 ಮುಖ ಬೆಲೆ ನೋಟು ಜಮೆಯಾಗಿದ್ದು ಎಷ್ಟು ಎಂದು ಇದುವರೆಗೂ ಕೇಂದ್ರ ಲೆಕ್ಕ ಹೇಳಿಲ್ಲ. ಭಾರತದ ಆರ್ಥಿಕತೆ ಮೇಲೆ ಮಾಡಿದ ಮೊದಲ ದಾಳಿ ಇದು. ರಾಜ್ಯದ ಪಾಲಿನ ಜಿಎಸ್ಟಿ ಪಾವತಿಯ 12,400 ಕೋಟಿ ನೀಡುತ್ತಿಲ್ಲ. ಕೇಳಿದರೆ ಸಾಲ ಪಡೆಯಲು ಹೇಳುತ್ತಾರೆ.ಗುಜರಾತ್ಗೆ ಮಾತ್ರ ಕೇಳಿದಷ್ಟು ಹಣ ಕೊಡುವ ಕೇಂದ್ರ ಪಿಎಂ ಕೇರ್ಸ್ ನಿಧಿಯನ್ನು ಆರ್ಟಿಐನಿಂದ ಹೊರಗಿಟ್ಟು ಹಗಲು ದರೋಡೆ ಮಾಡಲಾಗುತ್ತಿದೆ. ಆರೋಗ್ಯ ಸಚಿವರಿಂದ ಜವಾಬ್ದಾರಿ ಕಸಿದು ವಿವಿಧ ಸಚಿವರಿಗೆ ಹಂಚಿರುವುದು ಭ್ರಷ್ಟಾಚಾರ ವಿಕೇಂದ್ರಕರಣಕ್ಕೆ ದಾರಿಯಾಗಿದೆ. ಐಸಿಯು ವೆಂಟಿಲೇಟರ್ಸ್ನಲ್ಲಿ ಡಿಸ್ಟಿಲ್ ವಾಟರ್ ಬಳಸದೆ ಮಾಮೂಲಿ ನೀರು ಬಳಸುತ್ತಿರುವುದು ಬ್ಲಾಕ್ ಫಂಗಸ್ ಉಲ್ಬಣಕ್ಕೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ಸರಕಾರ ಪಾಲಿಕೆ ವಿದೇಯಕಕ್ಕೆ ತಿದ್ದುಪಡಿ ತಂದ ಪರಿಣಾಮ ತುಮಕೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಶೇ.5ರಷ್ಟು ಹೆಚ್ಚಳವಾಗಿದ್ದು, ಕೂಡಲೇ ತಿದ್ದುಪಡಿ ವಾಪಸ್ ಪಡೆದು ಕಷ್ಟದಲ್ಲಿರುವ ನಗರದ ಜನತೆಗೆ ತೆರಿಗೆ ಭಾರ ಇಳಿಸಬೇಕು.
-ಡಾ.ರಫೀಕ್ ಅಹಮದ್ ಮಾಜಿ ಶಾಸಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








