ಕೊರಟಗೆರೆ : ಡಕಾಯಿತರಿಂದ ತೋಟದ ಮನೆಯಲ್ಲಿ ಕೊಲೆ

ಕೊರಟಗೆರೆ :

     ತೋಟದ ಒಂಟಿ ಮನೆಗೆ ನುಗ್ಗಿದ ಡಕಾಯಿತರು ಮನೆ ಮಾಲೀಕರನ್ನು ಮಾರಕಾಸ್ತ್ರದಿಂದ ಹೊಡೆದು ಸಾಯಿಸಿ, ಡಕಾಯಿತಿ ಮಾಡಿರುವ ಘಟನೆಯೊಂದು ಭಾನುವಾರ ಮಧ್ಯರಾತ್ರಿ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

     ಕೊರಟಗೆರೆ ತಾಲ್ಲೂಕು ಸಿಎನ್ ದುರ್ಗ ಹೋಬಳಿ ಚಿಕ್ಕರಸನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಹೊರವಲಯದಲ್ಲಿರುವ ತೋಟದ ಒಂಟಿ ಮನೆಯಲ್ಲಿ ಈ ದುರ್ಘಟನೆ ಜರುಗಿದ್ದು, ಇದೇ ಗ್ರಾಮದ ತೋಟದ ಮಾಲೀಕ ಲೇಟ್ ಚಿಕ್ಕಣ್ಣನವರ ಮಗ ರಾಮಣ್ಣ (71 ವರ್ಷ) ಡಕಾಯಿತಿ ಸಂದರ್ಭದಲ್ಲಿ ಹತ್ಯೆಯಾದ ದುರ್ದೈವಿಯಾಗಿದ್ದಾರೆ.

       ಮೃತ ರಾಮಣ್ಣ ತಾಲ್ಲೂಕು ಪಂಚಾಯಿತಿಯ ಬಿಜೆಪಿ ಪಕ್ಷದ ಮಾಜಿ ಸದಸ್ಯ ಬಿ. ಆರ್ ಲೋಕೇಶ್ ಅವರ ತಂದೆ. ತಂದೆ ತಾಯಿಯರು ತೋಟದ ಮನೆಯಲ್ಲಿ ವಾಸವಿದ್ದು, ಲೋಕೇಶ್ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತುಮಕೂರಿನಲ್ಲಿ ವಾಸವಿದ್ದು ವಾರಕ್ಕೆ ಎರಡು ಮೂರು ಬಾರಿ ತಂದೆ ತಾಯಿಗಳ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದರು ಎನ್ನಲಾಗಿದೆ. ಮೃತ ರಾಮಣ್ಣನವರ ಮಡದಿ ಪುಟ್ಟತಾಯಮ್ಮನಿಗೂ ಸಹ ಕೊರೋನಾ ಸೋಂಕು ತಗುಲಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು, ರಾಮಣ್ಣ ತೋಟದ ಮನೆಯಲ್ಲಿ ಒಂಟಿ ಇದ್ದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ.

      ಲೋಕೇಶ್ ಅವರ ತೋಟದ ಮನೆಯಲ್ಲಿ ಇಲಿ ಸಾಕಾಣಿಕೆ ಮಾಡುತ್ತಿದ್ದು, ಇಲಿ ಫಾರಂನ ಸಾಕಾಣಿಕೆಯ ಜವಾಬ್ದಾರಿ ಯನ್ನು ಇದೇ ಗ್ರಾಮದ ರಂಜಿತ್ ಎಂಬುವನಿಗೆ ವಹಿಸಲಾಗಿತ್ತು. ಆತ ದಿನಂಪ್ರತಿ ಬೆಳ್ಳಂಬೆಳಗ್ಗೆ ಬಂದು ರಾತ್ರಿ ಹೊತ್ತು ಮನೆಗೆ ವಾಪಸ್ಸಾಗುತ್ತಿದ್ದನು ಎನ್ನಲಾಗಿದ್ದು, ಈ ವ್ಯಕ್ತಿಯು ಸಹ ಇಲ್ಲದಿರುವ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ. ಲೋಕೇಶ್ ಅವರ ತೋಟವನ್ನು ಇತ್ತೀಚೆಗೆ ಚೇಣಿಗೆ ಕೊಂಡುಕೊಳ್ಳಲು ಹಲವಾರು ಜನರು ವ್ಯಾಪಾರಕ್ಕಾಗಿ ಬರುತ್ತಿದ್ದರು. ಅಡಕೆ ತೋಟದ ಫಸಲು ಪ್ರತಿವರ್ಷ ಸುಮಾರು 12 ರಿಂದ 15 ಲಕ್ಷ ರೂ.ಗೆ ವ್ಯಾಪಾರವಾಗುತ್ತಿತ್ತು.

     ಮನೆಯಲ್ಲಿ ಲಕ್ಷಲಕ್ಷ ಹಣ ಹಾಗೂ ಚಿನ್ನಾಭರಣಗಳು ಅಪಾರವಾಗಿ ಸಿಗಬಹುದು ಎಂದು ಡಕಾಯಿತಿ ಕೋರರು ಮನೆಗೆ ನುಗ್ಗಿ ಈ ದುರ್ಘಟನೆಗೆ ಕೈ ಹಾಕಿರಬಹುದು ಎನ್ನಲಾಗಿದೆ. ಡಕಾಯಿತಿ ಕೋರರು ಮನೆಯ 2 ಬೀರು, ಸೀಕ್ರೆಟ್ ಲಾಕ್ ಹೊಡೆದಿದ್ದಾರೆ. ಆದರೂ ನಗದು ಹಾಗೂ ಚಿನ್ನಾಭರಣಗಳನ್ನು ಬೇರೆಡೆ ಬಚ್ಚಿಟ್ಟ ಕಾರಣ ಕಳ್ಳರಿಗೆ ನಿರೀಕ್ಷೆ ಮಟ್ಟಕ್ಕೆ ಹಣ ಹಾಗೂ ಒಡವೆ ವಸ್ತ್ರಗಳು ಸಿಕ್ಕಿಲ್ಲ ಎನ್ನಲಾಗಿದೆ.

      ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ರಾಮಕೃಷ್ಣ, ಸಿಪಿಐ ಸಿದ್ದರಾಮೇಶ್ವರ ಪಿಎಸ್‍ಐ ಮುತ್ತರಾಜು, ಬಡವನಹಳ್ಳಿ ಪಿಎಸ್‍ಐ ಹನುಮಂತಪ್ಪ, ಕೊರಟಗೆರೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link