ಕೊರಟಗೆರೆ :

ಶ್ರೀ ರೇವಣ್ಣ ಸಿದ್ದೇಶ್ವರ ತಪೋಕ್ಷೇತ್ರ ಸಿದ್ದರಬೆಟ್ಟದ ಕನಕ ಗುರು ಪೀಠದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುವ ಧ್ಯೇಯೋದ್ದೇಶ ಹೊಂದಲಾಗಿದೆ ಎಂದು ಶ್ರೀರೇವಣ್ಣ ಸಿದ್ದೇಶ್ವರ ಕನಕ ಗುರು ಪೀಠ ಹೊಸದುರ್ಗ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.
ಅವರು ತಾಲ್ಲೂಕಿನ ಸಿದ್ದರಬೆಟ್ಟದ ಶ್ರೀ ರೇವಣ್ಣ ಸಿದ್ದೇಶ್ವರ ಕನಕ ಗುರು ಪೀಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಶ್ರೀ ರೇವಣ್ಣಸಿದ್ದೇಶ್ವರ ಸ್ವಾಮಿಗೆ ಪೂಜಾ ಕಾರ್ಯಕ್ರಮ ಹಾಗೂ ಸತ್ಸಂಗ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶ್ರೀ ಮಠದಲ್ಲಿ ಮುಂದಿನ ದಿನಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ಯತೀತ ಕಾರ್ಯಗಳನ್ನು ಕೈ ಗೊಳ್ಳಲಾಗುವುದು ಎಂದರು.
ಸಿದ್ದರಬೆಟ್ಟ ಕ್ಷೇತ್ರವು ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಪುರಾತನ ಕಾಲದಿಂದಲೂ ಯತಿಶ್ರೀಗಳು ಹಾಗೂ ಋಷಿಮುನಿಗಳು ಲೌಕಿಕ ಬದುಕನ್ನು ಬಿಟ್ಟು, ನಿರ್ಜನ ಪ್ರದೇಶ, ಗುಡ್ಡಗಾಡು ಹಾಗೂ ಗವಿಗಳಲ್ಲಿ ತಪೋನಿರತರಾಗಿ, ದೈವತ್ವ ಪಡೆದಂತಹ ಪುಣ್ಯಕ್ಷೇತ್ರ. ಜೊತೆಗೆ ಹಾಲು ಮತ ಕುರುಬರ ಕುಲ ದೈವ ಶ್ರೀರೇವಣ್ಣ ಸಿದ್ದೇಶ್ವರರು ತಪೋಗೈದ ಈ ಪುಣ್ಯ ಭೂಮಿಯಲ್ಲಿ ನಾವು ಒಂದು ಮಠ ಕಟ್ಟಬೇಕೆಂಬ ಬಯಕೆ ಸುಮಾರು ವರ್ಷಗಳಿಂದ ನಮ್ಮಲ್ಲಿ ಕಾಡುತಿತ್ತು. ಆ ಕಾರಣಕ್ಕಾಗಿ ಇಲ್ಲಿ ಮಠ ಪ್ರಾರಂಭಿಸಲಾಯಿತು. ಇದಕ್ಕೆ ಇಡೀ ಜಿಲ್ಲೆ ಸೇರಿದಂತೆ ಬೆಂಗಳೂರು ಹಾಗೂ ಇತರೆ ಜಿಲ್ಲೆಯ ¸ಸದ್ಭ್ಬಕ್ತರ ಸಹಕಾರವಿದ್ದು, ಮುಂದಿನ ದಿನಗಳಲ್ಲಿ ಶ್ರೀಮಠದಿಂದ ಜಾತ್ಯತೀತವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಮಧುಗಿರಿ ತಾಲ್ಲೂಕು ಕುರುಬ ಸಂಘದ ಖಜಾಂಚಿ ಹಾಗೂ ತಾಪಂ ಮಾಜಿ ಅಧ್ಯಕ್ಷ ಮರಿಯಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಂಘಟನೆ ದೃಷ್ಟಿಯಿಂದ ಒಂದು ಶ್ರೀಮಠದ ಅವ್ಯಕತೆ ಇತ್ತು. ಶ್ರೀ ಈಶ್ವರಾನಂದ ಪುರಿ ಮಹಾ ಸ್ವಾಮಿಗಳು ಮಠ ಸ್ಥಾಪಿಸಿರುವುದಕ್ಕೆ ಧನ್ಯವಾದ ಎಂದರು.
ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಉಪನ್ಯಾಸಕ ಮಾಲಿಂಗೇಶ್ ಮಾತನಾಡಿ, ಶ್ರೀರೇವಣ್ಣ ಸಿದ್ದೇಶ್ವರ ತಪೋ ಕ್ಷೇತ್ರದಲ್ಲಿ ಮಠ ಪ್ರಾರಂಭಿಸಿರುವುದು ಶ್ರೀಗಳು ಮುಂದಿನ ಪೀಳಿಗೆಗೆ ನೀಡಿದ ಬಳುವಳಿಯಾಗಿದೆ ಎಂದರು. ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಮಧುಗಿರಿ ತಾಲ್ಲೂಕು ನಿರ್ದೇಶಕ ತಿಮ್ಮರಾಜು, ಜಿಲ್ಲೆ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ಹತ್ತಿದಲ್ಲಿರುವ ಸಿದ್ದರಬೆಟ್ಟದ ಮಠ ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಸಂಘಟನೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಕೊರಟಗೆರೆ ತಾ.ಕುರುಬ ಸಂಘದ ಅಧ್ಯಕ್ಷ ಮೈಲಾರಪ್ಪ ಮಾತನಾಡಿ, ತಾಲ್ಲೂಕಿನ ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಮುಂದಿನ ದಿನಗಳಿಲ್ಲಿ ಉಜ್ವಲ ಭವಿಷ್ಯ ನೀಡುವ ತರಬೇತಿ ಕೇಂದ್ರಗಳನ್ನು ಶ್ರೀ ಮಠದಲ್ಲಿ ಪ್ರಾರಂಭಿಸ ಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿಕೊಂಡರು. ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ತಾಲ್ಲುಕು ನಿರ್ದೇಶಕ ನಾಗಭೂಷಣ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಮಠ ಮುಂದಿನ ದಿನಗಳಲ್ಲಿ ತಮ್ಮದೆ ಕೊಡುಗೆ ನೀಡಬೇಕು ಎಂದರು. ಷಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್‍ನ ತಾ.ಅಧ್ಯಕ್ಷ ಗಂಗರಂಗಯ್ಯ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಜನಾಂಗವನ್ನು ಶ್ರೀಗಳು ಮುನ್ನಡೆಸುವಂತಾಗ ಬೇಕು. ಜೊತೆಗೆ ಸಮಾಜದ ಬಂಧುಗಳು ಮಠದ ಶ್ರೇಯೋಭಿವೃದ್ದಿಗೆ ಸಹಕಾರ ನೀಡ ಬೇಕು ಎಂದರು.
ಈ ಸಂದರ್ಭದಲ್ಲಿ ಮಧುಗಿರಿ ತಾಲ್ಲೂಕಿನ ಮುಖಂಡರುಗಳಾದ ಲಕ್ಷ್ಮೀರಂಗಣ್ಣ, ಗರಣಿರಾಮಾಂಜಿ, ಲಾಯರ್‍ತಿಮ್ಮರಾಜು, ಆನಂದ್, ಮಿಲ್ಟ್ರಿ ಹೋಟಲ್ ನಾಗಣ್ಣ, ಮಲ್ಲೇಶ್, ಶಿವಶಂಕರ್, ಭಾರ್ಗವ, ಮಂಜುನಾಥ್, ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮಶಿವಣ್ಣ, ಪತ್ರಕರ್ತ ರಂಗಧಾಮಯ್ಯ, ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷ ಲಿಂಗಪ್ಪ, ಗ್ರಾಪಂ ಸದಸ್ಯ ದೇವರಾಜು, ಮುಖಂಡರಾದ ನಂಜುಂಡಯ್ಯ, ರಂಗರಾಜು, ಶಿವಣ್ಣ, ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








