ತುಮಕೂರು :
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಕುರಿತು ರಾಜ್ಯ ಬಿಜೆಪಿ ಸರಕಾರದಲ್ಲಿ ತಲೆದೋರಿರುವ ಭಿನ್ನಮತ ಸಂಬಂಧ ಸಚಿವರು, ಶಾಸಕರ ಅಭಿಪ್ರಾಯ ಆಲಿಸಲು ರಾಜ್ಯಕ್ಕೆ ಬುಧವಾರ ಸಂಜೆಯೇ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್ ಅವರು ಮೊದಲ ಸುತ್ತಿನಲ್ಲಿ ಬುಧವಾರ ಸಂಜೆಯ ಸಚಿವರ ಅಭಿಪ್ರಾಯ ಆಲಿಸಿದ್ದು, ಗುರುವಾರ ಬೆಳಿಗ್ಗೆಯಿಂದ ಶಾಸಕರ ಒನ್ ಟೂ ಒನ್ ಮೀಟಿಂಗ್ ಅನ್ನು ಪಕ್ಷದ ಕಚೇರಿಯಲ್ಲಿ ಆರಂಭಿಸಿದ್ದಾರೆ.
ಜಿಲ್ಲೆಯ ಐವರು ಬಿಜೆಪಿ ಶಾಸಕರ ಪೈಕಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬುಧವಾರ ಸಂಜೆಯೇ ಉಸ್ತುವಾರಿ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದು, ಶಾಸಕರಾದ ಸಿ.ಎಂ.ರಾಜೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್ ಹಾಗೂ ಮಸಾಲೆ ಜಯರಾಂ ಅವರು ಗುರುವಾರ ಮಧ್ಯಾಹ್ನಸಿಂಗ್ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಅವರನ್ನೇ ಮುಂದುವರಿಸಬೇಕೆಂದು ಸಿಎಂ ಪರ ಬ್ಯಾಟಿಂಗ್ ಮಾಡಿರುವುದು ತಿಳಿದು ಬಂದಿದೆ. ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರು ಬೆಂಗಳೂರಿಗೆ ತೆರಳದೆ ಕ್ಷೇತ್ರದಲ್ಲೇ ಉಳಿದಿದ್ದು ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಸಿಕ್ಕ 5 ರಿಂದ 7ನಿಮಿಷದಲ್ಲಿ ಯಡಿಯೂರಪ್ಪ ಪರ ವಕಾಲತ್ತು, ಕ್ಷೇತ್ರದ ಅಭಿವೃದ್ಧಿ ಮಾಹಿತಿ: ಶಾಸಕರಿಗೆ ಕೊಡಲಾಗಿದ್ದ ಏಳು ನಿಮಿಷ ಸಮಯ ಪರಿಮಿತಿಯಲ್ಲಿ ಸಿರಾ, ತುರುವೇಕೆರೆ ಹಾಗೂ ತುಮಕೂರು ನಗರ ಶಾಸಕರು ಸಿಎಂ ಆಗಿ ಯಡಿಯೂರಪ್ಪ ಅವರನ್ನೇ ಮುಂದುವರಿಸಬೇಕೆಂದು ಉಸ್ತುವಾರಿಗಳಲ್ಲಿ ಮನವಿ ಮಾಡಿ, ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಅನುದಾನ ಕೊಟ್ಟಿದ್ದಾರೆಂಬ ವರದಿಯನ್ನು ಮಂಡಿಸಿದ್ದಾರೆ. ಹಾಗೆಯೇ ತಮ್ಮ ಕ್ಷೇತ್ರಕ್ಷೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬೇಡಿಕೆಯನ್ನು ಉಸ್ತುವಾರಿಗಳ ಗಮನಕ್ಕೆ ತಂದಿದ್ದಾರೆ.
ಉಸ್ತುವಾರಿ ಭೇಟಿಗೆ ಜಿಲ್ಲೆಯ ಶಾಸಕರ ಪೈಕಿ ಗುರುವಾರ ಮೊದಲ ಅವಕಾಶ ಪಡೆದಿದ್ದ ಸಿರಾ ಶಾಸಕ ಸಿ.ಎಂ.ರಾಜೇಶ್‍ಗೌಡ ಅವರು ನೇರವಾಗಿಯೇ ಸಿಂಗ್ ಅವರ ಬಳಿ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕೆಂದು ಕೋರಿದ್ದು, ಇನ್ನೆರೆಡು ವರ್ಷ ಅವಧಿ ಮಾತ್ರ ಇದೆ. ಅನೇಕ ಕಲ್ಯಾಣ ಕಾರ್ಯಕ್ರಮ ಯೋಜನೆಗಳನ್ನು ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯಾದರೆ ಯೋಜನೆಗೆ ಹಿನ್ನಡೆಯಾಗುತ್ತದೆ. ಅಲ್ಲದೇ ವಿಪಕ್ಷಗಳ ಟೀಕೆಗೆ ನಾವೇ ಆಸ್ಪದ ಕೊಟ್ಟಂತಾಗುತ್ತದೆಎಂದು ಹೇಳಿ ಅಸ್ಥಿತ್ವವೇ ಇಲ್ಲದಿದ್ದ ಸಿರಾದಿಂದ ಉಪಚುನಾವಣೆಯಲ್ಲಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿದ್ದು, ಉಪಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚನೆಯಾಗಿದೆ. ಆದರೆ ಅಧ್ಯಕ್ಷರ ನೇಮಕ ಆಗಿಲ್ಲ. ಬೇಗ ನೇಮಕ ಮಾಡಿಸುವ ಜೊತೆಗೆ ಕ್ಷೇತ್ರಕ್ಕೆ ಸಮರ್ಪಕವಾಗಿ ಹೇಮಾವತಿ ಹಾಗೂ ಭದ್ರಾ ನೀರನ್ನು ಹರಿಸುವ ವ್ಯವಸ್ಥೆಯಾಗಬೇಕು ಎಂಬ ಅಂಶವನ್ನು ಸಿಂಗ್ ಅವರ ಗಮನಕ್ಕೆ ತಂದಿದ್ದಾರೆ.
ಸಿರಾ ಶಾಸಕರ ಬಳಿಕ ಸಿಂಗ್ ಭೇಟಿಯಾದ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅವರು ಸಹ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದು, ಬಿಎಸ್‍ವೈ ಒಳ್ಳೆಯ ಆಡಳಿತ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲೂ ಎಲ್ಲಾ ಜನವರ್ಗದವರಿಗೂ ಪ್ಯಾಕೇಜ್ ಘೋಷಿಸಿದ್ದು, ಅವರನ್ನೇ ಮುಂದುವರಿಸಬೇಕು. ಹೇಮಾವತಿ ನಾಲಾಆಧುನೀಕರಣಕ್ಕೂ 550 ಕೋಟಿ ನೀಡಿದ್ದಾರೆ ಎಂಬ ಅಂಶವನ್ನು ಉಸ್ತುವಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ. ಜಯರಾಂ ಅವರ ಬಳಿಕ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಅರುಣ್‍ಸಿಂಗ್ ಅವರೊಡನೆ ಸಿಎಂ ಬಿಎಸ್‍ವೈ ಪರವಾಗಿಯೇ ವಕಾಲತ್ತು ವಹಿಸಿದ್ದು, ಬಿಎಸ್‍ವೈ ನಾಯಕತ್ವದಿಂದಲೇ ಪಕ್ಷ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗೆಲ್ಲಲು ಸಾಧ್ಯವಾಯಿತು. ಪಕ್ಷ ಸಂಘಟನೆಗೆ ಅವಿರತ ಶ್ರಮಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೂ ಪಕ್ಷಾತೀತವಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ. ಸಿಎಂ ಆಗಿ ಅವರೇ ಮುಂದುವರಿಯಬೇಕೆಂಬ ವಾದ ಮಂಡಿಸಿದ್ದಾರೆಂದು ತಿಳಿದುಬಂದಿದೆ.
ಸಚಿವ ಜೆಸಿಎಂ ಪರೋಕ್ಷ ಬೆಂಬಲ:
ಬಿಜೆಪಿ ಶಾಸಕರ ಪೈಕಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರೂ ಸಣ್ಣ ನೀರಾವರಿ ಸಚಿವರೂ ಆದ ಜೆ.ಸಿ.ಮಾಧುಸ್ವಾಮಿ ಅವರು ಬುಧವಾರ ಸಂಜೆಯೇ ಉಸ್ತುವಾರಿ ಅರುಣ್‍ಸಿಂಗ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದು, ಬುಧವಾರ ಬೆಳಿಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ವಾಹುವಿಹಾರದ ವೇಳೆ 5 ನಿಮಿಷ ಭೇಟಿ ಮಾಡಿ ತವರು ಜಿಲ್ಲೆಗೆ ಮರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಪ್ರಸಕ್ತ ನಾಯಕತ್ವ ಬದಲಾವಣೆ ವಿಚಾರವನ್ನು ಯಾರು ಬಯಸಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಈ ಬೆಳವಣಿಗೆ ನಡೆಯಬಾರದಿತ್ತು ಎಂದು ಪರೋಕ್ಷವಾಗಿ ಸಿಎಂ ಪರ ಹೇಳಿಕೆ ನೀಡಿದ್ದಾರೆ.
ನನಗೆ ಗುರುವಾರ ಮಧ್ಯಾಹ್ನ 1.30ಕ್ಕೆ ಅರುಣ್ ಸಿಂಗ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಈ ವೇಳೆ ಬಿಎಸ್‍ವೈ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅನೇಕಸಾಮಾಜಿಕ,ಆರ್ಥಿಕ ಯೋಜನೆಗಳನ್ನು ಸಿಎಂ ಘೋಷಿಸಿದ್ದು,ಇವನ್ನು ಕಾರ್ಯಗತಗೊಳಿಸಲು ಅವರೇ ಮುಂದುವರಿಯಬೇಕು. ಕಮಲವೇ ಅರಳದಿದ್ದ ಸಿರಾ ಕ್ಷೇತ್ರದ ಉಪಚುನಾವಣೆಯನ್ನು ಬಿಎಸ್‍ವೈ ನಾಯಕತ್ವದಲ್ಲೇ ಗೆದ್ದು, ಶಾಸಕನಾಗಿರುವೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರದ ಕೆರೆಗಳಿಗೆ ನೀರು, ಕಾಡುಗೊಲ್ಲ ಅಭಿವೃದ್ದಿ ನಿಗಮಕ್ಕೆ ಬೇಗ ಅಧ್ಯಕ್ಷರ ನೇಮಕವಾಗಬೇಕೆಂಬ ವಿಷಯವನ್ನು ಗಮನಕ್ಕೆ ತಂದಿರುವೆ. ಅವರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ.
-ಸಿಎಂ ರಾಜೇಶ್‍ಗೌಡ, ಸಿರಾ ಕ್ಷೇತ್ರದ ಶಾಸಕ.
ಯಡಿಯೂರಪ್ಪ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್‍ನಿಂದ ಸತ್ತವರ ಕುಟುಂಬಗಳಿಗೆ 1ಲಕ್ಷ ಪರಿಹಾರ, ಸಹಾಯಧನದ ಪ್ಯಾಕೇಜ್‍ಗಳು ಎಲ್ಲವನ್ನೂ ಘೋಷಿಸಿದ್ದು, ಜಿಲ್ಲೆ ಹಾಗೂ ತುರುವೇಕೆರೆ ಕ್ಷೇತ್ರದ ಅನುಕೂಲವಾಗುವಂತೆ ಹೇಮಾವತಿ ನಾಲಾ ಆಧುನೀಕರಣಕ್ಕೆ 550 ಕೋಟಿ ಪ್ಯಾಕೇಜ್ ನೀಡಿದ್ದಾರೆ. ಅರುಣ್‍ಸಿಂಗ್ ಭೇಟಿ ವೇಳೆ ಕ್ಷೇತ್ರದ ಅಭಿವೃದ್ಧಿ, ಸಿಎಂ ಕೊಟ್ಟಿರುವ ಕೊಡುಗೆಗಳ ಬಗ್ಗೆ ತಿಳಿಸಿರುವೆ.
-ಮಸಾಲೆ ಜಯರಾಂ, ತುರುವೇಕೆರೆ ಕ್ಷೇತ್ರದ ಶಾಸಕ.
ಈ ಬೆಳವಣಿಗೆಗಳು ಪಕ್ಷ, ಅಭಿವೃದ್ಧಿಗೆ ಮಾರಕ : ಜೆ.ಸಿ.ಮಾಧುಸ್ವಾಮಿ
ನಾನು ನಾಯಕತ್ವ ಬದಲಾವಣೆ ವಿಷಯವಾಗಿ ಆಸಕ್ತಿಯಿಲ್ಲ. ನಮ್ಮ ಅಭಿಪ್ರಾಯವನ್ನು ಯಾರು ಕೇಳಿಲ್ಲ. ನಾಯಕತ್ವ ಬದಲಾವಣೆ ಬೆಳವಣಿಗೆಗಳು ಪಕ್ಷ, ಅಭಿವೃದ್ಧಿಗೆ ಮಾರಕ. ಬುಧವಾರ ಸಂಜೆ ಅರುಣ್‍ಸಿಂಗ್ ಅವರನ್ನು ಭೇಟಿಯಾದಾಗಲೂ ರಾಜಕೀಯ ಚರ್ಚೆ ಮಾಡಿಲ್ಲ. ಬರೀ ಇಲಾಖೆ ಜನೋಪಯೋಗಿ ಕೆಲಸಗಳ ಬಗ್ಗೆ ಮಾಹಿತಿ ನೀಡಿರುವೆ ಹೊರತು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಸಿಎಂ ಅವರನ್ನು 2 ನಿಮಿಷ ಭೇಟಿಯಾಗಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಪತ್ರ ನೀಡಿ ಜಿಲ್ಲೆಗೆ ಹೊರಟುಬಂದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ