ತುಮಕೂರು :
ಕುದುರೆಯೊಂದರ ಕಾಲಿಗೆ ಹಾವು ಸುತ್ತಿಕೊಂಡು ಕಚ್ಚುತ್ತಿದ್ದ ಪ್ರಸಂಗ ಗಮನಿಸಿದ ಬಾಲಕನೊಬ್ಬ ಕೂಡಲೇ ಪ್ರಾಣಿ ಸಂರಕ್ಷಣಾ ತಂಡದ ಗಮನ ಸೆಳೆದ ಪರಿಣಾಮವಾಗಿ ಕುದುರೆ ಸುರಕ್ಷಿತವಾಗಿ ಬದುಕಿ ಉಳಿದಿರುವ ಘಟನೆ ವರದಿಯಾಗಿದೆ.
ಕ್ಯಾತ್ಸಂದ್ರ ಚಂದ್ರಮೌಳೇಶ್ವರ ಬಡಾವಣೆಯ ಮೊದಲನೇ ಕ್ರಾಸ್‍ನ ನಿವಾಸಿ ಉದ್ಯಮಿ ಮನ್ಸೂರ್ ಅಹಮದ್ ಅವರ ಪುತ್ರ ಮುನಾಲ್ ಅಹಮದ್ (10ವರ್ಷ) ಎಂಬ ಬಾಲಕನೇ ಕುದುರೆಯನ್ನು ರಕ್ಷಿಸಲು ನೆರವಾಗಿರುವ ವಿದ್ಯಾರ್ಥಿ.
ಜೂನ್ 18 ರಂದು ಬೆಳಗ್ಗೆ ಸುಮಾರು 8.30ರ ಸಮಯದಲ್ಲಿ ಈ ಬಾಲಕ ಅಂಗಡಿಗೆ ತೆರಳಿದ್ದ. ಹೋಗುವಾಗ ಕ್ರಾಸ್‍ನಲ್ಲಿ ಕುದುರೆಯೊಂದು ಕಾಣಿಸಿತು. ಅದರ ಹಿಂಬದಿಯ ಎಡಗಾಲಿಗೆ ಹಾವು ಸುತ್ತಿಕೊಂಡಿದ್ದು, ಹೊಟ್ಟೆಯ ಭಾಗವನ್ನು ಕಚ್ಚುತ್ತಿತ್ತು. ಈ ದೃಶ್ಯ ನೋಡಿ ಬಾಲಕ ಹೌಹಾರಿದ. ಹಾವು ಕುದುರೆಯನ್ನು ಕಚ್ಚಿ ಸಾಯಿಸಿಬಿಡುತ್ತದೆ ಎಂದು ಆತಂಕಗೊಂಡು ಕೂಡಲೇ ಮನೆಗೆ ವಾಪಸ್ಸಾದ.
ತನ್ನ ಮೊಬೈಲ್‍ನಲ್ಲಿ ನೆಟ್ ಮೂಲಕ ಗೂಗಲ್‍ನಲ್ಲಿ ಪ್ರಾಣಿ ಸಂರಕ್ಷಣೆಯ ಮಾಹಿತಿ ಕಲೆಹಾಕಿದ. ಆಗ ಅನಿಮಲ್ ಏಡ್ ಎಂಬ ಒಂದು ಫೋನ್ ಸಂಖ್ಯೆ ದೊರಕಿತು. ಆ ನಂಬರ್‍ಗೆ ಕರೆ ಮಾಡಿ ವಿಷಯ ತಿಳಿಸಿದ. ಕೂಡಲೇ ಪ್ರಾಣಿ ಸಂರಕ್ಷಣಾ ತಂಡವು ಕುಣಿಗಲ್‍ನಿಂದ ದಾವಿಸಿಬಂದು ಹಾರ್ಸ್ ಆಂಬ್ಯುಲೆನ್ಸ್‍ನಲ್ಲಿ ಸಾಗಿಸಿ ಅಗತ್ಯ ತುರ್ತು ಚಿಕಿತ್ಸೆ ನೀಡಿದರು. ಮಧ್ಯಾಹ್ನದ ಹೊತ್ತಿಗೆ ಆ ಕುದುರೆ ಸುರಕ್ಷಿತವಾಗಿರುವ ಫೋಟೋವೊಂದನ್ನು ಬಾಲಕನಿಗೆ ವಾಟ್ಸಪ್ ಮೂಲಕ ಕಳುಹಿಸಿದರು. ತನ್ನಿಂದ ಒಂದು ಸಣ್ಣ ಮಾಹಿತಿ ದೊರಕಿ ಕುದುರೆಯನ್ನು ರಕ್ಷಿಸಿದ್ದಕ್ಕೆ ಬಾಲಕ ಅತ್ಯಂತ ಸಂತಸಪಟ್ಟ.
ಎಂ.ಮುನಾಲ್ ಅಹಮದ್ ಪ್ರಸ್ತುತ ಹಿರೇಹಳ್ಳಿ ಬಳಿ ಇರುವ ಪ್ರೂಡೆನ್ಸ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೆ. ಮೊಮ್ಮಗನ ಈ ಸಾಹಸಿ ಕಾರ್ಯಕ್ಕೆ ತಾತ ಮುಸ್ತಾಕ್ ಅಹಮದ್ ಹೆಮ್ಮೆಪಟ್ಟು ಕೊಂಡಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ