ಪ್ರಜಾಪ್ರಗತಿ – ಪ್ರಗತಿ ವಾಹಿನಿಯಿಂದ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಡಿ.ಕೃಷ್ಣಕುಮಾರ್ ಭಾಗಿ
ತುಮಕೂರು :
ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‍ಗಳಿಗೆ ಸಾಲ ನೀಡುವ ಹೆಚ್ಚಿನ ಅವಕಾಶವಿದ್ದರೂ, ರೈತರು, ಬಡವರನ್ನು ಹಿಡಿಯುತ್ತಿರುವುದು ಸಹಕಾರ ಬ್ಯಾಂಕುಗಳು ಎಂದು ಹಿರಿಯ ಸಹಕಾರಿ ಧುರೀಣ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ವಾಹಿನಿಯಿಂದ ಏರ್ಪಡಿಸಿದ್ದ ಕೃಷಿ ಸಾಲ ಕುರಿತ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಾಲದ ಗುರಿಯಲ್ಲಿ ಶೇ.65ರಷ್ಟು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳು ಪೂರೈಸಬೇಕಿದ್ದರೆ, ಸಹಕಾರಿ ಬ್ಯಾಂಕುಗಳಿಗೆ ಶೇ.35ರಷ್ಟು ಮಾತ್ರ ಟಾರ್ಗೆಟ್ ಇದೆ. ಆದರೂ ರೈತರು, ಕೂಲಿಕಾರ್ಮಿಕರು, ಸ್ವಸಹಾಯ ಸಂಘಗಳವರು ಹೆಚ್ಚಾಗಿ ಬೆಳೆ, ಭೂ ಅಭಿವೃದ್ದಿ ಸಾಲದ ಹಣಕ್ಕಾಗಿ ಸಹಕಾರಿ ಸಂಘ, ಡಿಸಿಸಿ ಬ್ಯಾಂಕ್, ಪಿಎಲ್‍ಡಿ ಬ್ಯಾಂಕ್‍ಗಳನ್ನೇ ಅವಲಂಬಿಸಿದ್ದು, ಎಲ್ಲರಿಗೂ ಒದಗಿಸಲು ಆರ್ಥಿಕ ಮಿತಿಯ ಸವಾಲಿದೆ. ವಾಣಿಜ್ಯ ಬ್ಯಾಂಕ್‍ಗಳು ಈ ಸಮುದಾಯಕ್ಕೆ ಅನುಕೂಲಕಲ್ಪಿಸಬೇಕಿದೆ. ಸರಕಾರಗಳು, ಆರ್‍ಬಿಐ ಸಹ ಈ ಬಗ್ಗೆ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸಹಕಾರ ಬ್ಯಾಂಕ್‍ಗಳು ರೈತರಿಗೆ ಸಾಲವಾಗಿ ನೀಡುತ್ತಿರುವ ಹಣ ಸರಕಾರದ್ದಲ್ಲ. ಬದಲಾಗಿ ಜನರಿಂದ ಠೇವಣಿ ರೂಪದಲ್ಲಿ ಸಂಗ್ರಹಿಸಿದ್ದು, ನಬಾರ್ಡ್ ಮತ್ತಿತರ ರಾಷ್ಟ್ರೀಯ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಕೊಟ್ಟಿರುವ ಹಣವನ್ನೇ ಹಂಚಿಕೆ ಮಾಡುತ್ತಿದ್ದೇವೆ. ನಿರ್ಧಿಷ್ಟ ಅನುಪಾತದ ಬಡ್ಡಿ ಹಣ ಮಾತ್ರ ಸರಕಾರ ಪಾವತಿಸುತ್ತದೆ. ಹಾಗಾಗಿ ರೈತರು ತಾವು ಪಡೆದ ಅಲ್ಪಾವಧಿ, ಮಧ್ಯಮಾವಧಿ ಸಾಲಗಳನ್ನು ಪಡೆದ ಉದ್ದೆಶಕ್ಕೆ ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಪಾವತಿಸಿದಾಗ ಮಾತ್ರ ಸಹಕಾರ ಸಂಘಗಳು, ಬ್ಯಾಂಕ್‍ಗಳು ಉನ್ನತಿಯಾಗುವ ಜೊತೆಗೆ ರೈತರು ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಸಕಾಲಕ್ಕೆ ಕೊಡದಿದ್ದಾಗ ಮತ್ತೋರ್ವ ರೈತನಿಗೂ ಸಾಲ ನೀಡಲು ತೊಂದರೆಯಾಗುತ್ತದೆ ಎಂದರು.
ಸಹಕಾರ ಸಂಸ್ಥೆಗಳಲ್ಲಿರುವವರು ನಿರಂಕುಶಮತಿಗಳಲ್ಲ :
ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಗಳವರ್ಯಾರು ನಿರಂಕುಶಮತಿಗಳಲ್ಲ.ಜನರ ಸೇವೆ ಮಾಡುವ ಸಲುವಾಗಿಯೇ ಬಂದಿರುವವರಾಗಿದ್ದಾರೆ. ಲಭ್ಯ ಆರ್ಥಿಕ ಮಿತಿಯಲ್ಲಿ ನೆರವು ನೀಡುತ್ತಿದ್ದು, ಎಲ್ಲರ ಸಾಲದ ಬೇಡಿಕೆಗಳನ್ನು ಒಮ್ಮೆಲೆ ಪೂರೈಸಲುಅಸಾಧ್ಯ. ಕಾನೂನಿನಲ್ಲೇ ಅವಕಾಶ ಮಾಡಿಕೊಂಡು ಧಾರಾಳವಾಗಿ ಸಾಲ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಂಘಗಳ ಅಧ್ಯಕ್ಷರು, ನಿರ್ದೇಶಕರ ಮನವಿಗಳಿಗೆ ಸ್ಪಂದಿಸುತ್ತಾ ಬರಲಾಗಿದೆ ಎಂದರು. ಡಿಸಿಸಿ ಬ್ಯಾಂಕ್ ಸಿಇಒ ಶ್ರೀಧರ್,ಪಿಎಲ್‍ಡಿ ಬ್ಯಾಂಕ್‍ನ ಅಧಿಕಾರಿಗಳಾದ ಅನುಪಮ, ವೇಣುಗೋಪಾಲನಾಯ್ಕ್ ಹಾಜರಿದ್ದರು.
ಸಾಲಕ್ಕೆ ಮಾತ್ರ ನಮ್ಮಲ್ಲಿ, ಠೇವಣಿ ಮಾತ್ರ ಬೇರೆಡೆಗೆ…
ಸಹಕಾರ ಬ್ಯಾಂಕುಗಳು, ಸಂಘಗಳ ಬಳಿಗೆ ಜನರು ಬರೀ ಸಾಲಕ್ಕೆ ಅರ್ಜಿ ಹಿಡಿದು ಬರುತ್ತಾರೆ.ಆದರೆ ಠೇವಣಿ, ಉಳಿತಾಯ ಖಾತೆ ಮಾತ್ರ ಬೇರೆಡೆ ಇಡುತ್ತಾರೆ. ಅಂತೆಯೇ ಸರಕಾರದ ಆಡಳಿತ ಸಂಸ್ಥೆಗಳು ಸಹ ಇದೇ ರೀತಿ ನಡೆದುಕೊಳ್ಳುತ್ತಿವೆ. ತುಮಕೂರು ಜಿಲ್ಲಾಪಂಚಾಯತ್ ಒಂದೇ 68 ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿದ್ದು, ಡಿಸಿಸಿ, ಪಿಎಲ್‍ಡಿ ಬ್ಯಾಂಕ್‍ಗಳ ಇವರ ಕಣ್ಣಿಗೆ ಕಾಣುವುದಿಲ್ಲವೇ.ಜನ ಮತ್ತು ಆಡಳಿತದ ಈ ಮನೋಭಾವ ಬದಲಾಗಬೇಕು. ಕೇರಳದಲ್ಲಿ ರಾಜ್ಯ ಮಟ್ಟದ ಸಹಕಾರ ಬ್ಯಾಂಕ್‍ಗಳನ್ನು ಅಲ್ಲಿನ ಸರಕಾರ ಕೇರಳ ಬ್ಯಾಂಕ್ ಹೆಸರಲ್ಲಿ ಒಂದೇ ವೇದಿಕೆಗೆ ತಂದು ಸಹಕಾರ ಬ್ಯಾಂಕ್ ಮೂಲಕವೇ ಎಲ್ಲಾ ವಹಿವಾಟು ನಡೆಸುತ್ತಿದ್ದು ಇಡೀ ರಾಷ್ಟ್ರಕ್ಕೆ ಮಾದರಿಯೆನಿಸಿದೆ ಎಂದು ಹೇಳಿದ ರಾಜಣ್ಣ ಅವರು ತುಮಕೂರಿನ ಹಿರಿಯ ವರ್ತಕರಾಗಿದ್ದ ಬೆಟ್ಟಪ್ಪನಹಳ್ಳಿ ದೊಡ್ಡಯ್ಯ ಅವರು ಸಹಕಾರ ಬ್ಯಾಂಕ್‍ನಲ್ಲೇ ವಹಿವಾಟು ನಡೆಸುತ್ತಿದ್ದ ಘಟನೆಯನ್ನು ಸ್ಮರಿಸಿದರು.
ಫೋನ್‍ಇನ್‍ನಲ್ಲೇ ಸಾಲ ಬಿಡುಗಡೆಗೆ ಕೆಎನ್‍ಆರ್ ಆದೇಶ :
ಒಂದೂವರೆ ತಾಸು ನಡೆದ ಫೋನ್‍ಇನ್ ಲೈವನಲ್ಲಿ ಮಧುಗಿರಿ,ಕೊರಟಗೆರೆ, ಪಾವಗಡ, ತುಮಕೂರು, ತಿಪಟೂರು, ಚಿ.ನಾ,ಹಳ್ಳಿ, ತುರುವೇಕೆರೆ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ರೈತರು ನಿರಂತರ ಕರೆ ಮಾಡಿ ಬೆಳೆ ಸಾಲ ಮಂಜೂರಾತಿ,ನವೀಕರಣ, ಸಾಲಮನ್ನಾ ಆಗಿಲ್ಲದಿರುವ ಬಗ್ಗೆ ತಮ್ಮ ಅಹವಾಲನ್ನು ಹೇಳಿಕೊಂಡರು. ಮಧುಗಿರಿ ತಾಲೂಕು ಭೀಮನಕುಂಟೆ ಜಯರಾಂರೆಡ್ಡಿ, ಸೋರೆಕುಂಟೆ ಆನಂದ್ ಸೇರಿದಂತೆ ಐದಾರು ರೈತ ಫಲಾನುಭವಿಗಳ ದೂರವಾಣಿ ಸಂಖ್ಯೆಯನ್ನು ಫೋನ್ ಇನ್‍ನಲ್ಲೇ ಪಡೆದುಕೊಂಡ ಕೆ.ಎನ್.ರಾಜಣ್ಣ ಅವರು ಉಪಸ್ಥಿತರಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಇಂದೇ ಅರ್ಜಿ ಪರಿಶೀಲಿಸಿ ವಿಲೇ ಮಾಡುವಂತೆ ಸ್ಥಳದಲ್ಲೇ ಸೂಚಿಸಿದ್ದು ಫೋನ್ ಇನ್ ಕಾರ್ಯಕ್ರಮದ ಫಲಪ್ರದವೆನಿಸಿತು. ಕರೆ ಮಾಡಿದ್ದ ಅನೇಕರು ಲಕ್ಷ ರೂ.ಗಳವರೆಗೆ ಕೋವಿಡ್‍ನಿಂದ ಮೃತ ರೈತ ಕುಟುಂಬದ ಸಾಲಮನ್ನಾ ಮಾಡಿರುವುದಕ್ಕೆ ಹಾಗೂ ವಿಎಸ್‍ಎಸ್‍ಎನ್‍ಗಳಿಗೆ ಹೆಚ್ಚುವರಿ ಮೊತ್ತ ಸಾಲದ ಹಣ ಹಂಚಿಕೆ ಮಾಡಿರುವುದಕ್ಕೆ ಕೆಎನ್‍ಆರ್ ಅವರನ್ನು ಅಭಿನಂದಿಸಿದರು.
ಸಾಲಮನ್ನಾ ಗೊಂದಲ ಅನಾವರಣ :
ಕಳೆದ ಸಮ್ಮಿಶ್ರ ಸರಕಾರದಲ್ಲಿ ಘೋಷಣೆಯಾದ ಸಾಲಮನ್ನಾ ಯೋಜನೆ ಸೌಲಭ್ಯ ನಮಗೆ ಸಿಕ್ಕಿಲ್ಲ, ನಮಗೆ ಸಿಕ್ಕಿಲ್ಲ ಎಂದು ಹಲವುರೈತರು ಕರೆ ಮಾಡಿ ಕೆ.ಎನ್.ರಾಜಣ್ಣ ಹಾಗೂ ಡಿ.ಕೃಷ್ಣಕುಮಾರ್ ಅವರ ಬಳಿ ಅಳಲು ತೋಡಿಕೊಂಡರು. ಕೆಲವು ತಾಂತ್ರಿಕ ಸಮಸ್ಯೆ, ಆಧಾರ್‍ಕಾರ್ಡ್ ಮ್ಯಾಪಿಂಗ್, ದಾಖಲಾತಿ ಹೊಂದಾಣಿಕೆಯಿಲ್ಲದೆ ಸರಕಾರದ ಅನುದಾನ ಬಾರದಿರುವುದು ಸಮಸ್ಯೆಯಾಗಿದೆ. ಈ ಸಂಬಂಧ ಹತ್ತಿರದ ಬ್ಯಾಂಕ್ ಶಾಖೆಗೆ ದಾಖಲಾತಿ ಸಮೇತ ತೆರಳಿ ಪರೀಶೀಲಿಸಿಕೊಳ್ಳಿ. ಈ ಸಮಸ್ಯೆಯುಳ್ಳ ರೈತರೇ ಜಿಲ್ಲೆಯಲ್ಲೇ 5000ಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆಂದು ಕೆಎನ್‍ಆರ್ ತಿಳಿಸಿದರು. ವಿಎಸ್‍ಎಸ್‍ಎನ್‍ಗಳಿಗೆ ಎಸ್-ಎಸ್ಟಿ ಅಧ್ಯಕ್ಷ –ಉಪಾಧ್ಯಕ್ಷರ ನೇಮಕ ಮಾಡಬೇಕು.
ಪಿಕಾರ್ಡ್ ಬ್ಯಾಂಕ್‍ನಿಂದ 22,500 ರೈತರಿಗೆ ಸಾಲ ಸೌಲಭ್ಯ : ಡಿ.ಕೃಷ್ಣಕುಮಾರ್
ಕಳೆದ ಜನವರಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್ ) ಬ್ಯಾಂಕ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು, 2020-21ನೇ ಸಾಲಿಗೆ 411 ಕೋಟಿ ಸಾಲ ಬಿಡುಗಡೆ ಮಾಡಿದ್ದು, 2019-20ನೇ ಸಾಲಿಗೆ ಹೋಲಿಸಿದರೆ 147 ಕೋಟಿ ಹೆಚ್ಚುವರಿ ಸಾಲ ಬಿಡುಗಡೆ ಮಾಡಿದ್ದು, 22,500 ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ, ತುಮುಲ್ ನಿರ್ದೇಶಕರಾದ ಡಿ.ಕೃಷ್ಣಕುಮಾರ್ ತಿಳಿಸಿದರು.
ಪ್ರಜಾಪ್ರಗತಿ -ಪ್ರಗತಿ ಫೋನ್ ಇನ್‍ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭೂಅಭಿವೃದ್ಧಿ, ತೋಟಗಾರಿಕೆ ಅಭಿವೃದ್ದಿಗೆ ಮಧ್ಯಮಾವಧಿ, ದೀರ್ಘಾವದಿ ಸಾಲಗಳನ್ನು ನೀಡುವುದು ಪಿಕಾರ್ಡ್ ಬ್ಯಾಂಕ್‍ಗಳ ಮೂಲ ಜವಾಬ್ದಾರಿಯಾಗಿದ್ದು, 2020-21ನೇಸಾಲಿನಲ್ಲಿ ಶೇ.53ರಷಗ್ಟು ಹೊಸಬರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ನನ್ನ ತವರು ಜಿಲ್ಲೆ ತುಮಕೂರಿನ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು, 2019-20ನೇ ಸಾಲಿನಲ್ಲಿದ್ದ 11ಕೋಟಿ22ಲಕ್ಷ ಸಾಲದ ಮೊತ್ತವನ್ನು ಪ್ರಸಕ್ತ ಸಾಲಿಗೆ 27 ಕೋಟಿಗೆ ಹೆಚ್ಚಿಸಿ 21.70ಕೋಟಿ ಸದ್ಬಳಕೆಯಾಗಿದೆ.ಜಿಲ್ಲೆಯ 511 ರೈತರು ಇದರ ಪ್ರಯೋಜನ ಪಡೆದಿದ್ದಾರೆಂದರು.
ಠೇವಣಿಗೆ ಶೇ.8.40ರಷ್ಟು ಬಡ್ಡಿ ಕೊಡುತ್ತಿರುವ ಬ್ಯಾಂಕ್:
ರಾಜ್ಯಾದ್ಯಂತ 178 ಪಿಕಾರ್ಡ್ ಬ್ಯಾಂಕ್‍ಗಳಿದ್ದು, 25 ಶಾಖೆಗಳಿದ್ದು, ಹಲವು ದಶಕಗಳಿಂದ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಠೇವಣಿ ಮೇಲೆ ಶೇ.8.40ರಷ್ಟು ಬಡ್ಡಿ ಕೊಡಲಾಗುತ್ತಿದ್ದು, ಆಡಳಿತಾತ್ಮಕ ವೆಚ್ಚ ಹೆಚ್ಚಳ, ಕೋವಿಡ್ ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದ್ದು, ಇದನ್ನು ತಹಬದಿಗೆ ತರಲು ಹಾಗೂ ಭೂ ಅಭಿವೃದ್ಧಿ ಸಾಲ ಮಿತಿಯನ್ನು 30 ಸಾವಿರದಿಂದ 70 ಸಾವಿರಕ್ಕೆ ಹೆಚ್ಚಳ, ಭದ್ರತೆಯಾಗಿ ಪಡೆದುಕೊಳ್ಳುವ ಜಮೀನಿನ ಮಿತಿಯನ್ನು 8 ಎಕರೆಯಿಂದ 4 ಎಕರೆ ಉಳಿಸಬೇಕು.ಇಡುವ ಬೆಳೆಗನುಸಾರ ಸಾಲ ನೀಡಬೇಕೆಂಬ ಹಲವು ರೈತೋಪಯೋಗಿ ಯೋಜನಗೆಳನ್ನು ಜಾರಿಗೆ ತರಲು ಸರಕಾರದ ಮುಂದೆ ಪ್ರಸ್ತಾವಿಸಲಾಗಿದೆ. ಬ್ಯಾಂಕ್‍ಗೆ ಹೊಸ ಕಟ್ಟಡಗಳಿಗಾಗಿ 100 ಕೋಟಿ ನೀಡಬೇಕೆಂಬ ಮನವಿಯನ್ನು ಮಾಡಲಾಗಿದೆ ಎಂದರು.
ತುಮುಲ್‍ನಿಂದ ಕೋವಿಡ್ ಮೃತ ರೈತರಿಗೆ ಪರಿಹಾರ:
ಕೋವಿಡ್‍ನಿಂದ ಮೃತಪಟ್ಟ ಹೈನುಗಾರ ಸದಸ್ಯರಿಗೆ ತುಮುಲ್‍ನಿಂದ 1ಲಕ್ಷ ಪರಿಹಾರ ಕೊಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದ ತುಮುಲ್‍ನಿರ್ದೇಶಕರು ಆಗಿರುವ ಕೃಷ್ಣಕುಮಾರ್ ಹೈನುಗಾರರಿಗೆ ಹಸು ಕೊಳ್ಳಲು ಮಾರ್ಜಿನ್ ಮನಿಯ ಜೊತೆಗೆ ಬ್ಯಾಂಕ್‍ಗಳಿಂದ ಹೆಚ್ಚುವರಿ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತಿದೆ. ಪಿಕಾರ್ಡ್ ಬ್ಯಾಂಕ್‍ನಲ್ಲಿ ಸಾಲ ಅರ್ಜಿ ವಿಳಂಬವಾಗದಂತೆ ಕ್ರಮವಹಿಸಲಾಗುವುದು ಎಂದರು. ಕರೆ ಮಾಡಿದವರಲ್ಲಿ ಕೆಲವರು ಪಿಕಾರ್ಡ ಬ್ಯಾಂಕ್ ಅಧ್ಯಕ್ಷರಿಗೆ ಶುಭಾಶಯ ಹೇಳಿ ಜಿಲ್ಲೆಯವರೇ ಅಧ್ಯಕ್ಷರಾಗಿರುವುದರಿಂದ ನಿಮ್ಮಿಂದ ಜಿಲ್ಲೆಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.
ಪಿಕಾರ್ಡ್ ಬ್ಯಾಂಕ್ ಸಾಲ ಮನ್ನಾ ಮಾಡದೇ ಸಂಕಷ್ಟಕ್ಕೆ ಸಿಲುಕಿದ ರೈತರು!
2018ರ ಚುನಾವಣೆಯಲ್ಲಿ ಪಿಕಾರ್ಡ್ ಬ್ಯಾಂಕ್‍ನಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದಾಗ ಪಿಕಾರ್ಡ್ ಬ್ಯಾಂಕ್ ಅನ್ನು ಕೈ ಬಿಟ್ಟಿದ್ದು ಹಲವು ರೈತರು ತೊಂದರೆ ಅನುಭವಿಸಬೇಕಾಯಿತು. ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರು ಕಡಿಗೆ ಬಾಕಿ ಬಡ್ಡಿ, ಅಸಲು ಪಾವತಿಸುವ ತೊಂದರೆಗೆ ಸಿಲುಕಿದರು. ಎಷ್ಟೋ ಮಂದಿ ಕಟ್ಟಲು ಸಾಧ್ಯವಾಗದೆ ಸಾವಿನ ಹಾದಿ ಹಿಡಿಯುವಂತಾಯಿತು ಎಂದು ಕೃಷ್ಣಕುಮಾರ್ ಹೇಳಿದರು.