ನಿಟ್ಟೂರು :
ಮಾನವನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಂದಷ್ಟು ಸೇವೆ ಮಾಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರೇಶ್ವರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ರೋಟರಿ ಸಂಸ್ಥೆ ವತಿಯಿಂದ 10 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಎರಡು ಉದ್ಯಾನವನಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿದ್ದು ಎಲ್ಲವನ್ನು ಸರ್ಕಾರವೇ ಮಾಡಲಿ ಎಂಬುದಕ್ಕಿಂತ ಇಂತಹ ಸಂಘ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕಿದೆ. ಇಂದಿನ ಯುವಕರು ದೇಶಭಕ್ತಿ ಹಾಗೂ ಸಾಮಾಜ ಸೇವೆಗೆ ಮುಂದಾಗಬೇಕು. ಆಗ ಮಾತ್ರ ದೇಶದ ಅಭಿವೃದ್ದಿಯ ಕನಸುಗಳನ್ನು ಕಾಣಬಹುದು. ರೋಟರಿ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ, ಅಲ್ಲದೇ ಕೃಷಿ ಮತ್ತು ಸಾರ್ವಜನಿಕವಾಗಿಯೂ ನಿರಂತರ ಸೇವೆಯ ಹೆಜ್ಜೆ ಇಡುತ್ತಿದ್ದು ಇಂತಹ ಸಂಸ್ಥೆಗಳ ಜೊತೆ ಹೆಚ್ಚು ಜನರು ಕೈ ಜೊಡಿಸಿದಾಗ ಗ್ರಾಮ, ನಾಡು, ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ತಾವು ದುಡಿದ ಸಲ್ಪ ಹಣವನ್ನು ದಾನ ಮಾಡುವ ಮೂಲಕ ಇಲ್ಲಿನ ಸದಸ್ಯರು ಮಾದರಿಯಾಗಿದ್ದಾರೆ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ನಾಗೇಂದ್ರಪ್ರಸಾದ್ ಮಾತನಾಡಿ ನಮ್ಮ ಸಂಸ್ಥೆಯು ನಿರಂತರವಾಗಿ ಸೇವೆಯನ್ನು ಮಾಡುತ್ತಾ ಬಂದಿದ್ದು ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ಸೇವೆ ನೀಡಲು ಸಂಸ್ಥೆವತಿಯಿಂದ ಮೊಬೈಲ್ ವ್ಯಾನ್ ಬಿಟ್ಟಿದ್ದು ಅದರಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿ ಜನರಿಗೆ ಅನುಕೂಲ ಮಾಡಿದ್ದೇವೆ ಎಂದರು.
ಡಾ.ಚಂದ್ರಶೇಖರ್ ಆಚಾರ್ಯ ಮಾತನಾಡಿ ಇತ್ತಿಚೆಗೆ ವಿದ್ಯುತ್, ತೈಲ ಬೆಲೆಗಳು ಅಧಿಕವಾಗುತ್ತಿದ್ದು ಈ ಭಾಗದಲ್ಲಿ ರೋಟರಿ ಸಂಸ್ಥೆಯಿಂದ ಸೋಲಾರ್ ಪ್ಲಾಂಟ್ ಮಾಡಿದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಮತ್ತು ಪರಿಸರ ಸ್ನೇಹಿಯಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಮಾಜಿ ರಾಜ್ಯಪಾಲ ಲೆಪ್ಟಿನೆಂಟ್ ಕೆ.ಪಿ.ನಾಗೇಶ್, ನಿಟ್ಟೂರು ರೋಟರಿ ಅಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಸಚಿನ್, ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷೆ ಮಮತಾ ಯೋಗಿಶ್, ಗ್ರಾಮ ಪಂಚಾಯತಿ ಸದಸ್ಯರಾದ ನರಸೇಗೌಡ, ಗಿರೀಶ್, ಸಂತೋಷ, ಅಟಿಸ್ಟೆಂಟ್ ಗೌರ್ನರ್ ಗಂಗಧರ್ಶಾಸ್ತ್ರಿ, ರೋಟರಿ ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ನಾಗರಾಜು, ಎನ್.ಸಿ.ರವೀಶ್, ಮಧುಸೂಧನ್, ಶಾಂತರಾಜು, ಚಂದ್ರಶೇಖರ್, ಶಿವಕುಮಾರ್, ದೀಲಿಪ್, ಕುಮಾರಸ್ವಾಮಿ, ಪ್ರದೀಪ್, ಸಂದೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ