ತುಮಕೂರು :
ತೆರೆದ ಬಾವಿ ದಡದಲ್ಲಿದ್ದ ಸೀಬೆ ಮರವನ್ನೇರಿದ ಇಬ್ಬರು ಹೆಣ್ಣು ಮಕ್ಕಳು ಸೀಬೆ ಹಣ್ಣನ್ನು ಕೀಳಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಮಕ್ಕಳನ್ನು ರಕ್ಷಿಸಲು ಮುಂದಾದ ತಾಯಿಯು ಬಾವಿಗೆ ಹಾರಿ ನೀರಿನಿಂದ ಹೊರಬರಲಾಗದೆ ಮೂವರು ಮುಳುಗಿ ಸತ್ತಿರುವ ಹೃದಯವಿದ್ರಾವಕ ಘಟನೆ ತುಮಕೂರು ತಾಲ್ಲೂಕು ಕೋರಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ತಿರುಮಲಪಾಳ್ಯದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ತಿರುಮಲಪಾಳ್ಯದ ಕುಮಾರ್ ಎಂಬುವರ ಪತ್ನಿ ಹೇಮಲತಾ (29) ಈಕೆಯ ಮಕ್ಕಳಾದ ಮಾನಸ (6) ಮತ್ತು ಪೂರ್ವಿಕ (3) ಎಂದು ಗುರುತಿಸಲಾಗಿದೆ. ಬೆಳಿಗ್ಗೆ 6ಕ್ಕೆ ಮನೆಯಿಂದ ಊರ ಹೊರಗಿನ ತೋಟಕ್ಕೆ ಮಕ್ಕಳೊಂದಿಗೆ ತೆರಳಿದ್ದ ಹೇಮಲತಾ ತೋಟದಲ್ಲಿಟ್ಟಿದ್ದ ಅಡಿಕೆ ಸಸಿಗಳ ಪೋಷಣೆಗೆ ಮುಂದಾಗಿದ್ದ ವೇಳೆ ತೆರೆದ ಬಾವಿ ಸಮೀಪದ ಸೀಬೆಗಿಡದ ಬಳಿ ತೆರಳಿದ ಮಕ್ಕಳು ಅಲ್ಲಿಯೇ ಆಟವಾಡಲು ಮುಂದಾಗಿದ್ದಾರೆ. ಆಕಸ್ಮಿಕವಾಗಿ ಮೊದಲಿಗೆ ಚಿಕ್ಕಮಗಳು ಪೂರ್ವಿಕ ನೆಲಮಟ್ಟದಲ್ಲಿರುವ ಬಾವಿಗೆ ಬಿದ್ದಿದ್ದು, ಇದನ್ನು ಕಂಡು ಹಿರಿಯ ಮಗಳು ಮಾನಸ ಸಹ ತಂಗಿಯ ರಕ್ಷಣೆಗೆ ಬಾವಿಗೆ ಹಾರಿದ್ದಾಳೆ. ಮಕ್ಕಳು ಕಿರುಚಾಟ ಕಂಡು ತಾಯಿ ಓಡಿ ಬಂದು ಬಾವಿಗೆ ಬಿದ್ದಿದ್ದು, ಮೂವರು ನೀರಿಂದ ಮೇಲೇಳಲಾಗದೆ ಅಸುನೀಗಿದ್ದಾರೆ.
ಬೆಳಿಗ್ಗೆ 6ಕ್ಕೆ ಹೋದ ಹೆಂಡತಿ ಮಕ್ಕಳು 9 ಆದರೂ ಬಾರದಿರುವುದನ್ನು ಕಂಡು ಪತಿ ಕುಮಾರ್ ಜಮೀನಿನ ಬಳಿ ಬಂದು ಬಾವಿ ವೀಕ್ಷಿಸಿದಾಗ ಘಟನೆ ಬಯಲಾಗಿದೆ. ಅಗ್ನಿಶಾಮಕದಳದವರ ನೆರವಿನಿಂದ ಶವಗಳನ್ನು ಮೇಲೆತ್ತಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ರಾಹುಲ್‍ಕುಮಾರ್ ಶಹಪುರವಾಡ್ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಡಿವೈಎಸ್ಪಿ ಶ್ರೀನಿವಾಸ್, ಸಿಪಿಐ ರಾಮಕೃಷ್ಣಯ್ಯ, ಕೋರಾ ಪಿಎಸ್ಸೈ ಹರೀಶ್‍ಕುಮಾರ್ ಸ್ಥಳದಲ್ಲಿದ್ದು ಮಹಜರು ನಡೆಸಿದರು. ಪತಿ ಹಾಗೂ ಮೃತ ಹೇಮಲತಾ ಅವರ ಪೋಷಕg ಆಕ್ರಂದನ ಮುಗಿಲುಮಟ್ಟಿತ್ತು. ಈ ಬಗ್ಗೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆರೆದ ಬಾವಿಗೆ ತಡೆಯಿಲ್ಲದೆ ಸಂಭವಿಸಿದ ದುರಂತ :
ಜಮೀನಿನಲ್ಲಿ ನೆಲಮಟ್ಟದಲ್ಲಿರುವ ತೆರೆದ ಬಾವಿಗೆ ತಡೆಯಿಲ್ಲದೆ ಈ ದುರಂತ ಸಂಭವಿಸಿದ್ದು, ಅದಕ್ಕೆ ಎತ್ತರದ ತಡೆಹಿದ್ದಿದ್ದರೆ ತಾಯಿ ಮತ್ತು ಮಕ್ಕಳು ನೀರುಪಾಲಾಗುವುದು ತಪ್ಪುತ್ತಿತ್ತು. ಮೃತ ಇಬ್ಬರು ಮಕ್ಕಳು ಪೈಕಿ 6 ವರ್ಷದ ಮಾನಸ ಈಗಷ್ಟೇ ಒಂದನೆ ತರಗತಿಗೆ ದಾಖಲಾಗಿದ್ದಳು. ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾದ ಮಕ್ಕಳು ಕೋವಿಡ್ ಕಾರಣಕ್ಕೆ ತರಗತಿಗಳು ನಡೆಯದೇ ಜಮೀನಿಗೆ ಅಮ್ಮನ ಜೊತೆ ತೆರಳಿ ದುರಂತ ಸಾವಿಗೀಡಾಗಿದ್ದಾರೆ.
ತಾಯಿ ಮತ್ತು ಮಕ್ಕಳ ಸಾವು ಧಾರುಣ ಸಾವು ನಿಜಕ್ಕೂ ದುರಂತ. ಈ ಘಟನೆಯಿಂದ ಇನ್ನಾದರೂ ರೈತರು ಎಚ್ಚೆತ್ತುಕೊಳ್ಳಬೇಕು. ನೆಲಮಟ್ಟದಲ್ಲಿರುವ ತೆರೆದ ಬಾವಿಗಳು ಎತ್ತರದ ತಡೆ ನಿರ್ಮಿಸುವ ಕಾರ್ಯ ತ್ವರಿತ ಆಗಬೇಕು.
-ರಾಹುಲ್‍ಕುಮಾರ್ ಶಹಾಪುರವಾಡ್, ಎಸ್ಪಿ ತುಮಕೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ