ತುಮಕೂರು :
ಭೂ ನೋಂದಣಿ ಮಾಡುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಳೆದ ಹಲವು ತಿಂಗಳಿಂದ ಸರ್ವರ್ ಪ್ರಾಬ್ಲಂನಿಂದಾಗಿ ನೋಂದಣಿ ಸಾಫ್ಟ್‍ವೇರ್ ಆಗಾಗ್ಗೆ ಸ್ಥಗಿತಗೊಳ್ಳುತ್ತಿದ್ದು, ನೋಂದಣಿ ಕಾರ್ಯ ವಿಳಂಬವಾಗುತ್ತಿರುವ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಹಲವು ಗಂಟೆಗಳ ಕಾಲ ಸಾರ್ವಜನಿಕರು ನೋಂದಣಾಧಿಕಾರಿ ಕಚೇರಿಯಲ್ಲಿ ಜನರ ಗುಂಪಿನಲ್ಲಿ ಕಾಯುತ್ತಾ ಕೂರುವ ಪರಿಸ್ಥಿತಿ ಎದುರಾಗಿದೆ.
ಕಳೆದೊಂದು ತಿಂಗಳು ಕೋವಿಡ್ ಎರಡನೇ ಅಲೆ ಕಾರಣಕ್ಕೆ ಪೂರ್ಣ ಚಟುವಟಿಕೆ ನಿಲ್ಲಿಸಿದ್ದ ಉಪನೋಂದಣಾಧಿಕಾರಿ ಕಚೇರಿಗಳು ಜೂ. 7ರಿಂದ ಪುನರಾರಂಭ ಮಾಡಿವೆ. ತುಮಕೂರು ಜಿಲ್ಲಾಕೇಂದ್ರದಲ್ಲೇ ದಿನವೊಂದಕ್ಕೆ 50 ರಿಂದ 60 ಪತ್ರಗಳು ನೋಂದಣಿಯಾಗಲಿದ್ದು, 50 ಲಕ್ಷಕ್ಕೂ ಅಧಿಕ ರಾಜಸ್ವ ಸಂಗ್ರಹ ಸರಕಾರಕ್ಕೆ ಬರುತ್ತದೆ. ಮಾರ್ಗಸೂಚಿ ದರವನ್ನು ಪ್ರತಿ ವರ್ಷ ಪರಿಷ್ಕರಣೆ ಮಾಡುತ್ತಿರುವುದು ಸರಕಾರದ ಆದಾಯವೂ ಹೆಚ್ಚುತ್ತಿದೆ. ಆದರೆ ಆದಾಯಕ್ಕೆ ತಕ್ಕಂತಹ ಸುಲಭ, ಸರಳ ಸೇವೆಗಳು ಮಾತ್ರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮರೀಚಿಕೆಯಾಗಿದೆ.
ದಿನಕ್ಕೆ 2-3 ಬಾರಿ ಸರ್ವರ್ ಪ್ರಾಬ್ಲಂ:
ಸರ್ವರ್ ಪ್ರಾಬ್ಲಂನಿಂದಾಗಿ ನಾಗರಿಕರು ಹೈರಣಾಗಿದ್ದು, ಒಂದು ಪತ್ರವನ್ನು ನೋಂದಣಿ ಮಾಡಿಸಲು ಹಿರಿಯರು, ವಯಸ್ಕರೆನ್ನದೆ ಮಾರಾಟ, ಖರೀದಿಗೆ ಸಂಬಂಧಿಸಿದವರೆಲ್ಲರೂ ನೋಂದಣಾಧಿಕಾರಿ ಕಚೇರಿಯಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಕಾವೇರಿ ಆನ್‍ಲೈನ್ ತಂತ್ರಾಂಶದಲ್ಲಿನ ಲೋಪದೋಷಗಳಿಂದಾಗಿ ದಿನಕ್ಕೆ ಎರಡು-ಬಾರಿ ಬಾರಿಯಾದರೂ ಸರ್ವರ್ ಕೈ ಕೊಡುತ್ತಿದ್ದು, ಒಂದು ಡಾಕ್ಯುಮೆಂಟ್ ನೋಂದಣಿ ಮಾಡುವಾಗ ತೊಂದರೆ ಸಂಭವಿಸಿದರೆ, ಮತ್ತೆ ಸರ್ವರ್ ಸರಿಹೋಗುವವರೆಗೂ ಸದರಿ ಪತ್ರ ನೋಂದಣಿ ಮಾಡಿಸುವವರು, ಇತರರು ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಸರ್ವರ್ ಯಾವಾಗ ಸರಿಹೋಗುತ್ತದೆ ಎಂಬ ಸ್ಪಷ್ಟ ಮಾಹಿತಿಯೂ ಇಲ್ಲದೇ, ನೋಂದಣಿ ಆಪರೇಟರ್‍ಗಳು ಸಹ ಗಣಕಯಂತ್ರದ ಮುಂದೆ ಕಾಯುತ್ತಾ ಕೂರುವಂತಾಗಿದ್ದು, ಹೊರಗಡೆ ಸಾರ್ವಜನಿಕರು, ಸ್ಟಾಂಪ್‍ವೆಂಡರ್‍ಗಳು ಜಾತಕ ಪಕ್ಷಿಗಳಾಗಿ ಎದುರು ನೋಡುತ್ತಿರುತ್ತಾರೆ. ಪ್ರತೀ ಬಾರಿ ಪ್ರಾಬ್ಲಂ ಸಂಭವಿಸಿದಾಗಲೂ ರಾಜ್ಯ ಕಚೇರಿಗೆ ಮಾಹಿತಿ ನೀಡಿ, ಸರಿಹೋಗುವವರೆಗೂ ಕಾಯಬೇಕಿದ್ದು, ಕೋವಿಡ್ ಸಂದರ್ಭದಲ್ಲಿ ಜನಜಂಗುಳಿಯನ್ನು ಕಚೇರಿಯಲ್ಲಿ ನಿಯಂತ್ರಿಸಬೇಕಾದ ಸರಕಾರವೇ ಲೋಪದೋಷಗಳನ್ನೇ ಬೇಗ ಸರಿಪಡಿಸದೆ ಜನರು ಒಂದೆಡೆಯೇ ಗುಂಪುಗೂಡುವ ಸನ್ನಿವೇಶ ನಿರ್ಮಾಣ ಮಾಡಿಕೊಟ್ಟಿದೆ.
ಒಟಿಪಿ ಬಾರದೆ ಸಮಸ್ಯೆ:
ಖರೀದಿದಾರರು, ಮಾರಾಟದಾರರು, ಅವರ ವಾರಸುದಾರರ ಅಧಿಕೃತತೆ ದೃಷ್ಟಿಯಿಂದ ಆಧಾರ್‍ಗೆ ಲಿಂಕ್ ಆದ ಅವರ ಮೊಬೈಲ್ ಸಂಖ್ಯೆಗೆ ಒಟಿಪಿ ಸಂಖ್ಯೆ ಬರುವುದನ್ನು ಮಾಡಿರುವ ವ್ಯವಸ್ಥೆಯೇನೋ ಸ್ವಾಗತಾರ್ಹವೇ. ಆದರೆ ನೆಟ್‍ವರ್ಕ್ ಹಾಗೂ ಸರ್ವರ್ ಪ್ರಾಬ್ಲಂನಿಂದಾಗಿ ಮೊಬೈಲ್ ಸಂಖ್ಯೆಗೆ ಒಟಿಪಿಯೇ ಸಕಾಲಕ್ಕೆ ಬಾರದಿರುವುದು, ಇಲ್ಲ ಒಬ್ಬರಿಗೆ ಬಂದು ಮತ್ತೊಬ್ಬರಿಗೆ ಬರಲು ತಡವಾಗುವುದು ನೊಂದಣಿ ಪ್ರಕ್ರಿಯೆಯಲ್ಲಿ ವಿಳಂಬ, ಅನಗತ್ಯ ಕಾಯುವಿಕೆಗೆ ಆಸ್ಪದ ಒದಗಿಸಿದೆ.
ಹೊಸ ಫೀಚರ್ಸ್‍ಗಳಿಂದ ಟ್ರಯಲ್ ಅಂಡ್ ಎರರ್:
ಸ್ವತ್ತು ನೋಂದಣಿಗೆ ಬಳಸುವ ಕಾವೇರಿ ತಂತ್ರಾಂಶವನ್ನು ಪಂಚಾಯತ್ ರಾಜ್ ಇಲಾಖೆಯ ಇಸ್ವತ್ತು ಡೇಟಾಬೇಸ್‍ಗೆ ಲಿಂಕ್ ಮಾಡಲಾಗಿದ್ದು, ಸದರಿ ತಂತ್ರಾಂಶವು ಇಸ್ವತ್ತು ಅಂಕಿ-ಅಂಶವನ್ನು ಪರಿಶೀಲಿಸಿ ನೋಂದಣಿಗೆ ಅನುವು ಮಾಡಿಕೊಡುತ್ತದೆ.ಆದರೆ ಈ ಪ್ರಕ್ರಿಯೆಯಲ್ಲಿ ಎದುರಾಗಿರುವ ತಾಂತ್ರಿಕ ತೊಂದರೆಗಳು ಇಡೀ ನೋಂದಣಿ ಪ್ರಕ್ರಿಯೆಗೆ ಆಗಿಂದಾಗ್ಗೆ ಸಮಸ್ಯೆ ತಂದೊಡುತ್ತಿದೆ. ತಂತ್ರಾಂಶಕ್ಕೆ ಅಳವಡಿಸುವ ಹೊಸ ಹೊಸ ಫೀಚರ್‍ಗಳು ಟ್ರಯಲ್ ಅಂಡ್ ಎರರ್ ಎಂಬಂತಾಗಿದ್ದು, ರಾಜ್ಯದ 30 ಜಿಲ್ಲೆಗಳ ನೋಂದಣಿ ಪ್ರಕ್ರಿಯೆಗಳಿಂದ ಕೋಟಿಗಟ್ಟಲೇ ನೋಂದಣಿ ಶುಲ್ಕ ರೂಪದಲ್ಲಿ ಆದಾಯ ಸಂಗ್ರಹಿಸುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಸಮಸ್ಯೆಗಳ ಸುಳಿಯಲ್ಲಿ ಜನರನ್ನು ಇರಿಸಿರುವುದು ಮಾತ್ರ ವಿಪರ್ಯಾಸವೇ ಸರಿ.
ಕಂದಾಯ ಸಚಿವರೇ ಸಮಸ್ಯೆ ಪರಿಹರಿಸಿ
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಡಿಡಿ, ನಗದು ಶುಲ್ಕ ಸಂಗ್ರಹ ರದ್ದುಪಡಿಸಿ ಬ್ಯಾಂಕ್ ಚಲನ್ ಕಟ್ಟುವ ಮೂಲಕ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಪ್ರಚಾರ ಮಾಡುತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಕೋವಿಡ್ ಸಂದರ್ಭದಲ್ಲಿ ಜನಜಂಗುಳಿ ಸೇರಲು ಕಾರಣವಾಗಿರುವ ಕಾವೇರಿ ತಂತ್ರಾಂಶದ ಸರ್ವರ್ ಪ್ರಾಬ್ಲಂಗೆ ಮೊದಲು ಮುಕ್ತಿ ಕಾಣಿಸಬೇಕೆಂದು ನಾಗರಿಕರ ಆಗ್ರಹವಾಗಿದೆ. ಕೊರಟಗೆರೆಗೆ ಇಂದು ಉಪನೋಂದಣಾಧಿಕಾರಿ ಕಚೇರಿ ನೂತನ ಕಟ್ಟಡ ಉದ್ಘಾಟನೆಗೆ ಬರುತ್ತಿರುವ ಕಂದಾಯ ಸಚಿವರು ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಸರ್ವರ್ ಪ್ರಾಬ್ಲಂಗೆ ಪರಿಹಾರ ಒದಗಿಸುವರೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ