ತುಮಕೂರು :
ನಗರದ ವಿವಿಧೆಡೆ ವಿವಿಧ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಸಬ್‍ರಿಜಿಸ್ಟಾರ್ ಕಚೇರಿ ಮುಂಭಾಗ ಚರಂಡಿ ನಿರ್ಮಿಸಬೇಕಾದ ಸ್ಥಳವನ್ನು ಬಿಟ್ಟು ಒತ್ತಡಗಳಿಗೆ ಮಣಿದು ರಸ್ತೆಯನ್ನು ಆಕ್ರಮಿಸಿ ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಉಪ ನೋಂದಣಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರು,ಕೃಷಿ ಕಚೇರಿಗೆ ಬರುವ ರೈತರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ನಗರದ ಚಿಕ್ಕಪೇಟೆ ಮುಖ್ಯರಸ್ತೆ ಮೊದಲೇ ಕಿರಿದಾಗಿದ್ದು, ರಸ್ತೆ ಅಗಲೀಕರಣ ಪ್ರಕ್ರಿಯೆ ಇನ್ನೂ ಇತ್ಯರ್ಥವಾಗಿಲ್ಲ. ಆಗಲೇ ಬುಧವಾರ ದಿಢೀರನೇ ಹೊಸ ಚರಂಡಿಯನ್ನು ನಿರ್ಮಿಸಲು ಮುಂದಾಗಿದ್ದು, ಅತ್ಯಂತ ಕಿರಿದಾಗಿರುವ ರಸ್ತೆಯಲ್ಲಿ ಎರಡು ಭಾಗಕ್ಕೆ ಚರಂಡಿಗಳು ಬಂದರೆ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ.ಒಂದು ಲಾರಿ ಪ್ರವೇಶಿಸಿದರೆ ಬೇರೆ ವಾಹನಗಳು ಓಡಾಡದ ಸ್ಥಿತಿ ಇದೆ. ಸಂಬಂಧಪಟ್ಟ ಪಾಲಿಕೆಯವರಾಗಲೀ, ಸ್ಮಾರ್ಟ್‍ಸಿಟಿಯವರಾಗಲೀ, ನಗರ ನೀರು ಸರಬರಾಜು ಒಳಚರಂಡಿ ಮಂಡಳಿಗಳವರಾಗಲೀ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮಾಡಬೇಕಿದೆ.ಇಲ್ಲವಾದರೆ ಜನಕ್ಕೂ ತೊಂದರೆ ಹಾಗೂ ಹತ್ತಾರು ಕೋಟಿಗಳ ಹಣ ದುಂದುವೆಚ್ಚವಾಗುತ್ತದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರೇ ಗಮನಿಸಿ:
ಇಂದು ನಗರಕ್ಕೆ ಭೇಟಿ ಕೊಡುತ್ತಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಈ ಅವೈಜ್ಞಾನಿಕ ಕಾಮಗಾರಿಗಳತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ