ಹುಳಿಯಾರು :
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಾಡಿನ ಸಂಸ್ಕøತಿ-ಸಂಪ್ರದಾಯ ಮರೆಯಾಗುವುದಿಲ್ಲ ಎನ್ನುವುದಕ್ಕೆ ಹುಳಿಯಾರಿನಲ್ಲಿ ನಡೆದ ಕಾರಬ್ಬ ಸಾಕ್ಷಿಯಾಗಿದೆ. ಮುಂಗಾರಿನಲ್ಲಿ ಯಾವ ಬೆಳೆ ತಮ್ಮ ಕೈ ಹಿಡಿಯುತ್ತದೆ ಎಂಬುದನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅರಿತು ಬಿತ್ತನೆ ಕಾರ್ಯ ಮುಂದಾಗುವ ವಿಶೇಷ ಹಾಗೂ ವಿಭಿನ್ನ ಆಚರಣೆಯೇ ಈ ಕಾರಬ್ಬ. ಹುಳಿಯಾರಿನಲ್ಲಿ ಶುಕ್ರವಾರ ಕಾರಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈ ಹಬ್ಬವನ್ನು ದಕ್ಷಿಣ ಕರ್ನಾಟಕದ ರೈತರು ಹೆಚ್ಚಾಗಿ ಆಚರಿಸುತ್ತಾರಾದರೂ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ, ಹಂದನಕೆರೆ, ಹುಳಿಯಾರಿನಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ವರ್ಷವೂ ಇಲ್ಲಿನ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಮ್ಮುಖದಲ್ಲಿ ಅರ್ಥಗರ್ಭಿತವಾಗಿ ಪ್ರಸಕ್ತ ಸಾಲಿನ ಕಾರಬ್ಬವನ್ನು ಆಚರಿಸಿದರು.
ಶ್ರೀ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಹೊರಡಿಸಿ ಕೆಂಚಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎತ್ತು, ಕುಂಟೆಯೊಂದಿಗೆ ಇತಿಹಾಸ ಪ್ರಸಿದ್ಧ ಕರಿಗಲ್ಲಿಗೆ ಕರೆತರಲಾಯಿತು. ಕರಿಗಲ್ಲನ್ನು ಅಂಬಳ್ಳಿ, ಮಾವು, ಬೇವಿನ ಸೊಪ್ಪಿನಿಂದ ಅಲಂಕರಿಸಿ ಅಲ್ಲಿ ಒಂದು ಮಣ್ಣಿನ ಗಡಿಕೆಯಲ್ಲಿ ತಾವು ಬೆಳೆಯುವ ಸಕಲ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಿ ಆ ಗಡಿಗೆಗೆ ಕರಿನಸೊಪ್ಪು ಅಂಗುನೂಲು, ಅಕ್ಷತೆಯನ್ನಿಟ್ಟು ಪೂಜಿಸಲಾಯಿತು.
ನಂತರ ಸಂಪ್ರದಾಯದಂತೆ ಕೆಂಚಮ್ಮ ದೇವಸ್ಥಾನದ ಪೂಜಾರಪ್ಪ ಧಾನ್ಯ ತುಂಬಿದ ಕರಗವನ್ನು ಜೋಡೆತ್ತಿನ ಕುಂಟೆಯಿಂದ ಹೊಡೆದರು. ಹೀಗೆ ಹೊಡೆದ ರಭಸಕ್ಕೆ ಒಳಗಿನ ಧಾನ್ಯಗಳೆಲ್ಲಾ ದೂರಕ್ಕೆ ಚಲ್ಲಿತು. ಹೀಗೆ ಚೆಲ್ಲಿದ ಧಾನ್ಯದಲ್ಲಿ ಹೆಸರುಕಾಳು, ಕಡ್ಲೇಕಾಳು ಹಾಗೂ ರಾಗಿ ಮುಂದೆ ಬಿದ್ದಿತ್ತು. ಹಾಗಾಗಿ ಈ ಭಾರಿಯ ಮುಂಗಾರಿಗೆ ಈ ಧಾನ್ಯಗಳು ಉತ್ತಮ ಫಸಲಾಗುತ್ತದೆ ಎಂದು ನಿರ್ಧರಿಸಿ ನೆರೆದಿದ್ದ ರೈತರು ಸಂಭ್ರಮಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ