ಜಿಪಂ-ತಾಪಂ ಮೀಸಲಾತಿ ಅವೈಜ್ಞಾನಿಕ ; ಅಧಿವೇಶನಕ್ಕೆ ಪರಮೇಶ್ವರ್ ಒತ್ತಾಯ!!

 
ತುಮಕೂರು : 

     ಹಾಲಿ ನಿಗದಿಯಾಗಿರುವ ಜಿಪಂ–ತಾಪಂ ಮೀಸಲಾತಿ ಅವೈಜ್ಞಾನಿಕವಾಗಿದ್ದು, ಆಡಳಿತ ಪಕ್ಷದ ಬಿಜೆಪಿ ನಾಯಕರು ತಮಗೆ ಬೇಕಾದಂತೆ ಮೀಸಲು ನಿಗದಿ ಮಾಡಿಸಿದ್ದರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಆರೋಪಿಸಿದರು.

      ಹೆಗ್ಗೆರೆಯ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರೊಡನೆ ಸಮಾಲೋಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜೀವ್‍ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಸ್ಥಳೀಯಸಂಸ್ಥೆಗಳಲ್ಲಿ ಮೀಸಲು ಸ್ಥಾನ ಕಲ್ಪಿಸಲಾಯಿತು. ಫಲವಾಗಿ ಇಂದು ಮಹಿಳಾ ಮೀಸಲು ಪ್ರಮಾಣ ಶೇ.50ಕ್ಕೆ ಏರಿಕೆಯಾಗಿದೆ. ಜೊತೆಗೆ ಹಿಂದುಳಿದವರಿಗೆ ಶೇ.27, ಪ.ಜಾತಿ-ಪಂಗಡದವರಿಗೆ ಶೇ.18ರಷ್ಟು ಮಂದಿಗೆ ಅವಕಾಶ ಕಲ್ಪಿಸಬೇಕಿದ್ದು, ಈ ನಿಯಮಗಳನ್ನು ಗಾಳಿಗೆ ತೂರಿ ಹಿಂದುಳಿದ ಸಮುದಾಯಗಳಿಗೆ ರಾಜ್ಯಾದ್ಯಂತ ನಿಗದಿ ಮಾಡಬೇಕಾದ 430ರಷ್ಟು ಸೀಟುಗಳಲ್ಲಿ ಕೇವಲ 250ರಷ್ಟು ಮೀಸಲು ವರ್ಗಗಳಿಗೆ ಲಭ್ಯವಾಗಿದೆ ಎಂದರು.

ಪರಿಷತ್ ಚುನಾವಣೆ ಮೇಲೆ ಕಣ್ಣು:

      ತುಮಕೂರು ಜಿಲ್ಲೆಯನ್ನೇ ತೆಗೆದುಕೊಂಡರೆ ಕೆಲವು ತಾಲೂಕುಗಳಲ್ಲಿ ಸಾಮಾನ್ಯ ಕ್ಷೇತ್ರಗಳು ಹೆಚ್ಚಳ,ಮತ್ತೆ ಕೆಲವೆಡೆ ಹೆಚ್ಚು ಮಹಿಳಾ ಸ್ಥಾನಗಳನ್ನು ನಿಗದಿ ಮಾಡಲಾಗಿದೆ. 10 ಲಕ್ಷ 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಮೇಲೆ ಎಲ್ಲಾ ಕ್ಷೇತ್ರಗಳಿಗೂ ಮೀಸಲು ಸಮಾನ ಪ್ರಮಾಣ ಹಂಚಿಕೆಯಾಗಬೇಕಲ್ಲವೇ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಚುನಾವಣಾ ಆಯೋಗಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲಿದ್ದಾರೆ.

      ಮುಂಬರುವ ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ತಮಗೆ ಅನುಕೂಲವಾಗುವಂತೆ ಮೀಸಲು ನಿಗದಿ ಮಾಡಿದ್ದಾರೆ. ಸಾಧ್ಯವಾದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.

      ರಾಜ್ಯ ಸರಕಾರ ಕೋವಿಡ್ ನಿಯಂತ್ರಣದಲ್ಲಿ ವೈಫಲ್ಯಹೊಂದಿದ್ದು, ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಮುಂಗಾರು ತಡವಾಗಿದ್ದು, ಕೃಷಿಕರು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶಾಲಾ ಶೈಕ್ಷಣಿಕ ಪ್ರವೇಶಾತಿ, ಪರೀಕ್ಷೆ ಸೇರಿದಂತೆ ಹಲವು ವಿಷಯಗಳಲ್ಲಿ ಗೊಂದಲವಿದ್ದು, ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರದ ದೂರು ಕೇಳಿಬಂದಿದೆ. ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಇವೆಲ್ಲದರ ಬಗ್ಗೆ ಸಮಗ್ರವಾಗಿ ಚರ್ಚಿಸಲು ತುರ್ತು ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು

      ತಮಿಳುನಾಡು ಸಿಎಂಗೆ ಪತ್ರ ಬರೆಯಬಾರದಿತ್ತು:

      ಕೆಆರ್‍ಎಸ್ ಡ್ಯಾಂನಲ್ಲಿ ಬಿರುಕು ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ- ಮಾಜಿ ಸಿಎಂ ಎಚ್ಡಿಕೆ ನಡುವೆ ನಡೆಯುತ್ತಿರುವ ರಾಜಕೀಯ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು ನೀರಾವರಿ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟದ ಬದಲು ಸಮಸ್ಯೆ ಪರಿಹಾರಕ್ಕೆ ಸರಕಾರದ ಮೇಲೆ ಒತ್ತಡ ಹೇರಬೇಕಿದೆ. ಮೇಕೆದಾಟು ಯೋಜನೆ ಜಾರಿಗೆ ಈಗಾಗಲೇ ಎನ್‍ಜಿಟಿ ಅನುಮತಿ ನೀಡಿರುವಾಗ ತಮಿಳುನಾಡು ಸಿಎಂಗೆ ಯಡಿಯೂರಪ್ಪ ಅವರು ಪತ್ರ ಬರೆಯುವ ಅಗತ್ಯವೇನಿತ್ತು. ತಮಿಳುನಾಡು ಮೊದಲಿನಿಂದಲೂ ಯೋಜನೆಗೆ ವಿರೋಧಿಸುತ್ತಾ ಬಂದಿದೆ ಎಂದರು.

ಬಿಎಸ್‍ವೈ ರಾಜೀನಾಮೆ ನೀಡಲಿ, ಇಲ್ಲ ಭಿನ್ನರ ಮಾತುಗಳಿಗೆ ಕಡಿವಾಣ ಹಾಕಲಿ

      ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಸ್ವಪಕ್ಷೀಯ ಸಚಿವರು, ಶಾಸಕರು ಬಂಡಾಯವೆದ್ದಿದ್ದು, ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ನೈತಿಕತೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಇಂತಹ ಭಿನ್ನಧ್ವನಿಗೆ ಹೈಕಮಾಂಡ್ ಮೂಲಕ ಕಡಿವಾಣ ಹಾಕಿಸಬೇಕು. ಇಲ್ಲವಾದಲ್ಲಿ ಆಡಳಿತ ಬಿಗಿ ತಪ್ಪಿ, ಅಧಿಕಾರಿಗಳು ಮಾತು ಕೇಳದಾಗುತ್ತಾರೆ. ಮೈಸೂರಿನ ಡಿಸಿ ವರ್ಸಸ್ ಆಯುಕ್ತರ ಪ್ರಕರಣವೇ ಇದಕ್ಕೆ ಸಾಕ್ಷಿ.

-ಡಾ.ಜಿ.ಪರಮೇಶ್ವರ ಮಾಜಿ ಡಿಸಿಎಂ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link