ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಲೋಕ್ ಅದಾಲತ್‍ಗಳು ಅನುಕೂಲ

 ಗುಬ್ಬಿ : 

      ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಗಸ್ಟ್ 14 ರಂದು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಿ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಹುಂಡಿ ಕರೆ ನೀಡಿದರು.

      ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನ್ಯಾಯಾಲಯದ ಮೊರೆ ಹೋದ ಹಲವು ಪ್ರಕರಣಗಳು ವರ್ಷಗಟ್ಟಲೇ ನಡೆದು ಇತ್ಯರ್ಥವಾಗದೆ ವಿಳಂಬವಾಗಿರುತ್ತದೆ. ಇದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಬಹುಬೇಗ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಗೊಳಿಸಲು ಈ ಲೋಕ ಅದಾಲತ್ ವೇದಿಕೆ ಪೂರಕವಾಗಿದೆ. ಇದರ ಬಳಕೆಗೆ ವಕೀಲರ ಬಳಗ ಸಹಕರಿಸಬೇಕು ಎಂದರು.

      ಸಾಲ ತೀರುವಳಿ ಪ್ರಕರಣಗಳಲ್ಲಿ ಮರುಪಾವತಿ ಮಾಡದ ಸಾಲಗಾರರನ್ನು ಮತ್ತು ಬ್ಯಾಂಕ್‍ಗಳನ್ನು ಒಂದಡೆ ಸೇರಿಸಿ ರಾಜೀ ಸೂತ್ರ ಬಳಸಲು ಕ್ರಮ ವಹಿಸಲಾಗುವುದು. ವಿದ್ಯುತ್ ಬಿಲ್ ಪಾವತಿ ಮಾಡದ ಗ್ರಾಹಕರ ಪ್ರಕರಣಕ್ಕೂ ಸಂಧಾನ ಮಾಡಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ರಾಜೀ ಮೂಲಕ ಕಟ್ಟಿಸಲು ಅನುವು ಮಾಡಲಾಗುವುದು ಎಂದ ಅವರು ಬಹುವರ್ಷಗಳಿಂದ ನಡೆದ ಪ್ರಕರಣಗಳ ಪೈಕಿ ರಾಜೀ ಆಗಬಲ್ಲ ಪ್ರಕರಣಕ್ಕೆ ಈ ಲೋಕ ಅದಾಲತ್ ಅವಕಾಶ ನೀಡಲಿದೆ. ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆಸಲು ಸಾಕಷ್ಟು ಪರದಾಡಿದ ಬಡ ಜನರಿಗೆ ಈ ವೇದಿಕೆ ಸರಳ ಎನಿಸಲಿದೆ ಎಂದರು.

      ಕೊರೋನಾ ವೈರಸ್ ಇಡೀ ದೇಶಕ್ಕೆ ಮಾರಕ ಎನಿಸಿ ಸಾಕಷ್ಟು ತೊಂದರೆ ನೀಡಿದೆ. ನ್ಯಾಯಾಲಯದ ಕಾರ್ಯಕಲಾಪಕ್ಕೂ ಈ ವೈರಸ್ ಅಡ್ಡಿಯಾಗಿದೆ. ಕಳೆದೆರಡು ವರ್ಷದಿಂದ ಸಾಕಷ್ಟು ಕಲಾಪಗಳು ನಡೆಸಲಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಪ್ರಾಧಿಕಾರದ ಆದೇಶದಂತೆ ಆಗಸ್ಟ್ ಮಾಹೆಯ 14 ರಂದು ಬೃಹತ್ ಲೋಕ ಅದಲಾತ್ ಹಮ್ಮಿಕೊಳ್ಳಲಾಗುವುದು. ನ್ಯಾಯಾಲಯದ ಆವರಣದಲ್ಲಿ ನಡೆಯುವ ಅದಾಲತ್‍ಗೆ ಮುನ್ನ ಪೂರ್ವಭಾವಿಯಾಗಿ ಬೈಠಕ್ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಜ್.ವಿ.ಸಿದ್ದೇಶ್ವರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶಿಲ್ಪಾ, ಅಧಿಕ ಸಿವಿಲ್ ಕಿರಿಯ ನ್ಯಾಯಾಧೀಶ ಪ್ರೇಮ್‍ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಜಿ.ನಾರಾಯಣ್, ಉಪಾಧ್ಯಕ್ಷ ಕೆ.ಎಸ್.ಮಂಜುನಾಥ್, ಕಾರ್ಯದರ್ಶಿ ಎಸ್.ಶಾಂತಗೌಡ, ಖಜಾಂಚಿ ಎಂ.ಎಚ್.ಪರಮೇಶ್ವರಯ್ಯ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap