ಕೊರಟಗೆರೆ :
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಮನೆ, 4 ಗುಡಿಸಿಲು, 2 ದ್ವಿಚಕ್ರ ವಾಹನ, ಚಿನ್ನಾಭರಣ, ನಗದು ಸೇರಿದಂತೆ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿದೆ.
ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪೂಗಾನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿರುವುದು ಅಲ್ಲದೆ, ನಿವಾಸಿಗಳು ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಕದರಮ್ಮ ಗಂಡ ವೆಂಕಟರಮಣಪ್ಪ ಹಾಗೂ ಮೂರ್ತಪ್ಪ ಎಂಬುವರ ಮನೆಗಳು ಸುಟ್ಟು ಕರಕಲಾದರೆ, ಉಳಿದಂತೆ ಓಬಳೇಶ್ ತಂದೆ ಮುನಿಯಪ್ಪ, ಸಿದ್ದಮ್ಮ ಗಂಡ ರಾಜಣ್ಣ ಎಂಬುವರ ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.
ಘಟನೆ ನಡೆಯುವ ಮುನ್ನ ಅದೃಷ್ಟವಶಾತ್ ಮಹಿಳೆಯರು ಮತ್ತು ಮಕ್ಕಳು ಹೊರಗಿದ್ದರು ಎನ್ನಲಾಗಿದ್ದು, ಮನೆಯಲ್ಲಿದ್ದಂತಹ ದಿನಬಳಕೆ ಸಾಮಗ್ರಿಗಳು ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ನಿರ್ಗತಿಕರ ಬಾಳು ಬೆಂಕಿ ಅನಾಹುತದಿಂದ ಮೂರಾಬಟ್ಟೆ ಆದಂತಾಗಿದೆ.
ಬಿತ್ತನೆಗೆ ತಂದಿದ್ದ ವಸ್ತುಗಳು ನಾಶ :
ರೈತರು ಬಿತ್ತನೆಗೆ ತಂದಿದ್ದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬೆಂಕಿ ಆಹುತಿಗೆ ಸುಟ್ಟು ಕರಕಲಾಗಿದ್ದು, ನಾಲ್ಕೂ ಕುಟುಂಬಗಳು ಬೀದಿ ಪಾಲಾಗಿದ್ದು, ಮನೆ ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲುಮುಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ