ತುಮಕೂರು : ರಸ್ತೆಯಲ್ಲಿ ಗುಂಡಿ : ಕಣ್ತೆರೆದು ನೋಡಿ!

ತುಮಕೂರು :

     ನಗರದ ಬಟವಾಡಿ ಸರ್ಕಲ್‍ನಲ್ಲಿರುವ 80 ಅಡಿ ವರ್ತುಲ ರಸ್ತೆಯು ಬಿ.ಹೆಚ್.ರಸ್ತೆ ಮತ್ತು ರಿಂಗ್‍ರೋಡ್ ಸಂಪರ್ಕಿಸುವ ಬಹು ಮುಖ್ಯ ರಸ್ತೆಯಾಗಿದ್ದು, ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಮೆಗಾಗ್ಯಾಸ್ ಯೋಜನೆಯ ಅಧಿಕಾರಿಗಳು ಕಾಮಗಾರಿಗಾಗಿ ಸದರಿ ರಸ್ತೆಯ ಆರಂಭದಲ್ಲೆ ಟ್ರಂಚ್ ಹೊಡೆದು ರಸ್ತೆಯನ್ನು ಕಿತ್ತು ಅದನ್ನು ವ್ಯವಸ್ಥಿತವಾಗಿ ಮುಚ್ಚದ ಪರಿಣಾಮ ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುವಂತಾಗಿದೆ.

      ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತೆ ಆರಂಭವಾಗುವ ಈ ರಸ್ತೆಯನ್ನು ಪ್ರವೇಶ ಮಾಡುವ ವಾಹನ ಸವಾರರು ಮೊದಲು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ತಮ್ಮ ವಾಹನಗಳನ್ನು ಇಳಿಸಿ ಅದೃಷ್ಟವಶಾತ್ ಬೀಳದಿದ್ದರೆ ಮುಂದೆ ಪ್ರಯಾಣ ಮುಂದುವರೆಸಬಹುದು ಇಲ್ಲದಿದ್ದರೆ ಬಿದ್ದು ಮುಖ-ಮೂತಿ ಕಿತ್ತುಕೊಂಡು ಆಸ್ಪತ್ರೆ ಪಾಲಾಗುವುದು ಗ್ಯಾರಂಟಿ.

     ವಾರಕ್ಕೆ 2-3 ಅಪಘಾತಗಳು ಖಾಯಂ : 80 ಅಡಿ ರಸ್ತೆಯಲ್ಲಿ ಟ್ರಂಚ್ ತೆಗೆದು ಗುಂಡಿಗಳನ್ನು ಸರಿಯಾಗಿ ಮುಚ್ಚದೆ, ಕಿತ್ತ ರಸ್ತೆಗೆ ಮತ್ತೆ ಟಾರು ಹಾಕದೆ ಹಾಗೆ ಬಿಟ್ಟಿರುವುದರಿಂದ ವಾರದಲ್ಲಿ 2-3 ಅಪಘಾತಗಳಾಗುತ್ತಿದ್ದು ಈ ಮಾರ್ಗವಾಗಿ ಸಾಗುವ ವಾಹನ ಸವಾರರು ಜೀವ ಕೈಲಿಟ್ಟುಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲದೆ ಈಗ ಮಳೆಗಾಲವಾದ್ದರಿಂದ ಬಿದ್ದ ಮಳೆನೀರು ರಸ್ತೆಯಲ್ಲಿರುವ ಗುಂಡಿಗಳಲ್ಲಿ ನಿಲ್ಲುತ್ತಿದೆ. ಈ ವಿಚಾರ ತಿಳಿಯದೆ ವಾಹನ ಸವಾರರು ಸಂಚರಿಸಿದರೆ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಸದಾ ಸಂಚಾರ ದಟ್ಟಣೆ :

      ಬಿ.ಎಚ್.ರಸ್ತೆ ಮತ್ತು ರಿಂಗ್ ರೋಡ್‍ಗೆ 80 ಅಡಿ ರಸ್ತೆಯು ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು ಬೆಂಗಳೂರು ಕಡೆ ಹೋಗುವವರು, ಅತ್ತಿಂದ ಬಂದವರು, ಬೈ ಪಾಸ್, ರಿಂಗ್ ರೋಡ್ ಕಡೆ ಹೋಗುವವರು ಅಲ್ಲದೇ ವೆಂಕಟೇಶ್ವರ ದೇವಾಲಯ ಹಾಗೂ ಪೆಟ್ರೋಲ್ ಬಂಕ್‍ಗೆ ಬರುವ ಹೋಗುವ ಜನರಿಂದ ಈ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಸದ್ಯ 80 ಅಡಿ ರಸ್ತೆಯ ಪ್ರವೇಶದಲ್ಲೆ ಗುಂಡಿ ಬಿದ್ದಿರುವುದರಿಂದ ವಾಹನಗಳು ಹೆಚ್ಚು ಬ್ರೇಕ್ ಹಾಕುತ್ತಾ ನಿಧಾನವಾಗಿ ಸಂಚರಿಸುತ್ತಿವೆ. ಸಹಜವಾಗಿ ಇಲ್ಲಿ ಹೆಚ್ಚು ವಾಹನಗಳ ಸಂಚಾರವಿರುವುದರಿಂದ ಮುಂದೆ ಸಂಚರಿಸುವ ವಾಹನಗಳು ಬ್ರೇಕ್ ಹಾಕಿದಾಗ ಹಿಂದೆ ಬರುವ ವಾಹನಗಳು ಅವುಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಅವೈಜ್ಞಾನಿಕ ಸಿಗ್ನಲ್ :     

      ಬಿ.ಹೆಚ್.ರಸ್ತೆಯ ಬಟವಾಡಿ ಸಿಗ್ನಲ್ ಅನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಸಹ 80 ಅಡಿ ರಸ್ತೆ ಹಾಗೂ ಬಿ.ಹೆಚ್.ರಸ್ತೆಯಲ್ಲಿ ಸಂಚರಿಸುವವರ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ನಗರ ಮಾರ್ಗವಾಗಿ ಬೆಂಗಳೂರು ಕಡೆ ಹೋಗುವವರು, ಬೆಂಗಳೂರಿನಿಂದ ನಗರದೊಳಕ್ಕೆ ಪ್ರವೇಶ ಪಡೆಯುವವರು, ಅಂಡರ್ ಪಾಸ್ ಲಿಂಕ್ ತೆಗೆದುಕೊಳ್ಳುವವರು, 80 ಅಡಿ ರಸ್ತೆಗೆ ಹೋಗುವವರು, ರಿಂಗ್ ರೋಡ್‍ಗೆ ಲಿಂಕ್ ತೆಗೆದುಕೊಳ್ಳುವವರು, ಸಮೀಪದ ಪೆಟ್ರೋಲ್ ಬಂಕ್‍ಗೆ ಬಂದು ಹೋಗುವವರು ಹೀಗೆ ಇಲ್ಲಿ ಯಾವಾಗಲೂ ಸಂಚಾರ ದಟ್ಟಣೆಯು ಹೆಚ್ಚಿದ್ದು ಜಂಕ್ಷನ್ ರೀತಿಯಲ್ಲಿದೆ. ಯಾವ ವಾಹನಗಳು ಎತ್ತ ಹೋಗುತ್ತವೆ, ಎತ್ತ ಬರುತ್ತವೆ ಎಂಬುದೆ ತಿಳಿಯದ ರೀತಿಯಲ್ಲಿದೆ ಈ ಜಂಕ್ಷನ್‍ನ ವಹನ ಸಂಚಾರ. ಇದನ್ನೆಲ್ಲಾ ಪರಿಗಣಿಸದೆ ಇಲ್ಲಿ ಸಿಗ್ನಲ್ ಸ್ಥಾಪಿಸಿರುವುದು ಅವೈಜ್ಞಾನಿಕ ನಿರ್ಧಾರ ಎಂದು ಇಲ್ಲಿನ ಪ್ರಜ್ಞಾವಂತ ನಾಗರೀಕರು ಆರೋಪಿಸಿದ್ದಾರೆ.

ಒಂದೇ ದಿನದಲ್ಲಿ ಪೂರ್ಣವಾದ ರಸ್ತೆ :

      ಬಿ.ಹೆಚ್.ರಸ್ತೆ ಮತ್ತು ರಿಂಗ್‍ರೋಡ್ ಸಂಪರ್ಕಿಸುವ ಈ 80 ಅಡಿ ವರ್ತುಲ ರಸ್ತೆಯು ಮೊದಲಿಗೆ ಅತ್ಯಂತ ಕಿರಿದಾಗಿತ್ತು. 80 ಅಡಿ ರಸ್ತೆ ನಿರ್ಮಾಣ ಮಾಡಲು ಮುಂದಾದಾಗ ಸ್ಥಳೀಯ ಉದ್ಯಮಿಯೊಬ್ಬರು ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿ ಪಡಿಸುತ್ತಾ, ರಾಜಕೀಯ ಮೇಲಾಟ ನಡೆಸುತ್ತಿದ್ದರು. ಕೊನೆಗೆ ಕೋರ್ಟ್ ಮೊರೆ ಹೋಗಿ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ತರುವ ಪ್ರಯತ್ನವನ್ನು ಮಾಡಿದ್ದರು. ಆಗ ನಗರದ ಅಭಿವೃದ್ಧಿ ಪರವಿದ್ದ ನಾಗರೀಕರು, ಅಂದಿನ ಶಾಸಕರು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣನವರು ರಸ್ತೆ ಅಗಲೀಕರಣ ಮಾಡಿಯೇ ತೀರಬೇಕೆಂದು ಇಡೀ ರಾತ್ರಿ ಪೂರ್ತಿ ಸ್ಥಳದಲ್ಲೆ ಮೊಕ್ಕಂ ಹೂಡಿ ಬೆಳಗಾಗುವುದರೊಳಗೆ ರಸ್ತೆ ನಿರ್ಮಿಸಿ ಉದ್ಘಾಟನೆ ಮಾಡಿ ಸಿಹಿ ಹಂಚಿದ್ದು ಈಗ ಚರಿತ್ರೆ.

      ಕಾಮಗಾರಿಗಾಗಿ ರಸ್ತೆ ಕಿತ್ತ ಅಧಿಕಾರಿಗಳು ರಸ್ತೆಯನ್ನು ಸರಿಯಾಗಿ ಮುಚ್ಚದೆ, ಮೇಲೆ ಟಾರು ಹಾಕದೆ, ಗುಂಡಿಗಳನ್ನು ಹಾಗೇ ಬಿಟ್ಟು ಹೋಗಿದ್ದಾರೆ. ಈ 80 ಅಡಿ ವರ್ತಲ ರಸ್ತೆಯು ಹೆಚ್ಚು ವಾಹನಗಳು ಸಂಚರಿಸುವ ಸದಾ ಒತ್ತಡದ ರಸ್ತೆಯಾಗಿರುವುದರಿಂದ ವಾಹನ ಸವಾರರು ಬೀಳುವ, ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ರಸ್ತೆ ಕಿತ್ತವರು ಆದಷ್ಟೂ ಬೇಗ ರಸ್ತೆ ಸರಿ ಮಾಡಿಕೊಡಲಿ.

-ಜಯರಾಮಶೆಟ್ಟಿ, ಸ್ಥಳೀಯ ನಿವಾಸಿ, ಬಟವಾಡಿ

80 ಅಡಿ ವರ್ತಲ ರಸ್ತೆಯಲ್ಲಿ ಹಳ್ಳ ಬಿದ್ದಿದ್ದು, ಹೆಚ್ಚು ವಾಹನಗಳು ಸಂಚರಿಸುತ್ತವೆ. ಸಿಗ್ನಲ್ ಬಿದ್ದಾಗ ಈ ರಸ್ತೆವರೆಗೂ ಗಾಡಿಗಳು ಜಾಮ್ ಆಗುತ್ತವೆ. ಹಾಗಾಗಿ ಈ ರಸ್ತೆಯಲ್ಲಿ ವಾಹನಗಳು ಬೇಗ ಸಂಚರಿಸು ಆಗುವುದಿಲ್ಲ. ಸಂಬಂಧಪಟ್ಟವರು ಬೇಗ ರಸ್ತೆ ನಿರ್ಮಿಸಿಕೊಡಬೇಕು.

-ನರೇಂದ್ರ, ಸ್ಥಳೀಯ ನಿವಾಸಿ, ಬಟವಾಡಿ

ರಸ್ತೆಯಲ್ಲಿ ಟ್ರಂಚ್ ತೆಗೆದು ಗುಂಡಿ ಬಿದ್ದಿರುವುದರಿಂದ ಭಾನುವಾರ ಬೈಕ್ ಸವಾರನೊಬ್ಬ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ. ಕಿತ್ತ ರಸ್ತೆ ಸರಿಪಡಿಸಲು ಸಣ್ಣಸೈಜಿನ ಜಲ್ಲಿ ತಂದು ಹಾಕಿದ್ದು ಜಲ್ಲಿ ಕಲ್ಲುಗಳು ರಸ್ತೆ ತುಂಬಾ ಎಲ್ಲೆಂದರಲ್ಲಿ ಬಿದ್ದಿವೆ. ಈ ಜಲ್ಲಿ ಕಲ್ಲುಗಳ ಮೇಲೆ ವಾಹನಗಳ ಚಕ್ರಗಳು ಹತ್ತಿದಾಗ ಅವು ರಸ್ತೆಯಲ್ಲಿ ಸಂಚರಿಸುವ ಜನರು, ವಾಹನಗಳಿಗೆ ಸಿಡಿದು ಹಾನಿಗೊಳಿಸುವ ಅಪಾಯವಿದೆ. ಹಾಗಾಗಿ ರಸ್ತೆ ಕಿತ್ತವರು ಶೀಘ್ರವಾಗಿ ರಸ್ತೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.

-ಬಾಬು ನಾಗೇಂದ್ರಪ್ರಸಾದ್, ಆಟೋಚಾಲಕರು, ಬಟವಾಡಿ ಆಟೋ ನಿಲ್ದಾಣ

ನಗರದಲ್ಲಿ ಮೆಗಾ ಗ್ಯಾಸ್ ಏಜೆನ್ಸಿಯ ಕಾಮಗಾರಿ ನಡೆಯುತ್ತಿದೆ. 80 ಅಡಿ ವರ್ತುಲ ರಸ್ತೆಯಲ್ಲಿ ಗುಂಡಿ ಬಿದ್ದಿರುವ ವಿಚಾರ ತಿಳಿದಿಲ್ಲ. ಸ್ಥಳ ವೀಕ್ಷಣೆ ಮಾಡಿ ಗುಂಡಿ ಬಿದ್ದಿರುವ ವಿಚಾರವನ್ನು ಕಂಪನಿಯ ಗಮನಕ್ಕೆ ತರಲಾಗುವುದು

-ವಿರೂಪಾಕ್ಷ, ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್, ಮೆಗಾಗ್ಯಾಸ್ ಏಜೆನ್ಸಿ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link