ಟೀಕೆಗೆ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವುದೇ ನಮ್ಮ ಗುರಿ – ಸಚಿವ

ತಿಪಟೂರು : 

      ಟೀಕೆಯನ್ನು ಎಲ್ಲರೂ ಮಾಡುತ್ತಾರೆ ಆದರೆ ಟಿಕೆಗಳಿಗೆ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವುದೇ ನಮ್ಮಗುರಿ, ಅದೇ ನಮ್ಮ ಶ್ರೀರಕ್ಷೆಎಂದು ಸಣ್ಣನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

      ತಾಲೂಕಿನ ಕಸಬಾ ಹೋಬಳಿಯ ರಂಗಾಪುರ, ಚಿಕ್ಕಕೊಟ್ಟಿಗೇಹಳ್ಳಿ, ಹೊಸಹಳ್ಳಿ ಕೆರೆಗಳಿಗೆ 5 ಕೋಟಿ ವೆಚ್ಚದಲ್ಲಿ ಏತನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಾನು ಒಬ್ಬ ರೈತನಾಗಿದ್ದು ಸೂಟು ಬೂಟಿನ ರಾಜಕಾರಣ ಗೊತ್ತಿಲ್ಲ, ನನಗೆ ಸಿಕ್ಕಿರುವ ಪದವಿಯಿಂದ ರೈತರ ಬದುಕನ್ನು ಸುಸ್ಥಿರಗೊಳಿಸುವುದೇ ನನ್ನಗುರಿ, ನಮ್ಮ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರು ತುಮಕೂರಿಗೆ ಆಗಮಿಸಿದಾಗ ಈ ಬಾರಿ ರಾಜ್ಯಕ್ಕೆ ಯಾವ ಯೋಜನೆ ತಂದರೆ ಉತ್ತಮ ಎಂದು ಆಗ ನಾನು ರೈತರಿಗೆ ಏನಾದರು ಮಾಡಿ ನೀರು ಕೊಡೋಣ ಎಂದಾಗ ಆಗಲಿ ಎಂದರು. ಅದರಂತೆ ಈ ಕೊರೊನಾ ಸಂಕಷ್ಟದಲ್ಲಿಯೂ ನೀರಾವರಿಗಾಗಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದೇವೆ, ಪ್ರಧಾನ ಮಂತ್ರಿಯವರ ಜೀವಜಲ ಮಿಷನ್‍ನಲ್ಲಿ ಪ್ರತಿಹಳ್ಳಿಯ ಮನೆಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಪ್ರತಿ ಹಳ್ಳಿಗಳ ಕೆರೆಕಟ್ಟೆಗಳಿಗೆ ಸಾಧ್ಯವಾದಷ್ಟು ನೀರು ತುಂಬಿಸಿ ಅಂತರ್ಜಲವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಪ್ರಪಂದ ನೀರನಲ್ಲಿ ಶೇ 3 ರಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದೆ ನಾವು ಆ ನೀರನ್ನೆ ಮರುಬಳಕೆ ಮಾಡಬೇಕು ಅದರಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಿಗೆ ಬೆಂಗಳೂರಿನ ವೃಷಭಾವತಿ ನೀರನ್ನು ಶುದ್ಧೀಕರಿಸಿ ಕೊಡುವಂತೆ ಹಳೆ ನಿಜಗಲ್‍ನಿಂದ ಗೂಳೂರು ವರೆಗಿನ ಕೆರೆಗಳನ್ನು 1000 ಕೋಟಿ ರೂ.ವೆಚ್ಚದಲ್ಲಿ ತುಂಬಿಸಲಾಗುವುದು ಎಂದು ತಿಳಿಸಿದರು.

       ಟಾಟಾ ಇನ್ಸ್‍ಟ್ಯೂಟ್‍ಗೆ 3 ತಿಂಗಳ ಗಡುವು : ರಾಜ್ಯದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ರೈತರು ಬೋರ್‍ವೆಲ್ ಕೊರೆಸಿ ತೀವ್ರವಾಗಿ ನಷ್ಟ ಅನುಭವಿಸಿರುವುದನ್ನು ಮನಗಂಡು ಟಾಟಾ ಇಸ್ಟಿಟ್ಯೂಟ್‍ನಿಂದ ಇನ್ನು ಮೂರು ತಿಂಗಳ ಒಳಗಾಗಿ ಅಂತರ್ಜಲದ ಮೂಲ ಎಲ್ಲೆಲ್ಲಿದೆ ಎಂದು ಸರ್ವೆಮಾಡಿಸಿ ಆ ನಕ್ಷೆಯನ್ನು ಪ್ರತಿಗ್ರಾಮ ಪಂಚಾಯಿತಿ ಮುಂದೆ ಹಾಕಲಾಗುವುದು ಎಂದು ತಿಳಿಸಿದರು.

      ತಿಪಟೂರು ತಾಲ್ಲೂಕಿನಲ್ಲಿ 21,000 ಐ.ಪಿ ಸೆಟ್‍ಗಳಿವೆ ಇವುಗಳಿಗೆ ಅನುಗುಣವಾಗಿ 900 ವಿದ್ಯುತ್ ಪರಿವರ್ತಕಗಳು ಬೇಕು, ಇದಕ್ಕಾಗಿ 218 ಕೋಟಿ ರೂ.ಗಳು ಬೇಕಾಗುತ್ತದೆ ಅವುಗಳನ್ನು ರೈತರಿಗೆ ಕೊಡಿಸುವ ಹೋರಾಟವನ್ನು ಮಾಡುತ್ತಿದ್ದೇವೆ. ನಮ್ಮ ರೈತರಿಗೆ ನೀರು ಮತ್ತು ವಿದ್ಯುತ್ ಕೊಟ್ಟು ಅವರನ್ನು ಸಮೃದ್ಧಿಯಾಗಿ ಮತ್ತು ಸ್ವಾವಲಂಭಿಗಳನ್ನಾಗಿ ಮಾಡುವುದೇ ನನ್ನ ಗುರಿ. ಇಂತಹ ಕೆಲಸಗಳನ್ನು ಕಳೆದ 10 ವರ್ಷಗಳ ಹಿಂದೆ ಇದ್ದ ರಾಜಕಾರಣಿಗಳು ಏಕೆ ಮಾಡಲಿಲ್ಲ, ಅವರಿಗೆ ರೈತರ ಕಷ್ಟ ಗೊತ್ತಿರಲಿಲ್ಲವೇ, ಇಂತಹ ಕೆಲಸವನ್ನು ನಾವು ಮಾಡಿದ್ದೇವೆ ಎಂದರೆ ಅವರಿಗೆ ನಾನು ಸಲಾಂ ಹೊಡೆಯುತ್ತೇನೆ. ನಾವು ಮಾಡಿರುವ ಕೆಲಸವನ್ನು ನೋಡಿ ನಮಗೆ ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ನೀಡಿ ಎಂದು ಪರೋಕ್ಷವಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಮತವನ್ನು ಯಾಚಿಸಿದರು.

ಅಹಂಕಾರ ಬಿಟ್ಟೆ:

      ನನಗಿಂತ ಅಹಂಕಾರಿ ಇನ್ನೊಬ್ಬರಿಲ್ಲ ಎಂದು ಗೊತ್ತಿದ್ದರು, ತುಮಕೂರು ಜಿ.ಪಂ ಕೆ.ಡಿ.ಪಿ ಸಭೆ ನಡೆಯದೆ 850 ಕೋಟಿ ಉಳಿದಿರುವ ವಿಷಯವನ್ನು ತಿಳಿದು ನನ್ನ ಅಹಂಕಾರವನ್ನು ಬಿಟ್ಟು, ಸ್ವತಹ ಜಿ.ಪಂ ಸದಸ್ಯರಿಗೆ ಪತ್ರ ಬರೆದು ಸಭೆಗೆ ಬರುವಂತೆ ಮಾಡಿ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಿದೆನು ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು

       ನಮಗೆ ನೀರಿನ ಲೆಕ್ಕ, ತಮಿಳುನಾಡಿಗೆ ಲೆಕ್ಕವಿಲ್ಲ : ಕೆಆರ್‍ಎಸ್‍ನಿಂದ ತಮಿಳುನಾಡಿಗೆ ಹರಿಯುವ ನೀರನ್ನು ಎಷ್ಟು ಟಿಎಂಸಿ ಬಿಡಬೇಕೊ ಅಷ್ಟು ಬಿಡಬೇಕು ಆದರೆ ಅಣೆಕಟ್ಟು ತುಂಬಿದಾಗ ಬಿಟ್ಟ ಹೆಚ್ಚುವರಿ ನೀರು ಲೆಕ್ಕಕ್ಕೆ ಇಲ್ಲ ಆದರೆ ಹೇಮಾವತಿ ನಾಲೆಯಿಂದ ಅಣೆಕಟ್ಟು ತುಂಬಿದಾಗ ಬಿಟ್ಟ ಕೋಡಿ ನೀರು ಸಹ ಲೆಕ್ಕಕ್ಕೆ ಸೇರುತ್ತದೆ. ಈ ಬಗ್ಗೆ ಕೇಂದ್ರ ಮಂತ್ರಿ ಶೇಖಾವತ್ ಬಳಿ ಮಾತನಾಡಿದ್ದು ಇದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದರು.

      ನಾವು ಕಷ್ಟ ಕಾಲದಲ್ಲಿ ಸಾಲ ಮಾಡಿದ್ದೇವೆ, ನೀವೇಕೆ ಮಾಡಿದ್ದೀರಿ : ಸದನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊರೊನಾ ಸಂಕಷ್ಟದಲ್ಲಿ ಸಾಲಮಾಡಿದ್ದೀರಿ ಎಂದು ಪ್ರಶ್ನಿಸಿದರು, ಅವರಿಗೆ ಉತ್ತರಿಸಿದ ನಾನು ನಾವು ಕೊರೊನಾ, ನೆರೆ ಪರಿಹಾರಕ್ಕೆ ಸಾಲ ಮಾಡಿದ್ದೇವೆ. ಆದರೆ ನೀವು ಸುಭೀಕ್ಷವಾಗಿದ್ದಾಗಲೂ ಏಕೆ 1,000 ಕೊಟಿ ಸಾಲಮಾಡಿದ್ದೀರಿ ಎಂದಿದ್ದಕ್ಕೆ ಸಿದ್ದರಾಮಯ್ಯ ಉತ್ತರವಿಲ್ಲದೆ ಸುಮ್ಮನಾದರೆಂದು ಮಾಧುಸ್ವಾಮಿ ತಿಳಿಸಿದರು.

      ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಗುರು ಪರದೇಶಿ ಕೇಂದ್ರ ಸ್ವಾಮೀಜಿಗಳು ಭಗವಂತನ ಕೃಪೆಯಿಂದ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಉತ್ತಮ ಬೆಳೆಯಾಗಿ, ಈಗ ಬಂದಿರುವ ಕೊರೊನಾ ತೊಲಗಲಿ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹೆಚ್.ಬಿ.ದಿವಾಕರ್, ರಂಗಾಪುರ ಗ್ರಾ.ಪಂ ಅಧ್ಯಕ್ಷೆ ಮಂಜುಳ ಕಾಂತರಾಜು, ದಸರೀಘಟ್ಟ ಗ್ರಾ.ಪಂ ಅಧ್ಯಕ್ಷೆ ರುಕ್ಕ್ಮಣಿ ಪುರುಶೋತ್ತಮ್, ಗ್ರಾ.ಪಂ ಸದಸ್ಯರು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link