ಹುಳಿಯಾರು : ಮುಕ್ತಿಧಾಮದಲ್ಲಿ ಕಳಪೆ ಕಾಮಗಾರಿಯ ದೂರು

ಹುಳಿಯಾರು : 

      ಹುಳಿಯಾರು-ಕೆಂಕೆರೆ ರಸ್ತೆಯಲ್ಲಿರುವ ಮುಕ್ತಿಧಾಮದ ಅಭಿವೃದ್ಧಿ ನೆಪದಲ್ಲಿ 2016 ರಿಂದ ಇಲ್ಲಿಯವರೆವಿಗೆ ಅನೇಕ ಬಾರಿ ವಿವಿಧ ಇಲಾಖೆಗಳಿಂದ ಹಣ ಹಾಕಿಸಿಕೊಂಡು ಕಳಪೆ ಕಾಮಗಾರಿ ಮಾಡಿದ್ದು ಕ್ರಮ ಕೈಗೊಳ್ಳವಂತೆ ಲಂಚ ಮುಕ್ತ ವೇದಿಕೆಯಿಂದ ದೂರು ಬಂದ ಹಿನ್ನಲೆಯಲ್ಲಿ ಇಲ್ಲಿನ ಪಟ್ಟಣ ಪಂಚಾಯ್ತಿ ಮತ್ತು ಮುಕ್ತಿಧಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

     ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅನಿಲ್‍ಕುಮಾರ್ ಹಾಗೂ ಪ್ರಕಾಶ್ ಅವರ ತಂಡ ಪಟ್ಟಣ ಪಂಚಾಯ್ತಿಗೆ ಭೇಟಿ ನೀಡಿ ಮುಕ್ತಿಧಾಮದಲ್ಲಿ ಇಲ್ಲಿಯವರೆವಿಗೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವಿವರ ಕೇಳಿದರು. ಇದಕ್ಕೆ ಮುಖ್ಯಾಧಿಕಾರಿ ಮಂಜುನಾಥ್ ಅವರು 2018 ರಲ್ಲಿ ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ. ಹಾಗಾಗಿ ಗ್ರಾಪಂ ಆಡಳಿತದಲ್ಲಿನ ಕಾಮಗಾರಿಗಳ ಮಾಹಿತಿ ನಮ್ಮಲ್ಲಿ ಲಭ್ಯವಿಲ್ಲ. ಪಟ್ಟಣ ಪಂಚಾಯ್ತಿಯಿಂದ ಒಂದು ಬಾರಿ ಮಾತ್ರ ಅನುದಾನ ಬಳಕೆ ಮಾಡಿದ್ದು, ಕಾಮಗಾರಿಯ ಗುಣಮಟ್ಟಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಬಹುದು ಎಂದರು.

      ಪಟ್ಟಣ ಪಂಚಾಯ್ತಿ ಎಂಜಿನಿಯರ್ ಮಂಜುನಾಥ್ ಅವರೊಂದಿಗೆ ಅಧಿಕಾರಿಗಳ ತಂಡ ಮುಕ್ತಿಧಾಮಕ್ಕೆ ಭೇಟಿ ನೀಡಿ ಪಪಂನಿಂದ ಕಾಮಗಾರಿಯ ಮಾಹಿತಿ ಪಡೆದುಕೊಂಡರು. ಮೃತ ದೇಹ ಸುಡುವ ಚೇಂಬರ್, ಸೌದೆ ಸಂಗ್ರಹ ತೊಟ್ಟಿ, ಕಟ್ಟಡಕ್ಕೆ ಬಣ್ಣ, ಪ್ರವೇಶ ಭಾಗದ ಕಾಂಪೌಂಡ್ ಗೋಡೆ ಹಾಗೂ ವಾಹನಗಳು ಸರಾಗವಾಗಿ ಓಡಾಡಲು ಮಣ್ಣು ಹೊಡೆಸಿರುವುದಾಗಿ ಎಂಜಿನಿಯರ್ ತಿಳಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಕ್ತಿಧಾಮ ಅಭಿವೃದ್ಧಿ ಸಮಿತಿಯವರು ಜಯಚಂದ್ರ ಅವರು ಸಚಿವರಾಗಿದ್ದ ಕಾಲದಲ್ಲಿ ಇಲ್ಲೊಮ್ಮೆ ಕಾಮಗಾರಿ ಮಾಡಿದ್ದರು. ಆದರೆ ಸಿಸ್ಟನ್ ಇಟ್ಟಿದ್ದರಾದರೂ ನೀರಿನ ಸಂಪರ್ಕ ಕಲ್ಪಿಸುವ ಪೈಪ್‍ಗಳಿರಲಿಲ್ಲ. ಆ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಡೆದಿತ್ತು ಎಂಬ ಮಾಹಿತಿ ನೀಡಿದರು.

      ಈ ಸಂದರ್ಭದಲ್ಲಿ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ಡಿ.ಆರ್.ನರೇಂದ್ರಬಾಬು, ಹು.ಕೃ.ವಿಶ್ವನಾಥ್, ಬಳೆದಾಸಪ್ಪ, ಅನ್ನದಾನರಂಗ ಪ್ರಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೈ ಪಂಪು ಸರಿಪಡಿಸಿ :

      ಮುಕ್ತಿಧಾಮದಲ್ಲಿನ ಕೈಪಂಪು ಕೆಟ್ಟು ಅನೇಕ ವರ್ಷಗಳಾಗಿವೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದರೂ ದುರಸ್ಥಿ ಮಾಡಿಲ್ಲ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮುಕ್ತಿಧಾಮಕ್ಕೆ ಅಂತ್ಯಸಂಸ್ಕರ ನಡೆದ ನಂತರ ನೀರಿನ ಅವಶ್ಯಕತೆ ಪೂರೈಸಲು ಕೈ ಪಂಪು ಅತ್ಯಗತ್ಯ. ಹಾಗಾಗಿ ಕೈಪಂಪು ದುರಸ್ಥಿ ಮಾಡಿಸುವಂತೆ ಮುಕ್ತಿಧಾಮದ ಅಭಿವೃದ್ಧಿ ಸಮಿತಿಯವರು ಅಧಿಕಾರಿಗಳಿಗೆ ಮನವಿ ಮಾಡಿದರು.

ನಿರ್ವಹಣೆಗೆ ಸಿಬ್ಬಂದಿ ನೇಮಿಸಿ :

      ಮುಕ್ತಿಧಾಮದ ಅಭಿವೃದ್ಧಿಗೆ ಸಮಿತಿ ಇದೆಯಾದರೂ ಅಂತ್ಯಕ್ರಿಯೆಗೆ ಬರುವ ಸಂದರ್ಭದಲ್ಲಿ ನಿರ್ವಹಣೆಗೆ ಸಿಬ್ಬಂದಿ ವ್ಯಕ್ತಿಯೋರ್ವನ ಅಗತ್ಯವಿದೆ. ಅಂತ್ಯಕ್ರಿಯೆಗೆ ಬರುವವರಿಂದ ಇಂತಿಷ್ಟು ಹಣ ಕಟ್ಟಿಸಿಕೊಂಡು ಆ ಹಣದಲ್ಲಿ ನಿರ್ವಹಣೆಗೆ ವ್ಯಕ್ತಿಯೋರ್ವನನ್ನು ನೇಮಿಸಿ. ಆತ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತನಿದ್ದು, ವಿದ್ಯುತ್, ನೀರು, ಸ್ವಚ್ಚತೆ ಮುಂದಾದ ಸೌಲಭ್ಯ ನಿರ್ವಹಿಸುವ ಜವಾಬ್ದಾರಿ ಕೊಡಿ ಎಂದು ಅಧಿಕಾರಿಗಳು ಕಮಿಟಿಗೆ ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link