ರಸ್ತೆ ಪಕ್ಕ ಕಸ : ಸುಗಮ ಸಂಚಾರಕ್ಕೆ ತೊಡಕು

ತಿಪಟೂರು : 

      ನಗರದಿಂದ ಸುಕ್ಷೇತ್ರ ಕೆರೆಗೋಡಿ ರಂಗಾಪುರಕ್ಕೆ ಸಾಗುವ ರಸ್ತೆಯ ಪಕ್ಕದಲ್ಲಿ ಕಸವನ್ನು ತಂದು ಹಾಕುತ್ತಿರುವುದರಿಂದ ಜನರು ಸಂಚರಿಸಲು ಸಾಧ್ಯವಾಗದಷ್ಟು ಮಟ್ಟಿಗೆ ದುರ್ನಾತ ಉಂಟಾಗುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

      ಗಾಂಧಿನಗರ, ಗುರಪ್ಪನಕಟ್ಟೆಯ ಮುಂದೆ ಸಾಗುವ ದಾರಿಯಲ್ಲಿ ಶನಿವಾರ ಸತ್ತಪ್ರಾಣಿಯ ಕಳೆಬರವನ್ನು ನಾಯಿಗಳು ಕಿತ್ತು ತಿಂದು ರಸ್ತೆಯ ಮದ್ಯಭಾಗಕ್ಕೆ ತಂದು ಬಿಟ್ಟಿದ್ದವು. ಇದರಿಂದಾಗಿ ಈ ದಾರಿಯಲ್ಲಿ ಸಂಚರಿಸಲು ಸಾಧ್ಯವಾಗದಷ್ಟು ದುರ್ನಾತ ಬೀರುತ್ತಿತ್ತು. ಇಲ್ಲಿ ಸಾಕಷ್ಟು ನಾಯಿಗಳು ಇದ್ದು ಸತ್ತ ಪ್ರಾಣಿಯ ಕಳೆಬರವನ್ನು ತಿಂದ ನಾಯಿಗಳು ಮುಂದೆ ಸಾಕುಪ್ರಾಣಿಗಳು ಮತ್ತು ಮಾನವರ ಮೇಲೆ ಪ್ರಾಣಾಂತಿಕವಾಗಿ ದಾಳಿಮಾಡಬಹುದು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಗರಸಭೆಯವರು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದು, ಇಲ್ಲಿ ಕಸವನ್ನು ಹಾಕುವ ಸಮಸ್ಯೆಯನ್ನು ಜೀವಂತವಾಗಿಟ್ಟು ವಿಫಲರಾಗಿದ್ದಾರೆ.

      ಮುಖ್ಯವಾಗಿ ಈ ರಸ್ತೆಯು ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ಶೈವ-ವೈಷ್ಣವರ ಕ್ಷೇತ್ರವಾದ ಸುಕ್ಷೇತ್ರ ಕೆರೆಗೋಡಿ ರಂಗಾಪುರಕ್ಕೆ ಹೋಗುವ ಮಾರ್ಗವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಬರುವ ಯಾತ್ರಾರ್ಥಿಗಳಿಗೆ ತಿಪಟೂರು ನಗರದ ಕೊಳಕು ವೈಭೋಗವನ್ನು ತೋರಿಸಿದಂತೆ ಆಗುತ್ತದೆ. ಆದ್ದರಿಂದ ಇಲ್ಲಿ ಕಸ-ತ್ಯಾಜ್ಯ ಹಾಕುವವರನ್ನು ಶಿಕ್ಷಿಸಿ ರಸ್ತೆಯಲ್ಲಿ ನೆಮ್ಮದಿಯಾಗಿ ಸಂಚರಿಸುವಂತೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link