ತುಮಕೂರು :
ಜಿಲ್ಲೆಯಲ್ಲಿ ಬಕ್ರೀದ್ ಹಬ್ಬ(Eid-ul-Azha)ದ ದಿನ ಈದ್ಗಾಗಳಲ್ಲಿ ನಡೆಸುವ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸೂಚನೆ ನೀಡಿದ್ದಾರೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಬಕ್ರೀದ್ ದಿನದಂದು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಛಿಸಿದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಆಯಾ ಮಸೀದಿಗಳ ಸಾಮಥ್ರ್ಯಕ್ಕನುಗುಣವಾಗಿ ಶೇಕಡ 50ರಷ್ಟು ಜನರನ್ನು ಮೀರದಂತೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬಹುದು. ಒಂದು ವೇಳೆ ಅಧಿಕ ಜನಸಂಖ್ಯೆ ಆಗಮಿಸಿದಲ್ಲಿ ಪಂತಿ(Batch wise) ಗಳಂತೆ ಕೋವಿಡ್ ಮಾರ್ಗಸೂಚಿಯನ್ನನುಸರಿಸಿ ಆಯಾ ಮಸೀದಿಗಳಲ್ಲಿ ನಮಾಜ್ ನಿರ್ವಹಿಸಲು ಹಾಗು ಬಕ್ರೀದ್ ಹಬ್ಬದ ಆಚರಣೆ/ಧಾರ್ಮಿಕ ಚಟುವಟಿಕೆ ಸಂದರ್ಭಗಳಲ್ಲಿ ಪ್ರಾಣಿ ವಧೆ ಮತ್ತು ಬಲಿದಾನ ಪ್ರಕ್ರಿಯೆ ಮಾಡುವಾಗ ತಪ್ಪದೆ ನಿರ್ದೇಶನಗಳನ್ನು ಪಾಲಿಸತಕ್ಕದ್ದು.
ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಮಸೀದಿಗಳಿಗೆ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆಗೊಳಪಡಿಸಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‍ನಿಂದ ಶುಚಿಗೊಳಿಸಬೇಕು. ಕಡ್ಡಾಯವಾಗಿ ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್) ತರಬೇಕು. ಹಸ್ತಲಾಘವ ಮತ್ತು ಆಲಿಂಗನ ಮಾಡಬಾರದು ಎಂದು ನಿರ್ದೇಶನದಲ್ಲಿ ಸೂಚಿಸಲಾಗಿದೆ.
ರಸ್ತೆ/ಪಾದಚಾರಿ ಮಾರ್ಗ/ಎಲ್ಲಾ ರೀತಿಯ ಆಸ್ಪತ್ರೆ ಆವರಣ/ ನರ್ಸಿಂಗ್ ಹೋಂ ಒಳ ಹಾಗೂ ಹೊರ ಆವರಣ/ ಆಟದ ಮೈದಾನ/ ಮಸೀದಿಗಳ ಹಾಗೂ ಇತರೆ ಧಾರ್ಮಿಕ ಸ್ಥಳ ಆವರಣ/ ಉದ್ಯಾನವನಗಳ ಒಳಗೆ ಮತ್ತು ಹೊರಗೆ ಹಾಗು ಇನ್ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮತ್ತು ಬಲಿದಾನ ಪ್ರಕ್ರಿಯೆಯನ್ನು ಮಾಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ