ತುಮಕೂರು : ಆಗಸ್ಟ್ 15 ರಿಂದ ರೈತ ಬಂಧು ಅಭಿಯಾನಕ್ಕೆ ಚಾಲನೆ

 ತುಮಕೂರು :

      ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಸ್ಟ್ 15 ರಿಂದ ಅಕ್ಟೋಬರ್ 15ರವರೆಗೆ ಎರಡು ತಿಂಗಳ ಕಾಲ “ರೈತ ಬಂಧು ಅಭಿಯಾನವನ್ನು” ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ರೈತರು ಎರೆಹುಳು ಗೊಬ್ಬರ ತಯಾರಿಕೆ ಮತ್ತು ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ರೈತ ಬಂಧು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. “ರೈತ ಬಂಧು ಅಭಿಯಾನದಲ್ಲಿ” ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಟ 25 ಎರೆಹುಳು ತೊಟ್ಟಿಗಳನ್ನು ನಿರ್ಮಿಸಲು ಗುರಿ ನೀಡಲಾಗುವುದು. ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳು ಗೊಬ್ಬರದ ಉಪಯೋಗದಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರಿಂದ ರೈತರ ಆದಾಯ ಹೆಚ್ಚಾಗುತ್ತದೆ. ಅಲ್ಲದೆ ತ್ಯಾಜ್ಯ ವಸ್ತುಗಳ ಸದ್ಬಳಕೆಯಿಂದಾಗಿ ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಟಿಸಲು ಅನುಕೂಲವಾಗಲಿದೆ. ಹಾಗಾಗಿ ರೈತರಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಬಳಕೆ ಹಾಗೂ ಸಾವಯವ ಕೃಷಿಯ ಪ್ರಾಮುಖ್ಯತೆಯ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗ್ರಾಮೀಣ ಭಾಗದ ಮಹಿಳಾ ಸ್ವ-ಸಹಾಯ ಗುಂಪುಗಳು ಹಾಗೂ ರೈತರಿಗೆ ಎರೆಹುಳು ಗೊಬ್ಬರದ ಉತ್ಪಾದನೆ ಹಾಗೂ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸುವ ಕೆಲಸ ಈ ಅಭಿಯಾನದಲ್ಲಿ ನಡೆಯಲಿದೆ. ಅಲ್ಲದೆ ಆಗಸ್ಟ್ 1ರಿಂದ 14ರವರೆಗೆ ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿ ನಿರ್ಮಾಣ ಹಾಗೂ ಗೊಬ್ಬರ ಉತ್ಪಾದನೆ ತಾಂತ್ರಿಕತೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಕಾಯಕ ಬಂಧುಗಳಿಗೆ ತರಬೇತಿ ಆಯೋಜಿಸಿ ಆನಂತರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು, ಕ್ರಿಯಾ ಯೋಜನೆ ತಯಾರಿಸುವುದು, ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಶ್ರಮಿಸುವಂತೆ ಸೂಚನೆ ನೀಡಲಾಗಿದೆ.

ಬರುವ ಆಗಸ್ಟ್ 15 ರಂದು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ “ರೈತ ಬಂಧು ಅಭಿಯಾನಕ್ಕೆ” ಚಾಲನೆ ನೀಡಲಾಗುವುದು ಎಂದು ತಿಳಿಸಿದ ಅವರು, ನರೇಗಾ ಯೋಜನೆಯಡಿ ಎರಡು ಮಾದರಿಯ ಎರೆಹುಳು ಘಟಕದ ತೊಟ್ಟಿಯ ಅಂದಾಜು ಪಟ್ಟಿ ಹಾಗೂ ವಿನ್ಯಾಸವನ್ನು ಸಿದ್ದಪಡಿಸಿದ್ದು, 5.5*2.7*1.0 ಮೀಟರ್ ಅಳತೆಯ ಎರೆಹುಳು ಘಟಕಕ್ಕೆ 27,000 ರೂ. ಹಾಗೂ 3.6*2.7*1.0 ಮೀಟರ್ ಅಳತೆಯ ಘಟಕಕ್ಕೆ 21,000 ರೂ. ವೆಚ್ಚವಾಗಲಿದೆ. ಗ್ರಾಮೀಣ ಭಾಗದ ಕಪ್ಪು ಬಂಗಾರವೆಂದೇ ಕರೆಯಲ್ಪಡುವ ಎರೆಹುಳು ಗೊಬ್ಬರವು ಸ್ಥಿರವಾದ ಸಾವಯವ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳು ಪೂರೈಕೆಯಾಗುವುದಲ್ಲದೆ ಮಣ್ಣಿನ ಗುಣಮಟ್ಟ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸುತ್ತದೆ. ರೈತರು ಎರೆಹುಳು ಗೊಬ್ಬರವನ್ನು ಸ್ವಂತ ಉತ್ಪಾದನೆ ಮಾಡಿ ಉಪಯೋಗಿಸುವುದರಿಂದ ಶೇ.30ರಷ್ಟು ಉತ್ಪಾದನಾ ವೆಚ್ಚವನ್ನು ಕಡಿಮೆ ಗೊಳಿಸಬಹುದಾಗಿದೆ. ಅಷ್ಟೇ ಅಲ್ಲದೆ ಎರೆಹುಳು ಕೃಷಿ ಅಳವಡಿಕೆಯಿಂದ ಮಣ್ಣಿನ ರಚನೆ, ನೀರು ಹೀರುವ ಗುಣ, ಗಾಳಿಯಾಡುವ ಗುಣ ಮತ್ತು ಉಷ್ಣತೆಯನ್ನು ಸಮತೋಲನದಲ್ಲಿಡುವ ಗುಣ ಹೆಚ್ಚಿಸುವುದರಿಂದ ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳನ್ನು ಹೆಚ್ಚಿಸಲು ನರೇಗಾ ಯೋಜನೆಯಡಿ ಎರೆಹುಳು ಘಟಕವನ್ನು ನಿರ್ಮಿಸಿಕೊಳ್ಳಬೇಕು. ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿನ ಮಹಿಳಾ ಭಾಗವಹಿಸುವಿಕೆ ಕಡಿಮೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಕಾಯಕೋತ್ಸವ ಮನೆ ಮನೆ ಸಮೀಕ್ಷೆ ಕಾರ್ಯವು ಪ್ರಗತಿಯಲ್ಲಿದ್ದು, ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಆಗಮಿಸುವಂತೆ ಅವರು ಮನವಿ ಮಾಡಿದ್ದಾರಲ್ಲದೆ, ಹೆಚ್ಚಿನ ಮಾಹಿತಿಗಾಗಿ ಉಚಿತ ದೂರವಾಣಿ ಸಂಖ್ಯೆ: 1800-4258-666ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link