ತಿಪಟೂರು :
ಪಿಡಿಓ ಸಮೇತ ಸಿಬ್ಬಂದಿಗಳು ದಿನನಿತ್ಯ ತಡವಾಗಿ ಬಂದು ಬೇಗ ಹೋಗುತ್ತಾರೆಂದು ತಡಸೂರು ಗ್ರಾಪಂಯ ಸದಸ್ಯರು, ಗ್ರಾಮಸ್ಥರು ಗ್ರಾಪಂಗೆ ಬೀಗಹಾಕಿ ಪ್ರತಿಭಟಿಸಿದರು.
ತಡಸೂರು ಗ್ರಾಪಂನಲ್ಲಿ ಕೆಲವು ತಿಂಗಳುಗಳಿಂದ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಹೊಂಡ, ಉದಿ-ಬದು, ದನದ ಕೊಟ್ಟಿಗೆ ನಿರ್ಮಾಣ, ಸಸಿ ನೆಡುವ ಕಾರ್ಯಗಳನ್ನು ಮಾಡಿ ಸೂಕ್ತ ದಾಖಲೆಗಳನ್ನು ಫಲಾನುಭವಿ ರೈತರು ಗ್ರಾಪಂಗೆ ನೀಡಿದ್ದರು. ಪಿಡಿಓ ಮಮತಾ ಅವರು ಪ್ರತಿದಿನ ತಡವಾಗಿ ಕಚೇರಿಗೆ ಬರುತ್ತಿದ್ದು, ಕಾಮಗಾರಿಗಳ ಸ್ಥಳ ಪರೀಶೀಲನೆಗೆ ಸಮಯವಿಲ್ಲದೆ, ಬಿಲ್ ಮಾಡುತ್ತಿಲ್ಲ. ಗ್ರಾಪಂನ ಯೋಜನಾ ಅಭಿಯಂತರರು ಈ ಕುರಿತು ವರದಿ ಸಲ್ಲಿಸದೆ ಇರುವುದರಿಂದ ರೈತರಿಗೆ ಹಣ ಸಂದಾಯವಾಗಿಲ್ಲ. ಇತರೆ ಕಾಮಗಾರಿಗಳಿಗೆ ಮಾತ್ರ ಶೀಘ್ರ ಹಣ ಮಂಜೂರಾಗುತ್ತಿದ್ದು, ರೈತರಿಗೆ ಸಿಗಬೇಕಾದ ಸೌಕರ್ಯಗಳನ್ನು ನೀಡುತ್ತಿಲ್ಲ. ಅಲ್ಲದೇ ಕಾಮಗಾರಿಯನ್ನೆ ನಡೆಸದ ಎಷ್ಟೋ ಜನರಿಗೆ ಹಣ ಮಂಜೂರಾತಿ ಮಾಡಿದ್ದಾರೆ. ಗ್ರಾಪಂ ಆಡಳಿತ ಮುಖ್ಯಸ್ಥರಾದ ಪಿಡಿಓ ಅವರು ಪ್ರತಿದಿನ 11.30 ಕ್ಕೆ ಬಂದರೆ ಇನ್ನೂ ಸಿಬ್ಬಂದಿಗಳನ್ನು ಕೇಳಬೇಕೆ, ನರೇಗಾ ಯೋಜನೆಯಲ್ಲಿ ಭಾರಿ ಅವ್ಯವಹಾರಗಳಾಗಿದ್ದು, ಇವುಗಳ ವಿರುದ್ಧ ದಾಖಲೆ ಸಮೇತ ದೂರು ನೀಡುವುದಾಗಿ ಗ್ರಾ.ಪಂ ಸದಸ್ಯರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಇಓ ಭೇಟಿ :
ಗ್ರಾಪಂಗೆ ಬೀಗ ಹಾಕಿರುವ ವಿಷಯ ತಿಳಿದ ತಾಪಂ ಇಓ ಸುದರ್ಶನ್, ಗ್ರಾಮಾಂತರ ಠಾಣೆಯ ಎಸ್‍ಐ ಸ್ತಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಸಮಾಧಾನವಾಗಿ ಚರ್ಚಿಸಿ ಗ್ರಾಪಂನ ಬೀಗ ತೆರೆಯಲು ಅನುವು ಮಾಡಿಕೊಟ್ಟರು. ನಂತರ ಇಓ ಸುದರ್ಶನ್ ಸ್ಥಳೀಯರೊಂದಿಗೆ ಮಾತನಾಡಿ ಅವರ ಸಮಸ್ಯೆಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು, ನರೇಗಾ ಯೋಜನೆಯ ಫಲಾನುಭವಿಗಳಿಗೆ ಸಂದಾಯವಾಗಬೇಕಾದ ಪರಿಹಾರವನ್ನು ಕೂಡಲೇ ನೀಡುವಂತೆ ಅಭಿಯಂತರರಿಗೆ, ಪಿಡಿಓಗೆ ಸೂಚಿಸಿ ಸಮಸ್ಯೆಯಿದ್ದರೆ ತಾಪಂ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿ, ಈ ರೀತಿಯಲ್ಲಿ ಬೀಗ ಹಾಕುವುದು ಸರಿಯಲ್ಲ ಎಂದು ಗ್ರಾಪಂ ಸದಸ್ಯರಿಗೆ ತಿಳಿಸಿದರು.
ಸದಸ್ಯರ ವಿರುದ್ಧ ದೂರು : ಪಿಡಿಓ ಮಮತಾ ಅವರು ಗ್ರಾಪಂಗೆ ಬೀಗ ಹಾಕಿದ್ದಕ್ಕೆ ಸದಸ್ಯರ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ಗ್ರಾಪಂ ಸದಸ್ಯರು ಸಹ ಸಾಕ್ಷಿ ಸಮೇತ ಪಿಡಿಓ ಹಾಗೂ ಸಿಬ್ಬಂದಿಗಳು ತಡವಾಗಿ ಗ್ರಾಪಂ ಕಚೇರಿಗೆ ಬರುತ್ತಿರುವುದ್ದಕ್ಕೆ ದಾಖಲೆ ಸಮೇತ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಡಸೂರು ಗ್ರಾ.ಪಂ ಸದಸ್ಯರುಗಳಾದ ಲಿಂಗದಹಳ್ಳಿ ರಮೇಶ್, ಶಿವನಾಗ್, ಶೇಖರ್, ದರ್ಶನ್, ರೇಣುಕಮೂರ್ತಿ, ಅಶೋಕ್, ಮಾಜಿ ಅಧ್ಯಕ್ಷ ಷಡಕ್ಷರಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರುಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ