ತುಮಕೂರು :
ಪೊಲೀಸ್ ಠಾಣೆಗೆ ಬರುವವರದ್ದು ಒಬ್ಬರದ್ದು ಒಂದೊಂದು ರೀತಿಯ ಸಮಸ್ಯೆಯಿರುತ್ತದೆ. ನೊಂದು ಬಂದವರಿಗೆ ಸಾಂತ್ವಾನ ಹೇಳಿ ರಕ್ಷಣೆ ಒದಗಿಸುವುದು ಪೊಲೀಸರ ಮೂಲ ಕರ್ತವ್ಯವಾಗಿದೆ ಎಂದು ನೂತನ ಎಸ್ಪಿ ರಾಹುಲ್‍ಕುಮಾರ್ ಶಹಾಪುರವಾಡ್ ಹೇಳಿದರು.
ಪ್ರಜಾಪ್ರಗತಿ -ಪ್ರಗತಿ ವಾಹಿನಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿವಿಲ್ ಸಮಸ್ಯೆ ಪರಿಹರಿಸುವ ಯಾವುದೇ ಅಧಿಕಾರ ಪೊಲೀಸರಿಗೆ ಇಲ್ಲದಿದ್ದರೂ, ಇದೇ ಪ್ರಕರಣಗಳಲ್ಲಿ ವ್ಯಕ್ತಿಗಳ ಹಕ್ಕುಗಳು ಉಲ್ಲಂಘನೆಯಾದಾಗ ಪೊಲೀಸರು ಅದನ್ನು ತಡೆದು ರಕ್ಷಣೆ ಒದಗಿಸುವ ಕಾರ್ಯ ಮಾಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆಯೇ 2012, 2018ರಲ್ಲೂ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಸಂಬಂಧ ಠಾಣೆಗಳಿಗೆ ಬಂದವರನ್ನು ಅಲೆದಾಡಿಸದೆ ಅವರ ಕಷ್ಟವನ್ನು ಆಲಿಸಿ ಕಾನೂನು ಮಿತಿ, ಮಾನವೀಯ ನೆಲೆಯಲ್ಲಿ ಪರಿಹಾರ ಸೂಚಿಸುವ ಕಾರ್ಯಮಾಡಬೇಕೆಂದು ಜಿಲ್ಲೆಯ ಪೊಲೀಸರಿಗೆ ಸೂಚಿಸಿದ್ದೇನೆ. ಕಾನೂನು ಹಾಗೂ ಧರ್ಮಸೂತ್ರದಡಿ ಸರ್ವಜನರಿಗೂ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತೇನೆಂದರು.
ಗಾಂಜಾ ಮಾರಾಟ ಜಾಲಾ ಭೇದಿಸಲು ಹೊಸ ಟೀಂ ರಚನೆ:
ಸದಾಶಿವನಗರದ ಸಾರ್ವಜನಿಕರೊಬ್ಬರು ಕರೆ ಮಾಡಿ ಮರಳೂರು ಕೆರೆಯಲ್ಲಿ ಗಾಂಜಾ ಹೊಡೆದು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿರುವ ಕುರಿತು ಎಸ್ಪಿಯವರ ಗಮನ ಸೆಳೆದರು. ಪ್ರತಿಕ್ರಿಯಿಸಿದ ಎಸ್ಪಿ ಅವರು ಇದು ಮರಳೂರು ಕೆರೆ ಭಾಗದ ಸಮಸ್ಯೆ ಮಾತ್ರವಲ್ಲ. ಜಿಲ್ಲೆಯ ವಿವಿಧೆಡೆ ಇದೆ. ಗಾಂಜಾ ಮಾರಾಟದ ಸಕ್ರಿಯ ಜಾಲವನ್ನೇ ಸದೆಬಡಿಯಬೇಕಿದ್ದು, ಹಿಂದೆ ಸಹ ಅಂತಹ ಪ್ರಯತ್ನವಾಗಿದೆ. ಪರಿಣಾಮಕಾರಿಯಾಗಿ ಮಾಡಲು ಹೊಸ ತಂಡವನ್ನೇ ರಚಿಸುತ್ತಿರುವುದಾಗಿ ತಿಳಿಸಿದರು.
ತುರ್ತು ನೆರವಿಗೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ:
ತುರ್ತು ಸಂದರ್ಭದಲ್ಲಿ ನೆರವಿಗಾಗಿ ರಾಜ್ಯಾದ್ಯಂತ ಏಕರೂಪದ 112 ಸಂಖ್ಯೆಯ ಪೊಲೀಸ್ ಸಹಾಯವಾಣಿಯನ್ನು ಇಲಾಖೆ ಸ್ಥಾಪಿಸಿದ್ದು, ಕರೆ ಮಾಡಿದ 10-15 ನಿಮಿಷದಲ್ಲಿ ಪೊಲೀಸ್ 112 ವಾಹನ ಲೋಕೇಷನ್ ಸ್ಥಳಕ್ಕೆ ಧಾವಿಸಿ ಬರುತ್ತದೆ. ಯಾರೇ ಮಕ್ಕಳು ತಪ್ಪಿಸಿಕೊಂಡು ಬೇರೆಡೆಗೆ ಬಂದಿದ್ದರೂ ಅವರನ್ನು ಅವರಿರುವ ಸ್ಥಳಕ್ಕೆ ವಾಹನದಲ್ಲಿ ಬಿಡಲಾಗುತ್ತದೆ. ಘರ್ಷಣೆ ಜಗಳಗಳು ನಡೆಯುತ್ತಿದ್ದರೆ, ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸುವ ಕಾರ್ಯವನ್ನು ಪೊಲೀಸರು ಮಾಡಲಿದ್ದಾರೆ. ಆದರೆ ಸ್ಥಳದಲ್ಲೇ ಕೇಸ್ ದಾಖಲಿಸುವುದಿಲ್ಲ.ಠಾಣೆಗೆ ಬಂದ ಮೇಲೆ ವಿಚಾರಣೆ ಮಾಡಿಯೇ ಮೊಕದ್ದಮ್ಮೆ ದಾಖಲಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಅಕ್ರಮವಾಗಿ ಮದ್ಯ ಮಾರಾಟ ನಿಯಂತ್ರಣ ಅಬ್ಕಾರಿ ಜವಾಬ್ದಾರಿ:
ಐಡಿಹಳ್ಳಿ ಹೋಬಳಿ ಯರಗುಂಟೆಯಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರು ಬಂದು ವಾರ್ನ್ ಮಾಡಿ ಹೋಗುತ್ತಿದ್ದಾರೆ ವಿನಃ ಏನು ಪ್ರಯೋಜನವಾಗಿಲ್ಲ ಎಂದು ಲಕ್ಷ್ಮೀನಾರಾಯಣ್ ಎಂಬುವರು ಕರೆ ಮಾಡಿ ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಈ ಸಂಬಂಧ ಒಬ್ಬರನ್ನು ಬಂಧಿಸಿ ಕೇಸ್ ದಾಖಲಿಸಲಾಗಿದೆ ಎಂದರು. ಮಧುಗಿರಿ ಐಡಿಹಳ್ಳಿಯ ಜನಕಲೋಟಿಯಿಂದಲೇ ಅಕ್ರಮ ಮದ್ಯ ಮಾರಾಟದ ದೂರು ಕೇಳಿಬಂತು.ಉತ್ತರಿಸಿದ ಎಸ್ಪಿ ಅವರು ಮನೆಗಳಲ್ಲಿ, ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಯುವ ಪೂರ್ಣ ಜವಾಬ್ದಾರಿ ಅಬ್ಕಾರಿ ಇಲಾಖೆ ಮೇಲಿದೆ. ಪೊಲೀಸರು ಸಹ ನಿಯಂತ್ರಣಕ್ಕೆ ಪೂರಕ ಕ್ರಮ ವಹಿಸುತ್ತಿದ್ದಾರೆಂದರು. ಅಕ್ರಮ ಮದ್ಯ ನಿಯಂತ್ರಣಕ್ಕೆ ಅಬ್ಕಾರಿ ಇಲಾಖೆಗೆ ಸೂಚಿಸಲಾಗುವುದು ಎಂದರು.
ಹಂಪ್ಸ್ ಬದಲಾಗಿ ಬ್ಯಾರಿಕೇಡ್: ಹೆಬ್ಬೂರಿನಿಂದ-ಸಿಎಸ್‍ಪುರ ಕಡೆ ತೆರಳುವ ರಸ್ತೆಯ ತಿರುವಿನಲ್ಲಿ ಹಂಪ್ಸ್ ಇಲ್ಲದೆ ಕುಣಿಗಲ್ ಕಡೆಯಿಂದ ವೇಗವಾಗಿ ಬರುವ ವಾಹನಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಹಿಂದೆಯೇ ಗಮನಸೆಳೆದರೂ ಕ್ರಮವಾಗಿಲ್ಲ ಎಂದು ಹೆಬ್ಬೂರಿನ ಶಿವಕುಮಾರ್ ಅವರು ದೂರಿದರು. ಹಂಪ್ಸ್ ಹಾಕಲು ವಿಳಂಬವಾಗುವುದು. ಶೀಘ್ರದ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ಅಪಘಾತ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿಕಾಣಿಸಿ:
ಅಶೋಕನಗರದ ಹಿರಿಯ ನಾಗರಿಕರಾದ ನಾಗರಾಜು, ಗಂಗೋತ್ರಿ ನಗರದ ಅಮೃತ್ ಅವರು ಹಾಗೂ ಶಿವರಾಂ ಎಂಬವರು ಕರೆ ಮಾಡಿ ಬಿ.ಎಚ್.ರಸ್ತೆ, ಗಂಗೋತ್ರಿ ರಸ್ತೆ ಹಾಗೂ ಜನರಲ್ ಕರಿಯಪ್ಪ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದ್ದು, ಪಾದಚಾರಿ ರಸ್ತೆಗಳಲ್ಲಿ ಅಂಗಡಿಗಳು ತಲೆಎತ್ತಿವೆ. ಇದರಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.
ಪ್ರತಿಕ್ರಿಯಿಸಿದ ಎಸ್ಪಿ ಅವರು ಇದೊಂದು ಸಂಕೀರ್ಣ ಸಮಸ್ಯೆ. ಅಂಗಡಿಗಳ ಮುಂದೆ ಪಾರ್ಕಿಂಗ್‍ಗೆ ಜಾಗಗಳನ್ನು ಮೀಸಲಿರಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಪಾರ್ಕಿಂಗ್ ಸಮಸ್ಯೆಯ ಕಾರಣಕ್ಕೆ ಅಂಗಡಿಗಳನ್ನು ಎತ್ತಿಸಲು ಸಾಧ್ಯವಿಲ್ಲ. ಸ್ಥಳವನ್ನು ಪರಿಶೀಲಿಸಿ ಸಾರ್ವಜನಿಕರು, ವ್ಯಾಪಾರಸ್ಥರಿಗೂ ಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು ಎಂದು ಹೇಳಿ ಕರೆ ಮಾಡಿದವರಿಗೂ ತಮ್ಮ ಕಚೇರಿಗೆ ಬಂದು ಪರಿಹಾರ ಮಾರ್ಗೋಪಾಯಗಳ ಚರ್ಚೆ ಮಾಡುವಂತೆ ಸಲಹೆ ನೀಡಿದರು.
ಕೊರಟಗೆರೆಯ ಚಿಕ್ಕಪಾಳ್ಯದ ರೈತ ಸಂಘದ ಬಸವರಾಜು ಎಂಬುವರು ಕರೆ ಮಾಡಿ ಸರ್ವೆ ನಂಬರ್ 33ರ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಿರಪರಾಧಿಗಳ ಮೇಲೂ 307 ಕೇಸ್ ಬುಕ್ ಮಾಡಲಾಗಿದೆ ಎಂದು ದೂರಿದರು. ಘಟನೆ ಅರಿತಿದ್ದ ಎಸ್ಪಿ ಅವರು ಪ್ರತಿಕ್ರಿಯಿಸಿ ಮನೆಧ್ವಂಸಕ್ಕೆ ಸಂಬಂಧಿಸಿದಂತೆ ದೂರುದಾರರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಹೊರತು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿಲ್ಲ. ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದರೆ ಪರಿಶೀಲಿಸಲಾಗುವುದು ಎಂದರು.
ಸುಳ್ಳು ಅಟ್ರಾಸಿಟಿ ದಾಖಲಿಸಿದ್ದರೆ ಕ್ರಮವಾಗಲಿದೆ:
ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ರಕ್ಷಣೆ ಒದಗಿಸಲು ಅಟ್ರಾಸಿಟಿ ಕಾಯ್ದೆಯದ್ದು, ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಸುಳ್ಳಾಗಿ ಪ್ರಕರಣ ದಾಖಲಿಸಿದ್ದರೆ, ಪ್ರಕರಣದಾರರ ಮೇಲೆ ಕ್ರಮವಾಗಲಿದೆ ಎಂದು ತುರುವೇಕೆರೆಯ ಸುನೀಲ್‍ಕುಮಾರ್ ಎಂಬುವರ ದೂರಿಗೆ ಸಂಬಂಧಿಸಿದಂತೆ ಎಸ್ಪಿ ಸ್ಪಷ್ಟಪಡಿಸಿದರು. ಕಾಯ್ದೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಕಾರಣ ಮುಂದೊಡ್ಡಿ ಪ್ರಕರಣವನ್ನೇ ದಾಖಲಿಸದಿರಲು ಸಾಧ್ಯವಿಲ್ಲ. ವಿಚಾರಣೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತಿಲ್ಲ:
ಮಾಚನಹಳ್ಳಿ ಮುನಿರಾಜು ಎಂಬುವರು ಕರೆ ಮಾಡಿ ವೈಯಕ್ತಿಕದ್ವೇಷದಿಂದ ಆಸ್ತಿನಾಶ, ಹಲ್ಲೆ ಮಾಡುವವರ ವಿರುದ್ಧ ದೂರು ಕೊಟ್ಟರೂ ಕ್ರಮವಾಗುತ್ತಿಲ್ಲ ಎಂದರು. ಬೆಂಗಳೂರಿನ ರಾಜೇಶ್ ಎಂಬುವರು ಸಹ ಸರಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ ದೂರಿಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದಾಖಲದ ಪ್ರಕರಣದ ಫಾಲೋಅಪ್ ಬಗ್ಗೆ ಎಸ್ಪಿ ಗಮನ ಸೆಳೆದರು. ಗುಬ್ಬಿ ತಾಲೂಕು ಸಿ.ಎಸ್.ಪುರ ಶ್ರೀನಿವಾಸ್ ಎಂಬುವರು ಸಹ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದರೂ ಪೊಲೀಸರಿಂದ ರಕ್ಷಣೆ ಸಿಗುತ್ತಿಲ್ಲ ಎಂಬ ಅಂಶವನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ವೈಯಕ್ತಿಕ ದೂರುಗಳಿಗೆ ಸಂಬಂಧಿಸಿದಂತೆ ಅವರ ಮೊಬೈಲ್ ಸಂಖ್ಯೆ ದೂರವಾಣಿಯಲ್ಲೇ ಕೇಳಿ ದಾಖಲು ಮಾಡಿಕೊಂಡ ಎಸ್ಪಿ ಅವರು ಸಂಬಂಧಪಟ್ಟ ಠಾಣೆಗೆ ಕ್ರಮಕ್ಕೆ ಸೂಚಿಸುವುದಾಗಿ ಭರವಸೆ ನೀಡಿದರು.
112 ಸೇವೆಯ ಜೊತೆಗೆ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಸಿಬ್ಬಂದಿ ಲಭ್ಯತೆ ಆಧಾರದಲ್ಲಿ ನಿಯೋಜಿಸುತ್ತಿದ್ದು, ಲಾಕ್‍ಹೌಸ್ ಮಾನಿಟರಿಂಗ್ ಸಿಸ್ಟಂ ವ್ಯವಸ್ಥೆಯನ್ನು ತುಮಕೂರಿನ ಜನತೆ ಸದುಪಯೋಗಪಡಿಸಿಕೊಳ್ಳದಿರುವುದು ಮನೆಬಿಟ್ಟು ಹೊರ ಊರಿಗೆ ಹೋದ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಚೈನ್ ಸ್ನ್ಯಾಚಿಂಗ್ ಪ್ರಕರಣಗಳಲ್ಲೂ ಆರೋಪಿಗಳನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ ಎಂದರು.
ಕಣ್ತೆರೆಸುವ ಕಾರ್ಯಕ್ರಮ:
ಸಾರ್ವಜನಿಕರಿಗೂ, ಆಡಳಿತಗಾರರ ನಡುವಿನ ಸಂಪರ್ಕದ ವೇದಿಕೆಯೆನಿಸಿದ ಪ್ರಜಾಪ್ರಗತಿ-ಪ್ರಗತಿ ವಾಹಿನಿ ನೇರ ಫೋನ್ ಇನ್ ಕಾರ್ಯಕ್ರಮ ನಿಜಕ್ಕೂ ಕಣ್ತೆರೆಸುವಂತಹದ್ದಾಗಿದೆ. ನಿಜಕ್ಕೂ ಸಮಸ್ಯೆಯಿರುವವರೇ ಕರೆ ಮಾಡಿ ಅಹವಾಲು ತೋಡಿಕೊಂಡಿದ್ದು, ಸಂತಸ ತರಿಸಿದೆ. ಈ ಅವಕಾಶ ಕಲ್ಪಿಸಿದ ಸಂಪಾದಕರಾದ ಎಸ್.ನಾಗಣ್ಣ ಅವರ ತಂಡಕ್ಕೆ ಧನ್ಯವಾದ ಅರ್ಪಿಸುವೆ ಎಂದರು.
ಪೊಲೀಸ್ ಆಸ್ತಿಗಳನ್ನು ರಕ್ಷಿಸಿ, ವಸತಿಗೃಹಗಳಲ್ಲಿ ಮೂಲಸೌಕರ್ಯ ಕಲ್ಪಿಸಿ
ಸಾಮಾಜಿಕ ಕಾರ್ಯಕರ್ತ ಹಂದ್ರಾಳ್ ನಾಗಭೂಷಣ್ ಅವರು ಕರೆ ಮಾಡಿ ಪೊಲೀಸ್ ಇಲಾಖೆ, ಠಾಣೆಗೆ ಸಂಬಂಧಿಸಿದಂತೆ ಆಸ್ತಿಗಳು ಅತಿಕ್ರಮಣವಾಗುತ್ತಿದ್ದು ರಕ್ಷಿಸುವ ಕಾರ್ಯ ಆಗಬೇಕಿದೆ. ಜೊತೆಗೆ ಪೊಲೀಸ್ ವಸತಿ ಗೃಹಗಳಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಿದೆ ಎಂದರು. ಪ್ರತಿಕ್ರಿಯಿಸಿದ ಎಸ್ಪಿ ಅವರು ಹೆಬ್ಬೂರು ಠಾಣೆಗೆ ಸಂಬಂಧಿಸಿದ ಜಾಗವನ್ನು ಗ್ರಾಮ ಪಂಚಾಯ್ತಿಯವರೇ ನಕಲಿ ದಾಖಲೆ ಮೂಲಕ ತಮ್ಮ ಸುಪರ್ದಿಗೆ ಹಲವು ದಶಕಗಳ ಹಿಂದೆ ಪಡೆದಿರುವುದು ಬೆಳಕಿಗೆ ಬಂದಿದೆ. ವಾಪಸ್ಸಾತಿಗೆ ಡಿಸಿ, ಸಿಇಒ ಜೊತೆ ಚರ್ಚಿಸಿರುವುದಾಗಿ ತಿಳಿಸಿದರು. ಪೊಲೀಸ್ ಇಲಾಖೆ ಆಸ್ತಿಗಳ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದರು.
ಮಹಿಳಾ ದೌರ್ಜನ್ಯ; ಮನೆಗಳಿಗೆ ಪೊಲೀಸರ ಭೇಟಿಗೆ ಚಿಂತನೆ
ಕೌಟುಂಬಿಕ ಕಲಹ, ಮಹಿಳಾ ದೌರ್ಜನ್ಯ ಪ್ರಕರಣಗಳು ಠಾಣೆ ಮೆಟ್ಟಿಲೇರಿದ್ದು, ತಪ್ಪು ಮರುಕಳಿಸಬಾರದೆಂದು ಬುದ್ದಿವಾದ ಹೇಳಿ ಕಳುಹಿಸಿದ ಪ್ರಕರಣಗಳಲ್ಲಿ, ದೌರ್ಜನ್ಯಕ್ಕೊಳಗಾದವರಲ್ಲಿ ಆತ್ಮಸ್ಥೈರ್ಯ ತುಂಬಲು ಬೀಟ್ ಪೊಲೀಸರೇ ಅವರ ಮನೆಗೆ ತೆರಳಿ ವಿಚಾರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಹೊಸ ಚಿಂತನೆ ನಡೆಸಿರುವುದಾಗಿ ಎಸ್ಪಿ ರಾಹುಲ್‍ಕುಮಾರ್ ತಿಳಿಸಿದರು. ಪೊಲೀಸರು ಮನೆಗೆ ದಿಢೀರನೇ ಎಂಟ್ರಿ ಕೊಟ್ಟರೆ ಪದೇ ಪದೇ ದೌರ್ಜನ್ಯಕ್ಕೊಳಗಾಗುವುದು ತಪ್ಪುತ್ತದೆ. ತಪ್ಪೆಸಗುವವರಿಗೆ ಭಯ ಇರುತ್ತದೆ ಎಂದರು.
ಸೈಬರ್ ಕ್ರೈಂ ನಿಯಂತ್ರಣಕ್ಕೆ ವೈಯಕ್ತಿಕ ಆಸಕ್ತಿ ತಾಳಿರುವೆ : ಎಸ್ಪಿ
ಹೆಚ್ಚುತ್ತಿರುವ ಸೈಬರ್ ಕ್ರೈಂ ಅನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಅತ್ಯಾಧುನಿಕ ತಾಂತ್ರಿಕತೆಯ ಅರಿವನ್ನು ಮೊದಲು ನಾವು ಮೂಡಿಸಿಕೊಳ್ಳಬೇಕಿದೆ. ಎಸ್ಪಿಯಾಗಿ ಸೈಬರ್ ಕ್ರೈಂ ಆಳ ಜ್ಞಾನ ಹೊಂದುವುದು ಅವಶ್ಯವಾಗಿದ್ದು, ಜಿಲ್ಲಾ ಪೊಲೀಸರಿಗೆ ಈ ಸಂಬಂಧ ತಾಂತ್ರಿಕ ತರಬೇತಿ ಕೊಡಿಸಲು ಯೋಜನೆ ರೂಪಿಸಲಾಗಿದೆ. ಸೈಬರ್ ಠಾಣೆ ಸಿಬ್ಬಂದಿ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಲಾಗಿದೆ ಎಂದು ರಾಹುಲ್‍ಕುಮಾರ್ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ