ವಿವಿಧ ಬೇಡಿಕೆಗಳಿಗೆ ಆಗ್ರಹ : ಪಪಂ ಮುಖ್ಯಾಧಿಕಾರಿಗೆ ಗಡುವು

ಹುಳಿಯಾರು :

      ಹುಳಿಯಾರಿನ ಪೇಟೆ ಬೀದಿಯ ರಸ್ತೆ ಕಾಮಗಾರಿ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸೋಮವಾರದ ಒಳಗೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್‍ಕುಮಾರ್ ಅವರು ಪಪಂ ಮುಖ್ಯಾಧಿಕಾರಿಗೆ ಗಡುವು ನೀಡಿ ಎಚ್ಚರಿಕೆ ನೀಡಿದ ಘಟನೆ ಹುಳಿಯಾರಿನಲ್ಲಿ ಗುರುವಾರ ನಡೆದಿದೆ.

ಟೆಂಡರ್‍ಗೂ ಮೊದಲೇ ಗುದ್ದಲಿಪೂಜೆ :

      ಪೇಟೆ ಬೀದಿಯ ನಿವಾಸಿಗಳೊಂದಿಗೆ ಪಪಂ ಕಚೇರಿಗೆ ಆಗಮಿಸಿದ ಮಾಜಿ ಶಾಸಕರಾದ ಕೆ.ಎಸ್.ಕಿರಣ್‍ಕುಮಾರ್ ಅವರು ಪೇಟೆ ಬೀದಿಯ ರಸ್ತೆ ಕಾಮಗಾರಿಗೆ ಮಾರ್ಚ್‍ನಲ್ಲಿ ಟೆಂಡರ್ ಕರೆದಿದ್ದು ಏಪ್ರಿಲ್‍ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಇಲ್ಲಿಯವರೆಗೆ ಅಂದರೆ 4 ತಿಂಗಳಾದರೂ ಏಕೆ ಕಾಮಗಾರಿ ಆರಂಭಿಸಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ ಎಂದು ಮುಖ್ಯಾಧಿಕಾರಿ ವಿರುದ್ಧ ಖಾರವಾದರು.

ಪ್ರಚಾರಕ್ಕಾಗಿ ಕಾಮಗಾರಿ :

      2019ರಲ್ಲಿ ಪಂಚಾಯ್ತಿ ಅನುದಾನ 103 ಲಕ್ಷ ರೂ. ಬಂದಿದೆ. ಆನಂತರ 3 ಕೋಟಿ ರೂ. ವಿಶೇಷ ಅನುದಾನ ಬಂದಿದೆ. ಇಷ್ಟು ಅನುದಾನವನ್ನು ಒಂದುವರೆ ವರ್ಷವಾದರೂ ಖರ್ಚು ಮಾಡದೆ ಜನಪ್ರತಿನಿಧಿಯೊಬ್ಬರ ಪ್ರಚಾರಕ್ಕಾಗಿ ಎನ್ನುವಂತೆ 6 ತಿಂಗಳಿಗೊಂದು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದಿರಿ ಎಂದು ಆರೋಪಿಸಿದರಲ್ಲದೆ ಒಮ್ಮೆ 1 ಬೀದಿಯ ರಸ್ತೆ ಪೂರ್ತಿ ಮಾಡದೆ ಎಲ್ಲಾ ರಸ್ತೆಯನ್ನೂ ಅರ್ಧಂಬರ್ದ ಮಾಡಿದ್ದಿರಿ. ಪೇಟೆ ಬೀದಿಯನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷ್ಯಿಸಿದ್ದೀರಿ ಎಂದು ಆಪಾದಿಸಿದರು.

ಫುಟ್‍ಪಾತ್ ವ್ಯಾಪಾರಿಗಳ ಮೇಲೆ ದೌರ್ಜನ್ಯ :

      ಪಟ್ಟಣದ ರಾಜ್‍ಕುಮಾರ್ ರಸ್ತೆ ಸೇರಿದಂತೆ ಊರಿನ ಪ್ರಮುಖ ಬೀದಿಗಳಲ್ಲಿ ರಸ್ತೆ ಮತ್ತು ಚರಂಡಿ ಒತ್ತುವರಿ ಮಾಡಿದ್ದರೂ ತೆರವಿಗೆ ಮುಂದಾಗಿಲ್ಲ. ಅಂಗಡಿ ಮುಂಭಾಗ ರಸ್ತೆಗೆ ಶೀಟ್ ಹಾಕಿ ಅಂಗಡಿ ಐಟಂಗಳನ್ನು ರಸ್ತೆಗೆ ಜೋಡಿಸಿಕೊಳ್ಳುತ್ತಿದ್ದಾರೆ. ಅಂಗಡಿ ಮಾಲೀಕರು ಕಾರುಗಳನ್ನು ರಸ್ತೆಗೆ ನಿಲ್ಲಿಸುತ್ತಿದ್ದರೂ ತೆರವಿಗೆ ಮುಂದಾಗಿಲ್ಲ. ಬಡಪಾಯಿ ಫುಟ್‍ಪಾತ್ ವ್ಯಾಪಾರಿಗಳು ರಸ್ತೆಯ ದಡದಲ್ಲಿದ್ದರೂ ದೌರ್ಜನ್ಯದಿಂದ ಎತ್ತಂಗಡಿ ಮಾಡಿಸುವ ನಿಮ್ಮ ಪಕ್ಷಪಾತದ ಧೋರಣೆ ಖಂಡನೀಯ ಎಂದರು.

ಅನೈರ್ಮಲ್ಯದ ತಾಣವಾದ ಪಟ್ಟಣ :

      ಇಲ್ಲಿನ ವಠಾರದಲ್ಲಿ 3-4 ಕೈಪಂಪುಗಳು ಕೆಟ್ಟು 2-3 ವರ್ಷವಾಗಿದ್ದರೂ ದುರಸ್ತಿ ಮಾಡಿಸದೆ ನಿರ್ಲಕ್ಷ್ಯಿಸಿದ್ದೀರಿ. ಪರಿಣಾಮ ಇಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ಸ್ವಚ್ಚತೆ ಎನ್ನುವುದು ಕಾಣದಾಗಿದ್ದು, ಎಲ್ಲಿ ನೋಡಿದರೂ ಅನೈರ್ಮಲ್ಯ ತಾಣವಾಗಿದೆ. ಅಲ್ಲದೆ ರಾಯಗಾಲುವೆ ಒತ್ತುವರಿ ತೆರವು ಮಾಡದಿರುವುದರಿಂದ ಮಳೆಯ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯರುಗಳಾದ ಜಹೀರ್‍ಸಾಬ್, ಎಸ್‍ಆರ್‍ಎಸ್ ದಯಾನಂದ್, ಮಾಜಿ ಸದಸ್ಯ ಎಲ್.ಆರ್.ಚಂದ್ರಶೇಖರ್, ಎಚ್.ಎನ್.ರಾಘವೇಂದ್ರ, ಗುತ್ತಿಗೆದಾರ ಗಂಗಣ್ಣ, ಕಾಮನಬಿಲ್ಲು ಪೌಂಡೇಷನ್‍ನ ಚನ್ನಕೇಶವ, ಕೆಂಕೆರೆ ದೇವರಾಜು, ವಿವೇಕಾನಂದ, ನವೀನ್ ಸೇರಿದಂತೆ ಅನೇಕರು ಇದ್ದರು.

ದ್ವೇಷದ ರಾಜಕೀಯ ಒಳ್ಳೆಯದಲ್ಲ :

      ಪೇಟೆಬೀದಿಯಲ್ಲಿ ನನ್ನ ಮನೆಯಿದೆ ಎನ್ನುವ ಒಂದೇ ಉದ್ದೇಶದಿಂದ 4-5 ತಿಂಗಳಾದರೂ ರಸ್ತೆ ಕಾಮಗಾರಿ ಆರಂಭಿಸಿಲ್ಲ ಎಂಬುದು ತಿಳಿದಿದೆ. ಇದು ಧ್ವೇಷದ ರಾಜಕಾರಣ ಎಂಬುದು ನನಗೆ ತಿಳಿದಿದೆ. ಈ ದ್ವೇಷದ ರಾಜಕಾರಣ ಯಾವತ್ತೂ ಯಾರಿಗೂ ಒಳ್ಳೆಯದಲ್ಲ. ಅಧಿಕಾರ ಕೂಡ ಯಾರಿಗೂ ಶಾಶ್ವತವಲ್ಲ. ಅಲ್ಲದೆ ಮತ್ತೊಬ್ಬರನ್ನು ಕೆಣಕುವುದು ಸಹ ಸರಿಯಲ್ಲ ಎಂಬುದನ್ನು ಪೇಟೆ ಬೀದಿ ಕೆಲಸಕ್ಕೆ ತಡೆಯೊಡ್ಡಿರುವ ಜನಪ್ರತಿನಿಧಿಗೆ ಹೇಳಿ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಕೆ.ಎಸ್.ಕಿರಣ್‍ಕುಮಾರ್ ತಿಳಿಸಿದರು.

ಅಧಿಕಾರಿಗಳಿಂದ ಕೆಟ್ಟ ಹೆಸರು :

       ಪಪಂ ಎಂಜಿನಿಯರ್ ಮತ್ತು ಪರಿಸರ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕಚೇರಿಗೆ ಯಾವಾಗ ಬಂದರೂ ಮೀಟಿಂಗ್ ಹೋಗಿದ್ದಾರೆ ಎನ್ನುವ ಸಿದ್ಧ ಉತ್ತರ ಇರುತ್ತದೆ. ಇವರಿಬ್ಬರೂ ಪಟ್ಟಣದಲ್ಲಿ ಓಡಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಂದಾಗಬೇಕು. ಆದರೆ ಕಚೇರಿಗೆ ಬರುವುದೇ ಅಪರೂಪ, ಬಂದರೂ ಕಚೇರಿ ಬಿಟ್ಟು ಪಟ್ಟಣದಲ್ಲಿ ಓಡಾಡುವುದಿಲ್ಲ. ಹಾಗಾಗಿಯೇ ನಿಮಗೆ ಕೆಟ್ಟ ಹೆಸರು ಬರುತ್ತಿದೆ. ಇನ್ನಾದರೂ ಇವರಿಬ್ಬರಿಂದ ಕೆಲಸ ಮಾಡಿಸಲು ನಿಮ್ಮ ಅಧಿಕಾರ ಬಳಸಿ, ಸಾರ್ವಜನಿಕರ ಮೇಲೆ ಕೂಗಾಡಲು ಬಳಸಬೇಡಿ ಎಂದು ಮಂಜುನಾಥ್ ಅವರಿಗೆ ಕೆಎಸ್‍ಕೆ ಸಲಹೆ ನೀಡಿದರು.

ಗಡುವು ಮೀರದೆ ಕಾಮಗಾರಿ ಆರಂಭ :

      ಪೇಟೆ ಬೀದಿಯ ರಸ್ತೆ ಕಾಮಗಾರಿ ಆರಂಭಕ್ಕೆ ಸೋಮವಾರದವರೆವಿಗೂ ಕಾಲವಕಾಶ ಬೇಡ, ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ. ಇನ್ನು ರಸ್ತೆ ಒತ್ತುವರಿಯ ವಿಷಯವಾಗಿ ತೆರವುಗೊಳಿಸಲು ಈಗಾಗಲೇ ಅಂಗಡಿಯವರಿಗೆ ಸೂಚನೆ ನೀಡಿದ್ದೇನೆ. ಈಗ ಮತ್ತೆ ಖುದ್ದು ಹೋಗಿ ತೆರವು ಮಾಡಿಸುತ್ತೇನೆ. ರಾಯಗಾಲುವೆ ಒತ್ತುವರಿ ತೆರವಿಗೆ ಜೆಸಿಬಿ ಸಮೇತ ತೆರಳಿ ತೆರವು ಮಾಡಿಯೇ ತೀರುತ್ತೇನೆ. ವಠಾರದ ಕೈಪಂಪುಗಳಲ್ಲಿ ಇಂಜಿನಿಯರ್ ನೀರಿಲ್ಲ ಎಂದಿದ್ದ ಕಾರಣ ದುರಸ್ತಿಗೆ ಮುಂದಾಗಿಲ್ಲ. ಈಗ ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಾಧಿಕಾರಿ ಮಂಜುನಾಥ್ ಭರವಸೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link