ಕುಣಿಗಲ್ :
ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಯಡೆಯೂರು ಹೋಬಳಿಯ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಸಾಧ್ಯವಾಗಿರಲಿಲ್ಲ ಆದರೆ ನನ್ನ ಅವಧಿಯಲ್ಲಿ ತಾಲ್ಲೂಕಿನ 22 ಕೆÀರೆಗಳು ಶೇ.80 ರಷ್ಟು ತುಂಬಿದ್ದು, ಅದರಲ್ಲಿ ಕೆಲವು ಕೋಡಿ ಬೀಳುವ ಮೂಲಕ ಆ ಭಾಗದ ಜನರಲ್ಲಿ ಮಂದಹಾಸ ಮೂಡಿರುವುದು ನನಗೆ ಸಂತೋಷ ತಂದಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ರೈತರ ಅಭಿವೃದ್ಧಿಗೆ ನಿರಂತರ ಕಾರ್ಯಕ್ರಮ :
ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಿಂದ ಅಮೃತೂರು ಹೋಬಳಿಯ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಹೇಮಾವತಿ ಎಡದಂಡೆಯ ಮೂಲಕ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ನಿಗದಿಯಂತೆ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ ಆದರೂ ರೈತರ ಅಭಿವೃದ್ಧಿಗೆ ನಿರಂತರವಾಗಿ ಇನ್ನೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಯಾವುದೇ ವಿರೋಧಿಗಳಿಗೂ ಮಣಿಯದೆ ಉತ್ತಮ ಕೆಲಸ ಮಾಡುವ ಮೂಲಕ ಅವರಿಗೆ ಉತ್ತರ ಕೊಡಲಾಗುತ್ತದೆ ಎಂದರು.
ಮಂಗಳ ಜಲಾಶಕ್ಕೆ ನೀರು :
ತಾಲ್ಲೂಕಿನ ನೀರಿನ ವಿಚಾರದಲ್ಲಿ ಲಿಂಕ್ ಕೆನಾಲ್ ಯೋಜನೆಯನ್ನು ಶಕ್ತಿಮೀರಿ ಅನುಷ್ಠಾನಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಕ್ಕೆ ನೀರು ಹರಿಸಲು ಏತ ನೀರಾವರಿ ಯೋಜನೆಗೆ 5 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಐಸಿಸಿ ಸಭೆಯಲ್ಲಿ ಸಂಸದರಾದ ಡಿ.ಕೆ.ಸುರೇಶ್ ಮತ್ತು ನಾನು ಒತ್ತಡ ತಂದು ಸರ್ಕಾರ ತಡೆ ಹಿಡಿದಿರುವ ಯೋಜನೆಯ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.
ಮಾರ್ಕೋನಹಳ್ಳಿ ಡ್ಯಾಂಗೆ 1 ಟಿಎಂಸಿ ನೀರು :
ನಾಗಮಂಗಲದ ಹೇಮಾವತಿ ನಾಲೆಯಿಂದ ಮಾರ್ಕೋನಹಳ್ಳಿ ಜಲಾಶಯಕ್ಕೆ ಒಂದು ಟಿಎಂಸಿ ನೀರು ಹರಿಯಲು ನಾಗಮಂಗಲ ಬ್ರಾಂಚ್ ಕೆನಾಲ್ನಿಂದ ಕುಣಿಗಲ್ ಮಾರ್ಕೋನಹಳ್ಳಿ ಜಲಾಶಯಕ್ಕೆ ಫೀಡರ್ ಕೆನಾಲ್ ಮಾಡಿಸಲು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ನಂಜೇಗೌಡ, ಹರೀಶ್, ಗೋವಿಂದ್ರಾಜ್, ಚೇತನ್ಕುಮಾರ್, ಹೇಮಾವತಿ ನಾಲಾ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯರಾಮಯ್ಯ, ಸಹಾಯಕ ಎಂಜಿನಿಯರ್ ಗೋವಿಂದರಾಜು, ವೀಣಾ ಮತ್ತು ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಸಂಚಾರಿ ಜನ ಸಂಪರ್ಕ ಸಭೆ :
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಪಿಡಿಒ, ಕಂದಾಯ ಅಧಿಕಾರಿಗಳು ಸೇರಿದಂತೆ ಇಲಾಖಾವಾರು ಅಧಿಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಸಂಚಾರಿ ಜನ ಸಂಪರ್ಕ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳನ್ನು ಅವರ ಹಳ್ಳಿಗಳಲ್ಲಿ ಬಗೆಹರಿಸುವ ವಿನೂತನ ಕಾರ್ಯಕ್ರಮವನ್ನು ಇಂದು ಕೆ.ಎಚ್ ಹೊನ್ನಮಾಚನಹಳ್ಳಿ ಇಂದ ಆರಂಭಿಸಲಾಗಿದೆ ನಂತರದ ದಿನಗಳಲ್ಲಿ ಎಲ್ಲಾ ಹಳ್ಳಿಗಳಲ್ಲೂ ಈ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದರು.
ಸುಮಾರು 2 ವರ್ಷದಿಂದ ನಾಗಮಂಗಲ ಕುಡಿಯುವ ನೀರಿನ ಯೋಜನೆಯನ್ನು ತಡೆ ಹಿಡಿದಿದ್ದೆ, ಆದರೆ ಕುಡಿಯುವ ಉದ್ದೇಶಕ್ಕೆ ನಾಗಮಂಗಲಕ್ಕೆ 150 ಎಂಸಿಎಫ್ಟಿ ಹಾಗೂ ಮಾರ್ಕೋನಹಳ್ಳಿಗೆ 850 ಎಂಸಿಎಫ್ಟಿ ನೀರು ಹಂಚಿಕೆ ಆಗಿದೆ.
-ಡಾ.ಹೆಚ್.ಡಿ.ರಂಗನಾಥ್, ಶಾಸಕರು, ಕುಣಿಗಲ್ ಕ್ಷೇತ್ರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ