ಮಧುಗಿರಿ :
ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಅರೆಬರೆಯಾಗಿದ್ದು, ಗುಂಡಿ ಮುಚ್ಚುವ ಕೆಲಸವನ್ನು ಆರಂಭಿಸಲಾಗಿದೆ.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ, ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಸಮಪರ್ಕವಾಗಿ ನಡೆಯುತ್ತಿಲ್ಲ, ಎಲ್ಲಾ ಕಡೆ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ವಾಹನ ಸವಾರರಿಗೆ ಭಾರಿ ತೊಂದರೆ ಉಂಟಾಗುತ್ತಿದೆ. ಗುಣಮಟ್ಟದ ಕಾಮಗಾರಿ ಮಾಡಿ ಇಲ್ಲವಾದರೆ ಇದಕ್ಕೆ ಸಂಬಂಧಪಟ್ಟ ಅಧ್ಯಕ್ಷರನ್ನು ಕರೆಸಿ ಪರಿಶೀಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಯುಜಿಡಿ ಕಾಮಗಾರಿ ಕಳಪೆಯಾಗಿದೆ ಎಂದು ಪತ್ರಕರ್ತರು ಕೆ.ಎನ್.ರಾಜಣ್ಣನವರ ಗಮನ ಸೆಳೆದಾಗ ಈ ಮಾತನ್ನು ಹೇಳಿದ್ದರು. ಇದು 49 ಕೋಟಿ ರೂ. ವೆಚ್ಚದ ಕಾಮಗಾರಿ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಯುಜಿಡಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಆಗದಂತೆ ಮತ್ತು ಮುಖ್ಯ ರಸ್ತೆಗಳಲ್ಲಿ ವಾಹನಗಳು ಸಿಲುಕದಂತೆ ರಸ್ತೆಯನ್ನು ಸಿದ್ದ ಮಾಡಬೇಕು ಎಂದು ತಿಳಿಸಿದರು.
ಎಂ.ಎನ್.ಕೆ ಸಮುದಾಯ ಭವನದ ಮುಂಭಾಗ ಗುಂಡಿ ಬಿದ್ದಿದ್ದನ್ನು ಮಾಜಿ ಶಾಸಕರು ಗಮನಿಸಿ, ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಒಂದು ವಾರದೊಳಗೆ ರಿಪೇರಿ ಕೆಲಸ ಮಾಡುವಂತೆ ತಾಕೀತು ಮಾಡಿದ್ದರು.
ಈಗ ಮಳೆಗಾಲವಾಗಿರುವುದರಿಂದ ಮಧುಗಿರಿ ಪಟ್ಟಣದ ತುಂಬೆಲ್ಲಾ ಗುಂಡಿಗಳದ್ದೆ ಕಾರುಬಾರಾಗಿದೆ. ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಹರಡಿಕೊಂಡಿರುವುದರಿಂದ ವಾಹನ ಸವಾರರು ಜೀವ ಭಯದಿಂದಲೆ ಸಂಚರಿಸಬೇಕಾಗಿದೆ. ಕೆ.ಎನ್. ರಾಜಣ್ಣನವರ ಪತ್ರಿಕಾ ಹೇಳಿಕೆಯಿಂದ ಕಾಮಗಾರಿ ಪುನರಾರಂಭಗೊಂಡಿದ್ದು, ಇನ್ನಾದರೂ ಸುಗಮ ಸಂಚಾರಕ್ಕೆ ಅನುವಾಗಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
