ತುರುವೇಕೆರೆ :
ಸಾರ್ವಜನಿಕರ ಬಹುದಿನಗಳ ಕನಸಾಗಿದ್ದ ದಬ್ಬೇಘಟ್ಟ ರಸ್ತೆಯು ಅನೇಕ ಏಳು ಬೀಳುಗಳೊಂದಿಗೆ ಅಗಲೀಕರಣಗೊಳ್ಳುತ್ತಿದ್ದು, ರಸ್ತೆ ಬದಿಯ ವ್ಯಾಪಾರವನ್ನೆ ನಂಬಿ ಜೀವನ ನಡೆಸುತ್ತಿದ್ದ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಶಾಸಕರ ಮಧ್ಯಸ್ಥಿಕೆಯಲ್ಲಿ ನಿಯಮ ಉಲ್ಲಂಘನೆ :
ದಬ್ಬೇಘಟ್ಟ ರಸ್ತೆಯಲ್ಲಿ ಹಲವಾರು ಸರ್ಕಾರಿ ಇಲಾಖೆಗಳು, ಶಾಲಾ-ಕಾಲೇಜುಗಳು, ಕೆಎಸ್‍ಆರ್‍ಟಿಸಿ ಡಿಪೋ, ಬಸ್ ನಿಲ್ದಾಣ, ಅಗ್ನಿಶಾಮಕ ಠಾಣೆ, ಬ್ಯಾಂಕುಗಳಿದ್ದು ಜನರಿಂದ ಸದಾ ಗಿಜಿಗುಟ್ಟುತ್ತಿದ್ದ ಈ ರಸ್ತೆಯಲ್ಲಿ ವಾಹನ ಸಂಚಾರವಿರಲೀ, ಜನರ ಓಡಾಟಕ್ಕೂ ತುಂಬಾ ತೊಂದರೆಯಾಗಿತ್ತು. ಶಾಲಾ ಮಕ್ಕಳು ಜೀವ ಭಯದಿಂದ ನಡೆದು ಹೋಗಬೇಕಾಗಿತ್ತು. ವಾಸ್ತವವಾಗಿ ರಸ್ತೆ ಅಗಲೀಕರಣ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಯಲ್ಲಿ ಸುಮಾರು 50 ಅಡಿ ತೆರವುಗೊಳಿಸಬೇಕೆಂಬ ನಿಯಮವಿದ್ದರೂ ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಮಾಲೀಕರ ಮನವಿಗೆ ಮಣಿದು ಶಾಸಕರ ಮಧ್ಯಸ್ಥಿಕೆಯಲ್ಲಿ ರಸ್ತೆಯ ಮಧ್ಯಭಾಗದಿಂದ 35 ಅಡಿವರೆಗೂ ರಸ್ತೆ ವಿಸ್ತೀರ್ಣ ಮಾಡುವ ನಿರ್ಣಯಕ್ಕೆ ಕೊನೆ ಹಂತದಲ್ಲಿ ಬರಲಾಯಿತು.
ತೆರವು ಮಾಡಲು ಮೀನಾ-ಮೇಷ :
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆಯ ಅಗಲೀಕರಣಕ್ಕೆ ಈಗಾಗಲೇ ಚಾಲನೆ ನೀಡಿದ್ದು, ರಸ್ತೆಯ ಮಧ್ಯಭಾಗದಿಂದ 35 ಅಡಿ ವಿಸ್ತೀರ್ಣದಲ್ಲಿ ದಬ್ಬೇಘಟ್ಟ ರಸ್ತೆಯ ಎರಡು ಭಾಗಗಳಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಸಾಗಿದೆ. ರಸ್ತೆಯ ಮಧ್ಯಭಾಗದಿಂದ 50 ಅಡಿಗೆ ಬದಲಾಗಿ 35 ಅಡಿಗೆ ಎಲ್ಲರೂ ಒಪ್ಪಿಗೆ ಕೊಟ್ಟಿದ್ದರೂ ಸಹ ಇನ್ನೂ ಕೆಲವು ಮಂದಿ ತೆರವು ಮಾಡುವಲ್ಲಿ ಮೀನಾ-ಮೇಷ ಎಣಿಸುತ್ತಿರುವುದು ಇದೀಗ ಕಾಮಗಾರಿ ನಿಧಾನವಾಗುತ್ತಿದ್ದು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕಾಮಗಾರಿ ಪೂರ್ಣಗೊಳ್ಳದೆ, ಚರಂಡಿ ಹಾಗೂ ವಿದ್ಯುತ್ ಕಾಮಗಾರಿಗೆ ಧಕ್ಕೆಯುಂಟಾಗಿದೆ. ರಸ್ತೆ ಕಾಮಗಾರಿ ವಿಳಂಬದಿಂದ ಅಂಗಡಿ ಮಾಲೀಕರುಗಳಿಗೆ ಹಾಗೂ ನಾಗರಿಕರಿಗೆ ಮೂಲಭೂತ ಸೌಲಭ್ಯವಿಲ್ಲದೆ ವಹಿವಾಟು ನಡೆಸಲು ತುಂಬಾ ತೊಂದರೆ ಪಡುವಂತಾಗಿದೆ.
ವಿದ್ಯುತ್ ಕಡಿತದಿಂದ ವಹಿವಾಟು ಸ್ಥಗಿತ: ರಸ್ತೆ ಅಗಲೀಕರಣ ಆಗುತ್ತಿರುವುದರಿಂದ ಬೆಸ್ಕಾಂನವರು ರಸ್ತೆ ಬದಿಯಿರುವ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಕಾಮಗಾರಿ ಕೈಗೊಂಡಿದ್ದು, ಸೆ.1-10 ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5:30 ರ ವರೆಗೆ ವಿದ್ಯುತ್ ನಿಲುಗಡೆ ಮಾಡಿರುವುದಾಗಿ ಆದೇಶ ನೀಡಿರುವುದರಿಂದ ವಿದ್ಯುತ್ತನ್ನೆ ನಂಬಿ ವ್ಯವಹಾರ ನಡೆಸುವ ಎಲೆಕ್ಟ್ರಿಕಲ್ಸ್, ಜೆರಾಕ್ಸ್, ತಂಪು ಪಾನೀಯ ಮುಂತಾದ ಅಂಗಡಿ ಮಾಲೀಕರುಗಳಿಗೆ ತಲೆನೋವಾಗಿ ಪರಿಣಮಿಸಿದೆ. ಶೇ.80 ರಷ್ಟು ಅಂಗಡಿಗಳು ವಿದ್ಯುತ್ ಇಲ್ಲದೆ ಯಾವುದೇ ವ್ಯವಹಾರ ನಡೆಸಲು ಸಾಧ್ಯವಾಗದೆ ಚಡಪಡಿಸುವಂತಾಗಿದೆ.
ಚರಂಡಿ ನಿರ್ಮಾಣಕ್ಕೆ ಅಡ್ಡಿ :
ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಾಣಕ್ಕೆ ಕಾಲುವೆ ತೆಗೆದಿರುವುದರಿಂದ ಅಂಗಡಿಗಳಿಗೆ ಗ್ರಾಹಕರು ತೆರಳಲು ಸಾಧ್ಯವಾಗುತ್ತಿಲ್ಲ. ಕಾರಣ ರಸ್ತೆಯ ಎಡ ಭಾಗದಲ್ಲಿ ಕೆಲವು ಕಟ್ಟಡಗಳು ತೆರವುಗೊಳಿಸದಿರುವುದರಿಂದ ಈಗಾಗಲೇ ತೆರವು ಗೊಳಿಸಿರುವ ಕೆಲವು ಅಂಗಡಿಯ ಮುಂಭಾಗದಲ್ಲಿ ಕೇವಲ ಚರಂಡಿ ಮಾತ್ರ ತೆಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಚರಂಡಿಯಲ್ಲಿ ಮಂಡಿ ಉದ್ದ ಮಳೆ ನೀರು ನಿಂತು ಅನೈರ್ಮಲ್ಯದ ಜೊತೆಗೆ ಗ್ರಾಹಕರು ಚರಂಡಿ ದಾಟಿ ಹೋಗಲು ಸಾಧ್ಯವಾಗದೆ ವ್ಯಾಪಾರ-ವಹಿವಾಟುಗಳು ಕುಂಠಿತಗೊಂಡಿವೆ ಎಂಬುದು ವ್ಯಾಪಾರಸ್ಥರ ಅಳಲಾಗಿದೆ.
ರಸ್ತೆಯಲ್ಲಿ ಜನ ದಟ್ಟಣೆ :
ದಬ್ಬೇಘಟ್ಟ ರಸ್ತೆಯ ಎರಡೂ ಭಾಗದಲ್ಲಿ ಚರಂಡಿ ತೆಗೆದಿರುವುದರಿಂದ ಚರಂಡಿ ಮುಂಭಾಗದ ರಸ್ತೆಯಲ್ಲಿಯೇ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದು, ಈಗ ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. ಜನರು ರಸ್ತೆ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದರಿಂದ ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲಿ ನಿಂತು ಸರದಿಯಲ್ಲಿ ಚಲಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾರ್ಯವು ಅಂತೂ ಇಂತೂ ಕಾರ್ಯರೂಪಕ್ಕೆ ಬರುತ್ತಿದ್ದು, ಈ ಎಲ್ಲಾ ಸಮಸ್ಯೆಗಳ ನಡುವೆ ಅಧಿಕಾರಿಗಳು ಯಾರ ಒತ್ತಡಕ್ಕೂ ಜಗ್ಗದೇ ರಸ್ತೆ ನಿರ್ಮಾಣ ಮಾಡುವುದು ಅಗತ್ಯವಾಗಿದೆಯಲ್ಲದೆ ಸಾರ್ವಜನಿಕರ ಹಿತದೃಷ್ಟಿಯಿಂದಲೂ ಸಹ ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳನ್ನು ಬೇಗ ತೆರವುಗೊಳಿಸಿದರೇ ರಸ್ತೆ ಅಗಲೀಕರಣ ಕಾರ್ಯ ಶೀಘ್ರ ಮುಗಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬುದು ಸ್ಥಳೀಯ ನಾಗರಿಕರ ಆಶಯವಾಗಿದೆ.
ನಮ್ಮ ಅಂಗಡಿ ಮುಂಭಾಗ ಆಳುದ್ದ ಚರಂಡಿ ತೆಗೆದು ತಿಂಗಳಾದರೂ ಚರಂಡಿಗೆ ಸಿಮೆಂಟ್ ಕಾಮಗಾರಿ ನಡೆದಿಲ್ಲ. ಮಳೆ ನೀರು ಚರಂಡಿಯಲ್ಲಿ ನಿಂತು ಮಲಿನಗೊಂಡು ಸೊಳ್ಳೆಗಳ ತಾಣವಾಗಿದೆ. ಅದೆಷ್ಟೋ ಗ್ರಾಹಕರು ಚರಂಡಿ ದಾಟುವ ಸಂದರ್ಭದಲ್ಲಿ ಚರಂಡಿಗೆ ಜಾರಿರುವುದು ಉಂಟು. ಅಲ್ಲದೆ ಅನೈರ್ಮಲ್ಯದಿಂದ ಕೂಡಿದ ಇಂತಹ ಸ್ಥಳದಲ್ಲಿರುವ ನಮ್ಮಗಳಿಗೆ ರೋಗ ರುಜಿನ ಬಂದರೇ ಯಶರು ಹೊಣೆ? ಮೊದಲು ರಸ್ತೆ ಬದಿಯ ಕಟ್ಟಡಗಳನ್ನು ತೆರವುಗೊಳಿಸಿ ನಂತರ ಚರಂಡಿ ಕಾಮಗಾರಿ ಪ್ರಾರಂಭಿಸಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ
-ನಾಗರಾಜು, ಸೆಲೂನ್ ಮಾಲೀಕ ಹಾಗೂ ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷರು
-ಮಲ್ಲಿಕಾರ್ಜುನ ದುಂಡ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
