ತುಮಕೂರು :
2022ರಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲು ತಯಾರಿ ನಡೆಸಿದ್ದು,
ಈ ಮೂಲಕ ರಾಜ್ಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 2010-11ರಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಿದ್ದು, ಇದೇ ಮಾದರಿಯಲ್ಲಿ 2022 ರಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಸುವ ಸಂಬಂಧ ಸದ್ಯದಲ್ಲೇ ದಿನಾಂಕ ನಿಗದಿಗೊಳಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಠಿಸಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದ ಸಚಿವರು ನುಡಿದರು.
ಈಗಾಗಲೇ ತಲೆಯೆತ್ತಿರುವ ಫುಡ್‍ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕೆಗಳಿಗೂ ಭೇಟಿ ನೀಡಿದ ಸಚಿವರು ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೆಐಎಡಿಬಿ ಸಿಇಓ ಡಾ.ಶಿವಶಂಕರ್, ಮುಖ್ಯ ಎಂಜಿನಿಯರ್ ಬಿ.ಕೆ.ಪವಿತ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಸುನಿಲ್, ವಿಶೇಷ ಜಿಲ್ಲಾಧಿಕಾರಿ ಭಂಡಾರಿ, ವಿಶೇಷ ಭೂಸ್ವಾಧೀನಾಧಿಕಾರಿ ತಬಸ್ಸಮ್ ಜಹೇರಾ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಬಿ. ನಾಗೇಶ್, ಫುಡ್‍ಪಾರ್ಕ್ ಅಧಿಕಾರಿ ಕರಣ್ ಕೇಟ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವಕ್ಕೆ ಮಾದರಿಯಾಗಿ ಅಭಿವೃದ್ಧಿಪಡಿಸಿ :
ಕೆಐಎಡಿಬಿ ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ನಿರಾಣಿ, ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಿದೆ. ಇದು ಸಮರ್ಪಕವಾಗಿ ಬಳಕೆಯಾಗಬೇಕು. ಈ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಯಾವುದೇ ರೀತಿಯ ಮೂಲಭೂತ ಸೌಕರ್ಯದ ಕೊರತೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಮೂಲಕ ಇಡೀ ವಿಶ್ವದಲ್ಲೇ ವಸಂತಾ ನರಸಾಪುರ ಕೈಗಾರಿಕಾ ಪ್ರದೇಶ ಮಾದರಿಯಾಗಿರಬೇಕು ಎಂದು ಸೂಚಿಸಿದರು.
ಡ್ ಪಾರ್ಕ್‍ನಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗ ಸಿಗಬೇಕು
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಸುಮಾರು 105 ಎಕರೆಯಲ್ಲಿರುವ ಫುಡ್‍ಪಾರ್ಕ್ ಅತ್ಯುತ್ತಮ ಮಾದರಿಯಲ್ಲಿದೆ. ಇಲ್ಲಿ ಸಾವಿರಾರು ಕೋಟಿ ಹೂಡಿಕೆಯಾಗುತ್ತಿದೆ. ಇದು ರಾಜ್ಯದಲ್ಲೇ ಮೊದಲನೇ ಫುಡ್‍ಪಾರ್ಕ್ ಆಗಿದೆ. ಈ ಫುಡ್‍ಪಾರ್ಕ್‍ನಲ್ಲಿ ವಿವಿಧ ರೀತಿಯಲ್ಲಿ ಆಹಾರ ಪದಾರ್ಥಗಳ ಸಂರಕ್ಷಣೆ ಮಾಡಲಾಗುತ್ತಿದ್ದು, ಶೇ.80ಕ್ಕಿಂತ ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಉದ್ದೇಶವಿದೆ.
-ಮುರುಗೇಶ್ ನಿರಾಣಿ, ಕೈಗಾರಿಕಾ ಸಚಿವ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ