ಸಚಿವರ ಸೂಚನೆ ಮೇರೆಗೆ ಆಸ್ಪತ್ರೆ ನಿರ್ಮಾಣದ ಸ್ಥಳ ಪರಿಶೀಲನೆ

 ಹುಳಿಯಾರು: 

     ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸೂಚನೆ ಮೇರೆಗೆ ಹುಳಿಯಾರಿನಲ್ಲಿ ನೂತನ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಸಲುವಾಗಿ ಗುರುವಾರ ಸೂಕ್ತ ಸ್ಥಳ ಪರಿಶೀಲನಾ ಕಾರ್ಯ ನಡೆಯಿತು.

      ಆಸ್ಪತ್ರೆ ಮೇಲ್ದರ್ಜೆಗೇರಿಸಿ 100 ಹಾಸಿಗೆಯ ದೊಡ್ಡ ಆಸ್ಪತ್ರೆ ನಿರ್ಮಿಸಲು ಸಚಿವರು ಉದ್ದೇಶಿಸಿರುವುದರಿಂದ ಹಾಲಿ ಇರುವ ಆಸ್ಪತ್ರೆ ಜಾಗ ತೀರಾ ಕಿರಿದಾಗಿದೆ ಎನ್ನುವ ಕಾರಣದಿಂದ ಡಿಎಚ್‍ಒ ನಾಗೇಂದ್ರಪ್ಪ ಅವರ ನೇತೃತ್ವದಲ್ಲಿ ಯಳನಾಡು ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗ, ಕೆಂಕೆರೆ ರಸ್ತೆಯ ಮುಕ್ತಿಧಾಮದ ಸಮೀಪ ಹಾಗೂ ಕಂಪನಹಳ್ಳಿ ಸಮೀಪದ ಸರ್ಕಾರಿ ಜಾಗವನ್ನು ವೀಕ್ಷಿಸಿ ಲಭ್ಯವಿರುವ ಭೂಮಿಯ ವಿಸ್ತೀರ್ಣದ ಮಾಹಿತಿಗಳನ್ನು ಸಂಗ್ರಹಿಸಿದರು.

      ಮುಕ್ತಿಧಾಮದ ಬಳಿ ಕೇವಲ 2 ಎಕರೆ ಮಾತ್ರ ಸರ್ಕಾರಿ ಜಾಗವಿರುವ ಕಾರಣದಿಂದ ಈ ಸ್ಥಳವನ್ನು ಕೈ ಬಿಡಲಾಯಿತು. ಯಳನಾಡು ರಸ್ತೆಯ ಪೆಟ್ರೋಲ್ ಬಂಕ್ ಬಳಿ 15 ಎಕರೆಗೂ ಹೆಚ್ಚು ಸರ್ಕಾರಿ ಜಾಗವಿದೆಯಾದರೂ ಕೆಲವರು ಟಿಟಿ ಕಟ್ಟಿ ಸಾಗುವಳಿ ಮಾಡುತ್ತಿದ್ದಾರಲ್ಲದೆ ಇಲ್ಲಿಯೇ ಯಳನಾಡು ಪಂಚಾಯ್ತಿಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವುದರಿಂದ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳವಲ್ಲ ಎನ್ನುವ ಅಭಿಪ್ರಾಯಕ್ಕೆ ಬರಲಾಯಿತು.

     ಕೊನೆಗೆ ಕಂಪನಹಳ್ಳಿ ಸಮೀಪದ ಗೌಡಗೆರೆ ಸರ್ವೆ ನಂಬರ್ 22 ರಲ್ಲಿ ಪರಿಶೀಲನೆ ಮಾಡಲಾಯಿತು. ಇಲ್ಲಿ 35 ಎಕರೆ ಸರ್ಕಾರಿ ಜಾಗವಿದೆಯಲ್ಲದೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಈ ಭೂಮಿಯಲ್ಲಿ ಪ್ರಸ್ತುತ ಯಾರೊಬ್ಬರೂ ಸಾಗುವಳಿ ಮಾಡದೆ ಖಾಲಿಯಿದ್ದು ಯಾವುದೇ ತಂಟೆತಕರಾರು ಇಲ್ಲದೆ ಆಸ್ಪತ್ರೆ ನಿರ್ಮಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಅಗ್ನಿಶಾಮಕ ಠಾಣೆ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳ ತಂಡ ವ್ಯಕ್ತಪಡಿಸಿತು.

      ಈ ಸಂದರ್ಭದಲ್ಲಿ ಡಿಎಚ್‍ಒ ನಾಗೇಂದ್ರಪ್ಪ ಅವರು ಮಾತನಾಡಿ ಶೀಘ್ರದಲ್ಲೇ ತಹಸೀಲ್ದಾರ್ ಅವರೊಂದಿಗೆ ಮತ್ತೊಮ್ಮೆ ಗೌಡಗೆರೆ ಸರ್ವೆ ನಂಬರ್ 22 ಪರಿಶೀಲಿಸಿ ಇಲಾಖೆಯ ಅಭಿಪ್ರಾಯ ಸೇರಿದಂತೆ ಸಮಗ್ರ ವರದಿ ಪಡೆದು ಸಚಿವರ ಗಮನಕ್ಕೆ ತರಲಾಗುವುದು. ಅವರ ಸಲಹೆ ಸೂಚನೆಯಂತೆ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಹಿಡಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಟಿಎಚ್‍ಒ ನವೀನ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಪಪಂ ಸದಸ್ಯರುಗಳಾದ ಹೇಮಂತ್, ಕೆಎಂಎಲ್‍ಕಿರಣ್, ಮುಖಂಡರಾದ ಜಯಣ್ಣ, ಬಳೆದಾಸಪ್ಪ, ಅಶೋಕ್‍ಬಾಬು, ಪಾತ್ರೆ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap