ತಿಪಟೂರು :
ಬಡಜನರು ಸೂರುಕಟ್ಟಿಕೊಳ್ಳಲು ಇ-ಖಾತೆ ಮಾಡಿಕೊಟ್ಟು ನಗರಸಭೆಯ ಅಧಿಕಾರಿಗಳು ಪುಣ್ಯಕಟ್ಟಿಕೊಳ್ಳಿ ಎಂದು ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಟಿ.ಎನ್.ಪ್ರಕಾಶ್ ಆಗ್ರಹಿಸಿದರು.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಬಡಜನರು ಮನೆ ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ಸಾಲಮಾಡಿ ಕೂಡಿಟ್ಟ ಹಣ ಹಾಕಿ ನಿವೇಶನವನ್ನು ಕೊಳ್ಳುತ್ತಾರೆ. ನಂತರ ಮನೆಕಟ್ಟಲು ನಗರಸಭೆಗೆ ಬಂದು ಇ-ಖಾತೆ ಮಾಡಿಕೊಡಿ, ಮನೆ ಕಟ್ಟಲು ಸಾಲ ತೆಗೆದುಕೊಳ್ಳಬೇಕೆಂದು ಹೇಳಿದರೆ ನಗರಸಭೆಯವರು ಸಾಕಷ್ಟುಬಾರಿ ಅಲೆಸಿ ತಿಂಗಳುಗಳು ಕಳೆದ ಮೇಲೆ ಅನಧಿಕೃತ ಬಡವಾಣೆ ಎಂದು ಇ-ಖಾತೆ ಕೊಡುತ್ತಾರೆ. ಇದನ್ನು ತೆಗೆದುಕೊಂಡು ಬ್ಯಾಂಕಿಗೆ ಹೋದರೇ ಅಲ್ಲಿ ನಾವು ಇದಕ್ಕೆ ಸಾಲ ನೀಡಲು ಬರುವದಿಲ್ಲವೆಂದಾಗ ಜನರು ಕಣ್ಣೀರು ಹಾಕುತ್ತಾ ಮತ್ತೆ ನಗರಸಭೆಗೆ ಬರುತ್ತಾರೆ ಎಂದರು.
ನಗರಸಭೆ ಅಧ್ಯಕ ರಾಮ್ಮೋಹನ್ ಮಾತನಾಡಿ ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ನಾವು ನಡೆದುಕೊಳ್ಳುತ್ತಿದ್ದು, ಶೀಘ್ರವಾಗಿ ಸಮಸ್ಯೆ ಪರಿಹರಿಸಲಾಗುವುದೆಂದು ತಿಳಿಸಿದರು.
ಸಕಾಲ ಕೇಂದ್ರವಿಲ್ಲ :
ನಗರಸಭೆಯ ಯಾವುದೇ ಅರ್ಜಿಗಳನ್ನು ಸಕಾಲದ ಅಡಿಯಲ್ಲಿ ತಗೆದುಕೊಳ್ಳುತ್ತಿಲ್ಲ ಸುಖಾ ಸುಮ್ಮನೆ ಜನರನ್ನು ಕಚೇರಿಗೆ ಅಲೆಸುತ್ತಿದ್ದಾರೆ. ನೀವೇಕೆ ಸಕಾಲದ ಅಡಿಯಲ್ಲಿ ಅರ್ಜಿಯನ್ನು ತೆಗೆದುಕೊಳ್ಳುತ್ತಿಲ್ಲ, ತೆಗೆದುಕೊಂಡಿದ್ದರೆ ನಾಗರಿಕರ ಪ್ರತಿಯನ್ನು ಏಕೆ ಕೊಡುತ್ತಿಲ್ಲ, ಜನರು ನಗರಸಭೆ ಎಂದರೆ ಭಯಪಡುವ ಸನ್ನಿವೇಶವನ್ನು ಸೃಷ್ಠಿಸಿದ್ದೀರಾ? ಎಂದು ಸದಸ್ಯ ಯೋಗೀಶ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಗರಸಭೆ ಸಕಾಲ ಅಧಿಕಾರಿ ಒಂದು ಸಕಾಲ ಅರ್ಜಿಯನ್ನು ಪಡೆಯಲು 30 ನಿಮಿಷವಾಗುತ್ತದೆ ಇನ್ನು ಎಲ್ಲಾ ಅರ್ಜಿಗಳನ್ನು ತೆಗೆದುಕೊಳ್ಳುವುದು ಹೇಗೆ ಎಂದಾಗ ಅಧ್ಯಕ್ಷ ರಾಮ್ಮೋಹನ್ ಮಾತನಾಡಿ ಇದರ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಂಡು ಸಕಾಲ ಅರ್ಜಿ ಕೇಂದ್ರವನ್ನು ತೆರೆಯಲಾಗವುದೆಂದು ತಿಳಿಸಿದರು.
ಜಾಹಿರಾತು ಕೋಲಾಹಲ :
ಸ್ವಚ್ಛ-ಸುಂದರ ಪರಿಸರ ನಿರ್ಮಿಸೋಣ, ಪ್ಲಾಸ್ಟಿಕ್ ತ್ಯಜಿಸೋಣವೆಂದು ದಿನನಿತ್ಯ ವಾಹನದಲ್ಲಿ ಕೂಗುವ ನಗರಸಭೆಯವರು, ನಗರದಾದ್ಯಂತ ನಿಷೇಧಿತ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದರೂ ಏಕೆ ಪ್ರಶ್ನಿಸುತ್ತಿಲ್ಲ. ಬಟ್ಟೆಫ್ಲೆಕ್ಸ್ಗೆ ಜಾಹಿರಾತು ಶುಲ್ಕವೆಂದು ಕಟ್ಟಿ, ಒಂದು ಶುಲ್ಕಕ್ಕೆ ನಾಲ್ಕೈದು ಫ್ಲೆಕ್ಸ್ ಹಾಕಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲವೆಂದು ಕುಳಿತಿರುವ ನಗರಸಭೆ ಆಡಳಿತ ಹಾಳಾಗಿರುವುದಕ್ಕೆ ಇದೊಂದು ಸ್ಪಷ್ಠ ನಿದರ್ಶನವಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ದನಿಗೂಡಿಸಿದ ಸದಸ್ಯೆ ಡಾ.ಓಹಿಲಾಗಂಗಾಧರ್ ಅವರು ಮಾತನಾಡಿ ನಗರಸಭೆಯಿಂದ ಪತ್ರಿಕೆಯೊಂದಕ್ಕೆ ಜಾಹಿರಾತು ನೀಡಿ ಶುಭಾಷಯ ಕೋರಿದ್ದೀರಿ, ಆದರೆ ಇದರಲ್ಲಿ ಸಂಸದರ ಭಾವಚಿತ್ರವನ್ನೆ ಹಾಕಿಲ್ಲ, ಅವರು ನಗರಸಭೆಯ ಸದಸ್ಯರಲ್ಲವೇ? ಅವರನ್ನೇಕೆ ಬಿಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಇದು ನಗರಸಭೆಯಿಂದ ಜಾಹಿರಾತು ಕೊಟ್ಟಿಲ್ಲ ಎಂದರು, ಆದರೆ ಜಾಹಿರಾತಿನ ಬಗ್ಗೆ ಪೌರಾಯುಕ್ತರು ಮಾತ್ರ ತುಟಿಬಿಚ್ಚಲಿಲ್ಲ.
ಕೊಠಡಿಗೆ ಬನ್ನಿ ಎಂದಾಗ ಎಲ್ಲರೂ ನಕ್ಕಿದ್ದಿರಿ :
ನಗರಸಭೆಯ ಮೊಲ ಸಭೆಯಲ್ಲಿ ನನಗೆ ಬಟೆಜ್, ಸ್ಥಿರೀಕರಣ, ಹಲವಾರು ಯೋಜನೆಗಳ ಬಗ್ಗೆ ಗೊತ್ತಿಲ್ಲ ಹೇಳಿ ಎಂದಾಗ ಅಧ್ಯಕ್ಷರಾದ ರಾಮ್ಮೋಹನ್ ಅವರು ಕೊಠಡಿಗೆ ಬನ್ನಿ ಹೇಳಿಕೊಡುತ್ತೇನೆ ಎಂದಾಗ ನೀವೆಲ್ಲಾ ನಗುತ್ತಿದ್ದಿರಿ, ಆದರೆ ಇಂದು ಯಾರಿಗೂ ಗೊತ್ತಿಲ್ಲ ಎನ್ನುವುದಾದರೆ ಅಧ್ಯಕ್ಷರ ಕೊಠಡಿಗೆ ಎಲ್ಲರೂ ಹೋಗೋಣ ಎಂದು ಸದಸ್ಯೆ ಮೇಘನಾ ಭೂಷಣ್ ಇತರೆ ಸದಸ್ಯರ ಕಾಲೆಳೆದರು.
ಕೇಬಲ್ ಬದಲಾವಣೆಗೆ 15 ದಿನ ಬೇಕೆ :
ನಮ್ಮ ವಾರ್ಡ್ನಲ್ಲಿ ಕೊಳವೆ ಬಾವಿಯ ಕೇಬಲ್ ಬದಲಾಯಿಸಲು 15 ದಿನ ಬೇಕಾಗುತ್ತದೆಯೇ ಎಂದು ಸದಸ್ಯೆ ವಿನುತಾತಿಲಕ್ ಪ್ರಶ್ನಿಸಿದರು. ಇದಕ್ಕೆ ಎಇ ಮುನಿಸ್ವಾಮಿ ಅವರು ಕೇಬಲ್ ತರಲು ಟೆಂಡರ್ ಕರೆಯಬೇಕು ಅದಕ್ಕಾಗಿ 15 ದಿನವಾಗುತ್ತದೆ ಎಂದಾಗ ನೀವು ಯಾವುದಕ್ಕೆ ಟೆಂಡರ್ ಕರೆದಿದ್ದೀರಿ ಎಂದು ಗೊತ್ತು ಸುಮ್ಮನೆ ಕೆಲಸ ಮಾಡಿ ಸಾಕು ಎಂದರು.
ನಗರಸಭೆಯ ಶೌಚಾಲಯದಲ್ಲೇ ನೀರಿಲ್ಲ, ಬೋರ್ವೆಲ್ ನೀರಿನಲ್ಲಿ ಹುಳು, ಯುಜಿಡಿ ಸಮಸ್ಯೆ, ಅನಗತ್ಯವಾಗಿ ಟೆಂಡರ್ ಅನುಮೋದನೆ, ನಿರುಪಯುಕ್ತ ಯೋಜನೆಗಳಿಗೆ ಹಣ ದುರುಪಯೋಗ, ಇನ್ನೂ ಸಾಕಷ್ಟು ಸಮಸ್ಯೆಗಳು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದವೆ ಹೊರತು, ನಗರದ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯಲಿಲ್ಲ.
ರಾಜ್ಯಕ್ಕೆ ಮಾದರಿಯಾಗಿ :
ಅಧಿಕೃತ ಇ-ಖಾತೆ ನೀಡಲು ಸಾಧ್ಯವಿಲ್ಲವೆಂದು ನೀವು 2017ನೇ ಸಾಲಿನ ಸರ್ಕಾರಿ ಆದೇಶವನ್ನು ತೋರಿಸಿ ಇದರ ಪ್ರಕಾರ ಮಾಡುವ ಹಾಗಿಲ್ಲವೆನ್ನುತ್ತೀರಿ. ಆದರೆ ಅದೇ ಸರ್ಕಾರ 2016ರಲ್ಲಿ ಮಾಡಿದ ಕಾನೂನನ್ನು ಏಕೆ ನೀವು ಅಳವಡಿಸಿಕೊಂಡಿಲ್ಲ, ಈ ಕಾನೂನುನನ್ನು ಅಳವಡಿಸಿಕೊಂಡು ನೀವೇ ರಾಜ್ಯಕ್ಕೆ ಮಾದರಿಯಾಗಿ ಎಂದು ಸದಸ್ಯ ಟಿ.ಎನ್.ಪ್ರಕಾಶ್ ನಗರಸಭೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.