ಕಾಡುಗೊಲ್ಲರ ಕುಲದೈವಗಳ ಜನಪದ ಉತ್ಸವ

ಬರಗೂರು :

      ಶಿರಾ ತಾಲ್ಲೂಕು ಹುಳಿಗೆರೆ ದಾಖಲೆ ಕಾಡುಗೊಲ್ಲರ ಹಟ್ಟಿಯಲ್ಲಿ ಮಂಗಳವಾರ ರಾತ್ರಿ ನಡೆದ ಗ್ರಾಮದ ಕುಲದೈವಗಳಾದ ಚಿತ್ತಯ್ಯ, ವೀರಹೊನ್ನಣ್ಣ, ವೀರಕೃಷ್ಣಸ್ವಾಮಿ ದೇವರುಗಳ ಜನಪದ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸರಳವಾಗಿ ಆಚರಿಸಿದರು.

     ದೇವರ ಗುಡಿಗಳಿಂದ ಗೋವು, ಬೇವು ಕಚ್ಚಿ ದೇವರುಗಳ ಉತ್ಸವ ಮೂರ್ತಿಗಳನ್ನು ಕೆರೆಯ ಹಳ್ಳಕ್ಕೆ ಕೊಂಡೊಯ್ದು, ಚಿಲುಮೆ ತೋಡಿ, ಒರತೆ ನೀರಿನಿಂದ ದೈವಗಳ ಆಭರಣಗಳನ್ನು ಹುಣಿಸೆಹಣ್ಣಿನಿಂದ ಬೆಳಗಿದ ನಂತರ ಗಂಗಾಪೂಜೆ ನಡೆಸಲಾಯಿತು. ಜಲಧಿ ಮಹೋತ್ಸವದ ಅಂಗವಾಗಿ ಗಂಗೆ ಮತ್ತು ಭೂಮಿಗೆ ಪೂಜೆ ಸಲ್ಲಿಸಿ, ಹಾಲು-ತುಪ್ಪ ತನಿ ಎರೆಯಲಾಯಿತು. ರೈತಾಪಿವರ್ಗದವರು ಹಾಗೂ ಪಶು-ಪಕ್ಷಿ, ಸಸ್ಯ ಸಂಕುಲಗಳ ಬೆಳವಣಿಗೆಗೆ ಮಳೆ ಬೆಳೆಯಾಗಿ ಲೋಕದ ಸಮಸ್ತರು ಸುಖ ನೆಮ್ಮದಿಯಿಂದ ಬಾಳುವಂತೆ ದೇವರಲ್ಲಿ ಹರಕೆ ಕಟ್ಟಿ, ಬಾಳೆಹಣ್ಣಿನ ಮಣೇವು ಹಾಕಿ ಭೂ ತಾಯಿಗೆ ನಮಿಸಿದರು.

      ಕಾಡುಗೊಲ್ಲರ ಕುಲದೈವಗಳಾದ ಚಿತ್ತಯ್ಯ, ವೀರಹೊನ್ನಣ್ಣ, ವೀರಕೃಷ್ಣಸ್ವಾಮಿ, ಅಲಗುಗಳಿಗೆ ಅಲಂಕಾರ ಮಾಡಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿ ಗೊಲ್ಲರ ಹಟ್ಟಿಯಲ್ಲಿ ಅಲಗುಗಳನ್ನು ಹೊತ್ತ ಕುಣಿತ ನಡೆಯಿತು. ಕಾಡುಗೊಲ್ಲರ ಕಲಾವಿದರು ಕುಲದೈವಗಳ ಕಥನ ಕಾವ್ಯ ಹಾಡಿದರು. ಇಡೀ ರಾತ್ರಿ ದೇವರುಗಳನ್ನು ಹೊತ್ತು ಕುಣಿದು, ಮುಂಜಾನೆ ಕರಿಯ ಕಂಬಳಿ ಜಾಡಿ ಹಾಸಿ, ಸಮಸ್ತ ಕುಲಸ್ಥರ ಹೆಸರಿನಲ್ಲಿ ವೀಳ್ಯ ಎತ್ತಿ ಪ್ರಸಾದ ವಿತರಿಸಿದರು. ಮುಖಂಡರಾದ ಮಹಾಲಿಂಗಪ್ಪ, ಪಾಂಡಪ್ಪ, ಶ್ರೀರಂಗಪ್ಪ, ಮಹಲಿಂಗಯ್ಯ, ರಂಗಪ್ಪ, ಹೆಂದೊರೆ ನರಸಪ್ಪ ಹಾಗೂ ನೆಂಟರು, ಭಂಟರು, ಹುಳಿಗೆರೆ ಸಮಸ್ತ ಕೈವಾಡಸ್ತರು, ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link