ತುಮಕೂರು : ಕ್ಯಾತ್ಯಂದ್ರ ರೈಲ್ವೆಕ್ರಾಸಿಂಗ್ ರಸ್ತೆ ತೆರವುಗೊಳಿಸುವ ಭರವಸೆ

 ತುಮಕೂರು :

     ಸಿದ್ಧಗಂಗಾ ಮಠದ ರಸ್ತೆ ದುರಸ್ತಿ, ರೈಲ್ವೆ ಅಂಡರ್‍ಪಾಸ್ ತ್ವರಿತ ನಿರ್ಮಾಣಕ್ಕೆ ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಕ್ಯಾತ್ಸಂದ್ರ, ಬಸವೇಶ್ವರ ಬಡಾವಣೆ ಸುತ್ತಮುತ್ತಲಿನ ನಿವಾಸಿಗಳು ಬುಧವಾರ ಹೆದ್ದಾರಿ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಕಾರರ ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಅಂಡರ್‍ಪಾಸ್ ಸಮಸ್ಯೆ ಪರಿಹಾರವಾಗುವವರೆಗೆ ಮುಚ್ಚಲ್ಪಟ್ಟಿದ ರೈಲ್ವೇ ಲೇನ್ ರಸ್ತೆಯನ್ನು ತೆರವುಗೊಳಿಸಲು ಕ್ರಮ ವಹಿಸುವ ಭರವಸೆ ನೀಡಿದರು.

      ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್, ಉಪಾಧ್ಯಕ್ಷ ಡಾ.ಎನ್.ವಿಜಯ್, ಮುಖಂಡರಾದ ರವಿ, ನರಸೇಗೌಡ, ಮುಬಾರಕ್ ಅಲಿ, ಹೊನ್ನೇಶ್‍ಕುಮಾರ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಅಂಡರ್‍ಪಾಸ್‍ನಿಂದ ಹೆದ್ದಾರಿವರೆಗೂ ನಡೆದ ಪ್ರತಿಭಟನೆಯಲ್ಲಿ, ತುಮಕೂರು ನಗರಕ್ಕೆ ಕಲಶಪ್ರಾಯದಂತಿರುವ ಸಿದ್ಧಗಂಗಾ ಮಠಕ್ಕೆ ರೈಲ್ವೆ ಅಂಡರ್‍ಪಾಸ್ ನಿರ್ಮಾಣದ ಸಲುವಾಗಿ ರೈಲ್ವೆ ಹಳಿ ದಾಟಿ ಪ್ರವೇಶಿಸುತ್ತಿದ್ದ ನೇರ ಸಂಪರ್ಕ ರಸ್ತೆಯನ್ನು ಕಳೆದ ಒಂದು ವರ್ಷದಿಂದ ಬಂದ್ ಮಾಡಲಾಗಿದೆ.

      ಆದರೆ ಆಡಳಿತಾತ್ಮಕ ಸಮಸ್ಯೆಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಈ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿಮಾಡುತ್ತಿದ್ದ ಭಕ್ತರು, ರೈತರು, ಮಠದ ವಿದ್ಯಾರ್ಥಿಗಳು ಸೇರಿ 30 ಸಾವಿರಕ್ಕೂ ಅಧಿಕ ಮಂದಿಗೆ ಕಳೆದೊಂದು ವರ್ಷದಿಂದ ತೊಂದರೆಯಾಗಿದ್ದು, ಮುಚ್ಚಿರುವ ರೈಲ್ವೆ ಹಳಿ ದಾಟಲು ಹೋಗಿ ಹತ್ತಾರು ಮೂಕಪ್ರಾಣಿ ಹಸುಗಳು ಮೃತಪಟ್ಟಿವೆ. ಮನುಷ್ಯರ ಪ್ರಾಣ ಹೋಗುವುದಕ್ಕೂ ಮುನ್ನಾ ಇರುವ ತೊಡಕನ್ನು ಬೇಗ ನಿವಾರಿಸಿ ಅಂಡರ್‍ಪಾಸ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಪರಿಹಾರ ಹಣಕ್ಕಾಗಿ ಚಂದಾ ಎತ್ತಿಕೊಡಲು ಸಿದ್ಧ:

      ಜೆಡಿಎಸ್ ನಗರಾಧ್ಯಕ್ಷ ನರಸೇಗೌಡ ಹಾಗೂ ಮುಖಂಡರಾದ ರವಿ ಮಾತನಾಡಿ, ಇದು ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾಗಿದ್ದ ಲಿಂಗೈಕ್ಯ ಡಾ. ಶ್ರೀಶಿವಕುಮಾರಸ್ವಾಮೀಜಿಗಳ ಪುಣ್ಯ ಭೂಮಿ. ಇಲ್ಲಿಗೆ ಹೋಗಲು ಕಳೆದ ಒಂದುವರೆ ವರ್ಷದಿಂದ ರಸ್ತೆ ಇಲ್ಲ ಎಂದರೆ ಹೇಗೇ ಎಂದು ಪ್ರಶ್ನಿಸಿ ರೈಲ್ವೆ ಇಲಾಖೆಯವರು ಕೇವಲ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿ,ಅಂಡರ್ ಪಾಸ್ ಕಾಮಗಾರಿ ಆರಂಭಿಸಿದ್ದರು. ಅದರೆ ಒಂದುವರೆ ವರ್ಷ ಕಳೆದರೂ ಮುಗಿದಿಲ್ಲ.ಭೂಮಿ ನೀಡಲು ಭೂ ಮಾಲೀಕರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಹಾಗಾಗಿ ತೊಂದರೆಯಾಗಿದೆ ಎಂದು ಸಬೂಬು ಹೇಳಿ ಕೈಚಲ್ಲಿದ್ದಾರೆ.ಒಂದು ವೇಳೆ ಸರಕಾರಕ್ಕೆ ಪರಿಹಾರ ನೀಡಲು ಹಣವಿಲ್ಲವೆಂದು ಹೇಳಿಕೆ ನೀಡದರೆ, ನಾವುಗಳೇ ಭಕ್ತರಿಂದ ಚಂದಾ ಎತ್ತಿ ಪರಿಹಾರ ನೀಡಲು ಸಿದ್ದ.ಕಾಮಗಾರಿ ವಿಳಂಬ ಮಾಡುತ್ತಿರುವುದು ಸರಕಾರ ಸಿದ್ದಗಂಗಾ ಮಠಕ್ಕೆ ಮಾಡುತ್ತಿರುವ ಅಪಮಾನ ಎಂಬುದು ಭಕ್ತರ ಅನಿಸಿಕೆಯಾಗಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಭೂಸ್ವಾಧೀನಕ್ಕೂ ಸಿದ್ಧತೆ – ಎಸಿ

      ಈ ವೇಳೆತಹಸೀಲ್ದಾರ್ ಮೋಹನ್‍ಕುಮಾರ್ ಅವರೊಂದಿಗೆ ಸ್ಥಳಕ್ಕಾಗಮಿಸಿದ ಎಸಿ ಅಜಯ್ ಅವರು ಪ್ರತಿಭಟನಕಾರರ ಅಹವಾಲು ಆಲಿಸಿ ಸದರಿ ಅಂಡರ್ ಪಾಸ್ ಅಪ್ರೋಚ್ ರಸ್ತೆಗೆ ಅಗತ್ಯವಿರುವ ಭೂಮಿ ನೇರ ಖರೀದಿಗೆ, ಕಾಂತರಾಜು, ರತ್ನಮ್ಮ ಮತ್ತಿತರರಿಗೆ ನಗರ ಪ್ರದೇಶದ ಎಸ್.ಆರ್. ದರದಂತೆ ಪರಿಹಾರ ಮೊತ್ತ ನಿಗದಿ ಮಾಡಿ ಅವರ ಗಮನಕ್ಕೂ ತರಲಾಗಿದೆ. ಆದರೆ ಅವರು ಮಾರುಕಟ್ಟೆ ದರದಲ್ಲಿ ಕೇಳುತ್ತಿದ್ದು, ಅವರ ಭೂಮಿ ಅವರ ಭೂಮಿ ಪರಿವರ್ತನೆಯಾಗಿಲ್ಲದ ಕಾರಣ, ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ.

      ಜಿಲ್ಲಾಧಿಕಾರಿಗಳು ಸಭೆಗಳನ್ನು ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಹಲವು ಬಾರಿ ಚರ್ಚಿಸಿದ್ದು, ಆ.28ರಂದು ಕಾನೂನು ರೀತ್ಯಾ 11ಎ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಈಗಲೂ ಸಂತ್ರಸ್ತರು ಒಪ್ಪಿಕೊಂಡರೆ ಹಣವನ್ನು ಅವರ ಖಾತೆಗೆ ಹಾಕಿ ಭೂಮಿ ಖರೀದಿಸಿ ಕಾಮಗಾರಿ ಬೇಗ ಮುಗಿಸಲಾಗುವುದು. ಕಾನೂನು ರೀತ್ಯಾ ಭೂಸ್ವಾಧೀನಕ್ಕೆ ಮುಂದಾದರೆ ಇನ್ನೂ ನಾಲ್ಕೈದು ತಿಂಗಳು ಹಿಡಿಯುತ್ತದೆ ಎಂದರು. ಸಂತ್ರಸ್ತ ಕಾಂತರಾಜ್ ಮಾತನಾಡಿ ನಾವು ಹಿಂದೆಯೇ ರೈಲ್ವೆ ಇಲಾಖೆ, ರಸ್ತೆಗೆ ಉಚಿತ ವಾಗಿ ಜಮೀನು ಬಿಟ್ಟುಕೊಟ್ಟಿದ್ದೇವೆ. ನಾವು ಬದುಕು ಕಟ್ಟಿಕೊಂಡಿರುವ ಜಾಗ ಮಾರುಕಟ್ಟೆಯಲ್ಲಿ ಚದರಡಿಗೆ 3500 ರೂ.ದರವಿದ್ದು, ಕೋಟಿ ಬೆಲೆ ಬಾಳುವ ಜಾಗಕ್ಕೆ ಕಾಲುಭಾಗ ಪರಿಹಾರ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.

ಮೊದಲು ರೈಲ್ವೆ ಗೇಟ್ ತೆಗೆಸಿ:

      ಈ ವೇಳೆ ಪ್ರತಿಭಟನಕಾರರು ಭೂಸ್ವಾಧೀನದ ಆಡಳಿತ ಸಮಸ್ಯೆಯನ್ನು ನೀವು ಕಚೇರಿಯಲ್ಲಿ ಇತ್ಯರ್ಥಪಡಿಸಿ. ಮುಚ್ಚಿರುವ ರೈಲ್ವೆ ಕ್ರಾಸಿಂಗ್ ಗೇಟ್ ತೆಗೆಸಿ ಸಿಬ್ಬಂದಿ ಹಾಕಿ ಜನ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ. ಅಂಡರ್‍ಪಾಸ್ ಮುಗಿಯುವವರೆಗೂ ಈ ರೈಲ್ವೆ ಕ್ರಾಸಿಂಗ್ ಮುಚ್ಚಬಾರದು ಎಂದು ಆಗ್ರಹಿಸಿದರು. ರೈಲ್ವೆ ಸಹಾಯಕ ಎಂಜಿನಿಯರ್ ವಿನೋದ್‍ಕುಮಾರ್ ಈ ಸಂಬಂಧ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಎಸಿಯವರು ಸಹ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ತಾತ್ಕಾಲಿಕ ಪರಿಹಾರ ಒದಗಿಸುವ ಭರವಸೆ ನೀಡಿದರು.

      ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಮುಖಂಡ ಅರವಿಂದ್, ಅಂಬೇಡ್ಕರ್ ಯುವ ಸೇನೆಯ,ತಾಲೂಕು ಅಧ್ಯಕ್ಷರಾದ ಸುಮ, ಶಾಹಿದ್, ಬಟವಾಡಿ ಸ್ವಾಮಿ, ಪುನೀತ್, ಅಪ್ಸರ್, ಕ್ಯಾತ್ಸಂದ್ರ ಮೋಸಿನ್, ಶ್ರೀರಾಮಪ್ಪ, ನಾಗೇಶ್‍ಕುಮಾರ್, ಸ್ವಾಮಿ, ಪೂಜಶ್ರೀ, ಯಶಸ್ವಿನಿ, ಪೋಟೋ ಕುಮಾರ್, ಮಲ್ಲಿಕಾರ್ಜುನ್ ಕೊರವರ್ ಮತ್ತಿತರರು ಹಾಜರಿದ್ದರು.

ತುಮಕೂರು ಬಂದ್ ಎಚ್ಚರಿಕೆ !

      ಅಂಡರ್‍ಪಾಸ್ ಕಾಮಗಾರಿಗೆ ತೊಡಕಾಗಿರುವ ಭೂವಿವಾದವನ್ನು ಬೇಗ ಇತ್ಯರ್ಥಗೊಳಿಸಿ ಕಾಮಗಾರಿ ಪೂರ್ಣಗೊಳಿಸುವ ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಹೆಸರಾಂತ ಸಿದ್ಧಗಂಗಾ ಮಠಕ್ಕೆ ಪ್ರವೇಶ ತೊಡಕು ಹೀಗೆಯೇ ಮುಂದುವರಿದರೆ ತುಮಕೂರು ಬಂದ್ ಮಾಡಬೇಕಾಗುತ್ತದೆ ಎಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಜಿ.ಗಣೇಶ್ ಎಚ್ಚರಿಸಿದರು.

      ಅಂಡರ್‍ಪಾಸ್‍ಗೆ ಅಗತ್ಯವಾದ ಭೂಮಿಯನ್ನು ಮಾಲೀಕರಿಂದ ನೇರ ಖರೀದಿಗೆ ಎಸ್.ಆರ್.ದರ ನಿಗದಿ ಮಾಡಿ 3-4 ಸಭೆ ಸಹ ನಡೆಸಲಾಗಿದೆ. ಮಾಲೀಕರಿಗೆ ಈಗಲೂ ಅವಕಾಶವಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯಕ ಭೂಮಿ ನೀಡಿ ಕಾಮಗಾರಿಗೆ ಸಹಕರಿಸಬೇಕು. ಇಲ್ಲವಾದರೆ ನ್ಯಾಯಾಲಯಕ್ಕೆ ಪರಿಹಾರ ಡಿಪಾಸಿಟ್ ಮಾಡಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

-ಅಜಯ್ ಉಪವಿಭಾಗಾಧಿಕಾರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link