ತುಮಕೂರು :
ಜಿಲ್ಲೆ ಹಾಗೂ ರಾಜ್ಯದಲ್ಲಿ ಇಂದು ಮೆಗಾ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಿದ್ದು, ಜಿಲ್ಲೆಯಲ್ಲಿ 1.25 ಲಕ್ಷ ಮಂದಿಗೆ ಕೋವಿಡ್ ಲಸಿಕೆಯನ್ನು ಹಾಕುವ ಗುರಿಹೊಂದಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.5ರಿಂದ ರಾಜ್ಯದಲ್ಲಿ ಕೋವಿಡ್ ಲಸಿಕೆಯನ್ನು ಅಭಿಯಾನದ ರೂಪದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ಆದರೆ ಅಭಿಯಾನ ಸೆ.5ರಿಂದ ಆರಂಭಗೊಳ್ಳಲಿಲ್ಲ. ಆದರೆ ಪ್ರಧಾನಿ ಮೋದಿ ಜನ್ಮದಿನವಾದ ಸೆ.17ರಂದು ವಿಶೇಷ ಮೇಳದೋಪಾದಿಯಲ್ಲಿ ಬೃಹತ್ ಪ್ರಮಾಣದ ಲಸಿಕೆ ಹಾಕಲಾಗುತ್ತಿದ್ದು, ತುಮಕೂರು ತಾಲೂಕಿನಲ್ಲಿ ಅತೀ ಹೆಚ್ಚು 25000 ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪಿಎಚ್ಸಿಗಳು, ವ್ಯಾಕ್ಸಿನೇಷನ್ ಸೆಂಟರ್ಗಳಲ್ಲಿ ಲಸಿಕೆಯನ್ನು ಇಂದು ಹಾಕಲಾಗುತ್ತಿದ್ದು, ಅಕ್ಟೋಬರ್ ಅಂತ್ಯಕ್ಕೆ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಮೊದಲ ಡೋಜ್ ಲಸಿಕೆ ಪೂರ್ಣಗೊಳಿಸುವ ಗುರಿ ಹೊಂದಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಂಘ ಸಂಸ್ಥೆಗಳ ಸಹಕಾರ:
ಈ ವಿಶೇಷ ಲಸಿಕಾ ಮೇಳವನ್ನು ಬೆಳಿಗ್ಗೆ 6.30ರಿಂದ ಆರಂಭಿಸಿ ಸಂಜೆ 7ರವರೆಗೆ ನಡೆಸಲಿದ್ದು, ವಿಶೇಷವಾಗಿ ಲಸಿಕಾ ಪ್ರಮಾಣ ಕಡಿಮೆಯಿರುವ ತಾಲೂಕು, ಗಡಿ ಭಾಗ, ಅಲಕ್ಷಿತ ಸಮುದಾಯಗಳು, ಅಲೆಮಾರಿಗಳನ್ನು ಗುರುತಿಸಿ ಲಸಿಕೆಯನ್ನು ಹಾಕಿಸಲಾಗುತ್ತಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಈ ಕಾರ್ಯಕ್ಕೆ ರೆಡ್ಕ್ರಾಸ್ ಸಂಸ್ಥೆ, ಪಾವಗಡದ ರಾಮಕೃಷ್ಣ ಸೇವಾಶ್ರಮ, ಸಿದ್ಧಾರ್ಥ ಹಾಗೂ ಶ್ರೀದೇವಿ ವೈದ್ಯಕೀಯ ಕಾಲೇಜುಗಳು ಸಂಪೂರ್ಣ ಸಹಕಾರ ನೀಡುತ್ತಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಅಧಿಕಾರಿ, ಸಿಬ್ಬಂದಿಗಳು ಮೇಳಕ್ಕೆ ನಿಯೋಜನೆ
ಈ ವಿಶೇಷ ಲಸಿಕಾ ಮೇಳಕ್ಕೆ 1.25 ಲಕ್ಷ ಮಂದಿಗೆ ವ್ಯಾಕ್ಸಿನ್ ಹಾಕುವ ಗುರಿಹೊಂದಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ 455 ಕಡೆ ಲಸಿಕಾ ಕೇಂದ್ರಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಅಭಿಯಾನ ಯಶಸ್ಸಿಗೆ ಪ್ರತಿಹೋಬಳಿಗೊಬ್ಬರು ನೋಡಲ್ ಅಧಿಕಾರಿಯನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದು, ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗರು, ಪಿಡಿಓ ಅಂಗನವಾಡಿ, ಆಶಾ ಕಾರ್ಯಕರ್ತೆಯರು. ಆರೋಗ್ಯ ಸಿಬ್ಬಂದಿ ಸಹಕಾರ ಪಡೆಯಲಾಗಿದೆ. ಹೆಚ್ಚುವರಿ ವಾಹನಗಳನ್ನು ಪಡೆದು ಎಲ್ಲಿಯೂ ಲಸಿಕೆ ಕೊರತೆಯಾಗದಂತೆ ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಕೇಶವರಾಜ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ