ತುಮಕೂರು :
ನಗರದ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಅರಿತ ಮೈಸೂರಿನ ಒಡನಾಡಿ ಸಂಸ್ಥೆಯು ಇಲ್ಲಿನ ಪೊಲೀಸ್ ಸಹಕಾರದೊಂದಿಗೆ ಲಾಡ್ಜ್ ಮೇಲೆ ದಾಳಿ ಮಾಡಿ ಇಬ್ಬರು ಮಹಿಳೆಯರು ಹಾಗೂ ತಲೆ ಹಿಡುಕರನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.
ತುಮಕೂರಿನ ಕ್ಯಾತ್ಸಂದ್ರ ಮೇಲ್ಸೆತುವೆ ಸಮೀಪ ಇರುವ ರಿಂಗ್ ರಸ್ತೆಗೆ ಹೊಂದಿಕೊಂಡ ಲಾಡ್ಜ್ ಮೇಲೆ ಸೋಮವಾರ ದಾಳಿ ನಡೆದಿದ್ದು, ಹಲವು ವಸ್ತು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಹಳ ದಿನಗಳಿಂದ ಇಲ್ಲಿನ ಚಲನವಲನ ಬಗ್ಗೆ ಅನುಮಾನವಿತ್ತು. ಬೆಂಗಳೂರು ಮತ್ತು ಮಂಗಳೂರಿಗೆ ತುಮಕೂರು ಒಂದು ಸಂಪರ್ಕ ಸ್ಥಳವಾಗಿದ್ದು, ವೇಶ್ಯಾವಾಟಿಕೆಯ ಜಾಲ ಸದ್ದಿಲ್ಲದೆ ಇಲ್ಲಿ ನಡೆಯುವ ಕುರುಹು ಸಿಕ್ಕಿತ್ತು.
ಈ ಮಾಹಿತಿ ಪಡೆದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಅವರನ್ನೊಳಗೊಂಡ ತಂಡ ಕಳೆದ ಒಂದು ತಿಂಗಳಿನಿಂದ ತುಮಕೂರಿಗೆ ಆಗಮಿಸುತ್ತ ಮಾಹಿತಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಸಹಕರಿಸಿದ್ದು ಈ ಭಾಗದ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಾಂಡೋಮ್‍ಗಳು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿ ಎಸ್ಪಿಯವರು ಒಂದು ವಿಶೇಷ ತಂಡವನ್ನು ರಚಿಸಿದ್ದರು. ಒಡನಾಡಿ ಸಂಸ್ಥೆಯೊಂದಿಗೆ ಕಳುಹಿಸಿ ಲಾಡ್ಜ್ ಒಳಗೆ ನಡೆಯುತ್ತಿದ್ದ ರಹಸ್ಯ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರಿಗೂ ಗೊತ್ತಾಗದ ರೀತಿಯಲ್ಲಿ ಲಾಡ್ಜ್ ಒಳಗೆ ಒಂದು ರಹಸ್ಯ ಕೊಠಡಿ ಇದ್ದು, ಯಾರಾದರೂ ಬರುತ್ತಾರೆ ಎಂಬ ಮಾಹಿತಿ ಗೊತ್ತಾದ ಕೂಡಲೇ ಅಲ್ಲಿನ ಸಿಬ್ಬಂದಿ ಬೆಲ್‍ನ ಸುಳಿವು ನೀಡುತ್ತಾರೆ. ಲಾಡ್ಜ್‍ನಲ್ಲಿರುವ ಮಹಿಳೆಯರು ಅಲ್ಲಿರುವ ರಹಸ್ಯ ಕೋಣೆಗೆ ಸ್ಥಳಾಂತರಗೊಳ್ಳುತ್ತಾರೆ. ಇಂತಹ ರಹಸ್ಯವನ್ನು ಬಯಲಿಗೆಳೆಯಲಾಗಿದೆ. ಮೂರು ಜನ ಮಹಿಳೆಯರ ಪೈಕಿ ಓರ್ವ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ