ಕೊರೋನಾ ಸಂಕಷ್ಟ : ಶಾಲೆ ಬಿಟ್ಟು ತರಕಾರಿ ಮಾರುತ್ತಿದ್ದ ವಿದ್ಯಾರ್ಥಿ ಮರಳಿ ಶಾಲೆಗೆ!!

ತುರುವೇಕೆರೆ :  

     ಕೊರೋನಾ ನೆಪದಲ್ಲಿ ಶಾಲೆ ಬಿಟ್ಟಿದ್ದ ವಿದ್ಯಾರ್ಥಿಯೊಬ್ಬನನ್ನು ಬಿಇಓ ಹಾಗೂ ಶಿಕ್ಷಕರು ಆತನ ಮನವೊಲಿಸಿ ಮರಳಿ ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

     ಪಟ್ಟಣ ಸಮೀಪದ ಕೊಡಗೀಹಳ್ಳಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತಿದ್ದ ರಂಗನಾಥ್ ಎಂಬ ವಿದ್ಯಾರ್ಥಿ ಇದೀಗ 9ನೇ ತರಗತಿಗೆ ತೇರ್ಗಡೆಯಾಗಿದ್ದು, ಶಾಲೆ ಪ್ರಾರಂಭವಾಗಿದ್ದರೂ ಸಹ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ.

ಸರ್ಕಾರವು ಶಾಲೆಗಳ ಪ್ರಾರಂಭಕ್ಕೆ ಆದೇಶ ನೀಡಿದ ಹಿನ್ನಲೆಯಲ್ಲಿ ಮತ್ತೆ ಶಾಲೆಗಳು ಪ್ರಾರಂಭವಾಗಿದ್ದರೂ ಸಹ ರಂಗನಾಥನು ಮನೆಯ ಜವಾಬ್ದಾರಿ ಅರಿತು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ. ಆದರೇ ಆತ ಓದುತ್ತಿದ್ದ ಶಾಲೆಯ ಶಿಕ್ಷಕರು ಅವನ ಮನೆಗೆ ಭೇಟಿ ನೀಡಿ ಮನವೊಲಿಸಿದರೂ ಯಾವುದೇ ಪ್ರಯೋಜನವಾಗದೇ ಕೈಚೆಲ್ಲಿದ್ದರು.

      ಬಡತನದ ಬೇಗೆಯಲ್ಲಿ ಬೇಯುತ್ತಿರುವ ಆತನ ತಾಯಿ ಹಾಗೂ ಸಹೋದರಿ ಆತನ ಮುಂದಿನ ಭವಿಷ್ಯ ನೆನೆದು ಶಾಲೆಗೆ ಹೋಗೆಂದು ಎಷ್ಟೇ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

      ರಂಗನಾಥನ ವಿಷಯ ತಿಳಿದ ಅದೇ ವಾರ್ಡ್‍ನ ನಮ್ಮ ಪ್ರಜಾಪ್ರಗತಿ ವರದಿಗಾರರು ವಿದ್ಯಾರ್ಥಿಯ ಕುಟುಂಬದೊಂದಿಗೆ ಚರ್ಚಿಸಿ ಆತನ ಮನವೊಲಿಸಿ ಈ ವಿಚಾರವನ್ನು ಖುದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಅವರ ಗಮನಕ್ಕೆ ತರಲಾಗಿ ತಕ್ಷಣ ಕಾರ್ಯ ಪ್ರವೃತ್ತರಾದ ಬಿಇಒ ರಂಗಧಾಮಯ್ಯ ಅವರ ಮೌಖಿಕ ಆದೇಶದ ಮೇರೆಗೆ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್‍ಕುಮಾರ್.ಬಿ.ಎಸ್, ಎಂ.ಎನ್.ರಾಜು, ಪಾಂಶುಪಾಲರಾದ ವೀಣಾ, ಶಿಕ್ಷಕರುಗಳಾದ ರಾಜೇಶ್ವರಿ, ಕೇಶವಮೂರ್ತಿ ಇತರರು ವಿದ್ಯಾರ್ಥಿಯ ಮನೆಗೆ ತೆರಳಿ ತಾಯಿ ಮತ್ತು ಆತನ ಬಾವನ ಮನವೊಲಿಸಿ, ಅವರಿಗೆ ಶಿಕ್ಷಣದ ಮಹತ್ವ ತಿಳಿಸಿ ಶಾಲೆಗೆ ಮರಳುವಂತೆ ಪ್ರೇರೇಪಿಸಿದ ಹಿನ್ನಲೆಯಲ್ಲಿ ಗುರುವಾರ ರಂಗನಾಥನು ಒಪ್ಪಿ ಮತ್ತೆ ಶಾಲೆಗೆ ಮರಳಿದ್ದರಿಂದ ಪೋಷಕರು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಮನವೊಲಿಸಿ ಮರಳಿ ಶಾಲೆಗೆ ಕರೆತಂದ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗು ಶಿಕ್ಷಕರನ್ನು ಬಿಇಒ ಸಿ.ರಂಗಧಾಮಯ್ಯ ಅವರು ಅಭಿನಂದಿಸಿದ್ದಾರೆ. 

ತನ್ನ ತಾಯಿ-ತಂಗಿಗಾಗಿ ಶ್ರಮಿಸುತ್ತಿದ್ದ :

      ತಂದೆಯಿಲ್ಲದ ಈತ ತನ್ನ ತಾಯಿ ಮತ್ತು ತಂಗಿಯೊಂದಿಗೆ ಪಟ್ಟಣದ ಸುಬ್ರಹ್ಮಣ್ಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಕುಟುಂಬದ ನಿರ್ವಹಣೆಗೆಂದು ತನ್ನ ಬಾವನೊಂದಿಗೆ ತರಕಾರಿ ವ್ಯಾಪಾರದಲ್ಲಿ ಕೈಜೋಡಿಸಿದ್ದ. ರಂಗನಾಥನು ಮುಂಜಾನೆ 4 ಗಂಟೆಗೆ ಎದ್ದು ಬಾವನೊಂದಿಗೆ ತಿಪಟೂರಿಗೆ ಹೋಗಿ ಸಗಟು ತರಕಾರಿ ಕೊಂಡು ತಂದು, ಪಟ್ಟಣದಲ್ಲಿ ಸಂಜೆಯವರೆಗೆ ವ್ಯಾಪಾರ ಮಾಡುತ್ತಾ, ತಾಯಿ ಸುಮಾ ಹಾಗೂ ಸಹೋದರಿಗೆ ಆಸರೆಯಾಗಿದ್ದ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link