ಕೊರಟಗೆರೆ :
ಬ್ಯಾಂಕಿಂಗ್ ವ್ಯವಹಾರ ಪಾರದರ್ಶಕ ಅಂದುಕೊಂಡರೆ ಕೆಲವು ಬ್ಯಾಂಕ್‍ಗಳಲ್ಲಿ ಗ್ರಾಹಕರಿಗೆ ಶಾಕ್ ಆಗಿದ್ದು, ತಾಲ್ಲೂಕಿನ ಅಕ್ಕಿರಾಂಪುರ ಕೆ.ಜಿ.ಬಿ. ಬ್ಯಾಂಕ್‍ನಲ್ಲಿ ಇತ್ತೀಚೆಗೆ ಒಂದು ಲಕ್ಷ ಹಣ ಎಸ್.ಬಿ ಅಕೌಂಟ್‍ಗೆ ಜಮಾ ಮಾಡಿದ್ದರೆ, ಹಣ ಜಮಾ ಆಗೇ ಇಲ್ಲ ಎಂದು ಅಧಿಕಾರಿಗಳು ವಾದಿಸುತ್ತಿದ್ದಾರೆ. ಸಿ.ಸಿ ಕ್ಯಾಮರಾ ತೋರಿಸಿ ಅಂದರೆ ನಿರಾಕರಿಸುತ್ತಾ, ಗ್ರಾಹಕರಿಗೆ ಸಬೂಬು ಹೇಳುತ್ತಿರುವ ಘಟನೆ ಇತ್ತೀಚೆಗೆ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಈಗ ಕರ್ನಾಟಕ ಬ್ಯಾಂಕ್ ಆಗಿ ಮಾರ್ಪಾಡಾಗಿದೆ. ಈ ಬ್ಯಾಂಕಿನಲ್ಲಿ ಉಳಿತಾಯ (ಎಸ್.ಬಿ) ಖಾತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ ರಬಿಯಾಬಾನು ಕಳೆದ 15 ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರೆ, ಆ ಹಣವು ಅವರ ಖಾತೆಗೆ ಜಮಾ ಆಗಿರುವುದಿಲ್ಲ. ಕೇಳಿದರೆ ಸಬೂಬಿನ ಜೊತೆಗೆ ನೀವು ಹಣವನ್ನು ಜಮಾ ಮಾಡಿಯೇ ಇಲ್ಲ ಎಂಬ ಅಧಿಕಾರಿಗಳ ಮೊಂಡು ವಾದಕ್ಕೆ ಇವರು ಶಾಕ್ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬ್ಯಾಂಕ್ ವ್ಯವಹಾರ ಎಂದರೆ ಬಡವರಿಂದ ಹಿಡಿದು ಶ್ರೀಮಂತರವರೆಗೆ ಖಾತೆದಾರರ ಹಣ ಸುಭದ್ರವಾಗಿರುತ್ತೆ ಎಂಬುದು ಗ್ರಾಹಕರ ನಂಬಿಕೆ. ಆದರೆ ಇಲ್ಲಿ ಕೆಲವು ಬ್ಯಾಂಕ್‍ಗಳ ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ವರ್ತಿಸಿ, ಗ್ರಾಹಕರ ಹಿತ ಕಾಪಾಡದೆ ಯಾಮಾರಿಸಿರುವುದರ ಜೊತೆಗೆ, ಜಮಾ ಮಾಡಿರುವ ಹಣವನ್ನು ಖಾತೆಗೆ ಜಮಾ ಮಾಡಿಯೇ ಇಲ್ಲ ಮೂಲಕ ಗ್ರಾಹಕರನ್ನು ಯಾಮಾರಿಸುವ ಘಟನೆ ಜರುಗಿದೆ.
ತಾಲ್ಲೂಕಿನ ಅಕ್ಕಿರಾಂಪುರದ ಕೆ.ಜಿ.ಬಿ ಬ್ಯಾಂಕಿನಲ್ಲಿ ಇವರೊಬ್ಬರಿಗೆ ಮಾತ್ರ ಈ ರೀತಿಯ ವಂಚನೆ ಆಗಿಲ್ಲ. ಹಲವಾರು ಗ್ರಾಹಕರಿಗೆ ಇದೇ ರೀತಿ ಆಗಿದೆ. ಅಂಗನವಾಡಿ ಕಾರ್ಯಕರ್ತೆ ರುಬಿಯಾಬಾನುವಿನ 1 ಲಕ್ಷ ಹಣದ ಜೊತೆಗೆ 1 ಲಕ್ಷ 66 ಸಾವಿರ ರೂ.ಗಳ ಬಾಂಡ್ ಹಾಗೂ 1 ಲಕ್ಷ38 ಸಾವಿರ ರೂ.ಗಳ ಬಾಂಡ್‍ಗಳ ಪೈಕಿ 1 ಲಕ್ಷರೂ. ಮಾತ್ರ ಜಮಾ ಮಾಡಿ, ಉಳಿದ ಹಣದ ಬಗ್ಗೆ ಮಾಹಿತಿ ನೀಡದೆ ಬೇಜವಾಬ್ದಾರಿಯಾಗಿ ವರ್ತಿಸಿ, ಬ್ಯಾಂಕ್‍ನ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಉದಾಸೀನ ಹೇಳಿಕೆ ನೀಡುತ್ತಿದ್ದಾರೆ. 1 ಲಕ್ಷ ರೂ. ಆಮಾ ಬಗ್ಗೆ ಮಾಹಿತಿ ಕೇಳಿ, ಸಿ.ಸಿ ಕ್ಯಾಮರಾ ಓಪನ್ ಮಾಡಿ ಎಂದರೆ, ಅದಕ್ಕೆ ಅದರದೆ ಆದಂತಹ ನಿಬಂಧನೆಗಳಿವೆ. ಹೇಗೆಂದರೆ ಹಾಗೆ ಕ್ಯಾಮರಾ ಓಪನ್ ಮಾಡಲಾಗುವುದಿಲ್ಲ ಎಂದು ಗದರಿಸಿ ಕಳುಸಿರುವುದು ಗ್ರಾಹಕರ ನಿದ್ದೆ ಕೆಡಿಸಿದಂತಾಗಿದೆ.
ಅಂಗನವಾಡಿ ಕಾರ್ಯಕರ್ತೆ ರುಬಿಯಾಬಾನು ತಮ್ಮ ಖಾತೆಯಲ್ಲಿ 3 ಲಕ್ಷಹಣ ಇತ್ತು, ಆದರೆ ತಾಳೆಯಾಗುತ್ತಿಲ್ಲ. ತಮಗೆ ಬ್ಯಾಂಕಿನ ಅಧಿಕಾರಿಗಳು ಯಾಮಾರಿಸುತ್ತಿದ್ದಾರೆ. 2021 ರ ಜುಲೈ 27ರಂದು ತಮ್ಮ ಖಾತೆಗೆ ಹಣ ಹಾಕಿದರೆ, ತಮಗೆ ಜಮಾ ರಸೀತಿ (ಕೌಂಟರ್ ಫೈಲ್) ಕೊಡದೇ, ಅಕೌಂಟ್‍ಗೆ ಹೋಗಿರುತ್ತದೆ ಹೋಗಮ್ಮ ಎಂದರು. ಈಗ ನೋಡಿದರೆ ಖಾತೆಯಲ್ಲಿ ಹಣವಿಲ್ಲ, ಕೇಳಿದರೆ ನೀವು ಖಾತೆಗೆ ಹಣವನ್ನೆ ಜಮಾ ಮಾಡಿಲ್ಲ ಎಂದು ವಾದಿಸುತ್ತಿದ್ದು, ಸಿ.ಸಿ ಕ್ಯಾಮರಾ ತೆಗೆಯಿರಿ ಎಂದರೆ ಆಗೋದಿಲ್ಲ ಎಂದು ಮೊಂಡುವಾದ ಮಾಡುತ್ತಿದ್ದಾರೆ. ನಾನು ಹೊಟ್ಟೆ-ಬಟ್ಟೆ ಕಟ್ಟಿ ಅಂಗನವಾಡಿ ಕೆಲಸದ ನಂತರ ಕುರಿ, ಮೇಕೆ, ಹಸು ಸಾಕಿ, ಡೇರಿಗೆ ಹಾಲು ಹಾಕಿ ಕೂಡಿಟ್ಟ ಹಣ ಬ್ಯಾಂಕಿನಲ್ಲಿ ಹಾಕಿದರೆ ತಮಗೆ ಮೋಸ ಮಾಡುತ್ತಿದ್ದಾರೆ. 3 ಲಕ್ಷರೂಪಾಯಿ ತಮಗೆ ಮೋಸವಾಗಿದೆ ಎಂದು ಆರೋಪಿಸುತ್ತಿದಾರೆ.
ಕಳೆದ 1 ವರ್ಷಗಳಿಂದ ಈ ಶಾಖೆಯಲ್ಲಿ ಸಾರ್ವಜನಿಕರಿಗೆ ಜಮಾ ಮತ್ತು ಖರ್ಚಿನ ಲೆಕ್ಕದ ಪಾಸ್‍ಬುಕ್ ಎಂಟ್ರಿ ಆಗುತ್ತಿಲ್ಲ, ಕೇಳಿದರೆ ನೆಟ್‍ವರ್ಕ್ ಸಮಸ್ಯೆ, ಎಂಬ ಸಬೂಬಿನ ಜೊತೆಗೆ ಎಂಟ್ರಿ ಮಾಡುವ ಮೆಷಿನ್ ಕೆಟ್ಟು ಹೋಗಿದೆ ಎಂದು ವಾದಿಸುತ್ತಿದ್ದು, ಇಲ್ಲಿನ ಗ್ರಾಹಕರಿಗೆ ನರೆಗಾ ಸೇರಿದಂತೆ ಇನ್ನಿತರ ಮಾಹಿತಿ ಸಿಗದೇ ಇಲ್ಲಿ ಬ್ಯಾಂಕ್ ಇದೆಯೋ, ಇಲ್ಲವೋ ಎನ್ನುವಂತಾಗಿದೆ.
-ಉಮೇಶ್, ಗ್ರಾಹಕ, ಕೆ.ಜಿ.ಬಿ ಬ್ಯಾಂಕ್, ಅಕ್ಕಿರಾಂಪುರ.
ಅಧಿಕಾರಿಗಳ ಮೇಲೆ ಗ್ರಾಹಕರ ಆಕ್ರೋಶ :
ಈ ಶಾಖೆ ಸೇರಿದಂತೆ ಜಿಲ್ಲೆಯ ಹಲವು ಶಾಖೆಗಳಲ್ಲಿ ಅಧಿಕಾರಿಗಳ ಕೊರತೆಯಿದ್ದು, ಸಮರ್ಪಕ ಸಿಬ್ಬಂದಿಗಳಿಲ್ಲದೇ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ. 2 ವರ್ಷಗಳಿಂದಲೂ ಪಾಸ್ ಪುಸ್ತಕ ಎಂಟ್ರಿ ಸ್ಥಗಿತಗೊಂಡಿದೆ ಎಂದರೆ ಬ್ಯಾಂಕಿನ ವ್ಯವಹಾರ ಎಷ್ಟರ ಮಟ್ಟಿಗೆ ನಡೆಯುತ್ತಿದೆ? ಗ್ರಾಹಕರಿಗೆ ಎಷ್ಟರ ಮಟ್ಟಿಗೆ ತೃಪ್ತಿ ನೀಡುತ್ತಿದ್ದಾರೆ ಎಂದು ತಿಳಿಯಬಹುದು ಎಂಬುದು ಕೆಲ ಪ್ರಜ್ಞಾವಂತ ಗ್ರಾಹಕರ ಆಕ್ರೋಶವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ