ಚಿಕ್ಕನಾಯಕನಹಳ್ಳಿ :

ಕುಪ್ಪೂರು ಮಠದಲ್ಲಿ ಲಿಂಗೈಕ್ಯ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ಕ್ರಿಯಾ ಸಮಾಧಿಯ ದರ್ಶನಕ್ಕೆ ರಾಜ್ಯಾದ್ಯಂತ ಅಪಾರ ಭಕ್ತರು ಆಗಮಿಸಿ ರುದ್ರಾಭಿಷೇಕ ಪೂಜೆ ನಡೆಸುವ ಮೂಲಕ ಭಕ್ತಿ ಸಮರ್ಪಿಸಿದರು. ರಾತ್ರಿ 7 ಗಂಟೆಯಾದರೂ ಸಹ ಭಕ್ತರು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಅನಾಥ ಪ್ರಜ್ಞೆಯಲ್ಲಿ ಭಕ್ತರು :
ಕುಪ್ಪೂರು ಮಠದಲ್ಲಿ ಲಿಂಗೈಕ್ಯ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ನಿಧನದಿಂದ ನೀರವ ಮೌನ ಉಂಟಾಗಿದ್ದು, ಭಕ್ತರಿಗೆ ಮಾರ್ಗದರ್ಶನ, ಕಷ್ಟ-ಸುಖಗಳ ಸ್ಪಂದನೆ, ಹೋರಾಟಗಾರರಿಗೆ ಸ್ವಾಮೀಜಿಗಳ ಮುಂದಾಳತ್ವ ಇಲ್ಲದೆ ಅನಾಥ ಪ್ರಜ್ಞೆ ಕಾಡುತ್ತಿದೆ.
ಪೂರ್ಣ ಸ್ತಬ್ಧವಾದ ಮಠ :
ಯತೀಶ್ವರರು ಇದ್ದ ಸಮಯದಲ್ಲಿ ಮಠದಲ್ಲಿ ಪ್ರತಿನಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಪೂಜೆಗಳು ಪ್ರತಿನಿತ್ಯ ಜರುಗುತ್ತಿದ್ದವು, ಅವರಿಲ್ಲದೆ ಮಠದಲ್ಲಿ ಕೆಲಸ ಕಾರ್ಯಗಳು ಪೂರ್ಣ ಸ್ತಬ್ಧವಾಗಿವೆ. ಮಠದಲ್ಲಿ ಪೂಜ್ಯರು ಇಲ್ಲವಾಗಿ ಯಾರೊಂದಿಗೆ ತಮ್ಮ ಕಷ್ಟ, ಸಮಸ್ಯೆಗಳನ್ನು ಹೇಳಿಕೊಳ್ಳುವುದು ಎಂಬ ಭಾವ ಮಠಕ್ಕೆ ಆಗಮಿಸಿದ್ದ ಭಕ್ತರಿಗೆ ಕಾಡುತ್ತಿತ್ತು. ಸ್ವಾಮೀಜಿ ಇಲ್ಲದೆ ಭಕ್ತರು ಅವರ ಸಮಾಧಿಗೆ ಪೂಜೆ ಸಲ್ಲಿಸಿ ದುಃಖ ತಪ್ತರಾಗುತ್ತಿದ್ದರು.
ದರ್ಶನಕ್ಕೆ ಭಕ್ತರ ದಂಡು :

ಯತೀಶ್ವರ ಶ್ರೀಗಳ ಕ್ರಿಯಾಸಮಾಧಿ ಸ್ಥಳಕ್ಕೆ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದು, ಕ್ರಿಯಾಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಸೋಮವಾರವೂ ಕೂಡ ಮಠದ ಭಕ್ತರು ಯತೀಶ್ವರರ ಸಮಾಧಿಗೆ ರುದ್ರಾಭಿಷೇಕ ಪೂಜೆ ನೆರವೇರಿಸಿದರು.
ಹೋರಾಟಗಾರರಿಗೆ ಸ್ಪೂರ್ತಿ :

ಕಳೆದ 30 ವರ್ಷಗಳಿಂದ ಕುಪ್ಪೂರು ಮಠವನ್ನು ಕಟ್ಟಿ ಬೆಳೆಸಿದ್ದ ಶ್ರೀಗಳು, ಮಠದ ಭಕ್ತರಿಗೆ ಮಾತ್ರವಲ್ಲದೆ ಕುಪ್ಪೂರಿನ ಭಾಗದ ಇತರೆ ಹಳ್ಳಿಗಳಿಗೆ ಹಾಗೂ ಸಮಾಜಪರ ಹೋರಾಟಗಾರರಿಗೆ ಯತೀಶ್ವರರು ಸ್ಪಂದಿಸುತ್ತಿದ್ದರು. ಜಾತಿ ಮತ ಪಂಥ ಎಂಬ ಭೇದ ಮಾಡದೆ ಎಲ್ಲರನ್ನೂ ಸಲಹುತ್ತಿದ್ದರು. ಈಗ ಕುಪ್ಪೂರು ಮಠದಲ್ಲಿ ಅವರಿಲ್ಲದೆ ಮಠವು ಬಿಕೋ ಎನ್ನುತ್ತಿದೆ.
ನಮಗೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ನಮ್ಮ ಭಾಗದಲ್ಲಿ ಶಕ್ತಿಯಂತಿದ್ದವರು ಯತೀಶ್ವರರ ಶಿವಾಚಾರ್ಯ ಸ್ವಾಮೀಜಿಗಳು ಈಗ ಅವರಿಲ್ಲದೆ ನಮ್ಮ ರಕ್ಷಾ ಕವಚವೇ ಕಳಚಿದಂತಾಗಿದೆ. ನಮ್ಮ ಸಮಸ್ಯೆಗಳನ್ನು, ಕಷ್ಟಗಳನ್ನು, ಸುಖ-ದುಃಖಗಳನ್ನು ಮುಂದೆ ಯಾರ ಬಳಿ ಹೇಳಿಕೊಳ್ಳುವುದು, ಸಮಸ್ಯೆಗಳ ಪರಿಹಾರವನ್ನು ಹೇಗೆ ನಿವಾರಿಸಿಕೊಳ್ಳುವುದು ಎಂಬುದೇ ತಿಳಿಯದಾಗಿದೆ.
-ಉಮೇಶ್, ಮಠದ ಭಕ್ತರು, ಕುಪ್ಪೂರು.
ಅ.3ಕ್ಕೆ ಹಾಲು-ತುಪ್ಪ ಕಾರ್ಯಕ್ರಮ :
ಸ್ವಾಮೀಜಿಯವರ ಕ್ರಿಯಾ ಸಮಾಧಿಗೆ ಅ.3ರ ಭಾನುವಾರ ಹಾಲು ತುಪ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದೇ ಸಂಜೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಭಕ್ತರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ವಿಭೂತಿಯಲ್ಲಿ ಲೀನರಾದ ಯತೀಶ್ವರಶ್ರೀ :

ಕುಪ್ಪೂರು ಗದ್ದಿಗೆ ಮಠದ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಕ್ರಿಯಾಸಮಾಧಿ ಸೆ.26 ರಂದು (ಭಾನುವಾರ) ಮಠದ ಬಳಿ ಇರುವ ತಪೆÇೀಭೂಮಿಯಲ್ಲಿ ನೆರವೇರಿತು. ಕ್ರಿಯಾ ಸಮಾಧಿಗೆ 16 ಸಾವಿರ ವಿಭೂತಿ ಮತ್ತು ಬಿಲ್ವಪತ್ರೆಯನ್ನು ಉಪಯೋಗಿಸಲಾಯಿತು. ಕ್ರಿಯಾ ಸಮಾಧಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿ 1.30 ರ ವೇಳೆಗೆ ವೀರಶೈವ ಪದ್ದತಿಯಂತೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜೈನಿ ಶ್ರೀಗಳಾದ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
ನೂತನ ಉತ್ತರಾಧಿಕಾರಿಯಾಗಿ ತೇಜಸ್ :

ಶ್ರೀಗಳ ಸಹೋದರ ಮಹೇಶ್ ಮತ್ತು ಕಾಂತಮಣಿ ದಂಪತಿಗಳ ಮಗ ತೇಜಸ್‍ಕುಮಾರ್ ಅವರನ್ನು ನೂತನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಮಗನನ್ನು ಸನ್ಯಾಸತ್ವಕ್ಕೆ ಆಯ್ಕೆ ಮಾಡುತ್ತಿದ್ದಂತೆ ತಂದೆ ತಾಯಿಗಳು ಭಾವೋದ್ವೇಗಕ್ಕೆ ಒಳಗಾಗಿ ಮಗನನ್ನು ಶ್ರೀ ಮಠಕ್ಕೆ ಒಪ್ಪಿಸುವಾಗ ಕಂಬನಿ ಮಿಡಿದರು.
ತೇಜಸ್ ಮಠದ ಉತ್ತರಾಧಿಕಾರಿಯಾದ ಹಿನ್ನೆಲೆಯಲ್ಲಿ ಮುಂದಿನ ಶಿಕ್ಷಣಕ್ಕೆ ಮೈಸೂರಿನ ಜೆಎಸ್‍ಎಸ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ವ್ಯಾಸಂಗಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು. ನೂತನ ಸ್ವಾಮೀಜಿಯಾಗಿ ಆಯ್ಕೆಯಾದ ತೇಜಸ್ ಎಂ ಇವರು 2008ರ ಏಪ್ರಿಲ್ 22 ರಂದು ಜನಿಸಿದ್ದು, ಎಲ್‍ಕೆಜಿಯಿಂದ 7ನೇ ತರಗತಿ ವರೆಗೂ ದೊಡ್ಡ ಮೇಟಿಕುರ್ಕೆಯ ಎಸ್‍ಎಂಎಸ್ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದು, ಮುಂದಿನ 8ನೇ ತರಗತಿಯ ಶಿಕ್ಷಣಕ್ಕೆ ಮೈಸೂರಿನ ಜೆಎಸ್‍ಎಸ್ ವಿದ್ಯಾಸಂಸ್ಥೆಯಲ್ಲಿ ಹೆಚ್ಚಿನ ವ್ಯಾಸಾಂಗಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಿಪಟೂರು ಹೊನ್ನವಳ್ಳಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಟರಾಜ್ ಸೇರಿದಂತೆ ಅನೇಕ ಹರ ಗುರು ಚರ ಮೂರ್ತಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








