ಮೀಸಲಾತಿ ಘೋಷಿಸದಿದ್ದರೆ ಧರಣಿ ಸತ್ಯಾಗ್ರಹ – ಪಂಚಮಸಾಲಿ

 ತುಮಕೂರು : 

      ಪಂಚಮಸಾಲಿ ಲಿಂಗಾಯತ ಸಮಾಜದ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರ ನೀಡಿದ್ದ ಗಡುವು ಸೆ.15ಕ್ಕೆ ಮುಗಿದಿದ್ದು, ಇನ್ನೆರಡು ದಿನದಲ್ಲಿ ಮೀಸಲಾತಿ ಘೋಷಣೆ ಮಾಡದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅ.1 ರಿಂದ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

      ನಗರದ ಸಿದ್ದಗಂಗಾ ಮಠಕ್ಕೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನದ ಮುಖೇನ ಶ್ರೀಗಳು ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕೊರತೆಯಿಂದ ಲಿಂಗಾಯತ ಪಂಚಸಾಲಿ ಮತ್ತು ಅದರ ಉಪನಾಮಗಳಾಗಿರುವ ಲಿಂಗಾಯತ ಗೌಡ, ಮಲೇಗೌಡ, ದೀಕ್ಷಾ ಲಿಂಗಾಯತ ಸಮುದಾಯದ ಮಕ್ಕಳಿಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ನಮ್ಮ ಸಮುದಾಯವನ್ನು 2ಎಗೆ ಸೇರಿಸುವಂತೆ ಆಗ್ರಹಿಸುತ್ತೇವೆ ಎಂದರು.
ಈಗಾಗಲೇ ಸರ್ಕಾರ ಸೆ. 15ರೊಳಗಾಗಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸುವುದಾಗಿ ಮಾತು ಕೊಟ್ಟಿತ್ತು. ಆದರೆ ಸರ್ಕಾರ ಕೊಟ್ಟ ಗಡುವು ಮುಗಿದು ಹೋಗಿದೆ. ಹಾಗಾಗಿ ಸರ್ಕಾರ ಕೊಟ್ಟಿರುವ ಮಾತು ನೆನಪಿಸಿ, ಮತ್ತಷ್ಟು ಎಚ್ಚರಿಸಲು ಹಾಗೂ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಪಂಚಮಸಾಲಿ ಪ್ರತಿಜ್ಞಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

      ನಮ್ಮ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಿದರೆ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನುಕೂಲವಾಗಲಿದೆ. ಹೀಗಾಗಿ ನಾವು ಹೋರಾಟದ ಮೂಲಕ ಶೇ.99 ರಷ್ಟು ಗುರಿ ತಲುಪಿದ್ದೇವೆ. ಕೇವಲ 1 ರಷ್ಟು ಮಾತ್ರ ಕೆಲಸ ಬಾಕಿ ಇದೆ ಎಂದರು.
ಪಂಚಮಸಾಲಿ 2ಎ ಮೀಸಲಾತಿಗಾಗಿ ಪಾದಯಾತ್ರೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಅ.ಭಾ.ಪಂ.ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಾನಂದ ಎಸ್.ಕಾಶಪ್ಪ ಮಾತನಾಡಿ, ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈಗಾಗಲೇ ಸರ್ಕಾರ ನೀಡಿದ್ದ 6 ತಿಂಗಳ ಮುಗಿದು ಹೋಗಿದೆ. ನಮ್ಮ ಈ ಹೋರಾಟ ಅಂತಿಮಗೊಳಿಸುವುದಿಲ್ಲ. ನಮಗೆ ಮೀಸಲಾತಿ ಆದೇಶ ಪತ್ರ ಕೈ ಸೇರಬೇಕು. ನಮ್ಮ ಸಮುದಾಯದ ಮಕ್ಕಳ ಆದೇಶ ಪತ್ರವನ್ನು ಹಿಡಿದು ತಹಶೀಲ್ದಾರ್ ಕಚೇರಿಗಳಿಗೆ ಹೋಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

     ಬದುಕಿನಲ್ಲಿ ಮಡಿಯುವ ಮುನ್ನ ಮಾಡಿ ಮಡಿ ಎಂಬುದು ಹಿರಿಯ ಮಾತು. ಅದರಂತೆ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ಮೀಸಲಾತಿ ದೊರೆಯದೆ ಅಂತ್ಯಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಶ್ರೀಗಳು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಈಗಾಗಲೇ ಮುಖ್ಯಮಂತ್ರಿಗಳು ಈ ಸಂಬಂಧ ಚರ್ಚೆ ಮಾಡಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಇನ್ನೆರಡು ದಿನ ಕಾದು, ಅ. 1 ರಿಂದ ಮತ್ತೆ ನಮ್ಮ ಹೋರಾಟವನ್ನು ಆರಂಭಿಸುತ್ತೇವೆ ಎಂದರು.

     ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪಾಟೀಲ್ ಅವರು ಸಹ ನಮ್ಮ ಸರ್ಕಾರದ ಅವಧಿಯೊಳಗೆ 2ಎ ಮೀಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ, ಹೋರಾಟ ಮುಂದುವರೆಸುವುದು ಬೇಡ ಎಂದು ಸಲಹೆ ಮಾಡಿದ್ದಾರೆ. ಆದರೆ ನಾವು ಅಕ್ಟೋಬರ್ 1 ರಿಂದ ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಣೆ ಮಾಡಲಾಗಿದೆ. ಈ ಹೋರಾಟಕ್ಕೆ ಇನ್ನು 2 ದಿನ ಬಾಕಿ ಇರುವುದರಿಂದ ಅಷ್ಟರಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬ ನಂಬಿಕೆ, ವಿಶ್ವಾಸವಿದೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link