ತುಮಕೂರು :
ಕೋವಿಡ್ ಸಂಕಷ್ಟದಿಂದಾಗಿ ಬಡ-ವಲಸೆ ಕಾರ್ಮಿಕರ, ಚಿಂದಿ ಆಯುವ, ಸಿಗ್ನಲ್-ಟೋಲ್ಗಳಲ್ಲಿ ಪೆನ್ನು-ಬಾವುಟ ಇನ್ನಿತರೇ ವಸ್ತುಗಳನ್ನು ಮಾರುವ, ರಸ್ತೆಬದಿ ಸಣ್ಣ ಪುಟ್ಟ ವ್ಯಾಪಾರ ಮಾಡುವ, ಹಸಿವಿನ ಹೆಸರಿನಲ್ಲಿ ಭಿಕ್ಷೆ ಬೇಡುವ ಮಕ್ಕಳ ಬದುಕು ಅಕ್ಷರಶಹ ಬೀದಿಗೆ ಬಿದ್ದಿದೆ. ಕೊರೋನಾ ಮೂರನೇ ಅಲೆಯ ಮುನ್ಸೂಚನೆ, ಚಿಕನ್ಗುನ್ಯಾ, ಡೆಂಗ್ಯೂ, ಮಲೇರಿಯಾ ರೋಗಗಳು ಉಲ್ಭಣಗೊಳ್ಳುತ್ತಿರುವ ಈ ಸಂದಿಗ್ಧ ಹೊತ್ತಿನಲ್ಲಿ ಈ ರೀತಿಯ ಮಕ್ಕಳ ಪಾಲನೆ-ಪೋಷಣೆ-ರಕ್ಷಣೆ ತುರ್ತಾಗಿ ಆಗಬೇಕಿದ್ದು, ಸಂಬಂಧಪಟ್ಟ ಇಲಾಖೆಯವರು ಕುಂಟು ನೆಪಗಳನ್ನು ಹೇಳುವುದನ್ನು ಬಿಟ್ಟು ಸಮನ್ವಯತೆಯಿಂದ ಕಾರ್ಯೋನ್ಮುಖರಾಗಿ ಎಳೆ ಜೀವಗಳನ್ನು ಉಳಿಸಬೇಕು ಎಂಬ ಕೂಗು ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಸಂಘಟನೆಗಳಿಂದ ಕೇಳಿಬಂದಿದೆ.
ಮೂರನೇ ಅಲೆಗೂ ಮುನ್ನ ಎಚ್ಚೆತ್ತಕೊಳ್ಳಬೇಕಿದೆ :
ನವೆಂಬರ್ ಮಾಸಾಂತ್ಯದಲಿ ಕೋವಿಡ್ ಮೂರನೇ ಅಲೆ ಶುರುವಾಗಲಿದೆ ಎಂದು ತಜ್ಞರು ಘೋಷಿಸಿದ್ದು, ಇದು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೀದಿ ಪಾಲಾಗಿರುವ ಮಕ್ಕಳ ಆರೋಗ್ಯ-ಸುರಕ್ಷತೆಗೆ ಹೊಣೆಯಾರು ಎಂಬ ಮಕ್ಕಳ ಆರೋಗ್ಯ ಕುರಿತಾದ ಪ್ರಶ್ನೆಗಳು ಎದುರಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆಗಳು ಮೂಂಚೂಣಿಯಲ್ಲಿ ನಿಂತು ಇತರೆ ಇಲಾಖೆಗಳ ನಡುವೆ ಹೊಂದಾಣಿಕೆಯೊಂದಿಗೆ ಆದಷ್ಟೂ ಬೇಗ ಎಚ್ಚೆತ್ತು ಮೂರನೇ ಅಲೆ ಎಳೆಯ ಜೀವಗಳಿಗೆ ಧಕ್ಕೆ ತರದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕಿದೆ.
ಇವರೆಲ್ಲಾ ಬೀದಿ ಮಕ್ಕಳು :
ಬಸ್ಟಾಂಡ್ ಸೇರಿದಂತೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮಕ್ಕಳು, ಭಿಕ್ಷೆ ಭೇಡಲು ವಸ್ತುವಾಗಿ ತಮ್ಮ ಬಡ ತಾಯಂದಿರ ಕಂಕುಳಲ್ಲಿರುವ ಮಕ್ಕಳು, ಚಿಂದಿ ಆಯುವವರು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನಗರದ ಸ್ಮಾರ್ಟ್ಸಿಟಿ ಕಾಮಗಾರಿಯಲ್ಲಿ ದುಡಿಯಲು ಬಂದಿರುವ ಕಾರ್ಮಿಕರ ಮಕ್ಕಳು, ಉತ್ತರ ಭಾರತದ ಬಿಹಾರ, ಗುಜರಾತ್, ಉತ್ತರಪ್ರದೇಶ ಮೊದಲಾದ ರಾಜ್ಯಗಳಿಂದ ನಗರಕ್ಕೆ ಬಂದು ಟ್ರಾಫಿಕ್ ಸಿಗ್ನಲ್ ಮತ್ತು ಟೋಲ್ಗಳಲ್ಲಿ ಆಟಿಕೆ, ಮೊಬೈಲ್ ಸ್ಟಾಂಡ್, ಇನ್ನಿತರೆ ವಸ್ತುಗಳನ್ನು ಮಾರುತ್ತಿರುವವರ ಮಕ್ಕಳು, ಪೋಷಕರಿಲ್ಲದ ಅನಾಥ ಮಕ್ಕಳು. ಇವರೆಲ್ಲಾ ಬೀದಿ ಮಕ್ಕಳಾಗಿದ್ದು, ಇವರ ಬದುಕು ಬೀದಿಯಲ್ಲೆ ಕಮರಿ ಹೋಗುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಬೀದಿ ಮಕ್ಕಳನ್ನು ರಕ್ಷಿಸಿ ಅವರನ್ನು ಪೋಷಿಸಬೇಕಿದೆ.
ಪೋಷಣ್ ಅಭಿಯಾನ್ಗೆ ಸೇರಿಸಿ :
ಕಳೆದ ಒಂದು ತಿಂಗಳಿನಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿ ಗ್ರಾಮಗಳ ಅಂಗನವಾಡಿ ಮಟ್ಟದಲ್ಲಿ ಪೋಷಣ್ ಅಭಿಯಾನ್ ಆರಂಭವಾಗಿದೆ. ಕೋವಿಡ್ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ, ಪೋಷಕರಲ್ಲಿ ಅರಿವು ಮೂಡಿಸುತ್ತಿರುವ ಉತ್ತಮ ಯೋಜನೆ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಬೀದಿ ಪಾಲಾಗಿರುವ ಮಕ್ಕಳನ್ನು ಸೇರಿಸಿ ಅವರಿಗೂ ಉತ್ತಮ ಪೌಷ್ಟಿಕ ಆಹಾರ ನೀಡಿ, ಅವರ ಪೋಷಕರಲ್ಲಿ ಈ ಕುರಿತು ಜಾಗೃತಿ-ಅರಿವು ಮೂಡಿಸಿ ಮುಂದೆ ಬರಲಿರುವ ಮೂರನೇ ಅಲೆಯ ಗಂಡಾಂತರದಿಂದ ಪಾರು ಮಾಡಬೇಕಿದೆ. ಈ ಕಾರ್ಯಕ್ಕೆ ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತರು, ಶಿಕ್ಷಕರುಗಳು, ಸ್ವಯಂ ಸೇವಕರು, ಮಕ್ಕಳ ಹಕ್ಕುಗಳ ಕಾರ್ಯಕರ್ತರನ್ನು ಬಳಸಿಕೊಳ್ಳಬಹುದಾಗಿದೆ.
ಬೀದಿ ಮಕ್ಕಳ ಕುರಿತು ದೂರು ಬಂದರೆ ಅಂತಹ ಮಕ್ಕಳನ್ನು ರಕ್ಷಿಸಿ ಮಕ್ಕಳ ರಕ್ಷಣಾ ಘಟಕದ ಮುಂದೆ ಹಾಜರು ಪಡಿಸುತೇವೆ. ಮಕ್ಕಳು ಭಿಕ್ಷಾಟನೆ, ಕೂಲಿ, ಚಿಂದಿ ಆಯುತ್ತಿರುವ ದೂರುಗಳಿದ್ದರೆ ನಮ್ಮ ಸಹಾಯವಾಣಿ 1098 ಗೆ ಕರೆ ಮಾಡಬಹುದು. ಆಗ ನಾವು ಮಕ್ಕಳನ್ನು ರಕ್ಷಿಸುತ್ತೇವೆ. ಆ ಮಕ್ಕಳಿಗೆ ಪೋಷಕರಿದ್ದರೆ ಅವರನ್ನು ಕರೆಸಿ ಸೂಕ್ತ ತಿಳುವಳಿಕೆ ನೀಡಿ, ಮಕ್ಕಳನ್ನು ಶಾಲೆಗೆ ಸೇರಿಸಲು ಸಹಕರಿಸಲಾಗುವುದು.
-ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಾಗಿರುವ ಬೀದಿ ಬದಿಯ ಯಾವುದೇ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವ ಯೋಜನೆ ಇಲಾಖೆಯಲ್ಲಿದೆ. ವಲಸೆ ಕಾರ್ಮಿಕರು ಅಥವಾ ಇವರ ಪರವಾಗಿ ಯಾವುದೇ ಸಾರ್ವಜನಿಕರು ಹತ್ತಿರದ ಅಂಗನವಾಡಿಯಲ್ಲಿ ಮಗುವಿವ ವಯಸ್ಸಿನ ದಾಖಲೆ ನೀಡಿ ಹೆಸರು ನೋಂದಣಿ ಮಾಡಿಸಿದರೇ ನಾವು ಅವರಿಗೆ ಆಹಾರ ಪದಾರ್ಥಗಳನ್ನು ನೀಡುತ್ತೇವೆ.
-ಶ್ರೀಧರ್, ಉಪ ನಿರ್ದೇಶಕರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಜಿಲ್ಲೆಯಾದ್ಯಂತ ಕೋವಿಡ್ ಬಿಕ್ಕಟ್ಟಿನಿಂದಾಗಿ ನಲುಗಿದ ಮಕ್ಕಳ ಬೆಳವಣಿಗೆ ಹಾಗೂ ರಕ್ಷಣೆಯ ವಿಷಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ. ಮುಂದೆ ಮೂರನೇ ಅಲೆಯ ಊಹಾಪೆÇೀಹಗಳು ಇರುವುದರಿಂದ ಜಿಲ್ಲೆಯಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕಾಗಿ ಮಕ್ಕಳ ಜೊತೆಗೆ ನೇರವಾಗಿ ಕೆಲಸ ಮಾಡುವ ವಿವಿಧ ಇಲಾಖೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಟಾಸ್ಕ್ಫೋರ್ಸ್ ರಚಿಸಿ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಷ್ಠಾನ ಮಾಡಬೇಕಾದ ಅಗತ್ಯವಿದೆ.
-ತಿಪ್ಪೇಸ್ವಾಮಿ ಕೆ.ಟಿ, ಮಕ್ಕಳ ಹಕ್ಕುಗಳ ಕಾರ್ಯಕರ್ತ, ಕಳ್ಳಂಬೆಳ್ಳ
ಮಕ್ಕಳ ಸ್ನೇಹಿ ಆಗುವುದೇ ಜಿಲ್ಲೆ..? ಪ್ರತಿ ಗ್ರಾಪಂಯು ತನ್ನ ವ್ಯಾಪ್ತಿಯಲ್ಲಿ ಬೀದಿ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಬೇಕು ಎಂಬ ನಿಯಮವಿದೆ. ಆದರೇ ಎಷ್ಟೋ ಗ್ರಾಪಂಗಳಲ್ಲಿ ಈ ಕೆಲಸ ನಡೆದೇ ಇಲ್ಲ. ಶೀಘ್ರ ಈ ಕೆಲಸ ನಡೆಯಬೇಕು ಜೊತೆಗೆ ಮಕ್ಕಳ ಸ್ನೇಹಿ ಗ್ರಾಪಂ ಘೋಷಣೆಯ ರೀತಿಯಲ್ಲಿಯೇ ಜಿಲ್ಲಾಧಿಕಾರಿಗಳು ಕೋವಿಡ್ನಿಂದ ಬೀದಿಗೆ ಬಿದ್ದ ಮಕ್ಕಳ ರಕ್ಷಣೆ-ಪೋಷಣೆ ನಿಟ್ಟಿನಲ್ಲಿ ಜಿಲ್ಲೆಯನ್ನು ಕೋವಿಡ್ ನಿರಾಶ್ರಿತ ಮಕ್ಕಳ ಸ್ನೇಹಿ ಆಗಿಸಿ ಉತ್ತಮಕ್ರಮ ಕೈಗೊಳ್ಳಲಿ ಎಂಬುದು ಜಿಲ್ಲೆಯ ಮಕ್ಕಳ ಪ್ರಿಯರ ಒತ್ತಾಯವಾಗಿದೆ.
ಟಾಸ್ಕ್ಫೋರ್ಸ್ಗೆ ಹೆಚ್ಚಿದ ಒತ್ತಡ :
ಜಿಲ್ಲೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಗಳಲ್ಲಿ ಮಕ್ಕಳ ರಕ್ಷಣೆ, ಪೋಷಣೆಯ ಬಗ್ಗೆ ಆಗಾಗ್ಗೆ ಬಿಡಿಯಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಚರ್ಚಿಸುತ್ತಿದ್ದು, ಸಮಗ್ರವಾಗಿ ಮಕ್ಕಳ ರಕ್ಷಣೆ-ಪೋಷಣೆಯ ಬಗ್ಗೆ ಧೀರ್ಘಕಾಲೀನ ಯಾವುದೇ ಯೋಜನೆ-ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ ಎಂದು ಮಕ್ಕಳ ರಕ್ಷಣಾ ಕಾರ್ಯಕರ್ತರು, ಎನ್ಜಿಓಗಳು ಆರೋಪಿಸಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಟಾಸ್ಕ್ಪೋರ್ಸ್ ರಚಿಸಿ ಮಕ್ಕಳಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳನ್ನು ಒಂದೇ ವೇದಿಕೆಯಲ್ಲಿ ತಂದು ಕೋವಿಡ್ ಸಂಕಷ್ಟ ಕಾಲದಲ್ಲಿ ಜಿಲ್ಲೆಯ ಮಕ್ಕಳು ಎದುರಿಸಿದ ಸಮಸ್ಯೆ-ಸವಾಲುಗಳೇನು? ಅವುಗಳಿಗೆ ಕೈಗೊಳ್ಳಬೇಕಾದ ಕ್ರಮಗಳು-ಪರಿಹಾರಗಳೇನು? ಎಂದು ಸಭೆಯಲ್ಲಿ ಚರ್ಚಿಸಿ ಮಕ್ಕಳ ರಕ್ಷಣೆ-ಪೋಷಣೆಗೆ ನಿರ್ಧಿಷ್ಟ ಕಾರ್ಯಕ್ರಮ ಅಥವಾ ಯೋಜನೆ ಕೈಗೊಳ್ಳಬೇಕು ಎಂದು ಒತ್ತಯಿಸಿದ್ದಾರೆ.
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ