ನರೇಗಾ ಹಣ ನುಂಗಿದ ಪಿಡಿಓ : ಕಾರ್ಮಿಕರ ಗಂಭೀರ ಆರೋಪ

 ಪಾವಗಡ : 

     ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಗ್ರಿ ಮೊತ್ತವನ್ನ ಗ್ರಾಪಂ ಪಿಡಿಒ ನುಂಗುವ ಮೂಲಕ ಕೂಲಿ ಕಾರ್ಮಿಕರಿಗೆ ಕೈ ಕೊಟ್ಟಿದ್ದಾರೆ ಎಂದು ತಾಲ್ಲೂಕಿನ ರಾಜವಂತಿ ಗ್ರಾಪಂನ ಕೂಲಿ ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.

      ಶುಕ್ರವಾರ ಕೂಲಿ ಕಾರ್ಮಿಕರು ಗ್ರಾಪಂಗೆ ಮುತ್ತಿಗೆ ಹಾಕಿ ಗ್ರಾಪಂ ಪಿಡಿಒ ಚಿರಂಜೀವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ 2021-2022ನೇ ಸಾಲಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಾಜವಂತಿ ಕೆರೆ ಹೂಳೆತ್ತುವುದು ಹಾಗೂ ಕಣಿವೇನಹಳ್ಳಿ ಗ್ರಾಮದ ಸಶ್ಮಾನ ಅಭಿವೃದ್ದಿ, ಆರ್.ಹೊಸಕೊಟೆ, ರಾಜವಂತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗಿಡ ನೆಡುವ ಕಾಮಗಾರಿ ಹಾಗೂ ರಾಜವಂತಿ ಕೆರೆ ಅಂಗಳದಲ್ಲಿ 1ನೇ ಹಾಗೂ 2ನೇ ಹಂತದಲ್ಲಿ ಕೆರೆ ಹೂಳೆತ್ತುವುದು ಸೇರಿದಂತೆ ಆನೇಕ ಕಾಮಗಾರಿಗಳ ಸುಮಾರು 7 ಲಕ್ಷ ರೂ. ಸಾಮಗ್ರಿ ಹಣ ಇದೇ ತಿಂಗಳ 1ನೇ ತಾರೀಕು ಗುತ್ತಿಗೆದಾರರಿಗೆ ಪಾವತಿಯಾಗಿದ್ದು, ಇದನ್ನು ಕೂಲಿ ಕಾರ್ಮಿಕರಿಗೆ ನೀಡದೆ ಪಿಡಿಒ ಚಿರಂಜೀವಿ ಅವರು ಹಣವನ್ನ ಲಪಟಾಯಿಸಿದ್ದಾರೆಂದು ಕೂಲಿ ಕಾರ್ಮಿಕರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

      ರಾಜವಂತಿ ಗ್ರಾಮದ ಕೂಲಿ ಕಾರ್ಮಿಕ ಅಕ್ಕಲಪ್ಪ ಮಾತನಾಡಿ ಅ.1 ರಂದು ಬಿಡುಗಡೆಯಾದ ಸಾಮಗ್ರಿ ಮೊತ್ತವನ್ನ ಪಿಡಿಒ ಅವರು ಗುತ್ತಿಗೆದಾರರಿಂದ ಹಣ ಪಡೆದು ಕೂಲಿ ಕಾರ್ಮಿಕರಿಗೆ ಸಿಗದೆ ಗ್ರಾಪಂಗೂ ಬಾರದಂತೆ ಓಡಾಡುತ್ತಿದ್ದು, ನಾವು ಸಾಮಾಗ್ರಿ ಮೊತ್ತದ ಹಣವನ್ನು ಯಾರಲ್ಲಿ ಕೇಳಬೇಕು ಗುತ್ತಿಗೆದಾರರಿಗೆ ಕೇಳಿದರೆ ಪಿಡಿಒ ಹಣ ಪಡೆದಿದ್ದಾರೆ ಎನ್ನುತ್ತಾರೆ, ಪಿಡಿಒ ಅವರನ್ನ ನಾವು ಕೇಳಲು ಹೋದರೂ ಕೈಗೆ ಸಿಗದಂತೆ ಓಡಾಡುತ್ತಿದ್ದು ಸಂಬಂಧಪಟ್ಟವರು ಸೂಕ್ತಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕಾವಲಪ್ಪ, ಮೈಲಾರಪ್ಪ, ಅಕ್ಕಲಪ್ಪ, ಚಿನ್ನರೆಡ್ಡಿ, ಹನುಮಂತರಾಯ ಉಪಸ್ಥಿತರಿದ್ದರು.

      ಸಾಮಗ್ರಿ ಹಣ ನನ್ನ ಬಳಿಯಿದ್ದು ಕೂಲಿ ಕಾರ್ಮಿಕರ ಜೊತೆಯಲ್ಲಿ ಮಾತನಾಡಿದ್ದೇನೆ ಸೋಮವಾರ ಖುದ್ದು ನಾನೇ ಸಮಸ್ಯೆಯನ್ನು ಬಗೆಹರಿಸುತ್ತೇನೆ.

-ಚಿರಂಜೀವಿ, ರಾಜವಂತಿ ಗ್ರಾಪಂ ಪಿಡಿಒ

      21-22ನೇ ಸಾಲಿನಲ್ಲಿ ನರೇಗಾ ಸಾಮಗ್ರಿ ಮೊತ್ತ ಅ.1 ರಂದು ಬಿಡುಗಡೆಯಾಗಿದ್ದು, ಸುಮಾರು 7 ಲಕ್ಷ ರೂ. ಸಾಮಗ್ರಿ ಮೊತ್ತ ಕೂಲಿ ಕಾರ್ಮಿಕರಿಗೆ ನೀಡದೆ ಪಿಡಿಒ ನುಂಗಿ ನೀರು ಕುಡಿದಿದ್ದು, ಇದರ ಬಗ್ಗೆ ಕೇಳಲು ಗ್ರಾಪಂಗೆ ತೆರಳಿದರೆ ಗ್ರಾಪಂ ಕಚೇರಿಗೆ ಪಿಡಿಒ ಬರುತ್ತಿಲ್ಲ. 2020-21ನೇ ಸಾಲಿನಲ್ಲಿ ನರೇಗಾ ಕೂಲಿ ಮೊತ್ತದ ಹಣವನ್ನ ಪಿಡಿಒ ಅವರು ಚಿಕ್ಕನಾಯಕನಹಳ್ಳಿ ಗ್ರಾಮದ ಭೂತರಾಜು ಎಂಬ ಗುತ್ತಿಗೆದಾರರ ಖಾತೆಗೆ ಹಾಕಿಸಿ ಕೂಲಿ ಕಾರ್ಮಿಕರಿಗೆ ಕಳೆದ ವರ್ಷ ಕೂಡ 10 ಲಕ್ಷ ರೂ. ಸಾಮಗ್ರಿ ಮೊತ್ತದ ಹಣ ವಂಚನೆ ಮಾಡಿದ್ದಾರೆ.

-ರಮೇಶ್, ಅನ್ಯಾಯಕ್ಕೊಳಗಾದ ಕೂಲಿ ಕಾರ್ಮಿಕ.

ಆರ್‍ಟಿಐನಡಿ ಮಾಹಿತಿಯನ್ನೂ ಕೊಡುತ್ತಿಲ್ಲ :

      ಕಳೆದ ಮೂರು ವರ್ಷಗಳಿಂದ ಗ್ರಾಪಂಗೆ ಬಿಡುಗಡೆಯಾದ ಅನುದಾನದಲ್ಲಿ ಸುಮಾರು 56 ಲಕ್ಷ ರೂ. ಹಣವನ್ನ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದು, ಅನುದಾನ ದುರುಪಯೋಗದ ಬಗ್ಗೆ 15 ಜನರು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿದ್ದರೂ ಇದುವರೆಗೆ ಮಾಹಿತಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link