ಗುಬ್ಬಿ :

ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣವಾಗುತ್ತಿದ್ದು, ಮೊದಲ ಹಂತದ ಕಾಮಗಾರಿಗೆ ಸೋಮವಾರ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ಗುಬ್ಬಿ ಚನ್ನಬಸವೇಶ್ವರರ ಭಕ್ತರಿಂದ ಬರುವ ದೇಣಿಗೆ ಹಣವೇ ಸಾಕು. ಈ ಕಾರ್ಯಕ್ಕೆ ಸರ್ಕಾರದ ಯಾವುದೇ ಅನುದಾನದ ಅಗತ್ಯವಿಲ್ಲ ಎಂದರು. ದೇವಾಲಯಕ್ಕೆ ಶಿಲಾ ದೇಗುಲವನ್ನು ನಿರ್ಮಿಸಲು ಹಾಗೂ ಈಗ ನಡೆಯುತ್ತಿರುವ ರಾಜ ಗೋಪುರ ನಿರ್ಮಾಣದ ಕಾರ್ಯಕ್ಕೆ ಸಂಸದರಾದ ಜಿ.ಎಸ್.ಬಸವರಾಜು ಅವರ ಶ್ರಮವನ್ನು ಶ್ಲಾಘಿಸುವುದಾಗಿ ತಿಳಿಸಿದರು.
ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಂಸದ ಜಿಎಸ್ ಬಸವರಾಜು ಅವರು ಮಾತನಾಡಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳು, ಕಲ್ಯಾಣಿ, ಯಾತ್ರಿ ನಿವಾಸ ಹಾಗೂ ಬಿಲ್ವ ವನದ ನಿರ್ಮಾಣ ಸೇರಿದಂತೆ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು. ರಾಜಗೋಪುರ ನಿರ್ಮಾಣ ಕಾರ್ಯವನ್ನು ಒಂದೂವರೆ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಇದಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಭಕ್ತಾದಿಗಳೇ ಸ್ವಯಂ ಪ್ರೇರಿತರಾಗಿ ನೀಡುತ್ತಿದ್ದಾರೆ. ಹಾಗಾಗಿ ಈ ಕಾರ್ಯ ನಮ್ಮ ನಿರೀಕ್ಷೆಯಂತೆ ನಡೆಯುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಕೆ.ವಿ.ಪರಮೇಶ್, ಸಹ ಕಾರ್ಯದರ್ಶಿ ಪ್ರಸನ್ನಕುಮಾರ್, ಖಜಾಂಚಿ ಶರತ್ಚಂದ್ರಬೋಸ್ ಸಮಿತಿಯ ಸದಸ್ಯರಾದ ಹರೀಶ್ಕುಮಾರ್, ಮಹದೇವಪ್ಪ, ಆಶಾಪ್ರಸನ್ನಕುಮಾರ್, ಮಹೇಶ್, ಚಂದ್ರಮೌಳಿ, ಮುಖಂಡರಾದ ದಿಲೀಪ್ಕುಮಾರ್, ಚಂದ್ರಶೇಖರ್ಬಾಬು ಹಾಗೂ 18 ಕೋಮಿನ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








