ಸರ್ವೇ ಕಾರ್ಯದಲ್ಲಿ ಲೋಪ : ಪರಿಹಾರಕ್ಕೆ ಅಲೆದ ರೈತ ಮಹಿಳೆ

ಗುಬ್ಬಿ :

     ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ಟು ರೈತರು ತಮ್ಮ ಜಮೀನು, ಮನೆ-ಮಠಗಳನ್ನು ಕಳೆದುಕೊಂಡಿರುವುದು ಅಲ್ಲದೇ ಸರಿಯಾದ ಪರಿಹಾರ ಹಣ ದೊರಕದೆ ಕಂಗಲಾಗಿದ್ದಾರೆ.

   ತಾಲ್ಲೂಕಿನ ಸಿಂಗೋನಹಳ್ಳಿ ಗ್ರಾಮದ ಸರ್ವೆ ನಂ : 101 ರಲ್ಲಿನ ರೈತ ಮಹಿಳೆ ಗಂಗಮ್ಮ ಅವರಿಗೆ ಸೇರಿದ 1.1 ಎಕರೆ ಜಮೀನನ್ನು ರಸ್ತೆ ಕಾಮಗಾರಿಗೆ ವಶಪಡಿಸಿಕೊಂಡು ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ರೈತ ಮಹಿಳೆ ಗಂಗಮ್ಮ ದೂರಿದ್ದಾರೆ.
ಬಹಳ ಹಿಂದಿನಿಂದಲೂ ನಮ್ಮ 3.5 ಎಕರೆ ಜಾಗದಲ್ಲಿ ಕೃಷಿ ಮಾಡುತ್ತಿದ್ದೇವೆ. ಆದರೆ ಅಧಿಕಾರಿಗಳು ನಮ್ಮ 2 ಎಕರೆ ಜಾಗವೇ ಕಾಣುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ಆಶ್ಚರ್ಯವಾಗಿದೆ ಹಾಗೂ ರಸ್ತೆ ಕಾಮಗಾರಿಯ ಪರಿಹಾರ ಹಣ ನೀಡುವಾಗ ಕೇವಲ 29 ಗುಂಟೆ ಜಮೀನಿನ ಹಣವನ್ನು ಮಾತ್ರ ಹಾಕಲಾಗಿದೆ, ಮಿಕ್ಕ ಹಣ ಹಾಕಿಲ್ಲ. ನಮಗೆ ಅಧಿಕಾರಿಗಳು ಅನ್ಯಾಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಈ ವಿಚಾರವಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಬಿ ಆರತಿ, ಪ್ರಾಧಿಕಾರದ ಸರ್ವೇಯರ್‍ಗಳಾದ ಭೈರಪ್ಪ, ಬಸವರಾಜು ಮತ್ತು ಸಿಪಿಐ ನಧಾಪ್, ಪಿಎಸ್‍ಐ ನಟರಾಜ್ ಅವರು ರಸ್ತೆ ಕಾಮಗಾರಿ ಪ್ರಾರಂಭಿಸಲು ಮುಂದಾದರು. ಈ ಸಂದರ್ಭ ರಸ್ತೆ ಕಾಮಗಾರಿಗೆ ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಪರವಾಗಿ ಸ್ಥಳೀಯರು ಅಡ್ಡಿ ಪಡಿಸಿ ಅಧಿಕಾರಿಗಳ ಬಳಿ ಚರ್ಚಿಸಿದರು. ಆಗ ಸ್ಥಳಕ್ಕಾಗಮಿಸಿದ ಪಪಂ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಮುಖಂಡರಾದ ಹೇರೂರು ನಾಗರಾಜ್, ಶ್ರೀನಿವಾಸ್, ಲೋಕೇಶ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ಕೆಲ ಮುಖಂಡರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಫೋನ್ ಮೂಲಕ ಈ ಕುರಿತು ವಿಷಯ ತಿಳಿಸಿದರು. ನಂತರ ಸರ್ವೇಯರ್‍ಗಳೊಂದಿಗೆ ಚರ್ಚೆ ನಡೆಸಿ ಸರ್ವೇಕಾಲದಲ್ಲಿ ಆಗಿರುವ ದೋಷವನ್ನು ಮನವರಿಕೆ ಮಾಡಿಕೊಟ್ಟು ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಅವರಿಗೆ ಬಾಕಿ ಬರಬೇಕಾದ ಪರಿಹಾರ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಚರ್ಚೆ ಆಲಿಸಿದ ಅಧಿಕಾರಿಗಳು ಸಂತ್ರಸ್ತೆಗೆ ದಾಖಲೆಯೊಂದಿಗೆ ಕಚೇರಿಗೆ ಬಂದ ನಂತರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

     ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿಗಳು ನಡೆಸಿರುವ ಸರ್ವೇ ಕಾರ್ಯದಲ್ಲಿ ಆಗಿರುವ ಪ್ರಮಾದದಿಂದ 1.1 ಎಕರೆ ಬದಲಾಗಿ ಕೇವಲ 20 ಗುಂಟೆ ಜಮೀನಿಗೆ ಮಾತ್ರ ಪರಿಹಾರ ನೀಡಿದ್ದು, ಬಾಕಿ 12 ಗುಂಟೆ ಜಮೀನಿಗೆ ನೀಡಬೇಕಾಗಿದ್ದ ಪರಿಹಾರ ಹಣದ ವಿಚಾರವಾಗಿ ಕಳೆದ 4 ವರ್ಷದಿಂದ ಕಚೇರಿಗಳಿಗೆ ಅಲೆದಾಡಿದ್ದೇನೆ. ಮುಗ್ಧ ಜನರ ಭೂಮಿಗೆ ಬೆಲೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ.

-ಗಂಗಮ್ಮ, ನೊಂದ ರೈತ ಮಹಿಳೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap