ತುಮಕೂರು : ಸಾರಥಿಯಿಲ್ಲದ ಜಿಲ್ಲಾ ಬಿಜೆಪಿ ಒಡೆದ ಮನೆಯಾಗುತ್ತಿದೆ..!

 ತುಮಕೂರು : 

     ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ತಿಂಗಳು ತುಮಕೂರು ಭೇಟಿ ಬಳಿಕ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಉಲ್ಬಣಗೊಡಿದ್ದು, ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಶುರುವಾದ ಕಮಲ ಕಲಹ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆಯುತ್ತಿದೆ.

      ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ತಿಂಗಳಾಂತ್ಯಕ್ಕೆ ಉನ್ನತ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡದಿದ್ದರೆ ರಾಜೀನಾಮೆ ಕೊಡುವುದಾಗಿ ಘೋಷಣೆ ಮಾಡಿದ್ದು, ಜಿಲ್ಲೆ, ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮಸಾಲೆ ಜಯರಾಂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ-ಇಲ್ಲವಾ? ಪಕ್ಷವನ್ನು ತೊರೆಯುತ್ತಾರಾ?, ಇವರ ಹಾದಿಯನ್ನೇ ಜಿಲ್ಲೆಯ ಇತರ ಬಿಜೆಪಿ ಶಾಸಕರು ಹಿಡಿಯುತ್ತಾರಾ ಎಂಬ ಸಂದೇಹಗಳಿಗೆ ಆಸ್ಪದ ಒದಗಿಸಿದೆ.


ಮಾಜಿ ಶಾಸಕ ವರ್ಸಸ್ ಸಚಿವ:

      ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗ್ರಾಮಾಂತರ ಕ್ಷೇತ್ರಕ್ಕೆ ಸೀಮಿತರಾಗಿ ಪಕ್ಷದ ಕಾರ್ಯಕರ್ತನಾಗಿ ದುಡಿಯುವೆ ಎಂದು ಪ್ರಕಟಿಸಿದ್ದ ಬಿ.ಸುರೇಶ್‍ಗೌಡ ಅವರು ಕಳೆದ ಭಾನುವಾರ ಗೂಳೂರಿನಲ್ಲಿ ನಡೆದ ತಮ್ಮ 56ನೇ ಜನ್ಮದಿನದ ಸಮಾರಂಭದಲ್ಲಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನವನ್ನು ನೇರವಾಗಿ ಹೊರಹಾಕಿದ್ದು, ಗ್ರಾಮಾಂತರ ಕ್ಷೇತ್ರದ ಕೆಲವು ಕೆರೆಗಳಿಗೆ ಹೇಮೆ ನೀರು ಹರಿಸಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಮಾಧುಸ್ವಾಮಿ ಅವರು ಅಲೋಕೇಷನ್ ಆಗಿರುವ ಕೆರೆಗಳಿಗೆ ಬಿಡದೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತು ಸುರೇಶ್‍ಗೌಡರು ತನ್ನೊಂದಿಗೆ ಚರ್ಚಿಸಿಯೇ ಇಲ್ಲ ಎಂದು ತಿರುಗೇಟು ನೀಡಿದ್ದರು. ಮಾಜಿ ಶಾಸಕ ವರ್ಸಸ್ ಸಚಿವರ ನಡುವಿನ ಜಟಾಪಟಿ ತಾರಕಕ್ಕೇರಿದ್ದು, ಗೌಡರ ಬೆಂಬಲಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವುದಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

      ಜಿಲ್ಲಾ ಬಿಜೆಪಿಯಲ್ಲಿ ಪ್ರಸ್ತುತ ಉಸ್ತುವಾರಿ ಸಚಿವರದ್ದೊಂದು ದಾರಿ, ಶಾಸಕರು, ಮಾಜಿ ಶಾಸಕರುಗಳು, ಸಂಸದರದ್ದು ಮತ್ತೊಂದು ದಾರಿ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಪದಾಧಿಕಾರಿಗಳು, ಕಾರ್ಯಕರ್ತರೂ ನಾವು ಯಾರ ಹಿಂದೆ ಹೋಗಬೇಕು ಎಂಬ ಬಗ್ಗೆ ಗೊಂದಲಕ್ಕೀಡಾಗುವಂತೆ ಆಗಿದೆ. ಪಕ್ಷದಲ್ಲಿ ಬಿಎಸ್‍ವೈ ಮೂಲೆಗುಂಪಾಗುತ್ತಿದ್ದಾರೆ ಎನ್ನುವ ಸಂಗತಿಯೂ ಜಿಲ್ಲಾ ಬಿಜೆಪಿಯಲ್ಲಿರುವ ಬಿಎಸ್‍ವೈ ಬೆಂಬಲಿಗರಿಗೂ ತಳಮಳಕ್ಕೆ ಎಡೆ ಮಾಡಿದೆ.


ಸಚಿವರ ವಿರುದ್ಧ ಸ್ವಪಕ್ಷೀಯರ ಗುಡುಗು :

      ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಕಾನೂನಿನ ತೊಡಕನ್ನೇ ಪ್ರಸ್ತಾಪಿಸಿ ವಿಪಕ್ಷ ನಾಯಕರು ಮಾತ್ರವಲ್ಲೆ ಹಾಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರ ಅಸಮಾಧಾನಕ್ಕೂ ಗುರಿಯಾಗಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಸ್ವಪಕ್ಷೀಯ ಮಾಜಿ ಶಾಸಕರ ನೇರ ಟೀಕೆಗೊಳಗಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಪ್ರಸ್ತುತ ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ವರಸೆ ಬದಲಾಯಿಸಿ ನೀರು ಹರಿಸುವ ಹೇಳಿಕೆ ಕೊಟ್ಟಸಚಿವರು ಗ್ರಾಮಾಂತರ ಕ್ಷೇತ್ರಕ್ಕೆ ನೀರು ಹರಿಸುವ ಭರವಸೆ ಕೊಟ್ಟಿದ್ದಾರೆ.

      ಪಕ್ಷದ ಆಂತರಿಕ ಕಲಹಕ್ಕೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್‍ಗೌಡ ಅವರು ರಾಜೀನಾಮೆ ನೀಡಿ ಇಂದಿಗೆ 19ದಿನಗಳೇ ಕಳೆಯಲಿದ್ದು, 2-3 ದಿನದೊಳಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡರು ಇನ್ನೂ ವಿಳಂಬ ಮಾಡುತ್ತಿರುವುದನ್ನು ನೋಡಿದರೆ ಅಧ್ಯಕ್ಷರ ಆಯ್ಕೆ ಕಗ್ಗಂಟ್ಟೆಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.

55 ರಿಂದ 60 ವಯೋಮಾನದವರಿಗೆ ಅಧ್ಯಕ್ಷರಾಗುವ ಯೋಗ!

      ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಕಡೆಯವರನ್ನೇ ತಂದು ಕೂರಿಸಲು ಸಂಸದ ಜಿ.ಎಸ್.ಬಸವರಾಜು, ಮಾಜಿ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡರು ಸಚಿವರು, ಶಾಸಕರು ಹೀಗೆ ಪ್ರಮುಖ ನಾಯಕರು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಜಿಪಂ ಮಾಜಿ ಸದಸ್ಯ ಹೆಬ್ಬಾಕರವಿ, ಬಿಜೆಪಿ ಸಂಘಟನೆಯಲ್ಲಿರುವ ಲಕ್ಷ್ಮೀಶ್ ಹಾಗೂ ಜಿಲ್ಲಾ ಬಿಜೆಪಿ ಖಜಾಂಚಿ ಡಾ.ಎಸ್.ಪರಮೇಶ್ ಅವರು ಪ್ರಮುಖ ಅಧ್ಯಕ್ಷ ಆಕಾಂಕ್ಷಿಗಳಾಗಿ ಹೆಸರು ಕೇಳಿಬರುತ್ತಿದ್ದು, 55 ರಿಂದ 60 ವರ್ಷ ವಯೋಮಾನದೊಳಗಿನವರಿಗೆ ಮಾತ್ರ ಅಧ್ಯಕ್ಷಸ್ಥಾನ, ಶಾಸಕರ್ಯಾರು ಆ ರೇಸ್‍ನಲ್ಲಿಲ್ಲ ಎಂದು ಸಚಿವ ಮಾಧುಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಹುಲಿನಾಯ್ಕರ್ ಸಹ ಈ ಬಾರಿ ವಯೋಮಾನವನ್ನು ಆಧರಿಸಿ ಅಧ್ಯಕ್ಷರ ಆಯ್ಕೆ ನಡೆಸಲು ಪಕ್ಷದಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರ ಹೇಳಿಕೆಯನ್ನು ಅನುಮೋದಿಸಿದ್ದಾರೆ. ಯಾರೇ ಅಧ್ಯಕ್ಷರಾದರೂ ಸದ್ಯ ಒಡೆದ ಮನೆಯಾಗುತ್ತಿರುವ ಜಿಲ್ಲಾ ಬಿಜೆಪಿಯನ್ನು ಮತ್ತೆ ಕೂಡುಮನೆಯಾಗಿ ಮಾಡುವ ದೊಡ್ಡ ಸವಾಲನ್ನೇ ಎದುರಿಸಬೇಕಿದೆ.

      ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರ ನೇಮಕ ಮಾಡಬೇಕೆಂಬ ಚರ್ಚೆ ನಡೆದಿದೆ ಹೊರತು ಇಂತಹವರನ್ನೇ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆದಿಲ್ಲ. ಶೀಘ್ರವೇ ಪಕ್ಷ ಸಂಘಟನೆ ದೃಷ್ಟಿಯಿಂದ ಸಮರ್ಥ ಅಧ್ಯಕ್ಷರ ನೇಮಕವಾಗಲಿದೆ.

-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link