ಚಳ್ಳಕೆರೆ:

ಸರ್ಕಾರದ ಮಹತ್ತರ ಯೋಜನೆಯಾದ ವಿಶೇಷವಾಗಿ ಗ್ರಾಮೀಣ ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ರೇಣುಕಾಪುರ ಗ್ರಾಮದಲ್ಲಿ ವಾಸ್ತವ್ಯಹೂಡಿ ಬೆಳ್ಳಂಬೆಳಗ್ಗೆ ಗ್ರಾಮೀಣ ಭಾಗದ ಜನರೇ ಚಕಿತರಾಗುವಂತೆ ಗ್ರಾಮ ಪ್ರಮುಖ ರಸ್ತೆಗಳಲ್ಲಿ ವಾಕಿಂಗ್ ನಡೆಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕಶಾಲೆಯಲ್ಲಿ ತಂಗಿದ್ದು ನಂತರ ಸೂರ್ಯೋದಯದ ವೇಳೆಗೆ ಎದ್ದು ಗ್ರಾಮದ ರಸ್ತೆಗಳಲ್ಲಿ ಸಂಚರಿಸಿ ಸ್ವಚ್ಚತೆಯನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಚರಂಡಿಯಲ್ಲಿ ನೀರು ಹರಿಯುತ್ತಿಲ್ಲವೆಂಬ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಸ್ವಚ್ಚತೆಗೊಳಿಸುವಂತೆ ಸೂಚನೆ ನೀಡಿದರು. ಗ್ರಾಮದ ತುಂಬೆಲ್ಲಾ ಓಡಾಡಿದ ಜಿಲ್ಲಾಧಿಕಾರಿಗಳನ್ನು ಗ್ರಾಮದ ಜನರು ಸಂತಸದಿಂದಲೇ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಸುಮಾರು 7.30ರ ಸಮಯದಲ್ಲಿ ಗ್ರಾಮದ ಮಾರಕ್ಕ ಎಂಬ ದಲಿತ ಮಹಿಳೆಯ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಮಾರಕ್ಕ ಮತ್ತು ಕುಟುಂಬ ವರ್ಗ ಸ್ವಾಗತಿಸಿದರು. ಅವರ ಮನೆಯಲ್ಲೇ ತಹಶೀಲ್ದಾರ್ ಎನ್.ರಘುಮೂರ್ತಿಯವರೊಂದಿಗೆ ಬಿಸಿ ಕಾಫಿಯನ್ನು ಸಹ ಸೇವಿಸಿದರು. ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನಕ್ಕೆ ತೆರಳಿ ಗ್ರಾಮದ ಮಹಿಳೆಯರೊಂದಿಗೆ ಕೈಮುಗಿದು ಪುನಃ ಮತ್ತೆ ರಸ್ತೆಗಿಳಿದು ಜನರೊಂದಿಗೆ ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿಗಳು ಚಿತ್ರದುರ್ಗದ ಕೇಂದ್ರ ಸ್ಥಾನಕ್ಕೆ ಹೊರಡಲು ಸಿದ್ದತೆ ನಡೆಸುವ ಸಂದರ್ಭದಲ್ಲಿ ಗ್ರಾಮದ ನೂರಾರು ಸಂಖ್ಯೆಯ ಮಹಿಳೆಯರು, ಮಕ್ಕಳು, ಹಿರಿಯರು ಜಿಲ್ಲಾಧಿಕಾರಿಗಳಿಗೆ ಕೈಮುಗಿದು ಬೀಳ್ಕೊಟ್ಟರು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗ್ರಾಮದ ಜನರಿಗೆ ಹೆಚ್ಚು ಸಂತಸವನ್ನು ತಂದುಕೊಟ್ಟಿದ್ದು ಜಿಲ್ಲಾಧಿಕಾರಿಗಳ ಸರಳತೆ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮುಂಜಾನೆ ದಲಿತ ಮಹಿಳೆ ಮಾರಕ್ಕ ಎಂಬುವವರ ಮನೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕಾಫಿ ಸವಿದರು. ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಎನ್ಎಸ್ಎಸ್ ಘಟಕದೊಂದಿಗೆ ಸಂಜೆ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








