ತುಮಕೂರು :

ಸ್ಮಾರ್ಟ್‍ಸಿಟಿ ಕಾಮಗಾರಿ ವಾಹನ ಸವಾರರ ವಾಕ್ಸಮರ ನಡೆಯುತ್ತಲೇ ಇದೆ. ದಿನನಿತ್ಯ ಆಗುವ ಘಟನೆಗೆ ಕೋಮು ಬಣ್ಣ ಬಳಿಯಲಾಗುತ್ತಿದೆ. ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬಂದ್ ನಡೆಯಲಿ, ಆದರೆ ಕೋಮು ಬಣ್ಣಕ್ಕಾಗಿ ಬಂದ್ ಮಾಡುತ್ತಿರುವುದು ಸರಿಯಲ್ಲ. ಶಾಂತಿ ಸಾಮರಸ್ಯ ಕಾಪಾಡಲು ರಕ್ಷಣಾ ಇಲಾಖೆ ಕ್ರಮ ವಹಿಸಿದೆ ಎಂದು ಬಿ.ಉಮೇಶ್ ಮನವಿ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತುಮಕೂರಿನಲ್ಲಿ ಶಾಂತಿ ಕಾಪಾಡುವಂತೆ ಮನವಿ ಸಲ್ಲಿಸಿ ಮಾತನಾಡಿದ ಅವರು, ದಿನನಿತ್ಯ ರಸ್ತೆ ಬದಿಯಲ್ಲಿ ನೂರಾರು ಜಗಳ ನಡೆಯುತ್ತಿರುತ್ತವೆ. ಅಂತಹ ಒಂದು ಜಗಳಕ್ಕೆ ಕೋಮು ಬಣ್ಣ ಕಟ್ಟಿ, ಜನಸಾಮಾನ್ಯರ ಬವಣೆಗಳನ್ನು ಮರೆ ಮಾಚುವ ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ. ಪೊಲೀಸರು ಕೋಮು ಸಂಘರ್ಷಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.
ಪ್ರಗತಿಪರ ಚಿಂತಕ ಪ್ರೊ.ದೊರೈರಾಜು ಮಾತನಾಡಿ, ತುಮಕೂರು ಬಂದ್ ವೇಳೆ ಹೊರಗಿನಿಂದ ಬಂದು ಇಲ್ಲಿ ಶಾಂತಿ ಕದಡುವ ಬಾಹ್ಯ ಶಕ್ತಿಗಳ ಮೇಲೆ ಪೊಲೀಸರು ನಿಗಾ ವಹಿಸಬೇಕು. ಶಾಂತಿಯುತವಾಗಿರುವ ತುಮಕೂರಿನಲ್ಲಿ ಮತೀಯ ಕಲಹವನ್ನುಂಟು ಮಾಡುವ ಯಾವುದೇ ಶಕ್ತಿಗಳ ಮೇಲೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಅವರಲ್ಲಿ ಮನವಿ ಮಾಡಿದರು.
ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಮಾತನಾಡಿ, ಟ್ರಾಫಿಕ್ ಸಮಸ್ಯೆಯಿಂದ ಉಂಟಾದ ವಾಗ್ವಾದ ಹಲ್ಲೆವರೆಗೆ ಹೋಗಿದ್ದು, ಹಲ್ಲೆಗೆ ಮೂಲ ಕಾರಣವನ್ನೇ ಮರೆಮಾಚಿ ಬೇರೆ ಬಣ್ಣವನ್ನು ನೀಡಲಾಗಿದೆ. ಅಲ್ಲದೆ ಮಂಗಳವಾರ ರಾತ್ರಿ ಹಿಂದೂ ಪರ ಸಂಘಟನೆಗಳ ಮುಖಂಡರಾದ ಮಧುಗಿರಿ ಮೋದಿ, ಪುನೀತ್ ಕೆರೆಹಳ್ಳಿ ಹಾಗೂ ಹಿಂಜಾವೇ ಮುಖಂಡ ಬಸವರಾಜು, ಮುಸ್ಲಿಂ ಮುಖಂಡರ ಮೇಲೆ ಹಲ್ಲೆ ಮಾಡಿದ್ದು, ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರವಾಡ್, ಯಾರೇ ಶಾಂತಿಭಂಗ ಮಾಡಲು ಪ್ರಯತ್ನಿಸಿದರೂ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಬಿ.ಎಸ್.ಮಂಜುನಾಥ್, ಮುಖಂಡರಾದ ಸೈಯದ್ ಮುಜೀಬ್, ಸುಬ್ರಹ್ಮಣ್ಯ, ಪಿ.ಎನ್.ರಾಮಯ್ಯ, ನಿಧಿಕುಮಾರ್, ರಾಜೇಶ್, ಎಸ್.ಎನ್.ಸ್ವಾಮಿ, ಅಶ್ವತ್ಥನಾರಾಯಣ್, ಟಿ.ಎಸ್.ಗೌಸ್‍ಪಾಷ, ದರ್ಶನ್, ಉಬೇದುಲ್ಲಾ, ಜಾಕೀರ್‍ಪಾಷ, ಅಲ್ಲಾಭಕ್ಷ್, ಅಕ್ರಮ್ ಪಾಷ ಸೇರಿದಂತೆ ಇತರರಿದ್ದರು.
ಕೋಮು ಸಂಘರ್ಷ ಬೆಳೆಸಬಾರದು
ಬೆಲೆ ಏರಿಕೆ ಮತ್ತು ಕೋವಿಡ್ ಸಮಸ್ಯೆಯಿಂದ ಜನರು ಬದುಕುವುದು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಬ್ಬರ ನಡುವಿನ ಟ್ರಾಫಿಕ್ ಸಮಸ್ಯೆಗೆ ಕೋಮು ಬಣ್ಣ ಹಚ್ಚಲಾಗಿದೆ. ಸರ್ಕಾರ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ಕೋಮು ಸಂಘರ್ಷ ಬೆಳೆಸಬಾರದು. ತುಮಕೂರಿನ ಸಾಮರಸ್ಯ ಹಾಳಾಗದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ದೊರೈರಾಜು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








