ಜೆಡಿಎಸ್‍ಗೆ ಗುಡ್ ಬೈ ಹೇಳಲು ಸಿದ್ದರಾದ ಗುಬ್ಬಿ ಶಾಸಕ!

 ತುಮಕೂರು : 

      ಪಕ್ಷ ತ್ಯಜಿಸುವಂತೆ ಗುಬ್ಬಿಯ ಸಮಾವೇಶದಲ್ಲಿ ಸ್ಪಷ್ಟ ಸಂದೇಶ ರವಾನಿಸಿರುವ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಹೇಳಿರುವ ವರಿಷ್ಠರ ಸಂದೇಶವನ್ನು ಶಿರಸಾವಹಿಸಿ ಪಾಲಿಸುವೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ತೀರ್ಮಾನ ಕೈಗೊಳ್ಳುವೆ ಎನ್ನುವ ಮೂಲಕ ಜೆಡಿಎಸ್‍ಗೆ ಗುಡ್‍ಬೈ ಹೇಳಲು ಸಿದ್ದರಾಗಿರುವ ಸಂದೇಶ ರವಾನಿಸಿದ್ದಾರೆ.

      ಪ್ರಜಾಪ್ರಗತಿ -ಪ್ರಗತಿ ಟಿವಿಯೊಂದಿಗೆ ಮಾತನಾಡಿದ ಅವರು ಸಮಾವೇಶದಲ್ಲಿ ಎಚ್ಡಿಕೆ ಅವರು ಮಾಡಿರುವ ಆರೋಪಗಳನ್ನು ಗಮನಿಸಿರುವೆ. ನನ್ನನ್ನು ಮಂತ್ರಿ ಮಾಡಿ ದೊಡ್ಡ ಅಪರಾಧ ಮಾಡಿದೆ ಎಂದಿದ್ದಾರೆ. ನಾನೇನಾದರೂ ಅವರ ಬಳಿ ಮಂತ್ರಿ ಮಾಡಿ ಎಂದು ಕೇಳಿದ್ದೆನಾ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ದೇವೇಗೌಡರನ್ನು ಭೇಟಿ ಮಾಡಿದಾಗ ಕುಂಚಿಟಿಗರಿಗೆ ಮಾತ್ರ ಈ ಬಾರಿ ಮಂತ್ರಿ ಸ್ಥಾನ ಎಂದಿದ್ದರು. ನಾನು ಆಗಲಿ ಎಂದು ಸಿರಾ ಸತ್ಯನಾರಾಯಣ್ ಅವರಿಗೆ ವಿಶ್ ಮಾಡಿ ಊರಿಗೆ ಮರಳಿದ್ದೆ. ಸಂಪುಟ ವಿಸ್ತರಣೆ ದಿನ ದಿಢೀರನೇ ಕುಮಾರಸ್ವಾಮಿ ಅವರು ಕರೆ ಮಾಡಿಸಿ ಬಂದು ಭೇಟಿ ಮಾಡಲು ಹೇಳಿದರು. ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಭೇಟಿಯಾದಾಗ ಸಚಿವರಾಗಿ ಪದಗ್ರಹಣ ಸ್ವೀಕರಿಸಿ ಎಂದು ಸೂಚಿಸಿದರು. ನಾನು ಬೇರೆ ಬಟ್ಟೆಯನ್ನೂ ತಂದಿರಲಿಲ್ಲ. ಹೇಗಿದ್ದೆನೋ ಹಾಗೇ ಮಂತ್ರಿಯಾದವನು. ಆದರೆ ಮಂತ್ರಿಯಾದ ಮೇಲೆ ನನ್ನನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಕುಮಾರಸ್ವಾಮಿಯವರೇ ಹೇಳಲಿ ಎಂದು ತಿರುಗೇಟು ನೀಡಿದರು.

ಶಿವನಂಜಪ್ಪ ಅವರಿಗೆ ಮಾಡಿದ್ದಾದರೂ ಏನು?:

       ಇಂಧನ, ಹಣಕಾಸು, ಪಿಡಬ್ಲ್ಯೂಡಿಯಂತಹ ಪ್ರಬಲಖಾತೆಗಳ ತಮ್ಮ ಬಳಿಯೇ ಇಟ್ಟುಕೊಂಡು ಇತರರ ಬಗ್ಗೆ ಇವರಿಗೆ ಹಣಕಾಸು ಖಾತೆ ನೀಡಬೇಕಿತ್ತಾ? ಎಂದು ಅವಹೇಳನ ಮಾಡಿದ ಕುಮಾರಸ್ವಾಮಿ ಅವರು ಪಕ್ಷದ ಅಸ್ಥಿತ್ವ ಕಳೆದುಕೊಂಡಿದ್ದ ಗುಬ್ಬಿಯಲ್ಲಿ ಕಳೆದ 20 ವರ್ಷದಿಂದ ಮತ್ತೆ ಪಕ್ಷವನ್ನು ಗಟ್ಟಿಗೊಳಿಸಿದವರ್ಯಾರು? ಎಂಬುದನ್ನು ತಿಳಿದು ಮಾತನಾಡಲಿ. ನನ್ನ ವಿರುದ್ಧ ಪಕ್ಷದ ಕತ್ತು ಕುಯ್ಯುತ್ತಿರುವ ಆರೋಪ ಮಾಡಿರುವ ಕುಮಾರಸ್ವಾಮಿ ಅವರು 2004ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ.ಎಸ್.ಶಿವನಂಜಪ್ಪ ಅವರಿಗೆ ವಿರುದ್ಧವಾಗಿ ಪಕ್ಷೇತರನಾಗಿದ್ದ ನನ್ನನ್ನು ಬೆಂಬಲಿಸಿದೇ ಎಂದು ಅವರೇ ಹೇಳಿಕೊಂಡಿರುವುದನ್ನು ನೋಡಿದರೆ ಯಾರು ಕತ್ತುಕುಯ್ಯುವ ಕೆಲಸ ಮಾಡಿದರೆಂಬುದು ಜನತೆಗೆ ಅರ್ಥವಾಗುತ್ತದೆ ಎಂದು ಟಾಂಗ್ ಕೊಟ್ಟರು.

ಡಿ.ಕೆ.ಶಿವಕುಮಾರ್ ನನ್ನನ್ನು ಸಂಪರ್ಕಿಸಿಲ್ಲ, ಬರೀ ಸುಳ್ಳು!

       ಜೆಡಿಎಸ್ ಶಾಸಕರನ್ನು ಸೆಳೆಯುವ ಡಿಕೆಶಿ ಇದ್ದಾರೆಂಬ ಕುಮಾರಸ್ವಾಮಿ ಆರೋಪವನ್ನು ನಿರಾಕರಿಸಿದ ಎಸ್.ಆರ್.ಶ್ರೀನಿವಾಸ್ ಅವರು ನಾನು ಡಿ.ಕೆ.ಶಿವಕುಮಾರ್ ಅವರನ್ನು ಕಲಾಪದ ಸಂದರ್ಭದಲ್ಲಿ ಒಮ್ಮೆ ಮಾತಾಡಿಸಿದೆ ಬಿಟ್ಟು ಬೇರೆ ಯಾವ ಸಂದರ್ಭದಲ್ಲೂ ಭೇಟಿಯಾಗಿಲ್ಲ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅವರ ಮನೆಯಲ್ಲಿ ಒಮ್ಮೆ ಮಾತ್ರ ವೈಯಕ್ತಿಕ ಕಾರಣಕ್ಕೆ ಭೇಟಿಯಾಗಿದ್ದು, ಕೆ.ಎನ್.ರಾಜಣ್ಣ ಹಾಗೂ ಪರಮೇಶ್ವರ ಅವರನ್ನು ಮುಖಂಡರಿಗೆ ಬ್ಯಾಂಕ್ ಸಾಲ, ವೈದ್ಯಕೀಯ ಸೀಟ್‍ಗಾಗಿ ಸಂಪರ್ಕಿಸಿದೆಯಷ್ಟೆ. ಈ ಭೇಟಿಯನ್ನು ತಪ್ಪಾಗಿ ಎಚ್ಡಿಕೆ ಬಿಂಬಿಸಿದ್ದಾರೆ. ನಾನು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್‍ನ ಯಾವ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಇನ್ನೂ ಒಂದೂವರೆ ವರ್ಷ ಶಾಸಕನ ಅವಧಿ ಇದ್ದು, ಬೆಂಬಲಿಗರ ಜೊತೆ ಚರ್ಚೆಸಿ ತೀರ್ಮಾನಿಸುವೆ ಎಂದು ಸ್ಪಷ್ಟಪಡಿಸಿದರು.

  ಎಚ್ಡಿಕೆಗೆ ನೀವು ತಪ್ಪು ಮಾಡಿದ್ದಿರಿ ಎಂದಿದ್ದೇ ಇಷ್ಟೆಲ್ಲದಕ್ಕೂ ಕಾರಣ!

      2013ರ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಅಸಮಾಧಾನಿತ ಜೆಡಿಎಸ್ ಶಾಸಕರ ಸಭೆಯನ್ನು ಲಿ ಮೆರೆಡಿಯನ್ ಹೋಟೆಲ್‍ನಲ್ಲಿ ರಾತ್ರಿ 9ಕ್ಕೆ ಕರೆಯಲಾಗಿತ್ತು. ಚೆಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್, ನಾನು, ರಮೇಶ್‍ಬಂಡಿಸಿದ್ದೇಗೌಡ ಹೀಗೆ ಹಲವು ಶಾಸಕರು ಪಾಲ್ಗೊಂಡಿದ್ದರು. ಸುಮಾರು 3 ತಾಸು ಶಾಸಕರು ದೂರುಗಳನ್ನು ಹೇಳಿದರು. ಎಲ್ಲದಕ್ಕೂ ಮೌನವಾಗಿದ್ದ ಕುಮಾರಸ್ವಾಮಿ ಅವರನ್ನು ನಾನೇ ಇಷ್ಟೆಲ್ಲ ಹೇಳುತ್ತಿದ್ದಾರೆ. ತಪ್ಪಾಗಿರುವುದನ್ನು ಒಪ್ಪಿಕೊಂಡು ಸರಿಪಡಿಸೋಣ ಎಂದು ಹೇಳಿ ಪಕ್ಷ ಸಂಘಟನೆಗೆ ಒತ್ತುಕೊಡಿ ಎಂದು ಸಲಹೆ ನೀಡಿದೆ. ಅದೇ ನನಗೆ ತಿರುಗುಬಾಣವಾಯಿತು. ಮರುದಿನದ ಕಲಾಪದಲ್ಲೇ ಸಿಕ್ಕಿ ವಿಶ್ ಮಾಡಿದರೂ ತಿರುಗಿ ನೋಡದ ಕುಮಾರಣ್ಣ ಅವರು ಎರಡೂವರೆ ವರ್ಷ ನನ್ನೊಡನೆ ಮಾತನ್ನೇ ಬಿಟ್ಟರು. ಇತ್ತೀಚೆಗೆ ಅವರ ಸೊಸೆಯ ಸೀಮಂತಕ್ಕೆ ಹೋದಾಗಲೂ ನಿಮ್ಮನ್ನು ಕರೆದವರ್ಯಾರು ಎಂದು ಅವಮಾನಿಸಿದರು. ರೇವಣ್ಣನ ಮನೆಯಲ್ಲೂ ಮಾತಾಡಿಸಲಿಲ್ಲ. ಬಿಡದಿ ಕಾರ್ಯಾಗಾರಕ್ಕೆ ಮೊದಲ ದಿನ ಕಾರ್ಯಕರ್ತರೊಬ್ಬರ ಆತ್ಮಹತ್ಯೆ ಕಾರಣಕ್ಕೆ ತೆರಳಲಾಗದೆ ಎರಡನೇ ದಿನ ಹೋದಾಗ ಗೇಟ್ ಬಳಿಯಲ್ಲೇ ಪಾಸ್ ಕೊಡದೆ ಒಂದು ತಾಸು ಕಾಯಿಸಿದರು. ಜಿಲ್ಲಾಧ್ಯಕ್ಷ ಆಂಜಿನಪ್ಪ ಅವರ ಮೂಲಕ ಪಾಸ್ ತರಿಸಿ ಒಳಹೋದೆ. ಆಗಲೂ ದೇವೇಗೌಡರು ಎದ್ದು ನನ್ನನ್ನು ಮಾತಾಡಿಸಿದರೆ ವಿನಃ ಎಚ್ಡಿಕೆ ಮಾತಾಡಿಸದೆ ದೂರವಿಟ್ಟರು ಎಂದು ಅಸಮಾಧಾನದ ಕಾರಣವನ್ನು ಶ್ರೀನಿವಾಸ್ ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link