ಹಣ ದುರುಪಯೋಗ: ಪ್ರತಿಭಟನೆ

ಮಧುಗಿರಿ:             ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 6 ವರ್ಷಗಳಿಂದ ವಾರ್ಷಿಕ ಮತ್ತು ಮಾಸಿಕ ಸಭೆಗಳನ್ನು ನಡೆಸದೆ ಹಣ ಮತ್ತು ಅಧಿಕಾರ ದುರುಪಯೋಗ ಪಡೆಸಿಕೊಂಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಮುಂದೆ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ದೊಡ್ಡೇರಿ ಹೋಬಳಿ, ಕಾರ್ಪೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 5 ರಿಂದ 6 ವರ್ಷಗಳಿಂದ ವಾರ್ಷಿಕ ಮಹಾಸಭೆಗಳನ್ನು ನಡೆಸಿಲ್ಲ. ಸಹಕಾರ ಸಂಘದ ಬೈಲಾ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಸದಸ್ಯರನ್ನಾಗಿ ತೆಗೆದುಕೊಂಡಿಲ್ಲ. ಹಾಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿ ಯಾವುದೇ ಲೆಕ್ಕ ಪತ್ರ ನೀಡದೆ ಇದ್ದರೂ ಕಾನೂನು ಬಾಹಿರವಾಗಿ ನೇಮಿಸಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ಪಡೆದ ಮಹಿಳೆಯೊಬ್ಬರು ಕಾರ್ಯದರ್ಶಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ, ಪ್ರೌಢಶಿಕ್ಷಣ ಪಡೆದ ವ್ಯಕ್ತಿಯೊಬ್ಬರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.

ಹಾಲಿ ಕಾರ್ಯದರ್ಶಿ 5 ಲಕ್ಷದ 80 ಸಾವಿರ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ಸಂಬಂಧಪಟ್ಟ ಕಾರ್ಯದರ್ಶಿಯ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಹಕಾರ ಸಂಘಗಳ ಉಪನಿಬಂಧಕರಿಗೆ ಮತ್ತು ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಸಹಕಾರ ಸಂಘಗಳ ನಿಯಮದಂತೆ ವಾರ್ಷಿಕ ಮಹಾಸಭೆ ನಡೆಸದೆ ಇದ್ದರೆ, ಸಂಬಂಧಪಟ್ಟ ಕಾರ್ಯದರ್ಶಿಗೆ ದಂಡ ಹಾಕುವ ನಿಯಮವಿದೆ. ಆದರೆ ಹಾಲು ಒಕ್ಕೂಟದ ಅಧಿಕಾರಿಗಳ ಅಸಡ್ಡೆ ಮತ್ತು ನಿರ್ಲಕ್ಷ್ಯ ಮನೋಭಾವದಿಂದ ಕಾರ್ಯದರ್ಶಿಯ ವಿರುದ್ಧ ಈಗಾಗಲೆ ಪ್ರತಿಭಟನೆ ನಡೆಸಿದ್ದರೂ ಸಂಬಂಧಪಟ್ಟವರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಪ್ರತಿಭಟನೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಸಿ.ದೇವಣ್ಣ, ರಾಮಚಂದ್ರಪ್ಪ, ಗೋವಿಂದರಾಜು, ಹಾಲು ಉತ್ಪಾದಕರಾದ ತಿಪ್ಪೇಸ್ವಾಮಿ, ನಿಂಗಪ್ಪ, ರಂಗನಾಥಪ್ಪ, ಶಿವಣ್ಣ, ಹರೀಶ್, ನಾಗರಾಜು, ಹನುಮಂತರಾಯಪ್ಪ, ಜಯರಾಮಪ್ಪ, ಚಿಕ್ಕಣ್ಣ, ನಾಗರಾಜು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link