ಶಿರಾದಲ್ಲಿ ದಶಕಗಳೆ ಕಳೆದರೂ ಪೂರ್ಣಗೊಳ್ಳದ ಅರ್ಹ ಫಲಾನುಭವಿಗಳ ಮನೆಗಳು

ಶಿರಾ:

ನಿವೇಶನ ನೀಡುವ ರಾಜಕಾರಣಿಗಳ ಪೊಳ್ಳು ಭರವಸೆಗಳಿಗೆ ಕೊನೆಯಾದರೂ ಎಂದು….?

        ನಿಮಗೊಂದು ಉಚಿತ ನಿವೇಶನ ಮಂಜೂರು ಮಾಡಿಸುತ್ತೇನೆಂದು ಹೇಳಿದರೆ ಸಾಕು ಬರದ ಬೀಡಿನ ಶಿರಾ ಭಾಗದ ಜನ ಇಲ್ಲಿನ ರಾಜಕೀಯ ಧುರೀಣರ ಮಾತುಗಳಿಗೆ ಮರುಳಾಗಿ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಿದ ವ್ಯಕ್ತಿ ಅರ್ಹ-ಅನರ್ಹರೆನ್ನದೆ ಕಣ್ಣು ಮುಚ್ಚಿ ಮತ ಯಂತ್ರದ ಗುಂಡಿ ಒತ್ತಿ ಕೈ ತೊಳೆದುಕೊಳ್ಳುತ್ತಾರೆ. ಇಂತಹ ಭಾವನಾತ್ಕ ಸಂಬಂಧಗಳಿಗೆ ನಮ್ಮ ಜನ ಒಗ್ಗಿ ಹೋಗಿದ್ದಾರೆ.

ಶಿರಾ ಭಾಗದ ರಾಜಕಾರಣ ನಡೆಯುತ್ತಿರುವುದು ನೀರು ಹಾಗೂ ಉಚಿತ ನಿವೇಶನಗಳ ಭರವಸೆಗಳಿಂದ ಎಂಬುದು ಈಗಾಗಲೇ ಸಾಬೀತಾಗಿ ಹೋಗಿದೆ. ಹಣ ಬಲದ ಜೊತೆಗೆ ಜನ ಬಲವನ್ನೂ ತೋರಿಸಿ ಮತದಾರರ ಕಣ್ಣಿಗೆ ಮಣ್ಣೆರಚಿ ಮತ ಹಾಕಿಸಿಕೊಂಡ ಬಹುತೇಕ ಧುರೀಣರು ತಾವು ನೀಡಿದ ಭರವಸೆಗಳನ್ನು ಗಾಳಿಗೆ ತೂರಿದ ನಿದರ್ಶನಗಳು ಇಲ್ಲಿ ಸಾಕಷ್ಟಿವೆ.

ಶಿರಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳ ಹಿಂದೆ ನಡೆಯುತ್ತಿದ್ದುದು ಸ್ಪರ್ಧಿಸಿದ ರಾಜಕೀಯ ವ್ಯಕ್ತಿಯ ಗುಣ, ಮೇಧಾವಿತನ, ಉತ್ತಮ ಕಾರ್ಯಕ್ಷಮತೆ ಅದರೊಟ್ಟಿಗೆ ಕ್ಷೇತ್ರದ ಅಭಿವೃದ್ಧಿಯ ಜಾಣತನವನ್ನು ಮೆಚ್ಚಿ ಇಲ್ಲಿನ ಜನ ಮತ ಚಲಾವಣೆ ಮಾಡುತ್ತಿದ್ದುದು ಒಂದು ರೀತಿಯ ಭಾವನಾತ್ಮಕ ಸಂಬಂಧಗಳು ಮೇಳೈಸಿದ ಮತದಾನವೂ ಆಗಿರುತ್ತಿತ್ತು. ಆದರೆ ಇದೀಗ ಹಣ ಬಲದ ಚುನಾವಣೆಗೆ ಈ ಕ್ಷೇತ್ರ ಮೈಯೊಡ್ಡಿ ಕೂತಿದ್ದು, ಕಳೆದ ಉಪ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಹಣದ ಹೊಳೆಯನ್ನೇ ಹರಿಸಿದ್ದು, ಒಂದು ಅಸಹ್ಯ ಉದಾಹರಣೆ ಎಂದರೂ ತಪ್ಪಾಗಲಾರದು.

ಕ್ಷೇತ್ರಕ್ಕೆ ಬಹುತೇಕ ಯೋಜನೆಗಳು ಮಂಜೂರಾಗುತ್ತವೆ, ಆಗುತ್ತಲೂ ಇವೆ. ಆದರೆ ಮಂಜೂರಾದ ಯೋಜನೆಗಳನ್ನು ಕತ್ತು ಹಿಸುಕಿ ಕೊಲ್ಲುವಂತಹ ಪ್ರಯತ್ನ ಮಾತ್ರ ನಿರಂತರವಾಗಿ ನಡೆಯುತ್ತಲೆ ಇರುವುದು ಈ ಕ್ಷೇತ್ರದ ಮತದಾರನ ದೌರ್ಭಾಗ್ಯವೂ ಹೌದು. ಯಾವುದೇ ಶಾಸಕರು ಮಂಜೂರು ಮಾಡಿಸಿದ ಯೋಜನೆಗಳೆ ಆಗಿರಲಿ ಅಂತಹ ಯಾವುದೇ ಯೋಜನೆಗಳು ಕಮರಿ ಹೋಗುವುದು ಕ್ಷೇತ್ರದ ದೌರ್ಬಲ್ಯಕ್ಕೆ ಕಾರಣವೂ ಆಗಬಹುದು.

ನಗರದ ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಾಂತರ ಪ್ರದೇಶಗಳ ಅರ್ಹ ಫಲಾನುಭವಿಗಳು ಸೂರಿಲ್ಲದೆ ಹಳೆಯ ಮನೆ, ಗುಡಿಸಲುಗಳಲ್ಲಿಯೇ ಕಾಲ ಕಳೆಯುವಂತಾಗಿದ್ದು, ಇಂತಹ ಫಲಾನುಭವಿಗಳಿಗೆ ಈ ಹಿಂದೆ ಹತ್ತು ಹಲವು ವರ್ಷಗಳ ಹಿಂದೆಯೇ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಡುವ ಬಹುತೇಕ ಯೋಜನೆಗಳು ಇನ್ನೂ ಕುಂಟುತ್ತಲೇ ಸಾಗಿರುವುದು ವಿಪರ್ಯಾಸವೇ ಸರಿ.
ತಾಲ್ಲೂಕಿನ ಬಹುತೇಕ ಕಾಡುಗೊಲ್ಲ ಸಮುದಾಯಗಳು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳೂ ಸೇರಿದಂತೆ ಅನೇಕ ಸಣ್ಣಪುಟ್ಟ ಜಾತಿಗಳ ಅರ್ಹ ಫಲಾನುಭವಿಗಳು ಆಯಾ ಗ್ರಾಮ ಪಂಚಾಯ್ತಿಗಳು ಹಾಗೂ ನಗರಸಭೆಗೆ ನಿವೇಶನ ಕೋರಿ ಹಾಕಿದ ಅರ್ಜಿಗಳು ಕಸದ ಬುಟ್ಟಿ ಸೇರಿಕೊಳ್ಳುತ್ತಿದ್ದು, ನಿವೇಶನ ಬಯಸಿ ಅರ್ಜಿ ಹಾಕಿದ ಸಾವಿರಾರು ಮಂದಿ ಫಲಾನುಭವಿಗಳು ದಾಖಲೆ ಹೊಂದಿಸಿ ಅರ್ಜಿ ಹಾಕಲು ಸಾವಿರಾರು ರೂ. ಗಳನ್ನು ಖರ್ಚು ಮಾಡಿಕೊಂಡು ಜೇಬು ಖಾಲಿ ಮಾಡಿಕೊಂಡಿರುವುದು ಗುಟ್ಟಾಗಿಯೇನು ಉಳಿದಿಲ್ಲ.

ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬ ನಾಣ್ಣುಡಿಯಂತೆ ಹಲವು ಯೋಜನೆಗಳಡಿಯಲ್ಲಿ ಅರ್ಹರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿಯಲ್ಲಿ ಮಂಜೂರಾದ ಅನೇಕ ಫಲಾನುಭವಿಗಳ ಮನೆಗಳನ್ನು ಈವರೆಗೂ ನಿರ್ಮಿಸಿಕೊಡಲಾಗದ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ಯೋಜನೆಗಳು ಅಪೂರ್ಣಗೊಂಡಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಅಚ್ಚರಿಯ ಸಂಗತಿಯೂ ಆಗಿದೆ.

2008-09 ರಲ್ಲಿ ಶಿರಾ ನಗರಕ್ಕೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಶಲ್ಜಾ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ 1008 ಮನೆಗಳು ಅರ್ಹ ಫಲಾನುಭವಿಗಳಿಗೆ ಮಂಜೂರಾಗಿದ್ದವು. 21 ಕೋಟಿ ರೂ. ಗಳ ವೆಚ್ಚದಲ್ಲಿ ಕಲ್ಲುಕೋಟೆ ಸ.ನಂ. ಸರ್ಕಾರಿ ಜಮೀನಿನಲ್ಲಿ ಈ ಮನೆಗಳು ಮಂಜೂರಾಗಿದ್ದವು. ಆಗ ಮಂಜೂರಾದ ಈ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಲು ಆಗಿನ ಸಚಿವ ಟಿ.ಬಿ.ಜಯಚಂದ್ರ ಹರ ಸಾಹಸ ಮಾಡಿದ್ದರು. ಆಗ ಮುಂಬರುವ ಚುನಾವಣೆಯ ದೃಷ್ಟಿಯಿಂದಲೋ ಅಥವಾ ಅರ್ಹರಿಗೆ ಸೂರು ಕೂಡಲೇ ಲಭಿಸಬೇಕೆಂಬ ಆಶಾಭಾವನೆಯಿಂದಲೋ ಒಟ್ಟಾರೆ ಟಿ.ಬಿ.ಜಯಚಂದ್ರ ಈ ಮನೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಿದ್ದು ಸರಿಯಷ್ಟೆ.

ಕೊಳಚೆ ನಿರ್ಮೂಲನ ಮಂಡಳಿಯಿಂದ ಮಂಜೂರಾದ 1008 ಮನೆಗಳ ಪೈಕಿ ಈಗ ಕೇವಲ 300 ಮನೆಗಳ ನಿರ್ಮಾಣ ಮಾತ್ರ ಪೂರ್ಣಗೊಂಡಿದ್ದು ಇನ್ನೂ 708 ಮನೆಗಳು ನಿರ್ಮಾಣವಾಗಬೇಕಿವೆ. ಅಂದರೆ 2008 ರಿಂದ ಈವರೆವಿಗೂ 13 ವರ್ಷಗಳಿಂದ ಕೇವಲ 300 ಮನೆಗಳು ಮಾತ್ರ ಪೂರ್ಣಗೊಂಡಿರುವುದು ನಿಜಕ್ಕೂ ತಾಲ್ಲೂಕು ಆಡಳಿತದ ವೈಫಲ್ಯಕ್ಕೆ ಇದು ಜ್ವಲಂತ ಸಾಕ್ಷಿಯೂ ಹೌದು.
2014-15 ರಲ್ಲಿ ನಗರಸಭಾ ವ್ಯಾಪ್ತಿಯ ಗುಡ್ಡದಹಟ್ಟಿ ಬಳಿ ಇದೇ ಸ್ಲಂ ಬೋರ್ಡ್‍ನಿಂದ ಅರ್ಹ ಫಲಾನುಭವಿಗಳಿಗೆಂದು 120 ಮನೆಗಳು ಮಂಜೂರಾಗಿದ್ದವು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ನುದಾನದಲ್ಲಿ ಈ ಮನೆಗಳ ನಿರ್ಮಾಣಕ್ಕೆ ತಯಾರಿ ನಡೆಯಿತು. ಅರ್ಹ ಫಲಾನುಭವಿಗೆ ಶೇ.10 ರಷ್ಟು ಸಾಲದ ರೂಪದಲ್ಲಿ ಹಣ ಪಾವತಿಸುವ ಆದೇಶದಂತೆ ಪ.ಜಾತಿ ಮತ್ತು ಪ.ಪಂಗಡದ ಅನೇಕ ಫಲಾನುಭವಿಗಳು ಸ್ಲಂಬೋರ್ಡ್‍ಗೆ ತಲಾ 10,000 ರೂ.ಗಳಂತೆ ಹಣವನ್ನೂ ಪಾವತಿಸಿದ್ದರು.

ಗುಡ್ಡದಹಟ್ಟಿಯ ಬಳಿ ಅರ್ಹರಿಗೆ ಮನೆ ನಿರ್ಮಾಣದ ತಯಾರಿ ನಡೆಯುತ್ತಿರುವಾಗಲೇ ದಿಢೀರನೆ ಈ ಮನೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಗುತ್ತಿಗೆದಾರ ಮೃತನಾದ ಹಿನ್ನೆಲೆಯಲ್ಲಿ ಹಲವು ವರ್ಷ ಕಾಮಗಾರಿಯೇ ಸ್ಥಗಿತಗೊಂಡಿತು. ಫಲಾನುಭವಿಗಳ ಒತ್ತಡ, ಮಾಜಿ ಸಚಿವ ಜಯಚಂದ್ರ ಹಾಗೂ ಶಾಸಕರಾಗಿದ್ದ ಬಿ.ಸತ್ಯನಾರಾಯಣ್ ಅವರ ಪ್ರಬಲ ಒತ್ತಡಗಳಿಂದಾಗಿ ಮತ್ತೋರ್ವ ಗುತ್ತಿಗೆದಾರನಿಗೆ ಮನೆ ನಿರ್ಮಾಣದ ಜವಾಬ್ದಾರಿಯನ್ನು ಸ್ಲಂಬೋರ್ಡ್ ವಹಿಸಿತು.

ಅತ್ಯಂತ ವಿಪರ್ಯಾಸದ ಸಂಗತಿ ಎಂದರೆ ಎರಡನೆಯ ಹಂತದಲ್ಲಿ ಮನೆ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರ ಕಳಪೆ ಮಟ್ಟದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ ಕಾರಣ ಫಲಾನುಭವಿಗಳು ಕುಪಿತಗೊಂಡು ಪ್ರತಿಭಟನೆ ನಡೆಸಿದರು. ಇರುವುದೊಂದು ಸೂರನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡಿ ಕೊಡುವಂತೆ ಒತ್ತಾಯಿಸಿದಾಗ ಹಾಲಿ ಗುತ್ತಿಗೆದಾರನೆ ನಾಪತ್ತೆಯಾಗಿಬಿಟ್ಟನು. ಅಪೂರ್ಣಗೊಂಡ ಮನೆಗಳನ್ನು ಪೂರ್ಣಗೊಳಸಲು ಬಂದಿದ್ದ ಗುತ್ತಿಗೆದಾರ ಕಳೆದ ಮೂರು ವರ್ಷಗಳಿಂದಲೂ ನಾಪತ್ತೆಯಾಗಿದ್ದು, ಈ ಸಂಬಂಧ ಜಿಲ್ಲಾಡಳಿತವಾಗಲಿ, ತಾಲ್ಲೂಕು ಆಡಳಿತವಾಗಲಿ ತುಟಿ ಎರಡು ಮಾಡದೆ ಕೂತಿರುವುದು ಜನ ಸಾಮಾನ್ಯರಲ್ಲೂ ಕೂಡ ಸಂಶಯಕ್ಕೆ ಕಾರಣವಾಗಿದೆ.

ಈ ಹಿಂದೆ ಅಂದರೆ ಕಳೆದ ಕೆಲ ವರ್ಷಗಳ ಹಿಂದಷ್ಟೆ ನಗರ ವ್ಯಾಪ್ತಿಯ ಶಿವಾಜಿ ನಗರ ಬಡಾವಣೆಯಲ್ಲಿ ವಸತಿ ಇಲಾಖೆಯಿಂದ 400 ಮಂದಿ ಅರ್ಹ ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದವು. ಶಿವಾಜಿ ನಗರದ ಈ ಮನೆ ನಿರ್ಮಾಣಕ್ಕಾಗಿ ಅರ್ಹರಿಗೆ ಸೌಲಭ್ಯ ಲಭ್ಯವಾಗಲೆಂದು ಅಂದಿನ ಸಚಿವ ಟಿ.ಬಿ.ಜಯಚಂದ್ರ ಹಾಗೂ ಅಂದಿನನಗರಸಭೆಯ ಆಡಳಿತ ಮಂಡಳಿಯು ಚಿಂದಿ ಹಾಯುವವರಿಂದ ಹಿಡಿದು ನಿವೇಶನ ರಹಿತರನ್ನು ಗುರ್ತಿಸಿ ಮನೆಗಳನ್ನು ಮಂಜೂರು ಮಾಡಿಸಿದ್ದು, ಆಗ ಪ್ರಶಂಸೆಯ ವಿಚಾರವೂ ಆಗಿತ್ತು.
ಅಲ್ಲಿಂದ ಇಲ್ಲಿಯವರೆಗೂ ಶಿವಾಜಿ ನಗರದ ಈ ಮನೆ ನಿರ್ಮಾಣದ ಕಾರ್ಯ ಮಾತ್ರ ಕುಟುಂತ್ತಾ ತೆವಳುತ್ತಲೇ ಸಾಗಿದೆ. 400 ಮನೆಗಳ ಪೈಕಿ ಕೇವಲ 89 ಮನೆಗಳು ಮಾತ್ರ ಪೂರ್ಣಗೊಂಡಿದ್ದು ಈ ಪೂರ್ಣಗೊಂಡ ಮನೆಗಳಲ್ಲಿ ವಾಸಿಸಲು ಕೂಡ ಫಲಾನುಭವಿಗಳಿಗೆ ಸಾಧ್ಯವಾಗದಂತಾಗಿದೆ. ಪೂರ್ಣಗೊಂಡ ಮನೆಗಳಲ್ಲಿ ವಾಸಿಸಲು ಫಲಾನುಭವಿಗಳಿಗೆ ಇನ್ನೂ ಅನುಮತಿಯೇ ಲಭ್ಯವಾಗದ ಕಾರಣ ಪೂರ್ಣಗೊಂಡ ಮನೆಗಳ ಕಿಟಕಿ ಬಾಗಿಲುಗಳನ್ನೇ ದುಷ್ಕರ್ಮಿಗಳು ಕಿತ್ತುಕೊಂಡು ಹೋಗುತ್ತಿದ್ದಾರೆ.

ಇನ್ನೊಂದೆಡೆ ನಗರದ ರಂಗನಾಥ ನಗರ, ಸರ್ವೇ ನಂಬರ್ 5 ಮತ್ತು 6 ಹಾಗೂ ಗುಡ್ಡದ ಹಟ್ಟಿಯ ನಾಗಜ್ಜಿ ಗುಡಿಸಲು ಬಳಿ ಉಳಿಕೆ 451 ಮನೆಗಳ ಮಂಜೂರು ಈ ಹಿಂದೆ ಆಗಿದ್ದು, ಸದರಿ ಮನೆಗಳ ನಿರ್ಮಾಣ ಸಾಧ್ಯವಾಗದೆ ಫಲಾನುಭವಿಗಳು ಪರಿತಪಿಸುವಂತಹ ವಾತಾವರಣ ನಿರ್ಮಾಣಗೊಂಡಿದೆ.

ಒಟ್ಟಾರೆ ನಗರಸಭಾ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ನಿವೇಶನ ಕೊಡಿಸುವ ಭರವಸೆಗಳ ಮಹಾಪೂರಗಳನ್ನೆ ಹರಿಸುವ ಈ ಭಾಗದ ಯಾವುದೇ ರಾಜಕಾರಣಿಗಳಿಗೆ ಹೊಸ ನಿವೇಶನಗಳನ್ನು ಕೊಡುವ ಭರವಸೆಗಳನ್ನು ನೀಡುವುದಕ್ಕಿಂತಲೂ ಮುಂಚೆ ಹತ್ತಾರು ವರ್ಷಗಳ ಹಿಂದೆಯೇ ಮಂಜೂರಾಗಿದ್ದರೂ ಪೂರ್ಣಗೊಳ್ಳದೆ ಇರುವ ಮನೆಗಳನ್ನು ಅರ್ಹರಿಗೆ ವಾಸಿಸಲು ನೀಡುವ ಕಿಂಚಿತ್ತೂ ಕಾಳಜಿ ಇಲ್ಲದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಕ್ಷೇತ್ರ ಕ್ಷಮತೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತಿರುವ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರು ಕೂಡಲೆ ಈ ಅಪೂರ್ಣಗೊಂಡ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಕಳಪೆ ಗುಣಮಟ್ಟದ ಮನೆಗಳ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅಪೂರ್ಣಗೊಂಡ ಮನೆಗಳನ್ನು ಪೂರ್ಣಗೊಳಿಸುವಂತೆ ಮಾಡಿ, ಅರ್ಹರಿಗೆ ಸೂರು ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬಲ್ಲರೆ ಎಂಬುದನ್ನು ಕಾದು ನೋಡಬೇಕಿದೆ.

       ಶಿರಾ ತಾಲ್ಲೂಕಿನ ಬಹುತೇಕ ಕಾಡುಗೊಲ್ಲ ಸಮುದಾಯಗಳು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳೂ ಸೇರಿದಂತೆ ಅನೇಕ ಸಣ್ಣಪುಟ್ಟ ಜಾತಿಗಳ ಅರ್ಹ ಫಲಾನುಭವಿಗಳು ಆಯಾ ಗ್ರಾಮ ಪಂಚಾಯ್ತಿಗಳಿಗೆ ಹಾಗೂ ನಗರಸಭೆಗೆ ನಿವೇಶನ ಕೋರಿ ಹಾಕಿದ ಅರ್ಜಿಗಳು ಕಸದ ಬುಟ್ಟಿ ಸೇರುತ್ತಿದ್ದು, ನಿವೇಶನ ಬಯಸಿ ಅರ್ಜಿ ಹಾಕಿದ ಸಾವಿರಾರು ಮಂದಿ ಫಲಾನುಭವಿಗಳು ದಾಖಲೆ ಹೊಂದಿಸಿ ಅರ್ಜಿ ಹಾಕಲು ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ಜೇಬು ಖಾಲಿ ಮಾಡಿಕೊಂಡಿರುವುದು ಗುಟ್ಟಾಗಿಯೇನು ಉಳಿದಿಲ್ಲ.

           ಕೊಳಚೆ ನಿರ್ಮೂಲನ ಮಂಡಳಿಯಿಂದ ಮಂಜೂರಾದ 1008 ಮನೆಗಳ ಪೈಕಿ ಈಗ ಕೇವಲ 300 ಮನೆಗಳ ನಿರ್ಮಾಣ ಮಾತ್ರ ಪೂರ್ಣ ಗೊಂಡಿದ್ದು, ಇನ್ನೂ 708 ಮನೆಗಳು ನಿರ್ಮಾಣವಾಗಬೇಕಿದೆ. ಅಂದರೆ 2008 ರಿಂದ ಈವರೆವಿಗೂ 13 ವರ್ಷಗಳಿಂದ ಕೇವಲ 300 ಮನೆಗಳು ಪೂರ್ಣಗೊಂಡಿರುವುದು ನಿಜಕ್ಕೂ ತಾಲ್ಲೂಕು ಆಡಳಿತದ ವೈಫಲ್ಯಕ್ಕೆ ಜ್ವಲಂತ ಸಾಕ್ಷಿಯೂ ಹೌದು.

ಶಿರಾ ನಗರದ ಶಿವಾಜಿ ನಗರ ಬಡಾವಣೆಯಲ್ಲಿ ಕಳೆದ 10 ವರ್ಷದ ಹಿಂದೆ ಸ್ಲಂ ಬೋರ್ಡ್‍ನಿಂದ ನಿರ್ಮಾಣವಾದ ಅರ್ಹ ಫಲಾನುಭವಿಗಳ ಮನೆಗಳು.

(ಬರಗೂರು ವಿರೂಪಾಕ್ಷ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link